ವಿಧಾನಸಭೆ ಚುನಾವಣೆ: ಗುಜರಾತ್‌ನಲ್ಲಿ ಮೋದಿಯ ವಿರುದ್ಧ ಕಾಂಗ್ರೆಸ್ ಕಸರತ್ತು
ಗುಜರಾತ್‌ನಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪವಾಡಗಳು ನಡೆಯಲಿವೆಯೇ? ಎನ್ನುವ ಅನುಮಾನ ಸೃಷ್ಟಿಯಾಗಿದೆ. ಯಾಕೆಂದರೆ ಕಳೆದ ಚುನಾವಣೆಯಲ್ಲಿ ದೊಡ್ಡಮಟ್ಟದ ಸಾಧನೆ ತೋರಿ ಕೇಂದ್ರವನ್ನೇ ನಡುಗಿಸಿರುವ ಬಿಜೆಪಿಯಿಂದ ಕಾಂಗ್ರೆಸ್ ಗುಜರಾತ್ ರಾಜ್ಯವನ್ನು ವಶ
ಅಹಮದಾಬಾದ್, ಡಿಸೆಂಬರ್ 13: ಗುಜರಾತ್‌ನಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪವಾಡಗಳು ನಡೆಯಲಿವೆಯೇ? ಎನ್ನುವ ಅನುಮಾನ ಸೃಷ್ಟಿಯಾಗಿದೆ. ಯಾಕೆಂದರೆ ಕಳೆದ ಚುನಾವಣೆಯಲ್ಲಿ ದೊಡ್ಡಮಟ್ಟದ ಸಾಧನೆ ತೋರಿ ಕೇಂದ್ರವನ್ನೇ ನಡುಗಿಸಿರುವ ಬಿಜೆಪಿಯಿಂದ ಕಾಂಗ್ರೆಸ್ ಗುಜರಾತ್ ರಾಜ್ಯವನ್ನು ವಶಪಡಿಸಿಕೊಳ್ಳಲು ಸಾಧ್ಯವಿರುವ ಎಲ್ಲ ಬಾಣಗಳನ್ನು ಹೊರ ಬಿಡುತ್ತಿದೆ. ಹಲವು ಅನಿಶ್ಚಿತತೆಯ ನಡುವೆ ಕೊನೆಗೂ ಕಾಂಗ್ರೆಸ್ ಹಿರಿಯ ನಾಯಕ ಜಗದೀಶ್ ಠಾಕೂರ್ ರಾಜ್ಯಾಧ್ಯಕ್ಷರಾದ ಬಳಿಕ ಪಕ್ಷ ಮತ್ತೆ ವೇಗ ಪಡೆಯುತ್ತಿದೆ. ಈಗ ಜಗದೀಶ್ ನೇತೃತ್ವದ ಕಾಂಗ್ರೆಸ್ ಮತಗಳನ್ನು ಸೆಳೆಯಲು ಕಸರತ್ತು ನಡೆಸುತ್ತಿದೆ.
ಕಾಂಗ್ರೆಸ್ ಚುನಾವಣಾ ರಣತಂತ್ರವೇನು?: 2017ರ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಮೂಲಕ ಸತತ ಆರನೇ ಬಾರಿಗೆ ಗುಜರಾತ್ ಅಧಿಕಾರ ಚುಕ್ಕಾಣಿ ಹಿಡಿದಿತ್ತು. 2017ರ ಏಕದಿನ ಪಂದ್ಯದಂತೆ ಪ್ರತಿಕ್ಷಣವೂ ಕುತೂಹಲ ಕೆರಳಿಸಿದ್ದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 99 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ತೀವ್ರ ಪ್ರತಿಸ್ಪರ್ಧೆ ಒಡ್ಡಿದ್ದ ಕಾಂಗ್ರೆಸ್ 77 ಸ್ಥಾನ ತನ್ನದಾಗಿಸಿಕೊಂಡಿತ್ತು. ಈ ಬಾರಿ ಗೆಲ್ಲುವ ಛಲದಿಂದ ರಾಜ್ಯದಲ್ಲಿ ಬಿಜೆಪಿ ವಿರೋಧಿ ಭಾವನೆ ಮೂಡಿಸಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದೆ. ಹೀಗಾಗಿ ಕಾಂಗ್ರೆಸ್ ತಳಮಟ್ಟದಿಂದ ಪ್ರಬಲ ಚುನಾವಣಾ ಪ್ರಚಾರ ಆರಂಭಿಸಲಿದೆ. ಇದಕ್ಕಾಗಿ ಮೇಲ್ವಿಚಾರಕರ ಆಯ್ಕೆಯ ತಂತ್ರ ಹೆಣದಿದೆ.

