Dengue: ಬೆಂಗಳೂರಲ್ಲಿ 46 ಡೆಂಗ್ಯೂ ಪ್ರಕರಣಗಳ ಎಚ್ಚರಿಕೆ: ಸಾರ್ವಜನಿಕರಿಗೆ ಪಾಲಿಕೆಯ ಮಹತ್ವದ ಸೂಚನೆ


ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಡೆಂಗ್ಯೂ ಭೀತಿ ಮುಂದುವರಿದಿದೆ. ಮೇ ತಿಂಗಳಿನಿಂದ ಈವರೆಗೆ ಸುಮಾರು 46 ಡೆಂಗ್ಯೂ ಪ್ರಕರಣಗಳು ವರದಿ ಆಗಿವೆ. ಡೆಂಗ್ಯೂ ತಡೆಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜೊತೆಗೆ ಸಾರ್ವಜನಿಕರಿಗೆ ಅಗತ್ಯ ಸಲಹೆ, ಸೂಚನೆಗಳನ್ನು ನೀಡಲಾಗಿದೆ.

Advertisement

ಡೆಂಗ್ಯೂ ಕಾಯಿಲೆ ನಿಯಂತ್ರಣಕ್ಕೆ ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ನಿರ್ದೇಶಿಸಿದ್ದಾರೆ. ಮಳೆಗಾಲದ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರ ನಗರ ಪಾಲಿಕೆ (BNCC) ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲಿ ಡೆಂಗ್ಯೂ ಹಾಗೂ ಇತರೆ ಸೊಳ್ಳೆಜನ್ಯ ರೋಗಗಳ ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಡೆಂಗ್ಯೂ ನಿಯಂತ್ರಣ ಮತ್ತು ವಾಹಕ ನಿಯಂತ್ರಣ (Vector Control) ಚಟುವಟಿಕೆ ತೀವ್ರಗೊಳಿಸಲಾಗಿದೆ.

Advertisement

ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪತ್ತೆಯಾದ 46 ಡೆಂಗ್ಯೂ ಪ್ರಕರಣಗಳ ಪ್ರತ್ಯೇಕವಾಗಿ ಕಂಡುಬಂದ ಪ್ರಕರಣಗಳಾಗಿವೆ. ನಗರ ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಡೆಂಗ್ಯೂ ಸಾಂಕ್ರಾಮಿಕ (Outbreak) ಪರಿಸ್ಥಿತಿ, ಆತಂಕ ಪಡುವ ವಾತಾವರಣ ಇಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

BMTC: ಮಹಿಳಾ ಪ್ರಯಾಣಿಕರ ಸಂಖ್ಯೆ ಶೇ.150 ಏರಿಕೆ, ಬಸ್ ಇಲ್ಲದೇ ಕಾಯೋದೇ ಕೆಲಸ: ತೇಜಸ್ವಿ ಸೂರ್ಯ

ಡೆಂಗ್ಯೂ ತಡೆಗಟ್ಟುವ ನಿಟ್ಟಿನಲ್ಲಿ ಮನೆ-ಮನೆಗೆ ತೆರಳಿ ಲಾರ್ವಾ ಸಮೀಕ್ಷೆ, ಸೊಳ್ಳೆಗಳ ಉತ್ಪತ್ತಿ ತಾಣಗಳ ನಿರ್ಮೂಲನೆ, ಆಂಟಿ-ಲಾರ್ವಾ ಚಿಕಿತ್ಸೆ, ಅಪಾಯದ ಪ್ರದೇಶಗಳಲ್ಲಿ ಫಾಗಿಂಗ್ ಕಾರ್ಯಾಚರಣೆ ಹಾಗೂ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

