BMTC: ಮಹಿಳಾ ಪ್ರಯಾಣಿಕರ ಸಂಖ್ಯೆ ಶೇ.150 ಏರಿಕೆ, ಬಸ್ ಇಲ್ಲದೇ ಕಾಯೋದೇ ಕೆಲಸ: ತೇಜಸ್ವಿ ಸೂರ್ಯ


ಬೆಂಗಳೂರು: ರಾಜಧಾನಿಯಲ್ಲಿ ಬಿಎಂಟಿಸಿ ಬಸ್‌ಗಳು ಅಗತ್ಯದಷ್ಟು ಇಲ್ಲ. ಪ್ರಯಾಣಿಕರು ಬಸ್‌ಗಳಿಲ್ಲದೇ ಸಾಕಷ್ಟು ಸಮಯ ಕಾಯುವಂತಾಗಿದೆ. ರಸ್ತೆ ಸುರಕ್ಷತೆಗೆ ಕಡಿಮೆ ಬಸ್‌ಗಳು ಪರಿಹಾರವಲ್ಲ. ಮಹಿಳಾ ಪ್ರಯಾಣಿಕರ ಸಂಖ್ಯೆಯೇ ಶೇ. 150ರಷ್ಟು ಹೆಚ್ಚಾಗಿದೆ. ರಾಜ್ಯ ಸರ್ಕಾರ ಕೇಂದ್ರ ಮಂಜೂರು ಮಾಡಿದ 4500 ಬಸ್‌ಗಳನ್ನು ಸೇರ್ಪಡೆ ಮಾಡಿಕೊಳ್ಳಲು ಏಕೆ ವಿಳಂಬ ಮಾಡುತ್ತಿದೆ?. ಪ್ರಯಾಣಿಕರ ಬಗ್ಗೆ ಸರ್ಕಾರಕ್ಕೆ ಕಿಂಚಿತ್ತು ಕಾಳಜಿ ಇಲ್ಲವೇ? ಎಂದು ಸಂಸದ ತೇಜಸ್ವಿ ಸೂರ್ಯ ಅವರು ಪ್ರಶ್ನೆ ಮಾಡಿದ್ದಾರೆ.

Advertisement

ಶುಕ್ರವಾರ ಎಕ್ಸ್‌ ಪೋಸ್ಟ್ ಮಾಡಿರುವ ಅವರು, ಕೆಟ್ಟ ಚಾಲನೆ-ಅಪಘಾತಗಳ ನೆಪವೊಡ್ಡಿ ಬಸ್‌ಗಳ ಸಂಖ್ಯೆ ಹೆಚ್ಚಿಸದೇ ಇರುವುದು, ಶೀತದ ಸಮಸ್ಯೆಗೆ ಮೂಗನ್ನೇ ಕತ್ತರಿಸಿಕೊಂಡಂತೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (BMTC) ಹೆಚ್ಚಿನ ಬಸ್‌ಗಳ ಸೇರ್ಪಡೆ ವಿಳಂಬಕ್ಕೂ, ಕೆಟ್ಟ ಚಾಲನೆ ಅಥವಾ ಅಪಘಾತಗಳಿಗೆ ಸಂಬಂಧವಿಲ್ಲ. ಹೆಚ್ಚುತ್ತಿರುವ ಪ್ರಯಾಣಿಕರಿಗೆ ಬಸ್‌ಗಳಿಲ್ಲದೇ ಪರದಾಡುತ್ತಿದ್ದಾರೆ. ಮಂಜೂರಾಗಿರುವ ಬಸ್‌ಗಳಿಗೆ ಅನುಮೋದನೆ ನೀಡುವಲ್ಲಿ ಕಾಂಗ್ರೆಸ್ ಸರ್ಕಾರ ಮೀನ ಮೇಷ ಎಣಿಸುತ್ತಿರುವುದೇಕೆ ಎಂದು ಅವರು ಆಕ್ರೋಶ ಹೊರ ಹಾಕಿದರು.

