Get Updates
Get notified of breaking news, exclusive insights, and must-see stories!

March 2023 Horoscope : ಮಾರ್ಚ್‌ ತಿಂಗಳ ರಾಶಿ ಭವಿಷ್ಯ; ದ್ವಾದಶ ರಾಶಿಗಳ ಮಾಸಿಕ ಗ್ರಹಗತಿ ಹೇಗಿದೆ?

2023ರ ವರ್ಷದ ಮೂರನೇ ತಿಂಗಳು ಮಾರ್ಚ್‌ನಲ್ಲಿ 12ರಾಶಿಗಳ ಮೇಲೆ ಯಾವೇಲ್ಲಾ ಗ್ರಹಗಳು ಯಾವ ರೀತಿಯಾದ ಪರಿಣಾಮವನ್ನುಂಟು ಮಾಡುತ್ತವೆ ಈ ಗ್ರಹಗಳ ಗೋಚಾರ ಫಲದಿಂದ ಯಾವ ರೀತಿಯ ಬದಲಾವಣೆಗಳು ಸಂಭವಿಸಲಿದೆ ಎನ್ನುವ ಕುರಿತು ಜೋತಿಷ್ಯ ಶಾಸ್ತ್ರದ ಮಾಹಿತಿ ಇಲ್ಲಿದೆ.

ಪ್ರತಿಯೋರ್ವರಿಗೆ ನಿತ್ಯ ಜೀವನದಲ್ಲಿ ಸಂಭವಿಸಬಹುದಾದ ಘಟನೆಗಳ ಕುರಿತು ತಿಳಿದುಕೊಳ್ಳುವ ಉತ್ಸುಕತೆ ಇರುತ್ತದೆ. ಭವಿಷ್ಯದ ಕುರಿತು ತಿಳಿದುಕೊಳ್ಳುವ ಮೂಲಕ ಮುಂಬರುವ ತೊಡಕುಗಳ ಮುನ್ನೆಚ್ಚರಿಕೆ ವಹಿಸಬಹಿಸುತ್ತಾನೆ. ಮುಂಬರುವ ತಿಂಗಳಿನಲ್ಲಿ ಯಾವ ರೀತಿಯ ಲಾಭ-ನಷ್ಟಗಳು ಸಂಭವಿಸಲಿವೆ ಈ ಕುರಿತು ಎಚ್ಚರಿಕೆ ವಹಿಸಬೇಕಾದ ಅಂಶಗಳ ಕುರಿತ ಮಾಹಿತಿಯನ್ನು ಜೋತಿಷ್ಯದ ಮುಖಾಂತರ ತಿಳಿದುಕೊಳ್ಳಬಹುದಾಗಿದೆ.

ಶುಭಕೃತ ನಾಮ ಸಂವತ್ಸರದ ಉತ್ತರಾಯಣ ಫಾಲ್ಗುಣ-ಚೈತ್ರ ಮಾಸ ಶಿಶಿರ-ವಸಂತ ಋತು.ದಿನಾಂಕ :01.03.2023 ರಿಂದ 31.03.2022

ಮಾಸವಿಶೇಷ: 08.03.2023 ಹೋಳಿ ಹುಣ್ಣಿಮೆ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. 15.03.23:ಮೀನರಾಶಿಗೆ ಸೂರ್ಯನ ಪ್ರವೇಶ. 12.03.23: ಮಿಥುನಕ್ಕೆ ಕುಜನ ಪ್ರವೇಶ.22.03.23: ಶೋಭಾಕೃತ ನಾಮ ಸಂವತ್ಸರದ ಪ್ರಾರಂಭ-ಯುಗಾದಿ. 30.03.23: ಶ್ರೀರಾಮನವಮಿ. ಮಾರ್ಚ್‌ ತಿಂಗಳಲ್ಲಿ ಯಾವ ರಾಶಿಗಳಿಗೆ ಶುಭವಾಗಲಿದೆ ಎಂಬುದರ ಕುರಿತ ಜೋತಿಷ್ಯ ಭವಿಷ್ಯ ಇಲ್ಲಿದೆ.

ಮೇಷರಾಶಿ:

ಮೇಷರಾಶಿ:

ನಿಮ್ಮ ರಾಶಿಯ ಅಧಿಪತಿ ಕುಜನು ಎರಡನೇ ಮನೆಯಲ್ಲಿದ್ದು, ಮಾರ್ಚ್‌ 12ರಂದು ಮಿಥುನರಾಶಿಗೆ ಪ್ರವೇಶಿಸಲಿದ್ದಾನೆ. ಇದು ನಿಮಗೆ ಶುಭಫಲ ನೀಡುತ್ತದೆ. ಈ ತಿಂಗಳಿನಲ್ಲಿ ಸಾಮಾನ್ಯವಾಗಿ ಕೋಪತಾಪಗಳು ಹೆಚ್ಚಾಗಿಯೇ ಇರುತ್ತದೆ. ಎಲ್ಲರೂ ನಿಮ್ಮ ಮಾತು ಕೇಳಬೇಕೆಂಬ ಭಾವನೆ ಇರುತ್ತದೆ. ಹೊಸ ಮನೆ ಅಥವಾ ಜಮೀನು ಕೊಳ್ಳುವ ಸಾಧ್ಯತೆಗಳಿವೆ. ಬಾಕಿ ಉಳಿದುಕೊಂಡಿರುವ ಭೂಸಂಬಂಧಿ ವ್ಯವಹಾರಗಳು ಈಗ ಕೈಗೂಡುತ್ತವೆ. ವಿದ್ಯುತ್ ಕ್ಷೇತ್ರ, ರಾಜಕೀಯ ರಂಗದಲ್ಲಿ ಹಾಗೂ ಪೊಲೀಸ್ ಕ್ಷೇತ್ರದಲ್ಲಿರುವವರಿಗೆ ಶುಭಕಾಲ. ಮೂರನೇ ಮನೆಯಲ್ಲಿರುವ ಕುಜ ಹಾಗೂ ಹನ್ನೊಂದನೇ ಮನೆಯಲ್ಲಿರುವ ಸೂರ್ಯ ನಿಮಗೆ ಅಧಿಕಾರದ ಜೊತೆಗೆ ಹಣ ಮತ್ತು ಕೀರ್ತಿ ಪ್ರತಿಷ್ಠೆಗಳನ್ನು ನೀಡುತ್ತಾನೆ. ಈ ತಿಂಗಳು ನಿಮಗೆ ಬಹಳ ಅದೃಷ್ಟದಾಯಕವಾಗಿರಲಿದೆ. ಅವಿವಾಹಿತರಿಗೆ ವಿವಾಹ ಯೋಗವಿದ್ದು, ಹಣದ ಹರಿವು ಉತ್ತಮವಾಗಿರಲಿದೆ. ಶುಭಕಾರ್ಯಗಳಿಗೆ ಅಧಿಕ ಖರ್ಚು ಮಾಡುತ್ತೀರಿ.

