ನವಗ್ರಹಗಳಿಗೆ ಪ್ರದಕ್ಷಿಣೆ ಹೇಗೆ ಹಾಕಬೇಕು, ಶಾಸ್ತ್ರ ಏನು ಹೇಳುತ್ತದೆ, ಯಾವ ಮಂತ್ರ ಪಠಿಸಬೇಕು? ಇಲ್ಲಿದೆ ನೋಡಿ
ಮನುಷ್ಯನ ಜೀವನದಲ್ಲಿ ಎದುರಾಗುವ ಕಷ್ಟ ಸುಖಗಳು, ಸಣ್ಣ ಪುಟ್ಟ ಏರಿಳಿತಗಳು ಹಾಗೂ ಲಾಭ ನಷ್ಟಗಳು ನಮ್ಮ ಜಾತಕದಲ್ಲಿನ ನವಗ್ರಹಗಳ ಸ್ಥಿತಿಗತಿ ಮತ್ತು ದೃಷ್ಟಿಯ ಮೇಲೆ ಅವಲಂಬಿತವಾಗಿರುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಕುಟುಂಬದಲ್ಲಿ ಸಮಸ್ಯೆಗಳು ಕಾಣಿಸಿಕೊಂಡಾಗ ಅಥವಾ ಜಾತಕದಲ್ಲಿ ಗ್ರಹ ದೋಷಗಳಿದ್ದಾಗ ಪಂಡಿತರು ನವಗ್ರಹ ಪ್ರದಕ್ಷಿಣೆ ಮಾಡಲು ಸಲಹೆ ನೀಡುತ್ತಾರೆ. ಆದರೆ, ಈ ನವಗ್ರಹ ಪ್ರದಕ್ಷಿಣೆಗಳನ್ನ ಮಾಡುವಾಗ ಶಾಸ್ತ್ರೋಕ್ತ ನಿಯಮಗಳನ್ನ ಪಾಲಿಸಿದರೆ ಮಾತ್ರ ಪರಿಪೂರ್ಣ ಫಲ ಸಿಗುತ್ತದೆ.
ನವಗ್ರಹ ಪ್ರದಕ್ಷಿಣೆಯ ಸರಿಯಾದ ದಿಕ್ಕು ಮತ್ತು ನಿಯಮಗಳು
ಶಾಸ್ತ್ರದ ಪ್ರಕಾರ, ಬೆಳಗ್ಗೆ ಶುಚಿಯಾಗಿ ಸ್ನಾನ ಮಾಡಿ ಸಾಂಪ್ರದಾಯಿಕ ಉಡುಪು ಧರಿಸಿ ದೇವಾಲಯಕ್ಕೆ ಹೋಗಬೇಕು. ನವಗ್ರಹ ಮಂಟಪವನ್ನ ಪ್ರವೇಶಿಸುವ ಮೊದಲು ಸೂರ್ಯ ದೇವನ ದರ್ಶನ ಮಾಡಬೇಕು. ಪ್ರದಕ್ಷಿಣೆ ಹಾಕುವಾಗ ಯಾವುದೇ ಕಾರಣಕ್ಕೂ ವಿಗ್ರಹಗಳನ್ನ ಕೈಯಿಂದ ಸ್ಪರ್ಶಿಸಬಾರದು.

ಮೊದಲಿಗೆ ಸೂರ್ಯನಿಂದ ಆರಂಭಿಸಿ ಎಡಭಾಗದಿಂದ ಅಂದರೆ ಚಂದ್ರನ ದಿಕ್ಕಿನತ್ತ ಬಲಕ್ಕೆ 9 ಬಾರಿ ಪ್ರದಕ್ಷಿಣೆ ಹಾಕಬೇಕು. ನಂತರ ರಾಹು ಮತ್ತು ಕೇತುಗಳನ್ನು ಶಾಂತಗೊಳಿಸಲು ಅಪ್ರದಕ್ಷಿಣೆ ದಿಕ್ಕಿನಲ್ಲಿ ಬಲದಿಂದ ಎಡಕ್ಕೆ 2 ಪ್ರದಕ್ಷಿಣೆಗಳನ್ನ ಹಾಕಬೇಕು. ಕೊನೆಯದಾಗಿ ಪ್ರತಿ ಗ್ರಹವನ್ನ ಸ್ಮರಿಸುತ್ತಾ ಒಂದೊಂದು ಪ್ರದಕ್ಷಿಣೆ ಹಾಕಿ, ಗ್ರಹಗಳಿಗೆ ಬೆನ್ನು ತೋರಿಸದಂತೆ ಪಕ್ಕದಿಂದ ಹೊರಬರಬೇಕು.
