Vaibhav Sooryavanshi: ನನ್ನ ಬ್ಯಾಟ್‌ನಲ್ಲಿ AI ಚಿಪ್ ಹಾಕಿರೋದು ದೇವರು: ವೈಭವ್ ಸೂರ್ಯವಂಶಿ
Vaibhav Sooryavanshi: ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಆಕ್ರಮಣಕಾರಿ ಬ್ಯಾಟಿಂಗ್ ಕ್ರಿಕೆಟ್ ದಿಗ್ಗಜರನ್ನೇ ನಿಬ್ಬೆರಗಾಗುವಂತೆ ಮಾಡಿದೆ. ಈ 15 ವರ್ಷದ ಪೋರ ಪ್ರಸ್ತುತ 9 ಪಂದ್ಯಗಳಿಂದ 238.09 ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ 400 ರನ್ ಗಳಿಸಿ ಆರೆಂಜ್ ಕ್ಯಾಪ್ ತನ್ನದಾಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಇವರ ಬ್ಯಾಟ್‌ನಲ್ಲಿ ಎಐ ಚಿಪ್ ಎನ್ನುವ ಆರೋಪ ಕೇಳಿಬಂದಿತ್ತು. ಇದಕ್ಕೆ ವೈಭವ್ ತಮ್ಮದೇ ಶೈಲಿಯಲ್ಲಿ ಮುಟ್ಟಿನೋಡಿಕೊಳ್ಳುವಂತೆ ಉತ್ತರ ನೀಡಿದ್ದಾರೆ.
ಜಸ್ಪ್ರೀತ್ ಬುಮ್ರಾ, ಭುನವೇಶ್ವರ್ ಕುಮಾರ್, ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಜಲ್‌ವುಡ್ ಅವರಂತಹ ಸ್ಟಾರ್ ಬೌಲರ್‌ಗಳ ವಿರುದ್ಧ ಅವರು ತೋರಿದ ಬ್ಯಾಟಿಂಗ್ ಪರಾಕ್ರಮ ಕಂಡು ಪಾಕಿಸ್ತಾನದ ಕ್ರಿಕೆಟ್ ತಜ್ಞ ನೌಮನ್ ನಿಯಾಜ್ ತಮಾಷೆಯಾಗಿ ಅವರು ಬ್ಯಾಟ್‌ನಲ್ಲಿ ಎಐ ಚಿಪ್ ಇಟ್ಟುಕೊಂಡಿದ್ದಾರೆ. ಅದನ್ನು ಪರಿಶೀಲನೆಗೆ ಕಳುಹಿಸಿ ಎಂದು ಹೇಳಿದ್ದರು. ಇದಕ್ಕೆ ವೈಭವ್ ಸೂರ್ಯವಂಶಿ ತಮ್ಮದೆ ಶೈಲಿಯಲ್ಲಿ ಪ್ರತಿಕ್ರಿಯಿಸಿ ತಿರುಗೇಟು ನೀಡಿದ್ದಾರೆ.

ನಿಯಾಜ್ ಹೇಳಿದ್ದೇನು?
"ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ ಹೇಗೆ ಡೋಪಿಂಗ್ ಪರೀಕ್ಷೆ ಮಾಡುತ್ತದೆಯೋ, ಹಾಗೆಯೇ ಇವನನ್ನು ಯಾವುದಾದರೂ ಲ್ಯಾಬ್‌ಗೆ ಕಳುಹಿಸಬೇಕು. ಇವನ ಬ್ಯಾಟ್‌ನೊಳಗೆ ಬಹುಶಃ ಯಾವುದೋ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಚಿಪ್ ಅಳವಡಿಸಿರಬೇಕು. ಅವನು ನಿಜಕ್ಕೂ ಅದ್ಭುತ, ಮನುಷ್ಯನೇ ಅಲ್ಲ. ಆ ರೀತಿಯಾಗಿ ಆಕ್ರಮಣಕಾರಿ ಆಟ ಆಡುತ್ತಿದ್ದಾರೆ. ಅವನ ಮೇಲೆ ನನಗೆ ತುಂಬಾ ನಿರೀಕ್ಷೆಗಳಿವೆ. ಎಂತಹ ಅದ್ಭುತ ಆಟಗಾರ ಅವನು," ಎಂದು ನಿಯಾಜ್ ವಿಡಿಯೋವೊಂದರಲ್ಲಿ ಶ್ಲಾಘನೆ ವ್ಯಕ್ತಪಡಿಸಿದ್ದರು.