ವೃಷಭರಾಶಿ:

ವೃಷಭರಾಶಿ:

ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ಹನ್ನೊಂದನೇ ಮನೆಯಲ್ಲಿ ಗುರು ಇದ್ದು ನಿಮಗೆ ರಕ್ಷಕನಾಗಿರುತ್ತಾನೆ. ಮುಂದಿನ ದಿನಗಳಲ್ಲಿ ರಾಹು 11ನೇ ಮನೆಗೆ ಬಂದಾಗ ನಿಮಗೆ ಅಪಾರ ಧನಲಾಭವಾಗಲಿದೆ. ನೀವು ಸೌಮ್ಯ ಸ್ವಭಾವದವರು ಹಾಗೂ ಸಹಿಸಿಕೊಳ್ಳುವ ಗುಣದವರು ಹಾಗೆಂದು ಬೇರೆಯವರು ನಿಮ್ಮ ಮೇಲೆ ಸವಾರಿ ಮಾಡಿದರೆ ಸಹಿಸುವವರಲ್ಲ. ನಿಮಗೆ ಕೋಪ ಬಂದರೆ ಕಷ್ಟ. ಎಲ್ಲರೊಡನೆ ಕಲೆತು ಬೆರೆತುಕೊಳ್ಳುವ ಸ್ವಭಾವದವರಾಗಿದ್ದರಿಂದ ನಿಮಗೆ ಎಲ್ಲಿಯೂ ತೊಂದರೆ ಎದುರಾಗುವುದಿಲ್ಲ. ಹತ್ತನೇ ಮನೆಯಲ್ಲಿ ಶನಿ-ಸೂರ್ಯ-ಬುಧ ನಿಮ್ಮ ವೃತ್ತಿಯಲ್ಲಿ ಒಳ್ಳೆಯ ಹೆಸರನ್ನು ತಂದುಕೊಡುತ್ತಾರೆ. ಆರರ ಕೇತು ನಿಮಗೆ ಧೈರ್ಯ ಸೈರ್ಯ ಸಾಹಸವನ್ನು ಕೊಡುತ್ತಾನೆ. 11ನೇ ಮನೆಗೆ ಶುಕ್ರನ ಪ್ರವೇಶವಾದಾಗ ನಿಮಗೆ ಇನ್ನೂ ಹೆಚ್ಚಿನ ಶುಭಫಲ ದೊರಕಲಿವೆ. ವಾಹನ ಕೊಳ್ಳುವ ಯೋಗ ಇದೆ. ನಿಮಗೆ ಈ ವರ್ಷ ಒಳ್ಳೆಯ ಒಂದು ಹಣದ ಮೊತ್ತ ಬರುವ ಸಾಧ್ಯತೆ ಇದೆ. ಇದರಿಂದ ನಿಮಗೆ ಭಾಗ್ಯದ ಬಾಗಿಲನ್ನೇ ತೆರೆದಂತೆ ಆಗುತ್ತದೆ.

ಮಿಥುನರಾಶಿ:

ಮಿಥುನರಾಶಿ:

ಈ ರಾಶಿಯ ಜನರು ಶನಿಯ ಒಂದು ಕೆಟ್ಟ ಪ್ರಭಾವದಿಂದ ಹೊರ ಬಂದಿದ್ದೀರಿ. ಸೂರ್ಯ- ಬುಧ ಈಗ ನಿಮಗೆ ಒಂಬತ್ತನೇ ಮನೆಯಲ್ಲಿ ಇದ್ದಾರೆ. ತಂದೆಯಿಂದ ಆಸ್ತಿ ಬರುವ ಯೋಗ ಇದೆ. ಇನ್ನು ಕೆಲವೇ ದಿನಗಳಲ್ಲಿ ಗುರು 11ನೇ ಮನೆಗೆ ಪ್ರವೇಶವಾಗುತ್ತಾನೆ. ಅದು ನಿಮಗೆ ಬಹಳ ಅದೃಷ್ಟವನ್ನು ತರುತ್ತದೆ. ಕುಜ ನಿಮ್ಮ ರಾಶಿಗೆ ಪ್ರವೇಶವಾಗುತ್ತಾನೆ. ಆರೋಗ್ಯದಲ್ಲಿ ಏರುಪೇರಾಗಬಹುದು. ಶುಕ್ರ ಹತ್ತನೇ ಮನೆಗೆ ಪ್ರವೇಶಿಸಿದಾಗ ವೃತ್ತಿ ಕ್ಷೇತ್ರದಲ್ಲಿ ಒಳ್ಳೆಯ ಸಂಗತಿಗಳು ನಡೆಯುತ್ತದೆ. ವಾಹನ ವ್ಯಾಪಾರಿಗಳಿಗೆ ಲಾಭ ಇದೆ. ಆಭರಣ-ವಾಹನ ಕೊಳ್ಳುವ ಯೋಗ ಈ ರಾಶಿಯವರಿಗೆ ಇದೆ. ರಾಹು 11ನೇ ಮನೆಯಲ್ಲಿ ಇರುವುದು ಕೂಡ ನಿಮಗೆ ಹಣದ ಹರಿವು ಉತ್ತಮವಾಗಿದೆ ಎಂಬುದನ್ನು ತೋರಿಸುತ್ತದೆ. ಈ ಹಿಂದೆ ಹೂಡಿದ ಬಂಡವಾಳ ಈಗ ಆದಾಯವನ್ನು ಕೊಡುತ್ತದೆ. ಕಳೆದ ಮೂರು ನಾಲ್ಕು ವರ್ಷಗಳಿಂದ ಅನುಭವಿಸುತ್ತಿರು ಪೆಟ್ಟುಗಳಿಗೆ ಈಗ ಮದ್ದು ಹಚ್ಚಿದಂತೆ ಸರಿಯಾಗುತ್ತದೆ. ಒಳ್ಳೆಯ ಸಂಬಂಧಗಳು ಕೂಡಿಕೊಳ್ಳುತ್ತದೆ. ಸಂಸಾರದಲ್ಲಿ ನೆಮ್ಮದಿ ನೆಲೆಸುತ್ತದೆ. ಮನಸ್ಸಿಗೆ ಆರಾಮ ಸಿಗುತ್ತದೆ.