ಪ್ರದಕ್ಷಿಣೆ ನಂತರ ಕಾಲು ತೊಳೆಯಬೇಕಾ? ಶಾಸ್ತ್ರ ಏನು ಹೇಳುತ್ತದೆ?
ನವಗ್ರಹ ಪ್ರದಕ್ಷಿಣೆ ಮುಗಿದ ನಂತರ ಕಾಲು ತೊಳೆಯಬೇಕೇ ಅಥವಾ ಬೇಡವೇ ಎಂಬ ಗೊಂದಲ ಹಲವರಲ್ಲಿದೆ. ಧರ್ಮಶಾಸ್ತ್ರ ಗ್ರಂಥಗಳ ಪ್ರಕಾರ ಸಾಮಾನ್ಯ ನವಗ್ರಹ ಪ್ರದಕ್ಷಿಣೆಯ ನಂತರ ಕಾಲು ತೊಳೆಯಬೇಕೆಂಬ ಕಡ್ಡಾಯ ನಿಯಮವಿಲ್ಲ. ಆದರೆ ಶನಿದೇವರಿಗೆ ಎಣ್ಣೆ ಪೂಜೆ ಅಥವಾ ತೈಲಾಭಿಷೇಕ ಮಾಡಿದಾಗ ಕಾಲು ತೊಳೆಯುವುದು ಉತ್ತಮ. ಏಕೆಂದರೆ ಶನಿಗೆ ಎಣ್ಣೆ ಅರ್ಪಿಸುವುದರಿಂದ ನವಗ್ರಹ ಮಂಟಪದ ನೆಲ ಜಿಡ್ಡಿನಿಂದ ಕೂಡಿರುತ್ತದೆ. ಅದೇ ಜಿಡ್ಡಿನ ಕಾಲಿನಲ್ಲಿ ಮುಖ್ಯ ಶಿವಸ್ಥಾನಕ್ಕೆ ಹೋದರೆ ಕಾಲು ಜಾರಿ ಬೀಳುವ ಅಪಾಯವಿರುತ್ತದೆ. ಹೀಗಾಗಿ ನವಗ್ರಹ ದರ್ಶನದ ನಂತರ ಕಾಲು ತೊಳೆದು ಮುಖ್ಯ ದೇವಾಲಯಕ್ಕೆ ಹೋಗುವ ಆಚರಣೆ ಹಿಂದಿನಿಂದ ಬೆಳೆದುಬಂದಿದೆ.
ಪಠಿಸಬೇಕಾದ ಪ್ರಮುಖ ನವಗ್ರಹ ಮಂತ್ರಗಳು
ಪ್ರದಕ್ಷಿಣೆ ಹಾಕುವಾಗ ಆಯಾ ಗ್ರಹಕ್ಕೆ ಸಂಬಂಧಿಸಿದ ಶ್ಲೋಕಗಳನ್ನ ಮನಸ್ಸಿನಲ್ಲಿ ಧ್ಯಾನಿಸುವುದರಿಂದ ವಿಶೇಷ ಫಲ ಸಿಗುತ್ತದೆ. ಎಲ್ಲ ಗ್ರಹಗಳನ್ನ ಒಟ್ಟಿಗೆ ಸ್ಮರಿಸಲು ಈ ಕೆಳಗಿನ ಸಮಗ್ರ ಶ್ಲೋಕವನ್ನು ಪಠಿಸಬಹುದು:
"ಆದಿತ್ಯಾಯ ಚ ಸೋಮಾಯ ಮಂಗಳಾಯ ಬುಧಾಯ ಚ |
ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ ||"
ಇದರ ಜೊತೆಗೆ ಪ್ರತಿ ಗ್ರಹಕ್ಕೂ ಪ್ರತ್ಯೇಕ ಶ್ಲೋಕಗಳಿದ್ದು, ಅವುಗಳ ವಿವರ ಇಲ್ಲಿದೆ:
ಸೂರ್ಯ: ಜಪಾಕುಸುಮ ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್ | ತಮೋರಿಂ ಸರ್ವಪಾಪಘ್ನಂ ಪ್ರಣತೋಸ್ಮಿ ದಿವಾಕರಮ್ ||