ವೈಭವ್ ಸೂರ್ಯವಂಶಿ ಅವರ ಈ ಬ್ಯಾಟಿಂಗ್ ವೇಗ ನೋಡಿದರೆ ನಿಜಕ್ಕೂ ಅವರ ಬ್ಯಾಟ್‌ನಲ್ಲಿ ಏನೋ ಮ್ಯಾಜಿಕ್ ಇದೆ ಅನ್ನಿಸುವುದು ಸಹಜವೇ. ಕೇವಲ 15 ವರ್ಷದ ಈ ಬಾಲಕ ಇಡೀ ಐಪಿಎಲ್ ಲೋಕವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ ಎಂದು ಹೇಳಿದ್ದರು.
ವೈಭವ್ ಸೂರ್ಯವಂಶಿ ಬಗ್ಗೆ ಅಚ್ಚರಿ ಭವಿಷ್ಯ
"ನನ್ನ ಪ್ರಕಾರ ಅವರು ಎಸ್‌ಆರ್‌ಹೆಚ್ ವಿರುದ್ಧ ಸ್ವಲ್ಪ ನಿಧಾನವಾಗಿ ಆಡಿದರು ಎಂದು ತೋರುತ್ತದೆ, ಅವರ ಸ್ಟ್ರೈಕ್-ರೇಟ್ 300 ಇರಬೇಕಿತ್ತು," ಎಂದು ಹೇಳಿದರು. 15 ವರ್ಷದವರಾಗಿರುವಾಗಲೇ ಇಷ್ಟು ಅಬ್ಬರಿಸುತ್ತಿರುವ ಸೂರ್ಯವಂಶಿ, ಮುಂದಿನ ಮೂರು ವರ್ಷಗಳಲ್ಲಿ ದೈಹಿಕವಾಗಿ ಸಂಪೂರ್ಣವಾಗಿ ಬೆಳೆದ ಮೇಲೆ ಇನ್ನೆಷ್ಟು ಅಪಾಯಕಾರಿ ಬ್ಯಾಟರ್ ಆಗಬಲ್ಲರು ಎಂಬುದು ನಿಯಾಜ್ ಅವರ ಮಾತಿನ ಅರ್ಥವಾಗಿತ್ತು.
ಸಮಯಪ್ರಜ್ಞೆ ಮೆರೆದ ವೈಭವ್ ಸೂರ್ಯವಂಶಿ
ಸೂರ್ಯವಂಶಿ ಅವರು ಮಂಗಳವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 16 ಎಸೆತಗಳಲ್ಲಿ 43 ರನ್ ಚಚ್ಚಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಈ ಪಂದ್ಯದ ಬಳಿಕ ನೌಮನ್ ನಿಯಾಜ್ ಅವರ ಎಐ 'ಚಿಪ್' ಹೇಳಿಕೆಯ ಬಗ್ಗೆ ಅವರಿಗೆ ಪ್ರಶ್ನಿಸಲಾಯಿತು. ಅದಕ್ಕೆ ವೈಭವ್ ತಮಾಷೆಯಾಗಿಯೇ ಮರುಉತ್ತರ ನೀಡಿ ಗಮನ ಸೆಳೆದಿದ್ದಾರೆ.