ಕಟಕರಾಶಿ:

ಕಟಕರಾಶಿ:

ಗುರುಬಲ ಇದೆ ಆದರೂ ಶನಿಯ ಅಷ್ಟಮಸ್ಥಾನ ಪ್ರಭಾವದಿಂದ ಬದುಕು ಮುಗ್ಗರಿಸುತ್ತ ಸಾಗುತ್ತದೆ. ಶುಕ್ರನೂ ಅಷ್ಟಮದಲ್ಲಿ ಇರುವವರೆಗೂ ಶನಿಯ ತಾಪವನ್ನು ಕಡಿಮೆ ಮಾಡುತ್ತಾನೆ. ಶುಕ್ರ ಎಂಟನೇ ಮನೆಯಲ್ಲಿ ನೀವು ಬಹುದಿಗಳಿಂದ ಬಯಸುತ್ತಿದ್ದ ಸಿಹಿ ಸುದ್ದಿಯನ್ನು ಕೇಳಿಸುತ್ತಾನೆ. ಬುಧ ಕಾರ್ಯಾನುಕೂಲ ಮಾಡಿಕೊಡುತ್ತಾನೆ. ಹತ್ತನೇ ಮನೆಯ ರಾಹು ವೃತ್ತಿಯಲ್ಲಿ ಒತ್ತಡವನ್ನು ಕೊಟ್ಟರೂ ಗುರುಬಲ ಅದು ವಿಕೋಪಕ್ಕೆ ಹೋಗದಂತೆ ಕಾಪಾಡುತ್ತದೆ. ನಿಮಗೆ ಯೋಗಕಾರಕ ಗ್ರಹ ಕುಜ. ಈಗ 12ನೇ ಮನೆ ಪ್ರವೇಶವಾಗುವುದೂ ನಿಮಗೆ ಅಷ್ಟು ಹಿತವಲ್ಲ. ಆದರೆ ನೀವು ದೃಢಮನಸ್ಕರು. ಸಾಮಾನ್ಯ ವಿಷಯಗಳಿಂದ ನಿಮ್ಮನ್ನು ಅಲುಗಾಡಿಸಲು ಆಗುವುದಿಲ್ಲ.ಇದೇ ಸ್ವಭಾವ ನಿಮಗೆ ಸರಿದಾರಿಯಲ್ಲಿ ನಡೆಯಲು ಪ್ರೇರಣೆ ಕೊಡುತ್ತದೆ. ಪ್ರವಾಸ ಮಾಡುವ ಭಾಗ್ಯ ಇದೆ. ಸಾಹಸ ಯಾತ್ರೆ ಮಾಡುತ್ತೀರಿ. ಬೆಟ್ಟಗುಡ್ಡಗಳನ್ನು ಹತ್ತುವುದು ದೂರ ಪ್ರದೇಶಕ್ಕೆ ಪ್ರಯಾಣ ಇವೆಲ್ಲ ಇದೆ. ಭಗವಂತನ ದರ್ಶನ ಭಾಗ್ಯ ಇದೆ. ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಸಾಧ್ಯತೆಗಳು ಹೆಚ್ಚಿವೆ. ಹಣದ ಹರಿವು ಉತ್ತಮವಾಗಿದೆ. ವೃತ್ತಿಸ್ಥಾನಾಧಿಪತಿ 12ನೇ ಮನೆಗೆ ಬರುವುದರಿಂದ ವೃತ್ತಿಯಲ್ಲಿ ಅಲೆದಾಟ ಒತ್ತಡ ಇರುತ್ತದೆ.

ಸಿಂಹರಾಶಿ:

ಸಿಂಹರಾಶಿ:

