ಭಾರತದಲ್ಲಿ AI ಸೇವೆಗಳಿಗಾಗಿ ರಿಲಯನ್ಸ್-ಮೆಟಾ ಜಂಟಿ ಉದ್ಯಮ, ಏನೆಲ್ಲ ಅನುಕೂಲ?
ಭಾರತದಲ್ಲಿ ಉದ್ಯಮ ಕೃತಕ ಬುದ್ಧಿಮತ್ತೆ (ಎಐ) ಸೇವೆಗಳನ್ನು ಒದಗಿಸಲು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಹಾಗೂ ಫೇಸ್‌ಬುಕ್‌ನ ಮೆಟಾ ಸಹಭಾಗಿತ್ವದಲ್ಲಿ ರಿಲಯನ್ಸ್ ಎಂಟರ್‌ಪ್ರೈಸ್ ಇಂಟೆಲಿಜೆನ್ಸ್ ಲಿಮಿಟೆಡ್ (ಆರ್‌ಇಐಎಲ್) ಎಂಬ ಹೊಸ ಕಂಪನಿಯನ್ನು ಸ್ಥಾಪನೆ ಮಾಡಿದೆ. ಆರ್‌ಐಎಲ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ರಿಲಯನ್ಸ್ ಇಂಟೆಲಿಜೆನ್ಸ್ ಲಿಮಿಟೆಡ್ ಈ ಘೋಷಣೆ ಮಾಡಿದೆ. ಈ ಜಂಟಿ ಉದ್ಯಮವು ಸುಮಾರು ₹855 ಕೋಟಿಗಳ ಆರಂಭಿಕ ಹೂಡಿಕೆಯನ್ನು ಕಾಣಲಿದೆ.
ಇದರಲ್ಲಿ ರಿಲಯನ್ಸ್ ಶೇ 70ರಷ್ಟು ಪಾಲನ್ನು ಹೊಂದಿದೆ. ಮೆಟಾದ ಅಂಗಸಂಸ್ಥೆಯಾದ ಫೇಸ್‌ಬುಕ್ ಉಳಿದ ಶೇ 30ರ ಪಾಲನ್ನು ಹೊಂದಿದೆ. ಆರ್‌ಇಐಎಲ್‌ನ ಈ ಸಂಯೋಜನೆಯು ಯಾವುದೇ ನಿಯಂತ್ರಕ ಅಥವಾ ಸರ್ಕಾರಿ ಅನುಮೋದನೆಗಳ ಅಗತ್ಯವಿರಲಿಲ್ಲ. ಆಗಸ್ಟ್‌ನಲ್ಲಿ ನಡೆದ ರಿಲಯನ್ಸ್‌ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಇದನ್ನು ಬಹಿರಂಗಪಡಿಸಲಾಯಿತು. ಇದು ಎಐ-ಚಾಲಿತ ಉದ್ಯಮ ಸೇವೆಗಳಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ಆರ್‌ಐಎಲ್ ಹೇಳಿದೆ.

ಏನೆಲ್ಲ ಅನುಕೂಲ?
ಈ ಹೊಸ ಘಟಕವು ಮೆಟಾದ ಓಪನ್-ಸೋರ್ಸ್ ಲಾಮಾ ಮಾದರಿಗಳು ಮತ್ತು ರಿಲಯನ್ಸ್‌ನ ಡಿಜಿಟಲ್ ಮೂಲಸೌಕರ್ಯವನ್ನು ಬಳಸಿಕೊಂಡು ಎಂಟರ್‌ಪ್ರೈಸ್ ಎಐ ಪ್ಲಾಟ್‌ಫಾರ್ಮ್‌ಗಳು ಮತ್ತು ಪರಿಕರಗಳನ್ನು ಅಭಿವೃದ್ಧಿಪಡಿಸುತ್ತದೆ. ಅದನ್ನು ಮಾರ್ಕೆಟಿಂಗ್ ಮಾಡಿ ವಿತರಣೆಯ ಕೆಲಸವನ್ನೂ ಮಾಡಲಿದೆ. ಪ್ರಮುಖವಾಗಿ ಈ ಎರಡು ಉತ್ಪನ್ನಗಳನ್ನು ನೀಡುವ ಗುರಿಯನ್ನು ಹೊಂದಿದೆ. ಎಐ ಪ್ಲಾಟ್‌ಫಾರ್ಮ್ ಸೇವೆ, ಜನರೇಟಿವ್ AI ಮಾದರಿಗಳನ್ನು ಕಸ್ಟಮೈಸ್ ಮಾಡಲು, ನಿಯೋಜಿಸಲು ಅನುವು ಮಾಡಿಕೊಡುತ್ತದೆ. ಮಾರಾಟ, ಮಾರ್ಕೆಟಿಂಗ್, ಐಟಿ ಕಾರ್ಯಾಚರಣೆಗಳು, ಹಣಕಾಸು ಮತ್ತು ಗ್ರಾಹಕ ಸೇವೆಯಂತಹ ವಲಯಗಳಿಗೆ ಎಐ ಪರಿಹಾರಗಳನ್ನು ಸಹ ನೀಡಲಿದೆ.