ತಮ್ಮ ಬ್ಯಾಟಿಂಗ್ ರಹಸ್ಯದ ಬಗ್ಗೆ ಕೇಳಲಾದ ಈ ವಿಚಿತ್ರ ಪ್ರಶ್ನೆಗೆ ಅವರು ಅತ್ಯಂತ ಹಾಸ್ಯಭರಿತವಾಗಿ ಪ್ರತಿಕ್ರಿಯಿಸುವ ಮೂಲಕ ಎಲ್ಲರನ್ನೂ ನಗೆಗಡಲಲ್ಲಿ ತೇಲಾಡಿಸಿದರು. 15 ವರ್ಷದ ಈ ಹುಡುಗ ಮೈದಾನದಲ್ಲಿ ಎಷ್ಟು ಅಪಾಯಕಾರಿಯಾಗಿದ್ದಾನೋ ಮೈದಾನದ ಹೊರಗೂ ಅಷ್ಟೇ ಸಮಯಪ್ರಜ್ಞೆ ಹೊಂದಿದ್ದಾರೆ ಎಂಬುದು ಈ ಮೂಲಕ ಸಾಬೀತಾಯಿತು.
ಎಐ ಚಿಪ್ ಬಗ್ಗೆ ವೈಭವ್ ಹೇಳಿದ್ದೇನು?
"ಎಐ ಚಿಪ್ ಅನ್ನು ಭಗವಂತನೇ ಅಳವಡಿಸಿ ಕೊಟ್ಟಿದ್ದಾನೆ. ನಿನ್ನ ಬ್ಯಾಟ್‌ನಲ್ಲಿ ಏನನ್ನೋ ವಿಶೇಷವಾಗಿ ಅಳವಡಿಸಿಕೊಡುತ್ತಿದ್ದೇನೆ ಎಂದು ಆತ ಸ್ವರ್ಗದಿಂದಲೇ ಹೇಳಿದ್ದ. ನಾನು ಈಗ ಅದನ್ನೇ ಬಳಸುತ್ತಿದ್ದೇನೆ," ಎಂದು ಹೇಳುವ ಮೂಲಕ ಗಮನ ಸೆಳೆದಿದ್ದಾರೆ. ತಮ್ಮ ಬ್ಯಾಟಿಂಗ್ ರಹಸ್ಯದ ಬಗ್ಗೆ ಕೇಳಲಾದ ಎಐ ಚಿಪ್ ಕುರಿತಾದ ಪ್ರಶ್ನೆಗೆ ಈ ರೀತಿ ಹಾಸ್ಯವಾಗಿ ಉತ್ತರಿಸುವ ಮೂಲಕ ಅವರು ತಮ್ಮ ಸಮಯಪ್ರಜ್ಞೆ ಮೆರೆದಿದ್ದಾರೆ.
ಹೊಸ ದಾಖಲೆ ಬರೆದ ವೈಭವ್ ಸೂರ್ಯವಂಶಿ
ವೈಭವ್ ಸೂರ್ಯವಂಶಿ ಕೇವಲ ಮಾತಿನಲ್ಲಿ ಮಾತ್ರವಲ್ಲ, ಮೈದಾನದಲ್ಲೂ ಇತಿಹಾಸ ನಿರ್ಮಿಸಿದ್ದಾರೆ. ಐಪಿಎಲ್ ಸೀಸನ್ ಒಂದರಲ್ಲಿ ಅತ್ಯಂತ ವೇಗವಾಗಿ 400 ರನ್‌ಗಳ ಗಡಿ ತಲುಪಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಈ ಮೈಲಿಗಲ್ಲನ್ನು ಕೇವಲ 167 ಎಸೆತಗಳಲ್ಲಿ ತಲುಪುವ ಮೂಲಕ ದೈತ್ಯ ಆಟಗಾರರನ್ನು ಹಿಂದಿಕ್ಕಿದ್ದಾರೆ. ಈ ದಾಖಲೆಯು ವೈಭವ್ ಎಷ್ಟು ಆಕ್ರಮಣಕಾರಿ ಬ್ಯಾಟರ್ ಎಂಬುದಕ್ಕೆ ಸಾಕ್ಷಿಯಾಗಿದೆ. ಆಂಡ್ರೆ ರಸೆಲ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರಂತಹ ಸ್ಫೋಟಕ ಆಟಗಾರರನ್ನೇ ಮೀರಿಸಿದ ಈ ಯುವ ಪ್ರತಿಭೆ ನಿಜಕ್ಕೂ ಅಚ್ಚರಿ ಮೂಡಿಸಿದ್ದಾರೆ.












Click it and Unblock the Notifications