Google AI Mode: ಭಾರತೀಯ ಬಳಕೆದಾರರಿಗೆ ಎಐ ಮೋಡ್ ಆಯ್ಕೆ ಕೊಟ್ಟ ಗೂಗಲ್
ಗೂಗಲ್ (Google) ಈಗ ತನ್ನ ಹೊಸ AI Mode (ಕೃತಕ ಬುದ್ಧಿಮತ್ತೆ) ಅನ್ನು ಭಾರತದಲ್ಲಿನ ಎಲ್ಲ ಬಳಕೆದಾರರಿಗೆ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇದನ್ನು ಈಗ ನೀವು ಯಾವುದೇ ಪ್ರತ್ಯೇಕ ಲ್ಯಾಬ್ಸ್ ಸೈನ್-ಅಪ್ ಅಗತ್ಯವಿಲ್ಲದೆ ನೇರವಾಗಿ ಗೂಗಲ್ ಸರ್ಚ್ ಅಥವಾ ಗೂಗಲ್ ಆಪ್‌ನಲ್ಲಿ ಬಳಸಬಹುದು. ಈ ವೈಶಿಷ್ಟ್ಯವು ಪ್ರಸ್ತುತ ಇಂಗ್ಲಿಷ್ ಭಾಷೆಯಲ್ಲಿ ಲಭ್ಯವಿದೆ. ಇದು AI ಪ್ಲಾಟ್‌ಫಾರ್ಮ್‌ಗಳ ಸ್ಪರ್ಧೆಯಲ್ಲಿ ಗೂಗಲ್ ತನ್ನ ಮುನ್ನಡೆ ಕಾಯ್ದುಕೊಳ್ಳಲು ತೆಗೆದುಕೊಂಡ ಪ್ರಮುಖ ಹೆಜ್ಜೆ ಎನ್ನಲಾಗಿದೆ.
ಗೂಗಲ್ ಇದುವರೆಗಿನ ಅತ್ಯಂತ ವೇಗವಾದ AI ಹುಡುಕಾಟದ ಫೀಚರ್ ಹೊಂದಿದೆ ಎಂದು ಹೇಳಿಕೊಳ್ಳುವ ಈ ವೈಶಿಷ್ಟ್ಯವನ್ನು ಕಳೆದ ತಿಂಗಳು ಇಂಗ್ಲಿಷ್‌ನಲ್ಲಿ ಲ್ಯಾಬ್‌ಗಳಲ್ಲಿ ಪ್ರಯೋಗವಾಗಿ ಪರಿಚಯಿಸಲಾಯಿತು. ಇದರ ಪ್ರತಿಕ್ರಿಯೆ ಉತ್ತೇಜನಕಾರಿಯಾಗಿದೆ, ಜನರು ಅದರ ವೇಗ ಮತ್ತು ಪ್ರತಿಕ್ರಿಯೆಗಳ ಗುಣಮಟ್ಟವನ್ನು ಮೆಚ್ಚುತ್ತಿದ್ದಾರೆ ಎಂದು ಗೂಗಲ್ ತನ್ನ ಬ್ಲಾಗ್‌ನಲ್ಲಿ ತಿಳಿಸಿದೆ. ಕಲಿಕೆಗಾಗಿ ವಿಷಯಗಳ ಆಳಕ್ಕೆ ಹೋಗುವುದರಿಂದ ಹಿಡಿದು ಸಂಕೀರ್ಣವಾದ ವಿಧಾನಗಳನ್ನು ಅರ್ಥಮಾಡಿಕೊಳ್ಳುವವರೆಗೆ ಬಳಕೆದಾರರು ಇದನ್ನು ವಿವಿಧ ರೀತಿಯಲ್ಲಿ ಕೆಲಸ ಮಾಡುವುದನ್ನು ನಾವು ನೋಡಿದ್ದೇವೆ ಎಂದು ಹೇಳಿದೆ.

ಈಗ ಜೆಮಿನಿ 2.5ರ ಕಸ್ಟಮ್ ಆವೃತ್ತಿಯಿಂದ ನಡೆಸಲ್ಪಡುವ ಈ ವೈಶಿಷ್ಟ್ಯವು Google ಹುಡುಕಾಟದಲ್ಲಿ ಲಭ್ಯವಿರುತ್ತದೆ. ಲ್ಯಾಬ್‌ಗಳಿಗೆ ಸೈನ್ ಅಪ್ ಮಾಡುವ ಅಗತ್ಯವಿಲ್ಲ ಎಂದಿದೆ. ಈ AI ಮೋಡ್ ವೈಶಿಷ್ಟ್ಯವು ಮಲ್ಟಿಮೋಡಲ್ ಆಗಿದೆ. ಅಂದರೆ ಬಳಕೆದಾರರು ಮಾತನಾಡುವ ಮೂಲಕ ಅಥವಾ ಫೋಟೋ ತೆಗೆಯುವ ಮೂಲಕವೂ ತಮ್ಮ ಪ್ರಶ್ನೆ ಕೇಳಬಹುದು ಎಂದು ಮಾಹಿತಿ ಹಂಚಿಕೊಂಡಿದೆ.