ರಿಲಯನ್ಸ್ ಇಂಟೆಲಿಜೆನ್ಸ್‌ನ ಅಂಗಸಂಸ್ಥೆಯಾಗಿ ಭಾರತದಲ್ಲಿ ಸಂಯೋಜಿಸಲ್ಪಟ್ಟ ಇದು ಆರ್‌ಇಐಎಲ್, ಜಂಟಿ ಉದ್ಯಮ ಕಂಪನಿಯಾಗಲಿದೆ. ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಈ ಪಾಲುದಾರಿಕೆಯನ್ನು ಓಪನ್-ಸೋರ್ಸ್ ಎಐ ಅನ್ನು ನೈಜ-ಪ್ರಪಂಚದ ವ್ಯವಹಾರ ಬಳಕೆಗೆ ತರುವಲ್ಲಿ ಮಹತ್ವದ ಹೆಜ್ಜೆ ಎಂದು ಕರೆದಿದ್ದಾರೆ. ಭಾರತೀಯ ಡೆವಲಪರ್‌ಗಳು ಮತ್ತು ಉದ್ಯಮಗಳಿಗೆ ಓಪನ್-ಸೋರ್ಸ್ ಎಐನ ಶಕ್ತಿ ತುಂಬಲು ರಿಲಯನ್ಸ್ ಜೊತೆಗಿನ ನಮ್ಮ ಪಾಲುದಾರಿಕೆಗೆ ಉತ್ಸುಕರಾಗಿದ್ದೇವೆ. ಈ ಜಂಟಿ ಉದ್ಯಮದ ಮೂಲಕ ನಾವು ಮೆಟಾದ ಲಾಮಾ ಮಾದರಿಗಳನ್ನು ಬಳಕೆಗೆ ತರುತ್ತಿದ್ದೇವೆ ಎಂದಿದ್ದಾರೆ.
ರಿಲಯನ್ಸ್ ಇಂಟೆಲಿಜೆನ್ಸ್ ತಲಾ ₹10ರ 20,00,000 ಈಕ್ವಿಟಿ ಷೇರುಗಳ ಆರಂಭಿಕ ಚಂದಾದಾರಿಕೆಗಾಗಿ ₹2 ಕೋಟಿ ಹೂಡಿಕೆ ಮಾಡಲಿದೆ. ಈ ವ್ಯವಹಾರವು ಸಂಬಂಧಿತ ವಹಿವಾಟುಗಳ ವರ್ಗಕ್ಕೆ ಸೇರುವುದಿಲ್ಲ, ಅಲ್ಲದೆ ತನ್ನ ಯಾವುದೇ ಕಂಪನಿಗಳು ಈ ಒಪ್ಪಂದದಲ್ಲಿ ನೇರ ಅಥವಾ ಪರೋಕ್ಷ ಆಸಕ್ತಿಯನ್ನು ಹೊಂದಿಲ್ಲ ಎಂದು ಆರ್‌ಐಎಲ್ ಸ್ಪಷ್ಟಪಡಿಸಿದೆ. ಆರ್‌ಇಐಎಲ್ ಅನ್ನು ಸಂಯೋಜಿಸಲು ಯಾವುದೇ ಸರ್ಕಾರಿ ಅಥವಾ ನಿಯಂತ್ರಕ ಅನುಮೋದನೆಗಳ ಅಗತ್ಯವಿಲ್ಲ ಎಂದೂ ಕಂಪನಿ ಹೇಳಿದೆ.












Click it and Unblock the Notifications