• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್ 2022ರ ಮಾಸಭವಿಷ್ಯ, ಯಾವೆಲ್ಲ ರಾಶಿಗೆ ಸಂತಸ ಸುದ್ದಿ ಇದೆ?

|
Google Oneindia Kannada News

ಪ್ರತಿಯೊಬ್ಬ ವ್ಯಕ್ತಿಯು ತನ್ನ ಭವಿಷ್ಯದ ಸಮಯದ ಬಗ್ಗೆ ಮಾಹಿತಿಯನ್ನು ತೆಗೆದುಕೊಳ್ಳುವ ಮೂಲಕ ತನ್ನ ಭವಿಷ್ಯದ ಯೋಜನೆಗಳನ್ನು ನಿರ್ಧರಿಸಲು ಬಯಸುತ್ತಾನೆ. ಆದರೆ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವುದು ಸ್ವಲ್ಪ ಕಷ್ಟ. ಇದರೊಂದಿಗೆ, ನಿಮ್ಮ ರಾಶಿಚಕ್ರದ ಪ್ರಕಾರ ನಿಮ್ಮ ಮುಂಬರುವ ಸಮಯದಲ್ಲಿ ಸಂಭವಿಸುವ ಘಟನೆಗಳನ್ನು ಊಹಿಸಲು ಸಹ ಕಷ್ಟವಾಗುತ್ತದೆ. ಅಂತಹ ಯಾವುದೇ ಮಾಹಿತಿಗಾಗಿ ವ್ಯಕ್ತಿಯು ಜ್ಯೋತಿಷ್ಯದ ಸಹಾಯವನ್ನು ತೆಗೆದುಕೊಳ್ಳುತ್ತಾನೆ.ಶುಭಕೃತು ನಾಮ ಸಂವತ್ಸರ ದಕ್ಷಿಣಾಯನ ಹೇಮಂತ ಋತು ಮಾರ್ಗಶಿರ ಮಾಸ.

3.12 ರಂದು ಧನಸ್ಸಿಗೆ ಬುಧ ಪ್ರವೇಶ, 5.12 ರಂದು ಧನಸ್ಸಿಗೆ ಶುಕ್ರ ಪ್ರವೇಶ. 17.12 ರಂದು ಧನಸ್ಸಿಗೆ ಸೂರ್ಯನ ಪ್ರವೇಶ.

ಮಾಸ ವಿಶೇಷ: 7.12.22 ದತ್ತಜಯಂತಿ
25.12.22: ಕ್ರಿಸ್ ಮಸ್.

ಮಾಸಭವಿಷ್ಯ:

ಮೇಷರಾಶಿ:

ಮೇಷರಾಶಿ:

ಈ ತಿಂಗಳು ನಿಮ್ಮ ಭಾಗ್ಯದ ಬಾಗಿಲು ತೆರೆಯುವ ಹತ್ತಿರದಲ್ಲಿ ಇದ್ದೀರಿ. ಸದ್ಯದಲ್ಲೇ ಶನಿ 11ನೇ ಮನೆಗೆ ಬರುತ್ತಾನೆ . ಶನಿ 11ನೇ ಮನೆಯಲ್ಲಿ ಬಹಳ ಭಾಗ್ಯಗಳನ್ನು ಲಾಭವನ್ನು ಕೊಡುತ್ತಾನೆ. ನೀವು ಅಂದುಕೊಂಡ ಕೆಲಸಗಳನ್ನು ಯಶಸ್ವಿಯಾಗಿ ಮಾಡಿ ಮುಗಿಸುತ್ತೀರಿ. ಯಾವುದೇ ಅಡೆತಡೆಗಳು ಬರುವುದಿಲ್ಲ. ಹಣದ ಹರಿವು ಬಹಳ ಉತ್ತಮವಾಗಿರುತ್ತದೆ. 3.12 ಮತ್ತು 5.12 ರಂದು ಕ್ರಮವಾಗಿ ಬುಧ ಶುಕ್ರರು ನಿಮ್ಮ ರಾಶಿಯಿಂದ ಒಂಬತ್ತನೇ ಮನೆಗೆ ಬರುತ್ತಾರೆ. ಇದು ನಿಮಗೆ ಭಾಗ್ಯದ ಬಾಗಿಲನ್ನು ತೆರೆಯಿಸುತ್ತದೆ. ಗುರುಹಿರಿಯರ ಆಶೀರ್ವಾದ, ದೈವಬಲ ಸಿಗುತ್ತದೆ. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುತ್ತದೆ. ದಾನಧರ್ಮ ಮಾಡುತ್ತೀರಿ. ವೃತ್ತಿಯಲ್ಲಿ ಬಹಳ ಮುನ್ನಡೆ ಇದೆ. ವಿದ್ಯಾರ್ಥಿಗಳಿಗೆ ಬಹಳ ಒಳ್ಳೆಯ ಕಾಲ.

ಉನ್ನತ ಶಿಕ್ಷಣಕ್ಕೆ ಅವಕಾಶ ಇದೆ. ವಿದೇಶ ಪ್ರವಾಸ ಅಥವಾ ವಿದೇಶವಾಸದ ಯೋಗ ಇದೆ. ಭೂಮಿಯಿಂದ ಲಾಭ ಇದೆ. ನಿಮ್ಮ ರಾಶ್ಯಾಧಿಪತಿ ಕುಜ ಹಾಗೂ ನಿಮ್ಮ ಪಂಚಮ ಸ್ಥಾನಾಧಿಪತಿ ಸೂರ್ಯರ ಪರಸ್ಪರ ದೃಷ್ಟಿ ವಿದ್ಯಾರ್ಥಿಗಳಿಗೆ ಶುಭ. ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಆಡಳಿತ ಕ್ಷೇತ್ರದಲ್ಲಿರುವ ವಿದ್ಯಾರ್ಥಿಗಳಿಗೆ ಶುಭಾಶಯಗಳು ಇವೆ. 12ರ ಗುರು ಸ್ಥಾನ ಬದಲಾವಣೆಯನ್ನು ಸೂಚಿಸುತ್ತಾನೆ. ನೀವು ಯಾವುದಕ್ಕೂ ಅಂಜದವರು. ನಿಮ್ಮ ತಂಟೆಗೆ ಯಾರಾದರೂ ಬಂದರೆ ತಕ್ಕ ಪಾಠ ಕಲಿಸುತ್ತೀರಿ. ಕೋಪ ಬಂದರೆ ಬೆಂಕಿಯಾಗುತ್ತೀರಿ. ನಿಮ್ಮ ಸ್ವಭಾವವೇ ನಿಮ್ಮ ಶಕ್ತಿ.

ಡಿಸೆಂಬರ್ ತಿಂಗಳು ನಿಮಗೆ ಬಹಳ ಒಳ್ಳೆಯ ಫಲಗಳನ್ನು ಕೊಡಲಿದೆ. ಬಹಳ ಕಾಲದಿಂದ ಕಾಯುತ್ತಿದ್ದ ಶುಭದಿನಗಳು ಈಗ ಎದುರಾಗುತ್ತದೆ.

ವೃಷಭರಾಶಿ:

ವೃಷಭರಾಶಿ:

ಈ ತಿಂಗಳು ನಿಮಗೆ ಶುಭವನ್ನೇ ತರುತ್ತದೆ. ಗುರು 11ನೇ ಮನೆಯಲ್ಲಿ ನಿಮಗೆ ಲಾಭವನ್ನು ಯಶಸ್ಸನ್ನೂ ಕೊಡುತ್ತಾನೆ. ನಿಮ್ಮ ರಾಶಿಯಲ್ಲೇ ಇರುವ ಕುಜ ನಿಮಗೆ ಧೈರ್ಯವನ್ನು‌ ಕೊಡುತ್ತಾನೆ. ನೀವು ಯಾವುದಕ್ಕೂ ಹೆದರುವುದಿಲ್ಲ. ಬಂದದ್ದೆಲ್ಲ ಬರಲಿ ಗೋವರ್ಧನ ದಯವಿರಲಿ ಎನ್ನುವ ಮನೋಭಾವ ನಿಮ್ಮದು. ವೃಷಭ ಎಂದರೆ ಎತ್ತು. ಎತ್ತಿನ ಹಾಗೆ ನೀವು ಕಷ್ಟಪಡಲೂ ತಯಾರು ಎತ್ತಿನ ಹಾಗೆ ಭಾರ ಹೊರುವ ಹಾಗೂ ಭಾರವನ್ನು ಸಹಿಸುವ ದೃಢ ಮನೊಭಾವ ಇರುತ್ತದೆ.