Advertisement

ವೈದ್ಯಾಧಿಕಾರಿಗಳು, ಆರೋಗ್ಯ ನಿರೀಕ್ಷಕರು, ಆಶಾ ಕಾರ್ಯಕರ್ತೆಯರು ಹಾಗೂ ಸಿಬ್ಬಂದಿಗಳು ವಸತಿ ಪ್ರದೇಶಗಳು, ಶಾಲೆಗಳು, ನಿರ್ಮಾಣ ಸ್ಥಳಗಳು, ಸರ್ಕಾರಿ ಕಚೇರಿಗಳು, ನರ್ಸರಿಗಳು, ವಾಣಿಜ್ಯ ಸಂಸ್ಥೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪರಿಶೀಲನೆ ನಡೆಸಿ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ಗುರುತಿಸಿ ನಿರ್ಮೂಲನೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.

ಪಾಲಿಕೆಯಿಂದ ಸಾರ್ವಜನಿಕರಿಗೆ ಸಲಹೆಗಳು

* ಮನೆ ಹಾಗೂ ಕೆಲಸದ ಸ್ಥಳಗಳ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ.

* ನೀರು ಸಂಗ್ರಹಿಸುವ ಪಾತ್ರೆಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ, ಸ್ವಚ್ಛಗೊಳಿಸಿ ಹಾಗೂ ಮುಚ್ಚಿಡಿ.

* ಬಳಕೆಯಾಗದ ಟೈರ್‌ಗಳು, ತೆಂಗಿನ ಚಿಪ್ಪುಗಳು, ಬಾಟಲಿಗಳು ಹಾಗೂ ಮಳೆನೀರು ಸಂಗ್ರಹವಾಗುವ ತ್ಯಾಜ್ಯ ವಸ್ತುಗಳನ್ನು ಸೂಕ್ತವಾಗಿ ವಿಲೇವಾರಿ ಮಾಡಿ.

Advertisement

* ಸೊಳ್ಳೆ ನಿವಾರಕಗಳು, ಪೂರ್ಣ ತೋಳಿನ ಉಡುಪುಗಳು ಹಾಗೂ ಸೊಳ್ಳೆ ಪರದೆಗಳನ್ನು ಬಳಸಿ.

* ತೀವ್ರ ಜ್ವರ, ತಲೆನೋವು, ಮೈಕೈ ನೋವು, ವಾಂತಿ ಅಥವಾ ಚರ್ಮದ ಮೇಲೆ ದದ್ದು ಕಾಣಿಸಿಕೊಂಡಲ್ಲಿ ತಕ್ಷಣ ವೈದ್ಯಕೀಯ ಸಲಹೆ ಪಡೆಯಿರಿ. ಸ್ವಯಂ ಔಷಧೋಪಚಾರದಿಂದ ದೂರವಿರಿ.

ಪಾಲಿಕೆ ಜೊತೆ ಕೈ ಜೋಡಿಸಲು ಮನವಿ

ಡೆಂಗ್ಯೂ ನಿಯಂತ್ರಣವು ಸಾರ್ವಜನಿಕರ ಸಕ್ರಿಯ ಸಹಭಾಗಿತ್ವದಿಂದ ಮಾತ್ರ ಸಾಧ್ಯ. ಆದ್ದರಿಂದ ನಿವಾಸಿಗಳು, ನಿವಾಸಿಗಳ ಕಲ್ಯಾಣ ಸಂಘಗಳು (RWAs), ಶಿಕ್ಷಣ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ವಾಣಿಜ್ಯ ಸಂಸ್ಥೆಗಳು ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಂಡು ಸೊಳ್ಳೆಗಳ ಉತ್ಪತ್ತಿಯನ್ನು ತಡೆಯುವಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಬೆಂಗಳೂರು ಉತ್ತರ ನಗರ ಪಾಲಿಕೆ ಪ್ರಕಟಣೆ ಮೂಲಕ ಮನವಿ ಮಾಡಿದೆ.

English Summary

BNCC intensified dengue prevention through larva surveys, fogging and awareness after reporting 46 isolated dengue cases since May.