
ಎಲೆ ಚುಕ್ಕೆ ರೋಗ: ತೀರ್ಥಹಳ್ಳಿಯ ಅಡಿಕೆ ತೋಟಕ್ಕೆ ಭೇಟಿ ನೀಡಿದ ಸಿಎಂ, ಪ್ರಮುಖಾಂಗಳು ಇಲ್ಲಿವೆ
ಶಿವಮೊಗ್ಗ, ನವೆಂಬರ್, 28: ಎಲೆ ಚುಕ್ಕೆ ರೋಗದಿಂದ ಅಡಿಕೆ ಬೆಳೆಗಾರರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಈ ಕುರಿತು ಪರಿಶೀಲನೆ ನಡೆಸಿ, ಮಾಹಿತಿ ಸಂಗ್ರಹಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀರ್ಥಹಳ್ಳಿಗೆ ಭೇಟಿ ನೀಡಿದ್ದರು. ಎಲೆ ಚುಕ್ಕೆ ರೋಗಪೀಡಿತ ಕೈಮರ ಗ್ರಾಮದ ತೋಟಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಎಲೆ ಚುಕ್ಕೆ ರೋಗಪೀಡಿತ ಅಡಕೆ ಮರದ ಗರಿಗಳು, ಅವುಗಳ ಫಸಲನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪರಿಶೀಲಿಸಿದ್ದು, ಈ ಬಗ್ಗೆ ಅಧಿಕಾರಿಗಳು, ರೈತರಿಂದ ಮಾಹಿತಿ ಪಡೆದರು. ರೋಗಪೀಡಿತ ತೋಟಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಅಡಿಕೆ ಬೆಳೆ ಮತ್ತು ಬೆಳೆಗಾರರನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನವನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.
ಅಡಿಕೆ ಬೆಳೆಗಾರನ ಮನ ಗೆದ್ದರೆ ಎಂಎಲ್ಎ ಆಗುವುದು ಖಚಿತ, ಯಾಕೆ? ಇಲ್ಲಿದೆ 4 ಕಾರಣ..!
ಸಿಎಂ ಹೇಳಿದ 3 ಪ್ರಮುಖ ಅಂಶಗಳು
ಪ್ರಮುಖಾಂಶ 1: ರಾಜ್ಯದ ಕಳೆದ ಎರಡು ವರ್ಷದಿಂದ ನಿರಂತರ ಮಳೆ ಆಗುತ್ತಿದ್ದು, ಅಡಿಕೆ ಮರಕ್ಕೆ ಬೇಕಿರುವಷ್ಟು ಪೋಷಕಾಂಶ ಲಭಿಸುತ್ತಿಲ್ಲ. ಹಾಗಾಗಿ ಎಲೆಚುಕ್ಕೆ ರೋಗ ವ್ಯಾಪಕವಾಗಿ ಹರಡುತ್ತಿದೆ. ತೋಟಗಾರಿಕೆ ವಿಶ್ವವಿದ್ಯಾಲಯ, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಕೇಂದ್ರದ ತಜ್ಞರು ಈ ಕುರಿತು ಅಧ್ಯಯನ ನಡೆಸುತ್ತಿದ್ದಾರೆ.
ಪ್ರಮುಖಾಂಶ 2: ಎಲೆ ಚುಕ್ಕೆ ರೋಗ ಗಾಳಿಯಲ್ಲಿ ಹರಡುತ್ತಿದೆ. ವ್ಯವಸ್ಥಿತ ನಿರ್ವಹಣೆಯಿಂದ ರೋಗವನ್ನು ತಡೆಗಟ್ಟಬಹುದಾಗಿದೆ. ಈ ಕುರಿತು ವರದಿ ಸಿದ್ಧಪಡಿಸುವಂತೆ ತೋಟಗಾರಿಕೆ ಇಲಾಖೆಗೆ ಸೂಚನೆ ನೀಡಿದ್ದೇನೆ. ತಜ್ಞರ ಸಲಹೆಯಂತೆ ಔಷಧ ವಿತರಣೆ ಮಾಡಲಾಗುತ್ತದೆ. ಹಾಗೂ ವ್ಯವಸ್ಥಿತ ನಿರ್ವಹಣೆ ಕುರಿತು ಸೂಕ್ತ ಯೋಜನೆ ಸಿದ್ಧಪಡಿಸುವಂತೆ ಸೂಚಿಸಲಾಗಿದೆ.