ತಾಳ್ಮೆಯೂ ಇದೆ ಆದರೆ ತಾಳ್ಮೆ ಮೀರಿದಾಗ ಸಿಡಿಯುತ್ತೀರಿ. ಏನಿದ್ದರೂ ಮುಖದ ಮೇಲೆ ಹೇಳುವ ಸ್ವಭಾವ ನಿಮ್ಮದು. ಯಾರಿಗೂ ಸೊಪ್ಪು ಹಾಕುವುದಿಲ್ಲ ನಿಮ್ಮಲ್ಲಿ ವಿಶ್ವಾಸವಿಟ್ಟವರಿಗೆ ಪ್ರಾಣವನ್ನು ಬೇಕಾದರೂ ಕೊಡುತ್ತೀರಿ. ಈ ಸ್ವಭಾವಗಳೇ ನಿಮಗೆ ರಕ್ಷೆ. ಈ ತಿಂಗಳು ಬುಧ ಹಾಗೂ ಶುಕ್ರ ಇಬ್ಬರೂ ನಿಮ್ಮ ರಾಶ್ಯಾಧಿಪತಿ ಹಾಗೂ ಪಂಚಮಾಧಿಪತಿ ಒಟ್ಟಿಗೆ ಇದ್ದು ನಿಮಗೆ ಅನೇಕ‌ ಶುಭಪಲಗಳನ್ನು ನೀಡುತ್ತಾರೆ. ಏಳನೇ ಮನೆಯಲ್ಲಿ ಇರುವ ಸೂರ್ಯ ಕೊಂಚ ಒತ್ತಡವನ್ನು ಕೊಡುತ್ತಾನೆ. 16ರ ನಂತರ ಸೂರ್ಯ ಧನಸ್ಸುರಾಶಿಗೆ ಪ್ರವೇಶವಾದಾಗ ಒತ್ತಡಗಳು ಉದ್ವೇಗ ಕಡಿಮೆಯಾಗುತ್ತದೆ.

ಮಿಥುನರಾಶಿ:

ಮಿಥುನರಾಶಿ:

ನೀವು ದ್ವಂದ್ವ ಮನೋಭಾವದವರು. ಯಾವ ನಿರ್ಧಾರವನ್ನೂ ಸರಿಯಾಗಿ ಮಾಡಲಾರಿರಿ, ಗೊಂದಲ ಹೆಚ್ಚು. ಒಂದು ನಿರ್ಧಾರಕ್ಕೆ ಅಂಟಿಕೊಳ್ಳುವುದಿಲ್ಲ. ಮನಸ್ಸಿನಲ್ಲಿ ಏನು ಇದೆಯೋ ಹೇಳುವುದಿಲ್ಲ. ಯಾರ ಜೊತೆಯೂ ಬೆರೆಯುವುದಿಲ್ಲ. ಈ ಸ್ವಭಾವಕ್ಕೆ ತಕ್ಕಂತೆ ಈಗ ಅಷ್ಟಮ ಶನಿಯೂ ನಿಮ್ಮ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಸಾಕಷ್ಟು ಕಷ್ಟನಷ್ಟಗಳನ್ನು ಅನುಭವಿಸಿದ್ದೀರಿ. ಈಗ ಅಷ್ಟಮ ಶನಿಯ ಪ್ರಭಾವದಿಂದ ಹೊರಬರುವ ದಿನಗಳು ಹತ್ತಿರದಲ್ಲೇ ಇದೆ.

ಶನಿ ಬಿಟ್ಟು ಹೋಗುವಾಗ ಏನಾದರೂ ಕೊಟ್ಟು ಹೋಗುತ್ತಾನೆ ಎಂಬ ಮಾತಿದೆ. ಹಾಗೆಯೇ ನಿಮಗೆ ಶನಿ ಬಿಟ್ಟುಹೋಗುವಾಗ ನಿಮ್ಮ ಜೀವನಕ್ಕೆ ಏನು ಅವಶ್ಯಕತೆ ಇದೆಯೋ ಅದನ್ನು ಖಂಡಿತಾ ಕೊಡುತ್ತಾನೆ. ಹೆಂಡತಿಯೊಡನೆ ವೈಮನಸ್ಸು ಆರ್ಥಿಕ ಅಭದ್ರತೆ ಕೌಟುಂಬಿಕ ಅಶಾಂತಿ ಇವೆಲ್ಲವೂ ಇದ್ದರೆ ಅವೆಲ್ಲ ಈಗ ಮುಂಬರುವ ದಿನಗಳಲ್ಲಿ ಕ್ರಮೇಣ ಸರಿಯಾಗುತ್ತದೆ. ದೇವರು ಅವಕಾಶ ಕೊಟ್ಟಾಗ ಅದನ್ನು ಸದುಪಯೋಗ ಮಾಡಿಕೊಳ್ಳಬೇಕು. ನಿರ್ಲಕ್ಷ್ಯ ಮಾಡಿದರೆ ಅವಕಾಶದ ಬಾಗಿಲು ಮುಚ್ಚುತ್ತದೆ. ಮತ್ತೆ ತೆರೆಯುವುದು ಕಷ್ಟವೇ.

ಈ ತಿಂಗಳಲ್ಲಿ ವೃತ್ತಿಯಲ್ಲಿ ಒಳ್ಳೆಯ ಬದಲಾವಣೆ ಕಾಣುತ್ತದೆ. ಉನ್ನತ ಸ್ಥಾನಮಾನ ಬಡ್ತಿ ದೊರೆಯುತ್ತದೆ. ಎರಡು ವರ್ಷಗಳಿಂದ ಅಷ್ಟಮಶನಿಯ ಪ್ರಭಾವದಿಂದ ನೌಕರಿ ಕಳೆದುಕೊಂಡವರು, ಸಾಲಸೋಲಗಳಿಗೆ ತುತ್ತಾದವರು ಈಗ ನೆಮ್ಮದಿಯ ನಿಟ್ಟುಸಿರು ಬಿಡುವ ಸಮಯ. ನೌಕರಿ ಇಲ್ಲದವರಿಗೆ ಈಗ ಕೊಂಚ ಪ್ರಯತ್ನ ಪಟ್ಟರೂ ನೌಕರಿ ಸಿಗುತ್ತದೆ.

ಯಾವುದೋ ಮೂಲದಿಂದ ಹಣ ಸಹಾಯ ಒದಗಿಬಂದು ಆರ್ಥಿಕ ಸಂಕಷ್ಟ ದೂರವಾಗುತ್ತದೆ. ಸಂಸಾರದೊಂದಿಗೆ ಸಂತೋಷದ ಪ್ರವಾಸ ಮಾಡುತ್ತೀರಿ. ಹೆಂಡತಿ ಮಕ್ಕಳಿಂದ ದೂರ ಇರುವವರು ಕೂಡ ಅವರನ್ನು ಸೇರಿಕೊಳ್ಳುವ ಸಮಯ ಸನ್ನಿಹಿತವಾಗಿದೆ. ಮನೆ ಕಟ್ಟುವುದು, ಆಸ್ತಿ ಕೊಳ್ಳುವುದು ಮುಂತಾದ ಗುಣಾತ್ಮಕ ಘಟನೆಗಳು ನಡೆಯುತ್ತದೆ ಆರೋಗ್ಯ ಸುಧಾರಣೆ ಆಗುತ್ತದೆ. ಒಟ್ಟಾರೆ ಸಂತಸದ ಕಾಲ. ವಿವೇಚನೆಯಿಂದ ನಿಮ್ಮದಾಗಿಸಿಕೊಳ್ಳಿ.