ಪ್ರತಿ ಬೂತ್‌ಗೆ ಐದು ಯುವಕರು
ತಳಮಟ್ಟದ ಚುನಾವಣಾ ಚಟುವಟಿಕೆಗಳನ್ನು ನಿಯಂತ್ರಿಸಲು ಪಕ್ಷವು ಪ್ರತಿ ಬೂತ್‌ಗೆ ಐದು ಯುವಕರು ಎಂಬ ಸೂತ್ರವನ್ನು ಅಳವಡಿಸಿಕೊಳ್ಳಲಿದೆ ಎಂದು ಜಗದೀಶ್ ಠಾಕೂರ್ ಹೇಳಿದ್ದಾರೆ. ಜೊತೆಗೆ ಅಧ್ಯಕ್ಷರನ್ನು ನಗರ ಪ್ರದೇಶಗಳಲ್ಲಿನ ಬೂತ್‌ನಲ್ಲಿ ನಿಯೋಜಿಸಲಾಗುವುದು ಎಂದು ಠಾಕೂರ್ ಹೇಳಿದ್ದಾರೆ. ಸದ್ಯ ಹಲವೆಡೆ ಪಕ್ಷದ ಕೆಳಹಂತದವರು ನಿಷ್ಕ್ರಿಯರಾಗಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಡೆ ಸಾಧಿಸಿದೆ.

ಜಗದೀಶ್ ಠಾಕೂರ್ ಹೇಳುವುದೇನು?
ದೊಡ್ಡ ನಗರಗಳು ಒಬ್ಬರ ಬದಲಿಗೆ ಇಬ್ಬರು ಅಧ್ಯಕ್ಷರ ಸೂತ್ರವನ್ನು ಅಳವಡಿಸಿಕೊಳ್ಳಲು ಪರಿಗಣಿಸುತ್ತಿವೆ. ಅಲ್ಲದೆ, ಕೆಲಸ ಮಾಡಲು ತಿಳಿದಿರುವ ಜನರನ್ನು ಮಾತ್ರ ಸೇರಿಸಲು ಚಿಂತನೆ ನಡೆದಿದೆ. ಸ್ಥಳೀಯ ಮತದಾರರೊಂದಿಗೆ ನಿಕಟ ಸಂಪರ್ಕದಲ್ಲಿರುವ ಪಕ್ಷದ ಕಾರ್ಯಕರ್ತರು ಮಾತ್ರ ತಳಮಟ್ಟದ ಚಟುವಟಿಕೆಗಳಿಗೆ ಜವಾಬ್ದಾರರಾಗಿರುತ್ತಾರೆ. ಜನಪ್ರಿಯ ನಾಯಕರು ಮಾತ್ರ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂದು ಜಗದೀಶ್ ಠಾಕೂರ್ ಹೇಳಿದ್ದಾರೆ.