Advertisement

ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಬೆಂಗಳೂರು ಕೇವಲ 3,700 ಕ್ಕೂ ಹೆಚ್ಚು ಬಸ್‌ಗಳ ಕೊರತೆ= ಎದುರಿಸುತ್ತಿದೆ. ಕೇಂದ್ರ ನೀಡಿದ ಬಸ್‌ಗಳು ಬಂದರೆ ಸಾಕಷ್ಟು ಅನುಕೂಲವಾಗಲಿದೆ. ಈಗಿರುವ ಕಡಿಮೆ ಬಸ್‌ಗಳು ಮತ್ತು ರಸ್ತೆ ಸುರಕ್ಷತೆಗೆ ನಿಜವಾದ ಪರಿಹಾರವಿಲ್ಲ. ಬೆಂಗಳೂರಿಗೆ ಹೆಚ್ಚಿನ ಬಸ್‌ಗಳ ಅಗತ್ಯವಿದೆ. ಉತ್ತಮ ಚಾಲಕ ಮತ್ತು ಉತ್ತಮ ತರಬೇತಿ ಎರಡೂ ಅಗತ್ಯವಿದೆ ಎಂದು ಅವರು ವಿವರಿಸಿದರು.

KSRTC: ಎಸ್‌ಸಿ, ಎಸ್‌ಟಿ ಫಲಾನುಭವಿಗಳಿಗೆ ಸಿಹಿ ಸುದ್ದಿ: 1 ತಿಂಗಳ ಉಚಿತ ಡ್ರೈವಿಂಗ್ ತರಬೇತಿ, ನೋಂದಣಿ ಹೇಗೆ?

ಹೊಸ ಬಸ್‌ಗಳ ಸೇರ್ಪಡೆ ಯಾವಾಗ? ಉತ್ತರಿಸಿ

ನಿಜವಾದ ಪ್ರಶ್ನೆಯೆಂದರೆ, ರಾಜ್ಯ ಸರ್ಕಾರವು 4,500 ಕೇಂದ್ರ ಸರ್ಕಾರದಿಂದ ಮಂಜೂರಾದ ಇ-ಬಸ್‌ಗಳನ್ನು ಏಕೆ ಸೇರಿಸಿಲ್ಲ? ನಿರ್ವಹಣೆ ಮತ್ತು ಕಾರ್ಯಾಚರಣೆಗೆ ಸಹ ಹಣವಿಲ್ಲವೇ?. ಇಂದು ಲಕ್ಷಾಂತರ ಬೆಂಗಳೂರಿಗರು ಕಿಕ್ಕಿರಿದ ಬಸ್‌ಗಳಿಗಾಗಿ ಸಾಕಷ್ಟು ಸಮಯ ರಸ್ತೆ, ನಿಲ್ದಾಣಗಳಲ್ಲಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಯಾವಾಗ ಹೆಚ್ಚಿನ ಬಸ್‌ಗಳನ್ನು ಸೇರಿಸುತ್ತದೆ? ಎಂಬುದಕ್ಕೆ ಉತ್ತರಿಸಬೇಕೆಂದು ಅವರು ಕೋರಿದರು.

Advertisement

ಅಪಘಾತಗಳು ಮತ್ತು ಬೇಜವಾಬ್ದಾರಿ ಚಾಲನೆ ಗಂಭೀರ ಸಮಸ್ಯೆಯು ಹೌದು. ಆದರೆ ಅದನ್ನೇ ನೆಪ ಮಾಡಿಕೊಂಡು ಹೊಸ ಬಸ್‌ಗಳನ್ನು ರಸ್ತೆಗೆ ಇಳಿಸದೇ ಸಾರ್ವಜನಿಕರನ್ನು ಸಜೀವ ನರಕಕ್ಕೆ ತಳ್ಳುತ್ತಿರುವುದು ಯಾವ ನ್ಯಾಯ?. ಮಂಜೂರಾದ ಇ-ಬಸ್‌ಗಳನ್ನು ರಾಜ್ಯ ಸರ್ಕಾರ ಇನ್ನೂ ರಸ್ತೆಗಿಳಿಸದೇ ಧೂಳು ತಿನ್ನಿಸುತ್ತಿರುವುದೇಕೆ?. ಸರ್ಕಾರದ ಈ ಬೇಜ್ವಾಬ್ದಾರಿ ವಿಳಂಬ ಧೋರಣೆ ಸರಿಯಲ್ಲ ಎಂದರು.