ಕಟಕರಾಶಿ:

ಕಟಕರಾಶಿ:

ನೀವು ದೈವಭಕ್ತರು ಹಾಗೂ ಕಠಿಣ ಸ್ವಭಾವದವರು. ಯಾವುದೇ ಸವಾಲುಗಳಿಗೂ ಅಂಜುವುದಿಲ್ಲ. ನೀರಿಗೆ ಎದುರಾಗಿ ಈಜಿ ಜೈಸುವುದೇ ನಿಮ್ಮ ಅಭ್ಯಾಸ. ದೇಹದಂಡನೆ ಮಾಡುತ್ತೀರಿ. ಕಠಿಣ ಮನಸ್ಕರು. ದೃಢ ನಿರ್ಧಾರ ತೆಗೆದುಕೊಳ್ಳುವವರು.ಉಪವಾಸ ವನವಾಸಕ್ಕೆ ಅಂಜುವವರಲ್ಲ. ಈ ನಿಮ್ಮ ಕಠಿಣ ಮನಸ್ಥಿತಿಯೇ ನಿಮ್ಮನ್ನು ಎತ್ತರಕ್ಕೂ ಕೊಂಡೊಯ್ಯುತ್ತದೆ ಕಷ್ಟ ನಿಷ್ಠುರಗಳಿಗೂ ಸಿಕ್ಕಿಸುತ್ತದೆ. ಈಗ ನಿಮಗೆ ಗುರುಬಲ ಇದೆ. ಎಲ್ಲ ಕೆಲಸಕಾರ್ಯಗಳಲ್ಲಿ ಜಯ ಯಶಸ್ಸು ನಿಮ್ಮದಾಗುತ್ತದೆ. ವೃತ್ತಿಯಲ್ಲೂ ಅನುಕೂಲಕರ ವಾತಾವರಣ ಇದೆ. ಆದರೆ ಮುಂಬರುವ ದಿನಗಳಲ್ಲಿ ನೀವು ಅಷ್ಠಮ ಶನಿಯ ಪ್ರಭಾವಕ್ಕೆ ಒಳಗಾಗಲಿದ್ದೀರಿ. ಭಯ ಪಡಬೇಡಿ. ಇದು ನಿಮಗೆ ಸವಾಲುಗಳನ್ನು ಕೊಡುತ್ತದೆ.

ನಿಮ್ಮ ತಪ್ಪುಗಳನ್ನು ಪಾಪಗಳನ್ನು ತೊಳೆದು ನಿಮ್ಮನ್ನು ಶುಭ್ರ ಮಾಡುತ್ತದೆ. ಬಟ್ಟೆ ಒಗೆಯುವಾಗ ಬಟ್ಟೆಗೆ ನೋವಾದರೆ ತಾನೆ ಶುಭ್ರವಾಗುವುದು ಹಾಗೆಯೇ ಅಷ್ಟಮ ಶನಿ ಕೂಡ. ಜನ್ಮಾಂತರಗಳಿಂದ ನಿಮ್ಮಲ್ಲಿ ಮಡುಗಟ್ಟಿದ್ದ ಪಾಪಗಳನ್ನು ಕೊಳೆಯನ್ನು ತೊಳೆದು ಶುಭ್ರಮಾಡುತ್ತಾನೆ. ಆದಷ್ಟು ಭಗವಂತನ ಧ್ಯಾನದಲ್ಲಿ ಮನಸ್ಸನ್ನು ನೆಡಿ.

ಲೌಕಿಕವಾಗಿ‌ ಕುಟುಂಬದಲ್ಲಿ ಅಶಾಂತಿ, ಹಣಕಾಸು ಅಭದ್ರತೆ, ವೃತ್ತಿಯಲ್ಲಿ ಒತ್ತಡ ಅನಾರೋಗ್ಯ, ಕಳ್ಳತನ, ಅಪನಿಂದೆ, ಅಪಮಾನ ಮೊದಲಾದವು ಇರುತ್ತದೆ. ಬಂದದ್ದೆಲ್ಲ ಬರಲಿ ಗೋವಿಂದನ ದಯೆಯಿರಲಿ ಎಂದು ನಂಬಿ ಅದರಂತೆ ಇರಿ.ಕಷ್ಟನಷ್ಟಗಳನ್ನು ನೋವು ನಿಷ್ಠುರಗಳನ್ನೂ ಭಗವಂತನಿಗೆ ಸಮರ್ಪಿಸಿದಾಗ ಅವನೇ ಇವನ್ನು ಎದುರಿಸುವ ಎದೆಗಾರಿಕೆ ಕೊಡುತ್ತಾನೆ. ಕಾಪಾಡುತ್ತಾನೆ.ಗಜೇಂದ್ರ ಮೋಕ್ಷ, ನಳ ದಮಯಂತಿ ಕತೆ ಓದಿಕೊಳ್ಳಿ.

ಸಿಂಹರಾಶಿ:

ಸಿಂಹರಾಶಿ:

ಸಿಂಹ ಕಾಡಿನ ರಾಜ ಹಾಗೆಯೇ ನಿಮ್ಮ ರಾಶಿಯ ಅಧಿಪತಿಯಾದ ಸೂರ್ಯನೂ ಗ್ರಹಗಳ ರಾಜ. ನೀವು ರಾಜನಂತೆಯೇ ಬದುಕಲು ಇಚ್ಛಿಸುತ್ತೀರಿ. ಯಾರ ಕೈಕೆಳಗೂ ಇರಲು ಬಯಸುವುದಿಲ್ಲ. ನಿಮ್ಮದೇ ಒಂದು ಸಾಮ್ರಾಜ್ಯ ಕಟ್ಟಿಕೊಳ್ಳುತ್ತೀರಿ. ಠೀವಿ ಗತ್ತು ನಿಮ್ಮ ಲಕ್ಷಣಗಳು. ಸಣ್ಣಪುಟ್ಟದ್ದಕ್ಕೆ ಆಸೆ ಪಡುವುದಿಲ್ಲ. ದೊಡ್ಡ ದೊಡ್ಡ ಗುರಿಗಳ ಬಗ್ಗೆಯೇ ನಿಮ್ಮ ದೃಷ್ಟಿ. ನಿಮ್ಮ ತಾಕತ್ತು ಹಾಕಿ ದೊಡ್ಡ ಗುರಿಗಳನ್ನು ವಶಪಡಿಸಿಕೊಳ್ಳುತ್ತೀರಿ. ಯಾವಾಗಲೂ ದಿಗ್ವಿಜಯದ ಬಗ್ಗೆಯೇ ಗಮನ.

ಎಲ್ಲರೂ ನಿಮಗೆ ಬಗ್ಗಿ ಇರಬೇಕೆಂದು ಬಯಸುತ್ತೀರಿ. ನಿಮಗೆ ವಂಧಿಮಾಗಧರೂ ಹೆಚ್ಚು. ಅವರು ನಿಮ್ಮನ್ನು ಹೊಗಳಿ ಅವರ ಬೇಳೆ ಬೇಯಿಸಿಕೊಳ್ಳುತ್ತಾರೆ. ಅದು ನಿಮಗೆ ಅರಿವಿಗೆ ಬಂದರೂ ನೀವು ಅಸಹಾಯಕರು. ಅದನ್ನು ತಡೆಯಲು ಆಗುವುದಿಲ್ಲ. ನಿಮ್ಮನ್ನು ನಿಸ್ವಾರ್ಥವಾಗಿ ಪ್ರೀತಿಸಿ ಗೌರವಿಸುವವರನ್ನು ನಿರ್ಲಕ್ಷ್ಯ ಮಾಡುತ್ತೀರಿ, ತಿರಸ್ಕರಿಸುತ್ತೀರಿ. ಇದಕ್ಕೆ ಮುಂದೆ ಬಹಳ ಬೆಲೆಯನ್ನೂ ತೆರಬೇಕಾಗುತ್ತದೆ. ಈಗ ನಿಮಗೆ ಗುರು ಅಷ್ಟಮದಲ್ಲಿ ಇದ್ದಾನೆ. ವಂಧಿಮಾಗಧರ ಕಾಟ ಜೋರಾಗಿರುತ್ತದೆ. ಜೊಳ್ಳು ಯಾವುದು ಗಟ್ಟಿ ಯಾವುದು ಎಂದು ವಿವೇಚಿಸಿ ತೀರ್ಮಾನ ತೆಗೆದುಕೊಳ್ಳಿ.

