ಕೋಟಿ.. ಕೋಟಿ.. ಆದಾಯ ಕೊಡುತ್ತಿದ್ದ ಏಲಕ್ಕಿ ಬೆಳೆ ಬಿಟ್ಟು ಕಾಫಿ ಬೆಳೆಯೆಡೆಗೆ ಚಿತ್ತನೆಟ್ಟ ಕೊಡಗಿನ ರೈತ, ಕಾರಣ ಏನು?
ಮಡಿಕೇರಿ, ಜೂನ್, 28: ಮಂಜಿನ ನಗರಿ ಕೊಡಗಿನಲ್ಲಿ ಈ ಹಿಂದೆ ರೈತರು ಏಲಕ್ಕಿ ಬೆಳೆಯನ್ನೇ ಹೆಚ್ಚಾಗಿ ಬೆಳೆಯುತ್ತಿದ್ದರು. ಏಕೆಂದರೆ ಇದರಿಂದ ಲಕ್ಷ.. ಲಕ್ಷ ಆದಾಯ ಬರುತ್ತಿತ್ತು. ಹಾಗೆಯೇ ಏಲಕ್ಕಿ ಬೆಳೆ ಬೆಳೆದ ಎಷ್ಟೋ ಜನ ಲಕ್ಷಾದಿಪತಿಗಳು ಆಗಿರುವ ಉದಾಹರಣೆಗಳು ಇವೆ. ಆದರೆ ದಿನಕಳೆದಂತೆ ಜಿಲ್ಲೆಯಲ್ಲಿ ಈ ಬೆಳೆಯನ್ನು ಬೆಳೆಯುವವರ ಸಂಖ್ಯೆ ಕ್ಷೀಣಿಸುತ್ತಲೇ ಇದೆ. ಇದಕ್ಕೆ ಕಾರಣ ಏನು ಅನ್ನುವ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಯಿರಿ.
ಕೊಡಗಿನ ವಾತಾವರಣದಲ್ಲಿ ದಿನದಿಂದ ದಿನಕ್ಕೆ ಬದಲಾವಣೆಯಾಗುತ್ತಲೇ ಇದೆ. ಮೊದಲು ಇದ್ದಂತಹ ದಟ್ಟಕಾಡುಗಳು ಮರೆಯಾಗಿವೆ. ಹಾಗೆಯೇ ಅಲ್ಲಿದ್ದ ಏಲಕ್ಕಿ ತೋಟಗಳು ಮಾಯವಾಗಿ ಕಾಫಿ ತೋಟ ತಲೆ ಎತ್ತಿವೆ. ಗದ್ದೆ ಬಯಲುಗಳು ಕೂಡ ನಿಧಾನವಾಗಿ ಕಾಫಿ ತೋಟಗಳಾಗುತ್ತಿವೆ. ಇದನ್ನು ಗಮನಿಸಿದರೆ ಮುಂದೊಂದು ದಿನ ಏಲಕ್ಕಿ ಮತ್ತು ಭತ್ತದ ಕೃಷಿ ಮರೆಯಾಗಿ ಕೇವಲ ಕಾಫಿ ಮಾತ್ರ ಉಳಿದುಬಿಡುವುದರಲ್ಲಿ ಯಾವುದೇ ಅಚ್ಚರಿಯಿಲ್ಲ.

ಮೊದಲೆಲ್ಲ ಕೊಡಗು ಎಂದರೆ ಬರೀ ಮಳೆ ಕಣ್ಣಿಗೆ ರಾಚುತ್ತಿತ್ತು. ವರ್ಷದಲ್ಲಿ ಮೂರು ತಿಂಗಳ ಕಾಲ ಹೊರತು ಪಡಿಸಿದರೆ ಉಳಿದಂತೆ ಆಗಾಗ್ಗೆ ಮಳೆ ಸುರಿಯುತ್ತಲೇ ಇರುತ್ತಿತ್ತು. ಮಳೆ ಹೆಚ್ಚಾದ ಕಾರಣ ಭತ್ತ ಮತ್ತು ಏಲಕ್ಕಿ ಬೆಳೆ ಬಿಟ್ಟರೆ ಇತರೆ ಬೆಳೆಯನ್ನು ಬೆಳೆಯುವುದು ಕಷ್ಟವಾಗಿತ್ತು. ಮಳೆ ಕಡಿಮೆ ಬೀಳುವ ಮತ್ತು ನೀರು ಬಸಿದು ಹೋಗುವ ಪ್ರದೇಶಗಳಲ್ಲಿ ಕೆಲವರು ಕಾಫಿಯನ್ನು ಬೆಳೆಯುತ್ತಿದ್ದರು.