ಬೇರೆ ಗ್ರಹಗಳ ಬೆಂಬಲವೂ ಕಡಿಮೆ ಇದೆ. ಕುಜ ಮತ್ತು ಕೇತುವಿನ ಬೆಂಬಲ ಸಧ್ಯಕ್ಕೆ ಇದೆ. 11ನೇ ಮನೆಯಲ್ಲಿ ಕುಜ ಲಾಭವನ್ನು ಭೂಮಿ ಖರೀದಿ ಯೋಗವನ್ನು ಕೊಡುತ್ತಾನೆ. ಭೂಮಿ ಮಾರಾಟ ಮಾಡುವವರು ಕೂಡ ಈಗ ಅದರ ಬಗ್ಗೆ ವ್ಯವಹಾರ ಮಾಡಬಹುದು. ಮೂರನೇ ಮನೆಯಲ್ಲಿ ಕೇತು ನಿಮಗೆ ಧೈರ್ಯವನ್ನು ಸಾಹಸವನ್ನೂ ಹೆಚ್ಚು ಮಾಡುತ್ತಾನೆ. ಏಳನೇ ಮನೆಯಲ್ಲಿ ಶನಿ-ಶುಕ್ರ-ಬುಧ-ಸೂರ್ಯ ಸೇರಿ ಅಲ್ಲಿ ಒಂದು ತಾತ್ಕಾಲಿಕ ರಾಜಯೋಗ ಆಗಿದೆ. ಗುರುಬಲ ಇಲ್ಲದಿದ್ದರೂ ಈ ರಾಜಯೋಗದಿಂದ ಅವಿವಾಹಿತರಿಗೆ ಹಠಾತ್ ಮದುವೆ ನಿಶ್ಚಯ ಆಗಬಹುದು. ಅಥವಾ ಯಾವುದೋ ಮೂಲದಿಂದ ಹಣ ಒದಗುವ ಸಾಧ್ಯತೆಗಳಿವೆ. ಎಂಟನೇ ಮನೆ ಶುಕ್ರ ಪ್ರವೇಶದ ನಂತರ ಮತ್ತಷ್ಟು ಶುಭಫಲಗಳನ್ನು ಅನುಭವಿಸುತ್ತೀರಿ. ಒಂಬತ್ತನೇ ಮನೆಯಲ್ಲಿ ರಾಹು ಇರುವುದರಿಂದ ನಿಮಗೆ ಒದಗುವ ಭಾಗ್ಯಗಳನ್ನು ಕೈಗೆಟುಕದಂತೆ ಆಟವಾಡಿಸುತ್ತಾನೆ. ಭಾಗ್ಯಗಳು ಎಂದರೆ ನಮಗೆ ಸಿಗುವ ಸೌಕರ್ಯ ಅಥವಾ ಅದೃಷ್ಟ. ತೀರಾ ಕೈಗೆ ಬರುವ ಹೊತ್ತಿನಲ್ಲಿ ಅಡ್ಡಿ ಆತಂಕಗಳು ಎದುರಾಗಿ ಕೈತಪ್ಪಿ ಹೋಗಬಾರದು. ನಿಮ್ಮ ಪ್ರಯತ್ನಗಳಲ್ಲಿ ಆದಷ್ಟೂ ಪ್ರಾಮಾಣಿಕತೆ ಇರಲಿ. ಈ ತಿಂಗಳು ನಿಮಗೆ ಸಮ್ಮಿಶ್ರಫಲ. ನಿಮಗೆ ಹಠ ಕೋಪ ಹೆಚ್ಚು. ಇದು ನಿಮ್ಮ ಅಭಿವೃದ್ಧಿಗೆ ಮಾರಕವಾಗದಂತೆ ಎಚ್ಚರಿಕೆ ವಹಿಸುವುದು ಸೂಕ್ತ.

ಕನ್ಯಾರಾಶಿ:

ಕನ್ಯಾರಾಶಿ:

ಈಗ ನೀವು ನಿಮ್ಮೆತ್ತರಕ್ಕೂ ಹಣವನ್ನು ನೋಡುವ ಸಮಯ. ನೀವು ಯಾವುದೇ ಕೆಲಸ ಮಾಡಿದರೂ ಜಯಶಿಲರಾಗುತ್ತೀರಿ. ನಿಮ್ಮ ಮೇಲೆ ಕೇಸುಗಳಿದ್ದರೂ ನೀವು ಜಯಿಸಿಕೊಳ್ಳುತ್ತೀರಿ. ಕೋರ್ಟು ವ್ಯಾಜ್ಯಗಳು ನಿಮ್ಮ ಪರ ಆಗುತ್ತದೆ. ನಿಮ್ಮ ಮಾತು ಈಗ ಭಿನ್ನಾಭಿಪ್ರಾಯಗಳನ್ನು ಮೂಡಿಸಬಹುದು. ಮಾತಿನ ಮೇಲೆ ನಿಗಾ ವಹಿಸುವಂತೆ ಎಚ್ಚರಿಸಲಾಗಿದೆ. ಏನೋ ಬೇಡದ ಮಾತನಾಡಿ ಕೆಟ್ಟ ಹೆಸರು ಹೊತ್ತುಕೊಳ್ಳಬೇಡಿ. ವಿದೇಶ ಪ್ರವಾಸ ಯೋಗ ಇದೆ. ಹತ್ತನೇ ಮನೆಯಲ್ಲಿ ಕುಜ ನಿಮ್ಮ ವೃತ್ತಿಗೆ ಇನ್ನಷ್ಟು ಭಧ್ರತೆಯನ್ನೂ ಗೌರವವನ್ನೂ ತಂದುಕೊಡುತ್ತಾನೆ. ದೇವರ ಕೆಲಸಗಳನ್ನು ಮಾಡಿ ನಿಮ್ಮ ಸುತ್ತಮುತ್ತ ಒಳ್ಳೆಯ ಹೆಸರನ್ನು ಪಡೆಯುತ್ತೀರಿ. ಆರನೇ ಮನೆಯಲ್ಲಿ ಶುಕ್ರ-ಶನಿ-ಸೂರ್ಯ-ಬುಧ ಇದ್ದು ಈ ನಾಲ್ಕೂ ಗ್ರಹಗಳು ನಿಮಗೆ ಶುಭಫಲಗಳನ್ನು ಕೊಡುತ್ತಾರೆ. ಸರ್ಕಾರದಿಂದ ಆಗಬೇಕಾದ ಕೆಲಸಗಳು ಬಾಕಿಯಿದ್ದರೆ ಸರ್ಕಾರದ ಟೆಂಡರ್ ನಿಮಗೆ ಬೇಕಿದ್ದರೆ ಸರ್ಕಾರದಿಂದ ಹಣ ಬರಬೇಕಿದ್ದರೆ ಈಗ ಎಲ್ಲವೂ ಸುಲಭವಾಗಲಿವೆ. ಅವಿವಾಹಿತರಿಗೆ ವಿವಾಹ ಯೋಗ ಇದೆ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆದುಕೊಳ್ಳುವ ಅವಕಾಶವಿದೆ.