ನಿಮ್ಮ ಮುಂದೆ ನಿಮ್ಮನ್ನು ಹಾಡಿ ಹೊಗಳುವವರು ನಿಮ್ಮ ಕಷ್ಟಕ್ಜೆ ಆಗುವುದಿಲ್ಲ. ಸತ್ಯ ತಿಳಿದು ಮುನ್ನಡೆಯಿರಿ. ಹತ್ತರಲ್ಲಿ ಕುಜ ಕೀರ್ತಿ ಪ್ರತಿಷ್ಠೆಗಳನ್ನು ಹೆಚ್ಚಿಸುತ್ತಾನೆ. ವೃತ್ತಿಯಲ್ಲಿ ಅಭಿವೃದ್ಧಿ ಇದೆ. ನೀವೆ ನಿಮ್ಮ ವೃತ್ತಿಯಲ್ಲಿ ನಂ 1. ಇದನ್ನು ಕಾಪಾಡಿಕೊಳ್ಳಲು ಬಹಳ ಶ್ರಮಪಡ ಬೇಕಾಗುತ್ತದೆ. ನಾಲ್ಕರಲ್ಲಿ ಶುಕ್ರ ಬುಧ ನಿಮ್ಮ ಸುಖ ಸ್ಥಾನಕ್ಕೆ ಬೆಂಬಲ ನೀಡುತ್ತಾರೆ. ವಾಹನದಿಂದ ಲಾಭ, ಹೊಸ ವಾಹನ ಖರೀದಿ, ಆಸ್ತಿ ಜಮೀನು ಖರೀದಿ ಮಾಡುತ್ತೀರಿ. ದೈವ ಧರ್ಮದ ಕಾರ್ಯಕ್ಕೆ ಹಣ ಖರ್ಚಾಗುತ್ತದೆ. ನಿಮ್ಮ ಮನೆಯಲ್ಲಿ ನಿಮ್ಮ ಮಾತೇ ಅಂತಿಮ. ಎಲ್ಲರೂ ನಿಮ್ಮನ್ನು ಅನುಸರಿಸುವಂತೆ ಮಾಡಿಕೊಳ್ಳುತ್ತೀರಿ. ಇದು ನಿಮಗೆ ಶಕ್ತಿಯೂ ಹೌದು ದೌರ್ಬಲ್ಯವೂ ಹೌದು.

ನಾಯಕತ್ವದ ಗುಣಗಳು ನಿಮ್ಮಲ್ಲಿವೆ ಆದರೆ ಪ್ರತಿಯೊಂದೂ ಸಿಂಹಾಸನದಲ್ಲಿ ಕುಳಿತೇ ಅಳೆಯಬಾರದು. ಕೆಳಗಿಳಿದು ಸೇವಕನ ಸ್ಥಾನ ಅರಿತಾಗಲೇ ನಿಮ್ಮ ನಾಯಕತ್ವ ಉಳಿಯುತ್ತದೆ. ಜನಾನುರಾಗಿ ಆಗುತ್ತೀರಿ. ತಾಯಿಯ ಆರೋಗ್ಯ ಸುಧಾರಿಸುತ್ತದೆ. ತಾಯಿ ಸಹೋದರಿಯರ ಬೆಂಬಲ ಇದೆ. ಒಂಬತ್ತರ ರಾಹು ನಿಮ್ಮ ಭಾಗ್ಯಗಳನ್ನು ತಡೆಹಿಡಿಯುತ್ತಾನೆ. ನಿಮ್ಮ ಕೈಯಲ್ಲಿ ಪಾಪದ ಅಂದರೆ ಇನ್ನೊಬ್ಬರಿಗೆ ನೋವಾಗುವ ದುಃಖವಾಗುವ ಕೆಲಸ ಮಾಡಿಸುತ್ತಾನೆ. ಇದನ್ನು ಅರಿತು ವಿವೇಚನೆಯಿಂದ ವರ್ತಿಸಬೇಕು. ಈ ತಿಂಗಳು ನಿಮಗೆ ಮಿಶ್ರಫಲ. ಗುರುಗಳ ಆರಾಧನೆ ಮಾಡಿ. ಶಿವನ ಸ್ತೋತ್ರ ಹೇಳಿಕೊಳ್ಳಿ.

ಕನ್ಯಾರಾಶಿ:

ಕನ್ಯಾರಾಶಿ:

ನಿಮಗೆ ಈಗ ಸಂಪೂರ್ಣ ಗುರುಬಲ. ಗುರು ನಿಮ್ಮ ರಾಶಿಯನ್ನು ನೇರವಾಗಿ ವೀಕ್ಷಿಸುತ್ತಾನೆ. ಅವಿವಾಹಿತರಿಗೆ ವಿವಾಹ ಯೋಗ ಇದೆ. ವ್ಯಾಪಾರ ವ್ಯವಹಾರದಲ್ಲಿ ಲಾಭ ಇದೆ. ಕೋರ್ಟು ಕೇಸುಗಳಿದ್ದರೆ ಜಯ ನಿಮ್ಮದು. ಯಾರಿಗೂ ನಿಮ್ಮನ್ನು ಮುಟ್ಟಲೂ ಧೈರ್ಯವಿಲ್ಲ. ನಿಮಗೆ ತೊಂದರೆ ಕೊಡುವ ಮಾತಂತೂ‌ ದೂರ ಉಳಿಯಿತು. ನೀವು ಮಾತಿನ ನಡೆದುಕೊಳ್ಳುವುದಿಲ್ಲ. ಮಾತಾಡುತ್ತೀರಿ ಆಶ್ವಾಸನೆ ಕೊಡುತ್ತೀರಿ ಆದರೆ ಮರೆತುಬಿಡುತ್ತೀರಿ. ನಿಮಗೆ ಲಾಭವಿದ್ದರೆ ಮಾತ್ರ ನಿಮಗೆ ಬೇಕಾದವರ ಜೊತೆ ಸಂಪರ್ಕದಲ್ಲಿ ಇರುತ್ತೀರಿ. ಇದು ನಿಮ್ಮ ದೌರ್ಬಲ್ಯ. ನಿಮಗೆ ಅತಿಯಾದ ಹೊಗಳಿಕೆ ಬೇಕು. ಇದೆಲ್ಲದರಿಂದ ಹೊರಬನ್ನಿ. ಜೀವನವನ್ನು ನೇರ ದೃಷ್ಟಿಯಲ್ಲಿ ನೋಡಿ.

ಸತ್ಯಾಸತ್ಯತೆಯ ಅರಿವು ಮಾಡಿಕೊಳ್ಳಿ. ಗುರುಬಲ‌ ಇರುವುದರಿಂದ ನಿಮಗೆ ಈಗ ಯಾವುದೇ ಕಾರ್ಯಕ್ಕೆ ಅಡೆತಡೆ ಇರುವುದಿಲ್ಲ. ಇದನ್ನೇ ಗುಣಾತ್ಮಕವಾಗಿ ತೆಗೆದುಕೊಂಡು ಒಳ್ಳೆಯ ಕೆಲಸಗಳನ್ನು ಮಾಡಿ ನಿಮ್ಮ ಕೀರ್ತಿಯನ್ನು ಹೆಚ್ಚಿಸಿಕೊಳ್ಳಿ. ಮೂರನೇ ಮನೆಯ ಬುಧ ಶುಕ್ರರು ನಿಮಗೆ ಬೆಂಬಲ ನೀಡುತ್ತಾರೆ. ಸ್ತ್ರೀ ಯಿಂದ ಸಹಕಾರ ಕೊಡಿಸುತ್ತಾರೆ. ಸ್ತ್ರೀ ದೇವಿಮಾತೆಯೆಂದು ತಿಳಿಯಿರಿ. ಎರಡನೇ ಮನೆಯ ಸೂರ್ಯ ಹಾಗೂ ಕೇತು ನಿಮಗೆ ಹಣದ ಹರಿವು ಉತ್ತಮಪಡಿಸುತ್ತಾರೆ.