ಪ್ರಮುಖಾಂಶ 3: 45 ಸಾವಿರ ಹೆಕ್ಟೇರ್‌ನಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ಎಲೆ ಚುಕ್ಕೆ ರೋಗದಿಂದ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಇದು ಹವಾಮಾನ ಆಧಾರಿತ ಸಮಸ್ಯೆಯಾಗಿದ್ದು, ಇದಕ್ಕೆ ವಿಮೆಯೂ ಕೂಡ ಇದೆ. ಪರಿಹಾರ ಒದಗಿಸುವ ಕುರಿತು ವರಿದಿ ಬಂದ ಬಳಿಕ ಪರಿಶೀಲಿಸಲಾಗುತ್ತದೆ. ಬಗರ್ ಹುಕುಂ ಮೂಲಕ ತೋಟ ಮಾಡಿರುವವರಿಗೂ ಪರಿಹಾರದ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೇ ಹಳದಿ ರೋಗ ಬಂದಾಗಲೂ ಸರ್ಕಾರ ಸೂಕ್ತ ಕ್ರಮ ಕೈಗೊಂಡಿತ್ತು. ಎಲೆ ಚುಕ್ಕೆ ರೋಗದ ವಿಚಾರದಲ್ಲಿಯೂ ಅಧ್ಯಯನ ನಡೆಸುತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವ ಗೋವಿಂದ ಕಾರಜೋಳ, ಬಿ.ಎ.ಬಸವರಾಜ, ಶಾಸಕ ಹರತಾಳು ಹಾಲಪ್ಪ, ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವಿಧಾನಸಭೆ ಚುನಾವಣೆಯೇ ಟಾರ್ಗೆಟ್ ಆಯ್ತ?
ಇನ್ನು ಜಿಲ್ಲೆಯ ರೈತರಿಗೆ ಅರ್ಥಿಕವಾಗಿ ಬಲ ನೀಡಿದ್ದ ಅಡಿಕೆ ಈ ಬಾರಿ ಚುನಾವಣೆಯ ಪ್ರಮುಖ ವಿಷಯವಾಗಿದೆ. ಅಡಿಕೆ ಮತ್ತು ಅಡಿಕೆ ಬೆಳೆಗಾರರ ಪರವಾಗಿ ನಿಲ್ಲುವವರಿಗೆ ಹೆಚ್ಚಿನ ಮತ ಲಭಿಸಲಿದೆ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿರುವ ವಿಚಾರವಾಗಿದೆ. ಇದೆ ಕಾರಣಕ್ಕೆ ಜಿಲ್ಲೆಯಲ್ಲಿ ಅಡಿಕೆ ಕೇಂದ್ರಿತ ರಾಜಕಾರಣ ಆರಂಭವಾಗಿದೆ. 2023ರ ವಿಧಾಸಭೆ ಚುನಾವಣೆಯಲ್ಲಿ ಅಡಿಕೆ ಪ್ರಮುಖ ವಿಷಯವಾಗಲಿದೆ. ಅದಕ್ಕೆ ಐದು ಕಾರಣವಿದೆ. ಎಲೆ ಚುಕ್ಕೆ ರೋಗ ಅಡಿಕೆ ಬೆಳಗಾರರ ಭವಿಷ್ಯವನ್ನು ಕರಾಳವಾಗಿಸಿದೆ. ಇದರಿಂದ ಇಳುವರಿ ಕುಸಿದು ಬೆಳೆಗಾರರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಕೊರೊನಾಗಿಂತಲೂ ವೇಗವಾಗಿ ರೋಗ ಹರಡುತ್ತಿದ್ದು ಔಷಧವೂ ಇಲ್ಲ, ಪರಿಹಾರವೂ ಇಲ್ಲದೆ ರೈತರು ಪರಿತಪಿಸುವಂತಾಗಿದೆ. ಹಾಗಾಗಿ ಈ ಬಾರಿ ಅಡಿಕೆ ಎಲೆ ಚುಕ್ಕೆ ರೋಗ ಪ್ರಮುಖ ರಾಜಕೀಯ ವಿಷಯವಾಗಲಿದೆ.