ತುಲಾರಾಶಿ:

ತುಲಾರಾಶಿ:

ಈಗ ನಿಮಗೆ ಕೊಂಚ ಸಂಕಷ್ಟದ ಸಮಯ ಆದರೂ ಅಲ್ಲಲ್ಲಿ ಚೇತೋಹಾರಿಯಾದ ಸಂಗತಿಗಳು ನಡೆಯುತ್ತದೆ. ಹಣಕಾಸಿಗೆ ಕಷ್ಟ ಇರಬಹುದು. ಕೊಂಚ ಉಸಿರು ಕಟ್ಟಿಸುವ ವಾತಾವರಣ ಸೃಷ್ಟಿಯಾಗಬಹುದು. ಆದರೆ ಸೃಜನಶೀಲ ಕೆಲಸಗಳಿಗೆ ಮನ್ನಣೆ ಇದ್ದೇ ಇದೆ. ಜನರು ನಿಮ್ಮ ಕೆಲಸವನ್ನು ಗಮನಿಸುತ್ತಾರೆ. ಪಂಚಮ ಶನಿ ನಿಮಗೆ ಪರೀಕ್ಷೆಗಳನ್ನು ಒಡ್ಡುತ್ತಾನೆ. ಎದೆಗುಂದ ಬೇಡಿ. ಶನಿ ನಿಮಗೆ ಯೋಗಕಾರಕ ಗ್ರಹ. ಹಾಗಾಗಿ ಅಷ್ಟು ತೀವ್ರವಾಗಿ ಕಾಡಿಸಲಾರ. ಆರನೇ ಮನೆಯಲ್ಲಿ ಗುರು-ಶುಕ್ರ ಇದ್ದಾರೆ. ಇದು ನಿಮಗೆ ಮಾನಸಿಕ ಒತ್ತಡವನ್ನು ಕೊಡುತ್ತದೆ. ಆದರೆ 15ರ ನಂತರ ಸೂರ್ಯ ಮೀನರಾಶಿಗೆ ಪ್ರವೇಶವಾದಾಗ ನಿಮಗೆ ಲಾಭವಾಗಲಿದೆ. ಕೆಲಸಗಳು ಸುಲಭವಾಗುತ್ತದೆ. ಬುಧ ನಾಲ್ಕನೇ ಮನೆಯಲ್ಲಿ ಇರುವುದು ಕೂಡ ನಿಮಗೆ ಶುಭಫಲಗಳು ಸಿಗುತ್ತದೆ. ಸಾಮಾಜಿಕ ಮನ್ನಣೆ ಗೌರವ ಸಿಗಲಿದೆ. ನಿಮ್ಮ ಯಾವುದೋ ಒಂದು ಕೆಲಸಕ್ಕೆ ಒಳ್ಳೆಯ ಫಲ ಸಿಗಲಿದೆ. ಪಂಚಮ ಶನಿ ಇದ್ದರೂ ಮುಂದೆ ಗುರುಬಲ ಬರುವುದರಿಂದ ನಿಮ್ಮ ಕೆಲಸಗಳೆಲ್ಲ ಸುಸೂತ್ರವಾಗಿ ಜರಗುತ್ತವೆ. ಆರೋಗ್ಯ ಸುಧಾರಿಸುತ್ತದೆ. ಕೋರ್ಟು ವ್ಯಾಜ್ಯಗಳಿದ್ದರೆ ಜಯ ನಿಮ್ಮಕಡೆ ಆಗುತ್ತದೆ. ಹಣದ ಹರಿವು ಉತ್ತಮವಾಗುತ್ತದೆ.

ವೃಶ್ಚಿಕರಾಶಿ:

ವೃಶ್ಚಿಕರಾಶಿ:

ಈಗ ನಿಮಗೆ ಶನಿಯ ಅನುಗ್ರಹ ಕಡಿಮೆಯಾಗಿದ್ದರೂ ತೊಂದರೆ ಏನೂ ಇಲ್ಲ. ಅರ್ಧಾಷ್ಟಮ ಶನಿ ಎಂದು ಭಯಪಡಬೇಡಿ. ಅದೆಲ್ಲಾ ಏನೂ ಮಾರಕವಲ್ಲ. ಈಗ ಗುರುಬಲ ಇದೆ. ರಾಹು ಬಲ ಇದೆ. ಗುರು ನೀವು ಅಂದುಕೊಂಡ ಕೆಲಸ-ಕಾರ್ಯಗಳನ್ನು ಸುಲಭವಾಗಿ ನಡೆಯುತ್ತವೆ. ರಾಹು ನಿಮ್ಮ ಕೆಲಸಗಳಿಗೆ ಇರುವ ಅಡ್ಡಿ ಆತಂಕಗಳನ್ನು ದೂರ ಮಾಡುತ್ತಾನೆ. ಮುನ್ನುಗ್ಗಿ ಕೆಲಸ ಸಾಧಿಸಿಕೊಂಡು ಬರುವ ಧೈರ್ಯ ಮತ್ತು ಮನೋಬಲವನ್ನೂ ಕೊಡುತ್ತಾನೆ. ಐದನೇ ಮನೆಯ ಗುರು ಸಂತಾನಾಪೇಕ್ಷಿಗಳಿಗೆ ಸಂತಾನವನ್ನು ಕರುಣಿಸುತ್ತಾನೆ. ನೌಕರಿಯಲ್ಲಿ ವಿಶೇಷ ಫಲಗಳು ಇದೆ. ಬಡ್ತಿ ಇದೆ. ಹಣಕಾಸು ಸ್ಥಿತಿ ಸುಗಮವಾಗಿರುತ್ತದೆ. ಐದನೇ ಮನೆಯಲ್ಲಿ ಗುರುವಿನೊಂದಿಗೆ ಶುಕ್ರನೂ ಇದ್ದಾನೆ. ಇದು ನಿಮಗೆ ವಿಶೇಷ ಯಶಸ್ಸನ್ನು ಸತ್ಫಲಗಳನ್ನು ಕೊಡುತ್ತದೆ. ಮೂರರಲ್ಲಿ ಇರುವ ಬುಧ ಬಂಧುಗಳಿಂದ ಸಹಕಾರ ಸಹಾಯ ಕೊಡಿಸುತ್ತಾನೆ. ನೀವು ನಿರೀಕ್ಷಿಸುತ್ತಿದ್ದ ಪ್ರಿಯವಾರ್ತೆಯೊಂದು ಕೇಳುವ ಸಾಧ್ಯತೆಗಳಿವೆ. ವಿದೇಶ ಪ್ರವಾಸ ಯೋಗ ಇದೆ. ವಿಧ್ಯಾರ್ಥಿಗಳಿಗೆ ತುಂಬಾ ಒಳ್ಳೆಯ ಸಮಯ. ನೀವು ತೆಗೆದುಕೊಂಡ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದು ಯಶಸ್ಸು ಸಾಧಿಸುತ್ತೀರಿ. ನಿಮ್ಮಿಂದ ಮನೆಯಲ್ಲಿ ಸುಖ ಸಂತೋಷಗಳು ವೃದ್ಧಿಯಾಗುತ್ತದೆ.