ಸರ್ಕಾರದಿಂದ ಹಣ ಬರುವ ಯೋಗ ಇದೆ. ಇನ್ನು ಕೆಲವೇ ದಿನಗಳಲ್ಲಿ ಶನಿ ನಿಮ್ಮ ರಾಶಿಯಿಂದ ಆರನೇ ಮನೆಗೆ ಪ್ರವೇಶವಾದಾಗ ನಿಮಗೆ ಇನ್ನೂ ಹೆಚ್ಚಿನ ಲಾಭ ಕೀರ್ತಿ ಪ್ರತಿಷ್ಠೆಗಳು ಸಿಗುತ್ತದೆ. ಪ್ರಭಾವಿ ವ್ಯಕ್ತಿಯಾಗಿ ಬೆಳೆಯುತ್ತೀರಿ. ವೃತ್ತಿಯಲ್ಲಿ ಬಹುದೊಡ್ಡ ಸ್ಥಾನಮಾನ ಗಳಿಸುತ್ತೀರಿ. ದಾನ ಧರ್ಮ ಮಾಡಿ ಪುಣ್ಯ ಹೆಚ್ಚಿಸಿಕೊಳ್ಳಿ. ಒಂಬತ್ತನೇ ಮನೆಯ ಕುಜ ಭೂಮಿಯಿಂದ ಲಾಭಕೊಡಿಸುತ್ತಾನೆ. ಕಟ್ಟಡ ಮನೆ ಕಟ್ಟುವ ಕೆಲಸ ಮಾಡುತ್ತೀರಿ. ಎಂಟರ ರಾಹು ನಿಮಗೆ ಶುಭನಲ್ಲ. ಸುಬ್ರಹ್ಮಣ್ಯನ ಆರಾಧನೆ ಮಾಡಿ. ನಾಗರಕಲ್ಲಿಗೆ ಹಾಲಿನ ಅಭಿಷೇಕ ಮಾಡಿಸಿ.

ತುಲಾರಾಶಿ:

ತುಲಾರಾಶಿ:

ಈಗ ನಿಮಗೆ ಗುರುಬಲ ಇಲ್ಲ ಹಾಗೂ ಶನಿ ಕೆಲವೇ ದಿನಗಳಲ್ಲಿ ಐದನೇ ಮನೆ ಪ್ರವೇಶವಾಗುತ್ತಾನೆ. ಇದು ನಿಮಗೆ ಅಷ್ಟೇನೂ ಒಳ್ಳೆಯದಲ್ಲ. ಹೊಸ ಕೆಲಸ ಹೊಸ ಕಾಂಟ್ರಾಕ್ಟ್, ಹೊಸ ನಿರ್ಧಾರಗಳನ್ನು ಮುಂದೂಡಿ. ಆಸ್ತಿ ಖರೀದಿ, ಮನೆಕಟ್ಟುವುದು, ಬ್ಯಾಂಕ್ ಸಾಲಪ್ರಯತ್ನ ಇವೆಲ್ಲ ಈಗ ಕೊಂಚ ಸಮಯ ತೆಗೆದುಕೊಳ್ಳುತ್ತದೆ. ಅಂದುಕೊಂಡಷ್ಟು ಸುಲಭವಾಗಿ ಕೆಲಸಗಳು ಆಗುವುದಿಲ್ಲ. ಎಲ್ಲದಕ್ಕೂ ಅಡೆತಡೆ ನಿಧಾನ. ನೀವು ವ್ಯಾಪಾರಿ ಮನೋಭಾವದವರು. ಯಾರಿಂದ ಎಷ್ಟು ಲಾಭ ಸಿಗುತ್ತದೋ ಅಷ್ಟೇ ಒಡನಾಡುವವರು.ಜೊತೆಗೆ ಕೊಂಚ ಸೋಮಾರಿತನವೂ ಇದೆ. ನಿದ್ರೆ ಹೆಚ್ಚು. ಚಟುವಟಿಕೆ ಕಡಿಮೆ.

ಯಾವುದೇ ಆಗುಹೋಗುಗಳಗೆ ತಲೆಕೆಡಿಸಿಕೊಳ್ಳುವವರಲ್ಲ. ಇದು ನಿಮಗೆ ಗುಣಾತ್ಮಕ ಹಾಗೂ ಋಣಾತ್ಮಕ ಎರಡೂ ಪರಿಣಾಮ ನೀಡುತ್ತದೆ. ಕೆಲವರು ನಿಮ್ಮನ್ನು ಸ್ವಾರ್ಥಿ ಎಂದೂ ಹೇಳುತ್ತಾರೆ. ನಿಮ್ಮ ಈ ಗುಣಗಳಿಂದ ನಿಮ್ಮ ಅಭಿವೃದ್ಧಿ ಮತ್ತು ಏಳ್ಗೆಯನ್ನು ನೀವೇ ತಡೆಹಿಡಿಯುತ್ತೀರಿ. ಒಂಥರಾ ಅಪ್ಪ ಹಾಕಿದ ಆಲದಮರಕ್ಕೆ ಜೋತು ಬೀಳುವವರು. ಹೊಸದನ್ನು ಒಪ್ಪುವುದಿಲ್ಲ. ಹೊಸತನಕ್ಕೆ ಪ್ರಯೋಗಗಳಿಗೆ ಒಡ್ಡಿ ಕೊಳ್ಳುವುದಿಲ್ಲ. ಥ್ರಿಲ್ ನಿಮಗೆ ಬೇಡ ಜೀವನ ಸರಾಗವಾಗಿ ಮುನ್ನಡೆಯಬೇಕು ಎನ್ನುವವರು. ಈಗ ಮುಂದೆ ಬರುವ ಪಂಚಮ ಶನಿಯಿಂದ ವಿಚಲಿತರಾಗುತ್ತೀರಿ. ಕಷ್ಟ ಪಡುವ ಅಭ್ಯಾಸವಿಲ್ಲದ ನೀವು ಪಂಚಮ ಶನಿಯ ಪ್ರಭಾವಕ್ಕೆ ಗೊಂದಲಕ್ಕೊಳಗಾಗುತ್ತೀರಿ.

ನೀವು ಪ್ರತಿದಿನ ಹನುಮಾನ್ ಚಾಲೀಸಾ, ವಿಷ್ಣು ಸಹಸ್ರನಾಮ ಹೇಳಬೇಕು. ವಿನಾಕಾರಣ ಯಾರೊಡನೆಯೂ ವಾಗ್ವಾದ ಜಗಳ ಸಲ್ಲದು. ತಾಳ್ಮೆ ಬಹುಮುಖ್ಯ. ಆರೋಗ್ಯ ಜೋಪಾನ. ಜನಗಳ‌ ಇನ್ನೊಂದು ಮುಖದ ಪರಿಚಯ ಆಗುತ್ತದೆ. ಇದು ನಿಮಗೆ ಅಚ್ಚರಿ ತರಬಹುದು ಆದರೆ ಅದೇ ಸತ್ಯ ಎಂದು ತಿಳಿಯಿರಿ. ಗುರುಬಲವೂ ಇಲ್ಲದಿರುವುದರಿಂದ ಈಗ ಕೊಂಚ ಸಂಕಟದ ಸಮಯ. ಕುಟುಂಬದಲ್ಲಿ ಅಶಾಂತಿ ಇರುತ್ತದೆ. ಅನಾವಶ್ಯಕ ತಿರುಗಾಟ ಹೊತ್ತಿಗೆ ಸರಿಯಾಗಿ ಊಟ ನಿದ್ರೆ ವಿಶ್ರಾಂತಿ‌ ಇರುವುದಿಲ್ಲ. ಎರಡನೇ ಮನೆಯಲ್ಲಿ ಶುಕ್ರ ಬುಧರು ಇದ್ದು ನಿಮಗೆ ಕೊಂಚಮಟ್ಟಿಗೆ ನಿರಾಳತೆ ಯನ್ನು ಕೊಡುತ್ತಾರೆ. ಹಣಕಾಸು ಸ್ಥಿತಿ ಮಧ್ಯಮವಾಗಿರುತ್ತದೆ. ಅನವಶ್ಯಕ ಸಿಕ್ಕುಗಳಲ್ಲಿ ಸಿಕ್ಕಬೇಡಿ.