ಪರಿಹಾರ ಸಿಗದೇ ಅಡಿಕೆ ಬೆಳೆಗಾರ ಕಂಗಾಲು
ರಾಜ್ಯ ಸರ್ಕಾರ ಕೋಟಿ ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಮಾಡಿರುವುದಾಗಿ ಘೋಷಿಸಿದೆ. ಅಲ್ಲದೇ ತಜ್ಞರ ತಂಡವು ವಿವಿಧೆಡೆ ಭೇಟಿ ನೀಡಿ ಪರಿಶೀಲಿಸಿದೆ. ಇದರಿಂದ ರೈತರಿಗಾದ ಪ್ರಯೋಜನವೇನು ಎಂದು ವಿರೋಧ ಪಕ್ಷಗಳು ಪ್ರಶ್ನಿಸುತ್ತಿವೆ. ಅಲ್ಲಲ್ಲಿ ಪ್ರತಿಭಟನೆ, ಪಾದಯಾತ್ರೆ, ಹಕ್ಕೊತ್ತಾಯಗಳನ್ನು ನಡೆಸಲಾಗುತ್ತಿದೆ. ಎಲೆ ಚುಕ್ಕೆ ರೋಗ ಮತ್ತು ರಾಜಕೀಯ ಮೇಲಾಟದಲ್ಲಿ ಪರಿಹಾರ ಸಿಗದೆ ಬೆಳಗಾರನ ಪರಿಸ್ಥಿತಿ ಅಡಕತ್ತರಿಯಲ್ಲಿ ಸಿಕ್ಕಂತಾಗಿದೆ. ಅಡಿಕೆ ಬೆಳೆಗಾರರಿಗೆ ಅಭಯ ನೀಡಲು ಸರ್ಕಾರ ಅಡಿಕೆ ಕಾರ್ಯಪಡೆ ರಚಿಸಿದೆ. ಅಡಿಕೆ ಬೆಳೆಗಾರರು, ಮಾರಾಟಗಾರರು, ತಜ್ಞರು ಸೇರಿದಂತೆ ಹಲವರು ಕಾರ್ಯಪಡೆಯಲ್ಲಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ ಇದರ ಅಧ್ಯಕ್ಷರಾಗಿದ್ದಾರೆ. ಸಭೆಗಳನ್ನು ನಡೆಸಿ ಅಡಿಕೆಯ ಮಾನ, ಬೆಳೆಗಾರರ ಭವಿಷ್ಯ ಕಾಪಾಡುವ ಕುರಿತು ಚರ್ಚಿಸಲಾಯಿತು. ಅಡಿಕೆಯ ಉಪ ಉತ್ಪನ್ನಗಳ ಸಂಶೋಧನೆ, ಉತ್ಪಾದನೆಗೆ ಒತ್ತು ನೀಡಲು ಚಿಂತಿಸಲಾಯಿತು.