ಧನಸ್ಸುರಾಶಿ:

ಧನಸ್ಸುರಾಶಿ:

ಈಗ ನಿಮಗೆ ರಾಜಯೋಗದ ಸಮಯ. ನೀವು ಕೈಹಾಕಿದ ಕೆಲಸದಲ್ಲಿ ಜಯ ಸಾಧಿಸುತ್ತಿರಿ. ಕಳೆದ ಏಳೆಂಟು ವರ್ಷದಿಂದ ಬಹಳ ಕಷ್ಟ ಪಟ್ಟಿದ್ದೀರಿ. ಎಲ್ಲರ ಎದುರು ತಲೆಯೆತ್ತಿ ನಿಲ್ಲುವ ಸಮಯ ಈಗ ಬಂದಿದೆ. ಹಣಕಾಸಿಗೆ ಬಹಳ ಕಷ್ಟ ಪಟ್ಟಿದ್ದೀರಿ. ನೌಕರಿಯಲ್ಲಿ ಕಿರುಕುಳ ಅನುಭವಿಸಿದ್ದೀರಿ. ಈಗ ಅವೆಲ್ಲವೂ ಹೇಳಹೆಸರಿಲ್ಲದಂತೆ ಮಾಯವಾಗುತ್ತದೆ. ಹಣ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಬಹಳ ದಿನಗಳಿಂದ ಬಾಕಿಯಾಗಿದ್ದ ಹಣ ಈಗ ವಸೂಲಾಗುತ್ತದೆ. ಹೊಸ ಕೆಲಸ ಸಿಗುತ್ತದೆ. ಇನ್ನು ಕೆಲವೇ ದಿನಗಳಲ್ಲಿ ಗುರು ಐದನೇ ಮನೆಗೆ ಪ್ರವೇಶವಾದಾಗ ನಿಮಗೆ ಇನ್ನು ಹೆಚ್ಚಿನ ಶುಭಫಲಗಳು ದೊರೆಯಲಿವೆ. ಋಣಾತ್ಮಕ ಏನೆಂದರೆ ಕುಟುಂಬದಲ್ಲಿ ಅಸೌಖ್ಯ ಇರುತ್ತದೆ. ಮಕ್ಕಳಿಂದ ನಿಷ್ಠೂರ ಭಾವ ಅನುಭವಿಸುತ್ತೀರಿ. ಅಥವಾ ಮಕ್ಕಳಿಂದ ದೂರ ಇರುವ ಪ್ರಸಂಗ ಉಂಟಾಗಬಹುದು. ಸಂತಾನಗೋಪಾಲಕೃಷ್ಣನ ಸ್ಮರಣೆ ಮಾಡಿ. ಸಂತಾನಾಪೇಕ್ಷೆ ಇರುವವರು ನಿಮ್ಮ ಅಪೇಕ್ಷೆಯನ್ನು ಕೊಂಚ ದಿನ ಮುಂದಕ್ಕೆ ಹಾಕಿ. ಸಂತಾನಕ್ಕೆ ಈಗ ಒಳ್ಳೆಯ ಕಾಲ ಅಲ್ಲ. ಅನಾರೋಗ್ಯ ಗರ್ಭಪಾತ ಆಗಬಹದು. ಬಾಕಿಯಂತೆ ನಿಮ್ಮ ವೈಯುಕ್ತಿಕ ಬೆಳವಣಿಗೆಗೆ ಈಗ ಸಕಾಲ. ವಿದ್ಯಾರ್ಥಿಗಳಿಗೂ ಶುಭ. ವಿದೇಶಪ್ರವಾಸ ಯೋಗ ಇದೆ. ಎರಡನೇ ಮನೆಯ ಬುಧ ಹಣ ಕೊಡಿಸುತ್ತಾನೆ. ಈ ತಿಂಗಳು ಶುಭಫಲಗಳೇ ಇವೆ.