ಒಂದೊಂದು ಹೆಜ್ಜೆಯನ್ನೂ ಜಾಗ್ರತೆಯಾಗಿ‌ ಇಡಿ. ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತ ಇರುವವರಿಗೂ ಈಗ ಸಂಕಟದ ಕಾಲ. ಕಾಯಿಲೆ ಉಲ್ಬಣಿಸುತ್ತದೆ. ವಿವಾಹ ಯೋಗ್ಯರಿಗೆ ವಿವಾಹ ಇನ್ನೂ ಸಮಯ ತೆಗೆದುಕೊಳ್ಳುತ್ತದೆ. ವಿದೇಶಯಾತ್ರೆಯ ಆಸೆ ಮುಂದೂಡುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೂ ಪಂಚಮಶನಿಯಿಂದ ಅಭಿವೃದ್ಧಿಗೆ ಯಶಸ್ಸಿಗೆ ಹಿನ್ನಡೆ ಇದೆ. ನಿಮ್ಮ ಲೆಕ್ಕಾಚಾರದ ಸ್ವಭಾವವನ್ನು ಬದಲಿಸಿಕೊಳ್ಳಿ. ಎಲ್ಲರೂ ನಿಮ್ಮಂತೆ ಎಂದು ತಿಳಿಯಿರಿ. ಎಂಟರ ಕುಜ ಅಪಘಾತ ಮಾಡಿಸುತ್ತಾನೆ. ವಾಹನ ಚಲಾಯಿಸುವಾಗ ಜಾಗ್ರತೆ ವಹಿಸಿ. ಮಂಗಳವಾರದಂದು ನರಸಿಂಹ ದೇವರ ಗುಡಿಗೆ ಹೋಗಿಬನ್ನಿ..

ವೃಶ್ಚಿಕರಾಶಿ:

ವೃಶ್ಚಿಕರಾಶಿ:

ನಿಮಗೆ ಈಗ ಗುರುಬಲ ಶನಿಬಲ ಇದೆ. ರಾಹುಬಲ ವೂ ಇದೆ. ರಾಹುವಿನಿಂದ ನೀವು over confidence ಹೊಂದಿರುತ್ತೀರಿ. ಇದು ಕೆಲವು ಬಾರಿ ಕೈಕೊಡುತ್ತದೆ. ಯಾರನ್ನೂ ಯಾವುದನ್ನೂ ಅತಿಯಾಗಿ ನಂಬಬೇಡಿ. ಮೋಸಹೋಗುತ್ತೀರಿ. ನೀವು ಸ್ವಭಾವತಃ ಯಾವುದೆ ತಲ್ಲಣಗಳನ್ನು ತಡೆದುಕೊಳ್ಳುವುದಿಲ್ಲ. ಧೈರ್ಯವಂತರಾಗಿ ಹೊರಗೆ ಕಂಡರೂ ಒಳಗೆ ಮೆತ್ತಗಿರುತ್ತೀರಿ. ಸೂಕ್ಷ್ಮ ಮನಸ್ಸು. ಕೋಪವಾದರೂ ಅಳುವಾದರೂ ಬೇಗ ಬರುತ್ತದೆ. ಕೋಪದಲ್ಲಿ ಕೆಲವೊಮ್ಮೆ ತುಂಬಾ ತೀಕ್ಷ್ಣವಾಗಿ ಮಾತಾಡಿಬಿಡುತ್ತೀರಿ. ಇದು ನಿಮಗೆ ಕೆಟ್ಟಹೆಸರೂ ತರುತ್ತದೆ. ಜನಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.

ಕೋಪ ದುಗುಡಗಳನ್ನು ಹತೋಟಿಯಲ್ಲಿಡಲು ಧ್ಯಾನ ಮಾಡಿ. ಯೋಗ ಮಾಡಿ. ಒಳ್ಳೆಯ ಸಂಗೀತ ಕೇಳಿ. ಈಗ ನಿಮಗೆ ಸಂಪೂರ್ಣ ಗುರುಬಲ‌ ಇರುವುದರಿಂದ ನೀವು ಅಂದುಕೊಂಡ ಕೆಲಸಗಳು ಯಾವುದೇ ಅಡೆತಡೆ ಇಲ್ಲದೆ ನೆರವೇರುತ್ತದೆ. ವಿವಾಹಯೋಗ್ಯರಿಗೆ ವಿವಾಹ ಆಗುತ್ತದೆ. ಸಂತಾನ ಪ್ರಾಪ್ತಿ‌ಇದೆ. ಸಂತಾನದಿಂದ ಸುಖವಿದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಕಾಲ. ಉನ್ನತ ವ್ಯಾಸಂಗಕ್ಕೆ ಅವಕಾಶ ಇದೆ. ವಿದೇಶ ಪ್ರವಾಸ ಈಗ ಸಾಧ್ಯವಿದೆ. ಷೇರುಪೇಟೆಯಲ್ಲಿ ಲಾಭ ಇದೆ. ಕುಟುಂಬ ಸೌಖ್ಯ ಚೆನ್ನಾಗಿದೆ. ಹಣದ ಹರಿವು ಉತ್ತಮವಾಗಿದೆ. ವೃತ್ತಿಯಲ್ಲಿ ಬೆಳವಣಿಗೆ ಇದೆ. ಸಾಲಗಳನ್ನು ತೀರಿಸುತ್ತೀರಿ. ಈ ತಿಂಗಳ‌ಫಲ ನಿಮಗೆ ಉತ್ತಮವಾಗಿದೆ.

ಧನಸ್ಸುರಾಶಿ:

ಧನಸ್ಸುರಾಶಿ:

ಈಗ ನಿಮಗೆ ಒಳ್ಳೆಯ ಸಮಯ ಶುರುವಾಗಲಿದೆ. ನೀವು ಎಣಿಸಿದ ಕೆಲಸಕಾರ್ಯಗಳು ಸರಾಗವಾಗಿ ನೆರವೇರುತ್ತದೆ. ಶನಿ ನಿಮ್ಮರಾಶಿಯಿಂದ ಮೂರನೇ ಮನೆಗೆ ಇನ್ನು ಕೆಲವೇ ದಿನಗಳಲ್ಲಿ ಪ್ರವೇಶ ಮಾಡುತ್ತಾನೆ.ಮೂರನೇ ಮನೆಯ ಶನಿ ಬಲಾಢ್ಯ. ನಿಮ್ಮ ಹಣಕಾಸಿನ ಏರುಪೇರು ಈಗ ಸರಾಗ ಆಗುತ್ತದೆ. ನೀವು ಯಾರ ಬಗ್ಗೆಯೂ ಯೋಚಿಸುವುದಿಲ್ಲ. ಕೇವಲ ನಿಮ್ಮ ಬಗ್ಗೆ ಯೋಚಿಸುತ್ತೀರಿ. ಹಳೆಯ ಕಹಿ ಘಟನೆಗಳನ್ನು‌ ಮರೆಯುವುದಿಲ್ಲ. ಯಾವಾಗಲೂ ನೆನಪು ಮಾಡಿಕೊಂಡು ಹಳಹಳಿಸುತ್ತೀರಿ. ಇದು ನಿಮ್ಮ ಮನಸ್ಸನ್ನು ಹಿಂದಕ್ಕೆ ಎಳೆಯವುದೇ ವಿನಾ ಯಾವುದೇ ಪ್ರಯೋಜನ ಇಲ್ಲ. ನೀವು ಮುಂದಿನದು ಯೋಚಿಸಬೇಕು.