ಚಂದ್ರ: ದಧಿಶಂಖ ತುಷಾರಾಭಂ ಕ್ಷೀರೋದಾರ್ಣವ ಸಂಭವಮ್ | ನಮಾಮಿ ಶಶಿನಂ ಸೋಮಂ ಶಂಭೋರ್ಮಕುಟ ಭೂಷಣಮ್ ||
ಕುಜ (ಮಂಗಳ): ಧರಣೀಗರ್ಭ ಸಂಭೂತಂ ವಿದ್ಯುತ್ಕಾಂತಿ ಸಮಪ್ರಭಮ್ | ಕುಮಾರಂ ಶಕ್ತಿಹಸ್ತಂ ತಂ ಮಂಗಳಂ ಪ್ರಣಮಾಮ್ಯಹಮ್ ||
ಬುಧ: ಪ್ರಿಯಂಗು ಕಲಿಕಾಶ್ಯಾಮಂ ರೂಪೇಣಾಪ್ರತಿಮಂ ಬುಧಮ್ | ಸೌಮ್ಯಂ ಸತ್ವಗುಣೋಪೇತಂ ತಂ ಬುಧಂ ಪ್ರಣಮಾಮ್ಯಹಮ್ ||
ಗುರು: ದೇವಾನಾಂಚ ಋಷೀಣಾಂಚ ಗುರುಂ ಕಾಂಚನ ಸನ್ನಿಭಮ್ | ಬುದ್ಧಿಮಂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಮ್ ||
ಶುಕ್ರ: ಹಿಮಕುಂದ ಮೃಣಾಳಾಭಂ ದೈತ್ಯಾನಾಂ ಪರಮಂ ಗುರುಮ್ | ಸರ್ವಶಾಸ್ತ್ರ ಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಮ್ ||
ಶನಿ: ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಮ್ | ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಮ್ ||
ರಾಹು: ಅರ್ಧಕಾಯಂ ಮಹಾವೀರಂ ಚಂದ್ರಾದಿತ್ಯ ವಿಮರ್ದನಮ್ | ಸಿಂಹಿಕಾಗರ್ಭ ಸಂಭೂತಂ ತಂ ರಾಹುಂ ಪ್ರಣಮಾಮ್ಯಹಮ್ ||
ಕೇತು: ಪಲಾಶ ಪುಷ್ಪ ಸಂಕಾಶಂ ತಾರಕಾಗ್ರಹ ಮಸ್ತಕಮ್ | ರೌದ್ರಂ ರೌದ್ರಾತ್ಮಕಂ ಘೋರಂ ತಂ ಕೇತುಂ ಪ್ರಣಮಾಮ್ಯಹಮ್ ||
ಪ್ರದಕ್ಷಿಣೆಗಳು ಪೂರ್ಣಗೊಂಡ ನಂತರ ಜಾತಕದಲ್ಲಿ ದೋಷ ಇರುವ ಗ್ರಹಕ್ಕೆ ಅನುಗುಣವಾಗಿ ಹಣತೆಯಲ್ಲಿ ಎಳ್ಳೆಣ್ಣೆ ದೀಪ ಹಚ್ಚುವುದು ಅಥವಾ ನವಧಾನ್ಯಗಳನ್ನ ದಾನ ಮಾಡುವುದರಿಂದ ಗ್ರಹ ದೋಷಗಳು ನಿವಾರಣೆಯಾಗಿ ಕುಟುಂಬದಲ್ಲಿ ಶಾಂತಿ, ನೆಮ್ಮದಿ ಲಭಿಸುತ್ತದೆ ಎಂದು ಪಂಡಿತರು ತಿಳಿಸುತ್ತಾರೆ.


Click it and Unblock the Notifications
