Perplexity AI ಸ್ವಾಧೀನಕ್ಕೆ ಆ್ಯಪಲ್, ಮೆಟಾ ಪೈಪೋಟಿ- ಈ ಟೂಲ್‌ನ ವಿಶೇಷತೆ, ಹಿನ್ನೆಲೆ ತಿಳಿಯಿರಿ
ಬಹುತೇಕ ಕ್ಷೇತ್ರಗಳಲ್ಲಿ ಕೃತಕ ಬುದ್ದಿಮತ್ತೆಯು (ಎಐ) ತನ್ನದೇ ಆದ ಪ್ರಾಬಲ್ಯವನ್ನು ಸಾಧಿಸುತ್ತಿದೆ. ಜಾಗತಿಕವಾಗಿ ಬಹುತೇಕ ಕಂಪನಿಗಳು ತಮ್ಮದೇ ಎಐ ಟೂಲ್‌ಗಳನ್ನು ಅಭಿವೃದ್ಧಿಪಡಿಸಿವೆ. ಈಗಾಗಲೇ ಅಭಿವೃದ್ಧಿಪಡಿಸಿರುವ ಟೂಲ್‌ಗಳನ್ನು ಹಲವು ಕಂಪನಿಗಳು ಕೊಂಡುಕೊಳ್ಳಲು ಪೈಪೋಟಿ ನಡೆಸುತ್ತಿವೆ. ಉದಾಹರಣೆಗೆ ಆ್ಯಪಲ್ ಮತ್ತು ಮೆಟಾ ಕಂಪನಿಗಳು ಪರ್ಪ್ಲೆಕ್ಸಿಟಿ ಎಐ ( https://www.perplexity.ai/ ) ಮೇಲೆ ಕಣ್ಣಿಟ್ಟಿವೆ ಎಂಬ ಮಾಹಿತಿ ಲಭ್ಯವಾಗಿದೆ.
'ಪರ್ಪ್ಲೆಕ್ಸಿಟಿ' ಎಂಬುದು ಪ್ರಮುಖ ಎಐ ಟೂಲ್ ಆಗಿದೆ. ಇದು ಪ್ರಬಲ ಸರ್ಚ್ ಇಂಜಿನ್ ಹೊಂದಿದ್ದು, ಚಾಟ್‌ಬಾಟ್‌ಗೆ ಹೆಸರುವಾಸಿಯಾಗಿದೆ. ಅಮೆರಿಕ ಮೂಲದ ಕಂಪನಿಯು ಇದನ್ನು ಅಭಿವೃದ್ಧಿಪಡಿಸಿದೆ. ಈಗಾಗಲೇ ಎಐ ಟೂಲ್‌ಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಪೈಪೋಟಿಯಲ್ಲಿರುವ ಮೆಟಾ ಕಂಪನಿಯು ಮೊದಲು ಪರ್ಪ್ಲೆಕ್ಸಿಟಿಯನ್ನು ಸಂಪರ್ಕಿಸಿದೆ ಎಂದು ವರದಿಯಾಗಿದೆ. ಆ್ಯಪಲ್ ಕಂಪನಿಯು ಸಹ ಪರ್ಪ್ಲೆಕ್ಸಿಟಿ ಮೇಲೆ ಕಣ್ಣಿಟ್ಟಿದೆ ಎಂದು ಹೇಳಲಾಗುತ್ತಿದೆ.

ಮೆಟಾ ಕಂಪನಿಯು ಈಗಾಗಲೇ ಹಲವು ಎಐ ಟೂಲ್‌ಗಳನ್ನು ಖರೀದಿಸುವ ಪ್ರಯತ್ನದಲ್ಲಿ ಇದೆ. ಪರ್ಪ್ಲೆಕ್ಸಿಟಿಯನ್ನು ಮೊದಲಿಗೆ ಮೆಟಾ ಸಂಪರ್ಕಿಸಿದೆ ಎಂಬುದನ್ನು 'ಬ್ಲೂಮ್ ಬರ್ಗ್' ಮಾಧ್ಯಮ ವರದಿ ಮಾಡಿದೆ. ಆ್ಯಪಲ್ ಕೂಡ ಪರ್ಪ್ಲೆಕ್ಸಿಟಿಯನ್ನು ಖರೀದಿ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ. ಪರ್ಪ್ಲೆಕ್ಸಿಟಿ ಮಾರಾಟಕ್ಕಿದೆಯೇ ಅಥವಾ ಇಲ್ಲವೇ ಎಂಬುದು ಮಾತ್ರ ಅಸ್ಟಷ್ಟವಾಗಿದೆ.