ಈ ಕಾಲಕ್ಕೆ ತಕ್ಕಂತೆ ಇರಬೇಕು. ಜನಗಳನ್ನು ವಿನಾಕಾರಣ ದ್ವೇಷಿಸುತ್ತಿರಿ ಇದೂ ಸಹ ಋಣಾತ್ಮಕ ಅಂತ. ಮಾತು ಬಹಳ ತೀಕ್ಷ್ಣ. ಈ ಎಲ್ಲ ಗುಣಗಳನ್ನು ನೀವು ಬಿಡಬೇಕು. ನೀವು ಈಗ ಏಳೂವರೆ ವರ್ಷದಿಂದ ಬಹಳ ಕಷ್ಟ ಪಟ್ಟಿದ್ದೀರಿ. ಬಹಳ ನಷ್ಟವನ್ನೂ ಅನುಭವಿಸಿದ್ದೀರಿ. ಈಗ ಸಮಯ ಬಹಳ ಚೆನ್ನಾಗಿದೆ. ಹಣಕಾಸು ಸ್ಥಿತಿ ಸುಗಮ ವಾಗುತ್ತದೆ. ಆಸ್ತಿ ಮಾಡುತ್ತೀರಿ. ನಿಮ್ಮನ್ನು ದೂರ ಮಾಡಿದ್ದ ಜನಗಳು ನಿಮ್ಮನ್ನು ಹುಡುಕಿ ಬರುತ್ತಾರೆ. ನಿರ್ಧಾರಗಳನ್ನು ಮಾಡುವಾಗ ಬಹಳ‌ ದುಡುಕುತ್ತೀರಿ. ಇದು ನಿಮಗೆ ಜೀವನದಲ್ಲಿ ಎಡವುವಂತೆ ಮಾಡುತ್ತದೆ. ನಿಮ್ಮ ದುಡುಕು ನಿರ್ಧಾರ ದಿಂದ ಬಹಳ ಕಷ್ಟ ನಷ್ಟ ಅನುಭವಿಸಿದ್ದೀರಿ. ಮಕ್ಕಳಿಂದ ವಿರೋಧ ಅನುಭವಿಸಿದ್ದೀರಿ. ಕೌಟುಂಬಿಕ ಸೌಖ್ಯ ಕಳೆದುಕೊಂಡಿದ್ದೀರಿ. ಈಗ ಎಲ್ಲವೂ ಹಂತಹಂತವಾಗಿ ಸುಧಾರಿಸುತ್ತದೆ. ಉದ್ಯೋಗದಲ್ಲಿ ಬಹಳ ಒಳ್ಳೆಯ ಬದಲಾವಣೆ ಇದೆ. ಬಡ್ತಿ ಇದೆ. ವಿದೇಶ ಪ್ರವಾದ ಯೋಗ ಇದೆ.

ಮಕರರಾಶಿ:

ಮಕರರಾಶಿ:

ನಿಮಗೆ ಸಾಡೆಸಾತಿ ಶನಿ ನಡೆಯುತ್ತಿದೆ. ಈಗ ಎರಡನೇ ಹಂತ ಸದ್ಯದಲ್ಲೇ ಮುಗಿಯುತ್ತದೆ. ಮೂರನೇ ಹಂತ ಅಷ್ಟೇನೂ ತೀಕ್ಷ್ಣವಾಗಿ ಇರುವುದಿಲ್ಲ. ಈ ತಿಂಗಳಲ್ಲಿ ಕೆಲವು ಒಳ್ಳೆಯ ಬದಲಾವಣೆಗಳು ಆಗುತ್ತದೆ. ವೃತ್ತಿಯಲ್ಲಿ ಯಶಸ್ಸು ಇದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುತ್ತದೆ. ಸಾಲ ಪರಿಹಾರಕ್ಕೆ ಒಂದು ದಾರಿ ಸಿಗುತ್ತದೆ. ನೀವು ಬಹಳ ಹಠವಾದಿ. ಸ್ವಾಭಿಮಾನಿ. ಯಾರನ್ನೂ ಏನೂ ಕೇಳುವುದಿಲ್ಲ. ಯಾರ ಸಹಾಯವನ್ನು ಬಯಸುವುದಿಲ್ಲ. ಇದು ನಿಮಗೆ ಶಕ್ತಿ ಹಾಗೂ ದೌರ್ಬಲ್ಯ. ನೀವು ಕೇಳದಿದ್ದರೆ ಯಾವ ಕೆಲಸವೂ ಆಗುವುದಿಲ್ಲ. ಆದರೆ ಕೇಳಲು ನಿಮಗೆ ಸಂಕೋಚ.

ಇದು ನಿಮಗೆ ಒಳ್ಳೆಯ ಹೆಸರೂ ತಂದುಕೊಡುತ್ತದೆ. ನಿಮ್ಮನ್ನು ಬಹಳ ಜನ ಸಲಹೆ ಕೇಳುತ್ತಾರೆ. ಒಳ್ಳೆಯ ಸಲಹೆಗಳನ್ನು ಕೊಡಬಲ್ಲಿರಿ. ನಿಮ್ಮ ಮಾತಿಗೆ ಜನ ಬಹಳ ಬೆಲೆ ಕೊಡುತ್ತಾರೆ. ಮಕರರಾಶಿಯವರ ಶಕ್ತಿಯೇ ಅದು. ಯಾರ ತಂಟೆ ತಕರಾರೂ ನಿಮಗೆ ಬೇಡ. ನೀವಾಯ್ತು ನಿಮ್ಮ ಕೆಲಸವಾಯ್ತು. ಈಗ ಹನ್ನೊಂದನೇ ಮನೆಯಲ್ಲಿ ಬುಧ ಶುಕ್ರ ಇದ್ದು ನಿಮಗೆ ಹಣಕಾಸಿನ ನೆರವು ಒದಗಿಸಿಕೊಡುತ್ತಾರೆ. 17ನೇ ತಾರೀಖಿನವರೆಗೂ ಸೂರ್ಯನೂ ಹನ್ನೊಂದನೇ ಮನೆಯಲ್ಲಿಇರುವುದರಿಂದ ನಿಮಗೆ ಲಾಭವನ್ನೇ ಕೊಡುತ್ತಾನೆ. ಸರ್ಕಾರದಿಂದ ಅನುಕೂಲ ಇದೆ. ತಾಯಿಯ ಆರೋಗ್ಯ ಕೊಂಚ ಗಮನಿಸಿಕೊಳ್ಳಿ. ಮೂರರ ಗುರು ದೈವಬಲ ಕೊಡುತ್ತಾನೆ. ಧೈರ್ಯವನ್ನೂ ಕೊಡುತ್ತಾನೆ. ಸಹೋದರರ ಸಹಕಾರ ಇದೆ. ಮುಂಬರುವ ದಿನಗಳು ನಿಮಗೆ. ಶುಭವನ್ನು ತರುತ್ತದೆ

ಕುಂಭರಾಶಿ:

ಕುಂಭರಾಶಿ:

ನಿಮಗೆ ಈಗ ಸಾಡೆಸಾತಿ ಶನಿಯ ಮೊದಲ ಭಾಗ ಮುಗಿದಿದೆ. ಸಂಪೂರ್ಣ ಗುರುಬಲವೂ ಇದೆ. ರಾಹುವಿನ ಬಲವೂ ಇದೆ. ಕ್ರೂರ ಗ್ರಹಗಳು ಮೂರನೇ ಮನೆಯಲ್ಲಿ ಇದ್ದಾಗ ಅಪರಿಮಿತ ಧನವನ್ನು ಕೊಡುತ್ತಾನೆ. ಅಪಾರ ಧೈರ್ಯವನ್ನು ಕೊಡುತ್ತಾನೆ. ನಿಮಗೆ ತಾಳ್ಮೆ ಇದೆ. ಹಾಗೆಯೇ ಎಲ್ಲರೂ ನಿಮ್ಮ ಮಾತನ್ನೇ ಕೇಳಬೇಕೆಂಬ ಹಠವೂ‌ ಇದೆ. ಪ್ರಭಾವಶಾಲಿಯಾದ ವ್ಯಕ್ತಿತ್ವ ನಿಮ್ಮದು. ನಿಮಗೆ ವಹಿಸಿದ ಕೆಲಸಗಳನ್ನು ಜವಾಬ್ದಾರಿಯಾಗಿ ನಿರ್ವಹಿಸುತ್ತೀರಿ. ಎಲ್ಲ ವಿಷಯದಲ್ಲೂ ನಾಯಕತ್ವವನ್ನು ಬಯಸುತ್ತೀರಿ.