ಮಕರರಾಶಿ:

ಮಕರರಾಶಿ:

ಈಗ ನಿಮಗೆ ಗುರುಬಲ ಕಡಿಮೆ, ಆದರೆ ಸಾಡೆಸಾತಿ ಶನಿಯ ಪ್ರಭಾವದ ಕೊನೆಯ ಹಂತಕ್ಕೆ ಬಂದಿದ್ದೀರಿ. ಮೊದಲಿನಷ್ಟು ಕಠಿಣ ಪರಿಸ್ಥಿತಿ ಈಗ ಇರುವುದಿಲ್ಲ. ಆರು ವರ್ಷದಿಂದ ಬಹಳಷ್ಟು ಹಿಂಸೆ ಅನುಭವಿಸಿದ್ದೀರಿ. ಗಂಡ ಹೆಡತಿಯ ನಡುವೆ ಅನೋನ್ಯತೆ ಕಡಿಮೆಯಾಗಿದೆ. ಹಣಕಾಸಿನ ಮುಗ್ಗಟ್ಟು ಅನುಭವಿಸಿದ್ದೀರಿ. ನೌಕರಿಯನ್ನೂ ಕಳೆದುಕೊಂಡವರು ದೈನಂದಿನ ಜೀವನಕ್ಕೂ ಕಷ್ಟಪಟ್ಟವರೂ ಇದ್ದಾರೆ. ಅನಾರೋಗ್ಯ ಕೋರ್ಟು ಕೇಸುಗಳಲ್ಲಿ ಹಿನ್ನಡೆ ಮುಂತಾದ ಋಣಾತ್ಮಕ ಸಂಗತಿಗಳನ್ನು ಅನುಭವಿಸಿದ್ದೀರಿ. ಈಗ ಹಂತಹಂತವಾಗಿ ಅವೆಲ್ಲವೂ ಸರಿ ಹೋಗಲಿದೆ. ಬದುಕಿನಲ್ಲಿ ಬಹಳಷ್ಟು ಪೆಟ್ಟುಗಳನ್ನು ಅನುಭವಿಸಿದ್ದೀರಿ. ಈಗ ಅವೆಲ್ಲವೂ ಕ್ರಮೇಣ ಸರಿಯಾಗಲಿದೆ. ಹೊಸ ಕೆಲಸಕ್ಕೆ ಅವಕಾಶಗಳು ಎದುರಾಗುತ್ತದೆ. ಗೊಂದಲಕ್ಕೆ ಒಳಗಾಗದೇ ಸರಿಯಾದ ಆಯ್ಕೆ ಮಾಡಿಕೊಳ್ಳಿ. ದೂರದೃಷ್ಟಿಯಿಂದ ಯೋಚಿಸಿ ತೀರ್ಮಾನ ತೆಗೆದುಕೊಳ್ಳಿ. ಹೊಸ ಯೋಜನೆ/ಪ್ರಾಜಕ್ಟ್/ಕಾಂಟ್ರಾಕ್ಟ್ ಗಳು ಈಗ ಕೈಗೆ ಸಿಗಲಿದೆ. ದೈಹಿಕ ಶ್ರಮ ಇರುತ್ತದೆ ಆದರೆ ಫಲ ಖಂಡಿತಾ ಶುಭವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಕಾಲ. ವಿದೇಶದಲ್ಲಿ ವ್ಯಾಸಂಗ ಮಾಡುವ ಅವಕಾಶ ದೊರೆಯುತ್ತದೆ. ನಿಮ್ಮ ರಾಶಿಯಲ್ಲೇ ಇರುವ ಬುಧ ನಿಮಗೆ ರಕ್ಷೆಯನ್ನು ಕೊಡುತ್ತಾನೆ. ಮೂರನೇ ಮನೆಯಲ್ಲಿ ಶುಕ್ರ ಗುರು ನಿಮಗೆ ಒಳಿತನ್ನು ಮಾಡುತ್ತಾರೆ. ಸ್ತ್ರೀ ಮೂಲದಿಂದ ಸಹಾಯ ಬೆಂಬಲ ಸಿಗಲಿದೆ. ಈಶ್ವರನ ದರ್ಶನ ಮಾಡುವುದರಿಂದ ನಿಮಗೆ ಈಗ ಶುಭವಾಗಲಿದೆ.

ಕುಂಭರಾಶಿ:

ಕುಂಭರಾಶಿ:

ನಿಮಗೆ ಈಗ ಶನಿ ನಿಮ್ಮ ರಾಶಿಯಲ್ಲೇ ಇರುವುದರಿಂದ ಚಂಚಲ ಮನಸ್ಸು. ಒಂದು ಕಡೆ ಗಟ್ಟಿಯಾಗಿ ನಿಲ್ಲರಾರಿರಿ. ಚಡಪಡಿಸುತ್ತೀರಿ. ಮನೆ ಬಿಟ್ಟು ಹೋಗಬೇಕೆಂಬಷ್ಟು ಕಿರಿಕಿರಿ ಅನುಭವಿಸುತ್ತೀರಿ. ಸರಿಯಾದ ನೆಲೆ ಇನ್ನೂ ಸಿಕ್ಕಿಲ್ಲ. ನಿಮ್ಮನ್ನು ಹಾಡಿ ಹೊಗಳುತ್ತಿದ್ದವರೇ ಈಗ ನಿಮ್ಮ ಬೆನ್ನ ಹಿಂದೆ ಆಡಿಕೊಳ್ಳುತ್ತಾರೆ. ಹಣಕಾಸಿನ ಸ್ಥಿತಿ ಉತ್ತಮವಾಗಿದೆ ಆದರೆ ಮಾನಸಿಕ ನೆಮ್ಮದಿ ಇಲ್ಲದಂತಾಗಿದೆ. ಕೈ ಹಾಕಿದ ಕೆಲಸಗಳಿಗೆ ವೇಗ ಇರುವುದಿಲ್ಲ. ಹಲವಾರು ಅಪವಾದಗಳು ಮತ್ತು ಭಿನ್ನಾಭಿಪ್ರಾಯಗಳಿಗೆ ಸಿಕ್ಕಿಕೊಳ್ಳುತ್ತೀರಿ. ಬೇಜವಾಬ್ದಾರಿಯಂದ ಅಥವಾ ಉಡಾಫೆಯಿಂದ ಮಾತನಾಡಬೇಡಿ. ಇದೇ ನಿಮಗೆ ಮುಳುವಾಗುತ್ತದೆ. ಗುರು ಮತ್ತು ರಾಹು ನಿಮ್ಮ ರಕ್ಷಣೆ ಮಾಡುತ್ತಾರೆ ಆದರೂ ಶನಿಯ ಪ್ರಭಾವ ಈಗ ಕೊಂಚ ಜೋರಾಗಿದೆ. ಪ್ರತಿಹೆಜ್ಜೆಯನ್ನೂ ಯೋಚಿಸಿ ಮುಂದೆ ಇಡಿ. ಆಪ್ತರನ್ನು ಸಮಾಲೋಚನೆ ಮಾಡಿ. ಹಿತೈಷಿಗಳ ಕಿವಿಮಾತು ಕೇಳಿ. ನಾಲ್ಕರಲ್ಲಿ ಕುಜ ನಿಮಗೆ ಭೂಮಿ ಕೊಡಿಸುತ್ತಾನೆ. ಭೂಮಿ ಸಂಬಂಧ ವ್ಯವಹಾರಗಳು ಕೈಹಿಡಿಯುತ್ತದೆ. ಕುಜ ಐದನೇ ಮನೆಗೆ ಬಂದಾಗಲೂ ಶುಭಫಲಗಳಿವೆ. ಕಟ್ಟಡ ನಿರ್ಮಾಣ ಮಾಡುವವರಿಗೆ ಲಾಭ ಇದೆ. ಮುಂದೆ ಒಳ್ಳೆಯ ದಿನಗಳು ಖಂಡಿತಾ ಇದೆ.