ಸಮಸ್ಯೆ ಎದುರಿಸುವ ಪ್ರಯಾಣಿಕರಿಗೂ ಮಿತಿ ಇದೆ

ಸರ್ಕಾರದ ಈ ದ್ವಂದ್ವ ನಿಲುವಿನಿಂದ ಪ್ರಯಾಣಿಕರಿಗೆ ಎರಡೂ ಕಡೆ ಚಾಟಿ ಬೀಸಿದಂತಾಗಿದೆ. ಇತ್ತ ಪ್ರಯಾಣಿಸಲು ಬಸ್‌ಗಳೂ ಇಲ್ಲ, ಅತ್ತ ರಸ್ತೆಯಲ್ಲಿ ಸುರಕ್ಷತೆಯೂ ಇಲ್ಲ!. ಲಕ್ಷಾಂತರ ಪ್ರಯಾಣಿಕರು ಕಿಕ್ಕಿರಿದು ತುಂಬಿದ ಬಸ್‌ಗಳಿಗಾಗಿ ಗಂಟೆಗಟ್ಟಲೆ ನಿಲ್ದಾಣಗಳಲ್ಲಿ ಕಾಯುತ್ತಿದ್ದಾರೆ. 'ಶಕ್ತಿ' ಯೋಜನೆ ಬಂದ ಮೇಲೆ ಮಹಿಳಾ ಪ್ರಯಾಣಿಕರ ಸಂಖ್ಯೆ (ಶೇ. 150) ರಷ್ಟು ಏರಿಕೆ ಆಗಿದೆ. ಆದರೆ ಅವರಿಗೆ ಬಸ್‌ಗಳು ಸಿಗುತ್ತಿಲ್ಲ. ಅವರೆಲ್ಲರ ತಾಳ್ಮೆಗೂ ಮಿತಿ ಇದೆ ಎಂದು ಸರ್ಕಾರವನ್ನು ಎಚ್ಚರಿಸಿದರು.

Advertisement
ಕರ್ನಾಟಕದ 4 ರೈಲು ನಿಲ್ದಾಣಗಳಿಗೆ ಹೊಸ ರೂಪ: ಏರ್‌ಪೋರ್ಟ್ ಮಾದರಿಯ ಸೌಲಭ್ಯ, 'ನಮೋ' ಲೋಕಾರ್ಪಣೆ

ರಾಜ್ಯ ಸರ್ಕಾರ ಇನ್ನಾದರೂ ತನ್ನ ಕುಂಭಕರ್ಣ ನಿದ್ರೆಯಿಂದ ಎಚ್ಚೆತ್ತುಕೊಂಡು, ಹೊಸ ಬಸ್‌ಗಳನ್ನು ಯುದ್ಧೋಪಾದಿಯಲ್ಲಿ ರಸ್ತೆಗಿಳಿಸುತ್ತಾ? ಇಲ್ಲವೇ ಸಾರ್ವಜನಿಕರ ಆಕ್ರೋಶದ ಜ್ವಾಲೆಗೆ ಕಾಯುತ್ತಾ ಕೂರುತ್ತಾ? ಎಂಬುದನ್ನು ಕಾದು ನೋಡಬೇಕು ಎಂದು ತಿಳಿಸಿದೆ.

ಪಿಎಂ ಇ-ಡ್ರೈವ್ ಯೋಜನೆಯಡಿ ಕೇಂದ್ರ ಸರ್ಕಾರ ದೇಶದ ವಿವಿಧ ನಗರಗಳಿಗೆ ಇ-ಬಸ್ ಮಂಜೂರು ಮಾಡಿದೆ. ಹೈದರಾಬಾದ್, ದೆಹಲಿ ಇತರ ನಗರಗಳಿಗಿಂತಲೂ ಬೆಂಗಳೂರಿಗೆ ಹೆಚ್ಚು ಅಂದರೆ ಬರೋಬ್ಬರಿ 4500 ಇ-ಬಸ್‌ ಮಂಜೂರು ಮಾಡಿ ಆರು ತಿಂಗಳಾಗಿದೆ. ಆದರೆ ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಬಸ್‌ಗಳ ಸೇರ್ಪಡೆಗೆ ಅನುಮೋದನೆ ನೀಡದೇ ವಿಳಂಬ ಮಾಡುತ್ತಿದೆ. ಇದನ್ನು ವಿಪಕ್ಷ ನಾಯಕರು ಖಂಡಿಸುತ್ತಿದ್ದಾರೆ.

English Summary

Tejasvi Surya urges Karnataka government to induct 4,500 approved BMTC e-buses, citing commuter hardship and growing passenger demand.