ನಿಮ್ಮ ರಾಶಿಯ ಅಧಿಪತಿ ಶನಿ ಆದ್ದರಿಂದ ಕುಂಭ ಮತ್ತು ಮಕರ ರಾಶಿಯವರಿಬ್ವರೂ dominating ವ್ಯಕ್ತಿತ್ವ. ಮತ್ತು ನಾಯಕತ್ವ ಬಯಸುವವರು. ಈ ಮನೋಭಾವ ಕೆಲವು ಬಾರಿ ನಿಮಗೆ ಹಿನ್ನಡೆಯನ್ನೂ ಕೊಡುತ್ತದೆ. ಹೀಗಾಗಿ ನಾಯಕತ್ವ ಮನೋಭಾವವನ್ನು ಸಮಯ ಸಂದರ್ಭ ನೋಡಿ ಪ್ರದರ್ಶನ ಮಾಡಿ. ನೀವಿರುವ ಜಾಗದಲ್ಲಿ ಜನ ಇರುತ್ತಾರೆ. ಆಕರ್ಷಕ ವ್ಯಕ್ತಿತ್ವ ನಿಮ್ಮದು. ಜ್ಞಾನಿಗಳು, ಪ್ರವಚನ ಮಾಡುವಂಥವರು. ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಇರುತ್ತದೆ.

ಈ ಎಲ್ಲ ನಿಮ್ಮ ಗುಣಗಳಿಗೆ ಗುರುಬಲವೂ ಸೇರಿದಾಗ ಹೂವಿಗೆ ಪರಿಮಳ ಸೇರಿದಂತೆ ಪ್ರಕಾಶಿಸುತ್ತದೆ. ಈಗ ನಿಮಗೆ ಎಲ್ಲ ಗ್ರಹಗಳೂ ಅನುಕೂಲವಾಗಿದೆ. ಈ ತಿಂಗಳ ಐದನೇ ತಾರೀಖಿನ‌ ನಂತರ ಬುಧ ಶುಕ್ರರು ಹನ್ನೊಂದನೇ ಮನೆಗೆ ಬರುತ್ತಾರೆ. ಆಗ ನಿಮಗೆ ಮತ್ತಷ್ಡು ಶುಭಫಲಗಳು ಇವೆ. 17ರ ನಂತರ ಸೂರ್ಯ ಸಹ ಹನ್ನೊಂದನೇ ಮನೆಗೆ ಬರುತ್ತಾನೆ. ಸರ್ಕಾರದಿಂದ ಲಾಭ ಇದೆ. ರಾಜಕೀಯ ವ್ಯಕ್ತಿಗಳಿಗೆ ಒಳ್ಳೆಯ ಬೆಳವಣಿಗೆ ಇದೆ. ವಾಹನದಿಂದ ಲಾಭ ಇದೆ. ಹೊಸ ವಾಹನ ಖರೀದಿ ಯೋಗ ಇದೆ.

ಮೀನರಾಶಿ:

ಮೀನರಾಶಿ:

ಈಗ ನಿಮಗೆ ಕೊಂಚ ಗಂಭೀರ ಸಮಯ. ನೀವಂದುಕೊಂಡಂತೆ ನಿಮ್ಮ ಯೋಜನೆಗಳಂತೆ ಯಾವುದೂ ನಡೆಯುವುದಿಲ್ಲ. ಇದು ನಿಮಗೆ ಮನೋವ್ಯಥೆ ತರುತ್ತದೆ. ನಿಮಗೆ ಸದ್ಯದಲ್ಲೇ ಸಾಡೆಸಾತಿ ಶನಿ ಪ್ರಭಾವ ಶುರುವಾಗುತ್ತದೆ. ಅನಾರೋಗ್ಯ ಕಾಡಬಹುದು. ಹಣಕಾಸಿನ ಸ್ಥಿತಿ ಏರುಪೇರಾಗಬಹುದು. ಖರ್ಚುಗಳು ಹೆಚ್ಚುತ್ತದೆ. ನೀವು ಪ್ರತಿದಿನ ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸ ಹೇಳಬೇಕು. ನಳಚರಿತ್ರೆ ಓದಿ. ಸಾಧ್ಯವಾದರೆ ಶನಿ ಶಿಂಗಾಪುರಕ್ಕೆ ಹೋಗಿ ದರ್ಶನ ಮಾಡಿ ಬನ್ನಿ.

ನೀವು ಆಕರ್ಷಕ ವ್ಯಕ್ತಿತ್ವ ಇರುವವರು. ಜನರ ಗಮನವನ್ಬು ನಿಮ್ಮೆಡೆಗೆ ಸೆಳೆಯುತ್ತೀರಿ. ಲಲಿತ ಕಲೆಗಳಲ್ಲಿ ಆಸಕ್ತಿ‌ಇರುತ್ತದೆ. ಬುದ್ಧಿವಂತರು. ವಿದ್ಯಾವಂತರು. ಹಿಡಿದ ಕೆಲಸ ಮುಗಿಸುವವರೆಗೂ ವಿಶ್ರಮಿಸುವುದಿಲ್ಲ. ಈಗ ಎರಡನೇ ಮನೆ ರಾಹು ನಿಮ್ಮ ರಾಶಿಯಲ್ಲೇ ಇರುವ ಗುರು ನಿಮಗೆ ಅನುಕೂಲವಿಲ್ಲ. ಆದರೆ ಐದನೇ ತಾರೀಖಿನ ನಂತರ ಹತ್ತನೇ ಮನೆಗೆ ಬುಧಶುಕ್ರ ಪ್ರವೇಶವಾದಾಗ ಕೊಂಚ ವಾತಾವರಣ ತಿಳಿಯಾಗುತ್ತದೆ. 17ರ ನಂತರ ಸೂರ್ಯ ಸಹ ಹತ್ತನೇ ಮನೆಗೆ ಬಂದಾಗ ವೃತ್ತಿಯಲ್ಲಿ ಅನುಕೂಲ ಆಗುತ್ತದೆ. ಮೂರನೇ ಮನೆಯ ಕುಜ ಧೈರ್ಯ ಸ್ಥೈರ್ಯವನ್ನು ಹೆಚ್ಚಿಸುತ್ತಾನೆ. ಭೂಮಿಯಿಂದ ಲಾಭ ಇದೆ. ಆದರೆ ಖರ್ಚುಗಳೂ ನಿಮ್ಮ ಕೈಮೀರಿ ಬೆಳೆಯುತ್ತದೆ. ಜಾಗ್ರತೆ ವಹಿಸಿ. ಚೂಪಾದ ಪದಾರ್ಥಗಳಿಂದ ದೂರವಿರಿ. ಆದಷ್ಟು ಭಗವಂತನ ಧ್ಯಾನ ಮಾಡಿ. ಒಳ್ಳೆಯ ದಿನಗಳಿಗೆ ನೀವು ಇನ್ನೂ ಕಾಯಬೇಕು.

ಶುಭಮಸ್ತು

English summary
December 2022 Monthly Horoscope In Kannada: December Masika Rashi Bhavishya: Check December Monthly Horoscope for all 12 Zodiac Signs in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X