ಮೀನರಾಶಿ:

ಮೀನರಾಶಿ:

ಈಗ ನೀವು ಸಾಡೆಸಾತಿಯ ಬಿಸಿಯನ್ನು ಅನುಭವಿಸುತ್ತಿದ್ದೀರಿ. ಕೆಲಸಕಾರ್ಯಗಳು ನಿಂತಲ್ಲೇ ನಿಂತುಬಿಡುತ್ತದೆ. ನಿಮ್ಮವರು ಎಂದುಕೊಂಡವರೇ ನಿಮಗೆ ವಿರೋಧ ವ್ಯಕ್ತಪಡಿಸುತ್ತಾರೆ. ಸ್ನೇಹಿತರು ನಿಮ್ಮನ್ನು ಅಪಾರ್ಥ ಮಾಡಿಕೊಳ್ಳುತ್ತಾರೆ. ನೌಕರಿ ಮಾಡುವ ಜಾಗದಲ್ಲೂ ಕಿರಿಕಿರಿ ಇರುತ್ತದೆ. ನಿಮಗೆ ಸಿಗಬೇಕಾಗಿದ್ದ ಸವಲತ್ತುಗಳು ಬೇರೆಯವರ ಪಾಲಾಗುತ್ತದೆ. ಹಣಕಾಸಿಗೆ ಕಷ್ಟ ಮತ್ತು ಖರ್ಚೂ ಹೆಚ್ಚು. ಈಗ ಗುರು ನಿಮ್ಮರಾಶಿಯಲ್ಲಿ ಹಾಗೂ ಶನಿ 12ನೇ ಮನೆಯಲ್ಲಿ ಹಾಗೂ ರಾಹು ಎರಡನೇ ಮನೆಯಲ್ಲಿ ಇರುವುದು ನಿಮಗೆ ವ್ಯತಿರಿಕ್ತ ಪರಿಣಾಮಗಳನ್ನು ನೀಡುತ್ತದೆ. ನಿಮ್ಮರಾಶಿಯಲ್ಲೇ ಇರುವ ಉಚ್ಛ ಶುಕ್ರ ನಿಮಗೆ ಸ್ವಲ್ಪಮಟ್ಟಿನ ನಿರಾಳತೆಯನ್ನು ಕೊಡುತ್ತಾನೆ. 11ನೇ ಮನೆಯಲ್ಲಿ ಬುಧ ನಿಮಗೆ ಕೊಂಚ ಧನಲಾಭ ಆಗುವಂತೆ ಮಾಡುತ್ತಾನೆ. ಕೋರ್ಟು ವ್ಯವಹಾರಗಳು ಇದ್ದರೆ ಮುಂದಕ್ಕೆ ಹಾಕಿ. ಯಾವುದೇ ಮುಖ್ಯ ತೀರ್ಮಾನ ಮುಂದಕ್ಕೆ ಹಾಕಿ. ಮುಂದಿನ ತಿಂಗಳಿನಲ್ಲಿ ಗುರುಬಲ ಬಂದಾಗ ನಿರಾಳತೆ ಅನುಭವಿಸುತ್ತೀರಿ. ಎರಡನೇ ಮನೆಯಲ್ಲಿ ರಾಹು ಇರುವುದು ಕುಟುಂಬದಲ್ಲಿ ಅಶಾಂತಿ ಉಂಟಾಗುತ್ತದೆ. ಮನೆಯಲ್ಲಿ ಜಗಳಕ್ಕೆ ಆಸ್ಪದ ಕೊಡಬೇಡಿ. ಆದಷ್ಟು ಮೌನವಾಗಿ ಇರಿ. ಮೂರರ ಕುಜ ನಿಮಗೆ ಧೈರ್ಯವನ್ನು ಕೊಡುತ್ತಾನೆ. ಕುಜ ನಾಲ್ಕನೇ ಮನೆಗೆ ಬಂದಾಗಲೂ ಒಳ್ಳೆಯ ಫಲ ನೀಡುತ್ತಾನೆ. ಎಂಟರಲ್ಲಿ ಕೇತು ಇದ್ದಾನೆ. ಗಾಡಿ ಚಲಾಯಿಸುವಾಗ ಜಾಗ್ರತೆ ಇರಲಿ. ಸಾಲ ಮಾಡಬೇಡಿ. ಸಾಲ ಕೊಡಬೇಡಿ. ಸಾಲ ವಸೂಲಾಗಲು ಕಷ್ಟವಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+