ಕೃತಕ ಬುದ್ಧಿಮತ್ತೆಯಲ್ಲಿ ಮಲ್ಟಿಮೋಡಲ್ ಎಂದರೆ ಏಕಕಾಲದಲ್ಲಿ ಬಹು ವಿಧಾನಗಳು ಅಥವಾ ಡೇಟಾ ಪ್ರಕಾರಗಳಿಂದ ಮಾಹಿತಿಯನ್ನು ಪ್ರಕ್ರಿಯೆಗೊಳಿಸುವ ಮತ್ತು ಸಂಯೋಜಿಸುವ ಎಐ ವ್ಯವಸ್ಥೆಯ ಸಾಮರ್ಥ್ಯವನ್ನು ಸೂಚಿಸುತ್ತದೆ. ಗೂಗಲ್ ಪ್ರಕಾರ, ಬಳಕೆದಾರರು ಈ ವೈಶಿಷ್ಟ್ಯವನ್ನು ಗೂಗಲ್ ಅಪ್ಲಿಕೇಶನ್‌ನ ಹುಡುಕಾಟ ಇಂಟರ್ಫೇಸ್‌ನಲ್ಲಿ ಹೊಸ ಮೀಸಲಾದ ಟ್ಯಾಬ್‌ನಲ್ಲಿ ನೋಡಲು ಸಾಧ್ಯವಾಗುತ್ತದೆ. ಸದ್ಯ ಇದು ಇಂಗ್ಲಿಷ್‌ನಲ್ಲಿ ಲಭ್ಯವಿದೆ.
ಲ್ಯಾಬ್ಸ್ ಬಿಡುಗಡೆಯ ಎಲ್ಲ ವೈಶಿಷ್ಟ್ಯಗಳು ಲಭ್ಯವಿರುತ್ತವೆ. ಆದ್ದರಿಂದ ನೀವು ಟೈಪ್ ಮಾಡಬಹುದು, ನಿಮ್ಮ ಧ್ವನಿಯನ್ನು ಬಳಸಬಹುದು ಅಥವಾ ಲೆನ್ಸ್‌ನೊಂದಿಗೆ ಫೋಟೋ ತೆಗೆಯಬಹುದು. ಸಹಾಯಕವಾದ ಲಿಂಕ್‌ಗಳೊಂದಿಗೆ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಬಹುದು ಮತ್ತು ಫಾಲೋ-ಅಪ್ ಪ್ರಶ್ನೆಗಳೊಂದಿಗೆ ಆಳವಾಗಿ ಮಾಹಿತಿ ತಿಳಿಯಬಹದು ಎಂದು ಕಂಪನಿ ಹೇಳಿದೆ.
ಕಳೆದ ತಿಂಗಳು ಗೂಗಲ್ ತನ್ನ ಜೆಮಿನಿ ಅಪ್ಲಿಕೇಶನ್‌ಗೆ ಅಪ್ಡೇಟ್ ಹೊರತಂದಿದ್ದು, ಬಳಕೆದಾರರು ವಿಶ್ಲೇಷಣೆಗಾಗಿ ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ಅವಕಾಶ ಮಾಡಿಕೊಟ್ಟಿದೆ. ಆದರೆ ಈ ಅಪ್‌ಡೇಟ್ ಅನ್ನು ಇನ್ನೂ ಸಾರ್ವತ್ರಿಕವಾಗಿ ಹೊರತಂದಿಲ್ಲ. ಐಒಎಸ್ ಹಾಗು ಆಂಡ್ರಾಯ್ಡ್ ಸಾಧನಗಳಲ್ಲಿನ ಬಳಕೆದಾರರು ಇದಕ್ಕೆ ಪ್ರವೇಶಿಸಬಹುದು. ಎಐ ಮೋಡ್ ಭಾರತದಲ್ಲಿ ಎಲ್ಲರಿಗೂ ಲಭ್ಯವಿದ್ದು, ಇದು ಸಂವಾದ ಶೈಲಿಯ, ನವೀನ ಮತ್ತು ಬುದ್ಧಿವಂತ ಸರ್ಚ್ ಅನುಭವವ ನೀಡುತ್ತದೆ. ಬಳಕೆದಾರರು ಈಗ ತಮ್ಮ ಪ್ರಶ್ನೆಗಳನ್ನು ಟೈಪ್, ವಾಯ್ಸ್ ಅಥವಾ ಫೋಟೋ ಮೂಲಕ ಕೇಳಬಹುದು.












Click it and Unblock the Notifications