ಸಾಮೂಹಿಕ ಆಂದೋಲನ
ಅಹಮದಾಬಾದ್, ಸೂರತ್, ವಡೋದರಾ ಮತ್ತು ರಾಜ್‌ಕೋಟ್‌ನಂತಹ ನಗರಗಳಲ್ಲಿ ಕಾಂಗ್ರೆಸ್ 20 ರಿಂದ 25 ಸ್ಥಾನಗಳೊಂದಿಗೆ ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ಎಲ್ಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಮೊದಲೇ ಘೋಷಿಸಿ ಚಟುವಟಿಕೆಗಳನ್ನು ಚುರುಕುಗೊಳಿಸುವ ಗುರಿಯನ್ನು ಪಕ್ಷ ಹೊಂದಿದೆ. ವರ್ಷಾಂತ್ಯದವರೆಗೆ ನಡೆಯುವ ಕಾರ್ಯಕ್ರಮಗಳ ಕ್ಯಾಲೆಂಡರ್ ಅನ್ನು ಕಾಂಗ್ರೆಸ್ ಕೂಡ ಸಿದ್ಧಪಡಿಸಿದೆ. ಮುಂದಿನ ದಿನಗಳಲ್ಲಿ ಜನರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಸಾಮೂಹಿಕ ಆಂದೋಲನಗಳನ್ನು ಹಮ್ಮಿಕೊಳ್ಳಲು ಪಕ್ಷ ನಿರ್ಧರಿಸಿದೆ.

ಅಚ್ಚರಿ ಮೂಡಿಸುತ್ತಾ ಕಾಂಗ್ರೆಸ್?
ಕಳೆದ 27 ವರ್ಷಗಳಿಂದ ಗುಜರಾತ್‌ನಲ್ಲಿ ಕಾಂಗ್ರೆಸ್ ಅಧಿಕಾರದಿಂದ ಹೊರಗುಳಿದಿದೆ. ಈ ಬಾರಿ ರಾಜ್ಯದಲ್ಲಿ ಪವಾಡಗಳು ನಡೆಯಲಿವೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಪಕ್ಷದ ಅಧ್ಯಕ್ಷ ಜಗದೀಶ ಆಗಮನದಿಂದ ಕಾರ್ಯಕರ್ತರು ಹರ್ಷಗೊಂಡಿದ್ದಾರೆ. ಜಗದೀಶ್ ಒಬಿಸಿ ಬಣದ ನಾಯಕ. ಒಬಿಸಿ ನಾಯಕನನ್ನು ಪಕ್ಷದ ಮುಖ್ಯಸ್ಥರನ್ನಾಗಿ ನೇಮಿಸುವ ಕ್ರಮವು ಪ್ರಯೋಜನಕಾರಿ ಎಂದು ನಾಯಕತ್ವವು ಭಾವಿಸಿದೆ. ಗುಜರಾತ್‌ನ 182 ಕ್ಷೇತ್ರಗಳಲ್ಲಿ 80 ಸ್ಥಾನಗಳಲ್ಲಿ ಒಬಿಸಿ ಪ್ರಭಾವವಿದೆ. ಆದಿವಾಸಿಗಳಿಗೆ 27 ಸ್ಥಾನಗಳು, ಮಧ್ಯ ಗುಜರಾತ್‌ನಲ್ಲಿ ಪ್ರಭಾವಿ ಕೋಲಿ ಸಮುದಾಯ ಮತ್ತು ಉತ್ತರ ಗುಜರಾತ್‌ನಲ್ಲಿ ಪ್ರಭಾವಿ ಠಾಕೂರ್ ಸಮುದಾಯ ಒಬಿಸಿ ಸಮುದಾಯಕ್ಕೆ ಸೇರಿದೆ. ಜೊತೆಗೆ ರಾಹುಲ್ ಗಾಂಧಿ ಈ ಬಾರಿ ಗುಜರಾತ್ ನತ್ತ ವಿಶೇಷ ಗಮನ ಹರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ರಾಹುಲ್ ಪ್ರಕಾರ, 2024ರಲ್ಲಿ ಮೋದಿ ತವರು ಗುಜರಾತ್‌ನಲ್ಲಿ ಬಿಜೆಪಿಯನ್ನು ಸೋಲಿಸುವುದು ಬಿಜೆಪಿ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಲಿದೆ.












Click it and Unblock the Notifications