ಅಡಿಕೆ ಬೆಳೆಗಾರರಿಗೆ ಬಲ ತುಂಬಲು ವಿಫಲ
ಈ ಮಧ್ಯೆ ವಿರೋಧ ಪಕ್ಷಗಳು ಟಾಸ್ಕ್ ಪೋರ್ಸ್ ವಿರುದ್ಧವು ಆಕ್ರೋಶ ಹೊರ ಹಾಕಿವೆ. ಕಾರ್ಯಪಡೆಯಿಂದ ಆಗಿರುವ ಪ್ರಯೋಜನವೇನು?. ಅಡಿಕೆ ಬೆಳೆಗಾರರಿಗೆ ಕಾರ್ಯಪಡೆ ಬಲ ತುಂಬಲು ವಿಫಲವಾಗಿದೆ ಎಂದು ಆರೋಪಿಸಿವೆ. ಕಾರ್ಯಪಡೆ ಸ್ಥಾಪಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದ ಬೆಳೆಗಾರರು, ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಉತ್ತರ ಸಿಗದೆ ಪರಿತಪಿಸುತ್ತಿದ್ದಾರೆ. ಅಡಿಕೆ ಬೆಳೆದರೆ ಹಣವಷ್ಟೇ ಬರುವುದಿಲ್ಲ. ಸಾಲು ಸಾಲು ಸಮಸ್ಯೆಗಳು ಬೆನ್ನು ಹತ್ತುತ್ತವೆ. ಅಡಿಕೆಗೆ ಒಂದಿಲ್ಲೊಂದು ಸಮಸ್ಯೆ ಇದ್ದಿದ್ದೆ. ಕೊಳೆ ರೋಗದಿಂದ ಎಲೆ ಚುಕ್ಕೆ ರೋಗದವರೆಗೆ ವರ್ಷದಿಂದ ವರ್ಷಕ್ಕೆ ಹೊಸ ಮಾದರಿಯ ಸಮಸ್ಯೆ ಎದುರಾಗುತ್ತದೆ. ಇವುಗಳಿಗೆ ಥಟ್ ಅಂತಾ ಪರಿಹಾರ ಒದಗಿಸಲು ಸಂಶೋಧನ ಕೇಂದ್ರ ಬೇಕು ಎಂಬ ಬೇಡಿಕೆ ಇತ್ತು. ಕಳೆದ ಚುನಾವಣೆ ಹೊತ್ತಿಗೆ ತೀರ್ಥಹಳ್ಳಿಗೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಡಿಕೆ ಸಂಶೋಧನ ಕೇಂದ್ರ ಸ್ಥಾಪನೆಯ ಭರವಸೆ ನೀಡಿದ್ದರು. ಇದು ಮಲೆನಾಡ ಅಡಿಕೆ ಬೆಳೆಗಾರರಿಗೆ ತುಸು ನೆಮ್ಮದಿ ಮೂಡಿಸಿತ್ತು.
ಅಡಿಕೆ ಸಂಶೋಧನ ಕೇಂದ್ರವು ಉಳಿದ ಭರವಸೆಗಳಂತೆ ಕನಸಾಗಿಯೆ ಉಳಿದಿದೆ. ಈ ಬಾರಿ ಚುನಾವಣೆಯಲ್ಲಿ ಇದು ಕೂಡ ರಾಜಕಾರಣಿಗಳ ಮತ ಗಳಿಕೆಯ ಪ್ರಮುಖ ವಿಷಯ ವಸ್ತುವಾಗಿದೆ. ಸಂಶೋಧನೆ ಕೇಂದ್ರ ಸ್ಥಾಪಿಸಿಯೇ ಸಿದ್ಧ ಎಂದು ಬಿಜೆಪಿ ಮುಖಂಡರು ವಾದಿಸುತ್ತಿದ್ದಾರೆ. ಈವರೆಗೂ ಸ್ಥಾಪನೆಯಾಗದಿರಲು ಕಾರಣವೇನು? ಸಂಶೋಧನಾ ಕೇಂದ್ರ ರೂಪುರೇಷ ಏನು ಎಂದು ವಿರೋಧ ಪಕ್ಷದವರು ಪ್ರಶ್ನಿಸುತ್ತಿದ್ದಾರೆ.