ಭಾರತ ಮೂಲದ ಅರವಿಂದ ಶ್ರೀನಿವಾಸ್, ಆಂಡಿ ಕೋನ್ವಿನ್ಸ್‌ಕಿ, ಡೆನಿಸ್ ರಾಟ್ಸ್ ಮತ್ತು ಜಾನಿ ಹೋ ಸೇರಿದಂತೆ ಹಲವು ಎಐ ಸಂಶೋಧಕರು ಪರ್ಪ್ಲೆಕ್ಸಿಟಿಯನ್ನು ಅಭಿವೃದ್ಧಿಪಡಿಸಲು (2022) ಮುಂದಾದರು. 'ಸಾಮಾನ್ಯರಿಗೂ ಜ್ಞಾನವನ್ನು ಒದಗಿಸುವುದು' ಪರ್ಪ್ಲೆಕ್ಸಿಟಿಯ ಉದ್ದೇಶವೆಂದು ಕಂಪನಿ ಹೇಳಿಕೊಂಡಿದೆ.
ಬಳಕೆದಾರರಿಗೆ ವಿವಿಧ ಬಗೆಯ ಎಲ್‌ಎಲ್‌ಎಂ (Large Language Model) ಆಯ್ಕೆಮಾಡುವ ಅವಕಾಶ ನೀಡುತ್ತಿರುವುದು ಪರ್ಪ್ಲೆಕ್ಸಿಟಿಯ ಪ್ರಮುಖ ವೈಶಿಷ್ಟ್ಯವಾಗಿದೆ. ಇದು ತನ್ನದೇ ಸೋನಾರ್ ಎಂಬ ಮಾದರಿಯನ್ನು ಹೊಂದಿದೆ. ಹೊಸ ವೈಶಿಷ್ಟ್ಯಗಳನ್ನು ವೇಗವಾಗಿ ಅಭಿವೃದ್ಧಿಪಡಿಸುತ್ತಿರುವ ಹಿನ್ನೆಲೆಯಲ್ಲಿ ಪರ್ಪ್ಲೆಕ್ಸಿಟಿ ಈಗಾಗಲೇ 1.5 ಕೋಟಿ ಬಳಕೆದಾರರನ್ನೂ ಹೊಂದಿದೆ.
ಪರ್ಪ್ಲೆಕ್ಸಿಟಿಯ ಈ ಯಶಸ್ಸು ಅನೇಕರನ್ನು ಆಕರ್ಷಿಸಿದೆ. ಪರ್ಪ್ಲೆಕ್ಸಿಟಿಯಂತಹ ಹೊಸ ಪ್ಲಾಟ್‌ಫಾರ್ಮ್‌ಗಳು ಸರ್ಚ್ ಎಂಜಿನ್‌ಗಳಾಗಿ ಮಾರ್ಪಡುತ್ತಿವೆ. ಈ ಹಿನ್ನೆಲೆಯಲ್ಲಿ ಜನಪ್ರಿಯವಾಗುತ್ತಿವೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಪರ್ಪ್ಲೆಕ್ಸಿಟಿಯಲ್ಲಿ ಫುಟ್‌ನೋಟ್ಸ್, ರಿಯಲ್ ಟೈಮ್ ವೆಬ್ ಸ್ಕ್ಯಾನ್, ಟೆಕ್ಸ್ಟ್ ( ಪಠ್ಯ ), ವೈಸ್ ( ಧ್ವನಿ ) ಹಾಗೂ ಫೋಟೊಗಳ ಮೂಲಕ ಮಾಹಿತಿ ಪಡೆಯುವ ಬಹುಮಾಧ್ಯಮ ಸಾಮರ್ಥ್ಯಗಳಿವೆ. ಈ ಹಿನ್ನೆಲೆಯಲ್ಲಿ ಬೇರೆಲ್ಲಾ ಎಐ ಟೂಲ್‌ಗಳಿಂದ ಇದು ಭಿನ್ನವಾಗಿದೆ ಎಂಬ ಅಭಿಪ್ರಾಯಗಳನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.












Click it and Unblock the Notifications