ಅವತ್ತಿನ ಕಾಲದಲ್ಲಿ ಇವತ್ತಿನಂತೆ ಎಲ್ಲೆಂದರಲ್ಲಿ, ಯಾರು ಬೇಕಾದರೂ ಕಾಫಿ ಬೆಳೆಯಬಹುದು ಎಂಬ ಪರಿಸ್ಥಿತಿ ಇರಲಿಲ್ಲ. ಕಾಫಿ ಬೆಳೆಯಬೇಕಾದರೆ ಪರವಾನಗಿ ಬೇಕಾಗಿತ್ತು. ಜೊತೆಗೆ ಕಾಫಿ ಮಂಡಳಿಗೆ ಕಾಫಿಯನ್ನು ಮಾರಾಟ ಮಾಡಬೇಕಾಗಿತ್ತು. ಅಲ್ಲದೆ ಕಾಫಿ ಮೇಲೆ ಹತ್ತು ಹಲವು ನಿಬಂಧನೆಗಳಿದ್ದುದರಿಂದ ಹೆಚ್ಚಿನ ಬೆಳೆಗಾರರು ಅದರತ್ತ ಹೆಚ್ಚು ಗಮನ ಹರಿಸಿರಲಿಲ್ಲ.
ಅದಕ್ಕಿಂತ ಹೆಚ್ಚಾಗಿ ಕೊಡಗಿನಲ್ಲಿ ಅವತ್ತಿನ ದಿನಗಳಲ್ಲಿ ಏಲಕ್ಕಿ ಬೆಳೆ ಹೆಚ್ಚು ಜನಪ್ರಿಯವಾಗಿತ್ತು. ಸಂಬಾರ ರಾಣಿ ಎಂದೇ ಕರೆಯುತ್ತಿದ್ದ ಏಲಕ್ಕಿಗೆ ಹೆಚ್ಚಿನ ಬೇಡಿಕೆಯಿತ್ತು. ಕೃಷಿಯೂ ಸುಲಭವಾಗಿತ್ತು. ಹೀಗಾಗಿ ಬಹುತೇಕ ಜನರು ಏಲಕ್ಕಿ ಕಡೆಗೆ ಆಕರ್ಷಿತರಾಗಿದ್ದರು.
ಅದರಲ್ಲೂ ಹೆಮ್ಮರಗಳ ನಡುವಿನ ಕಾಡು ಪ್ರದೇಶ, ನೀರಿನಾಸರೆ ಹೊಂದಿದ ಕೊಲ್ಲಿ ಪ್ರದೇಶಗಳು, ನೀರು ಹರಿಯುವ ಸ್ಥಳಗಳಲ್ಲಿ ಏಲಕ್ಕಿ ಗಿಡ ನೆಟ್ಟು ಬಿಟ್ಟರೆ ಸಾಕು, ಮಣ್ಣಿನ ಫಲವತ್ತತೆಯನ್ನು ಬಳಸಿಕೊಂಡು ಗಿಡ ಬೆಳೆಯುತ್ತಿತ್ತು. ಇದಕ್ಕೆ ಗೊಬ್ಬರ ಹಾಕಿ ಉಪಚಾರ ಮಾಡುವ ಅಗತ್ಯವೂ ಇರಲಿಲ್ಲ. ಅದು ನೈಸರ್ಗಿಕವಾಗಿಯೇ ಬೆಳೆದು ಫಸಲು ನೀಡುತ್ತಿತ್ತು.
ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ
ಇವತ್ತಿನ ಕಾಫಿ ಕೃಷಿಗೆ ಹೋಲಿಸಿದರೆ ಏಲಕ್ಕಿ ಕೃಷಿಯಲ್ಲಿ ಖರ್ಚು ಕಡಿಮೆಯಿದ್ದು, ಆದಾಯ ಹೆಚ್ಚಾಗಿತ್ತು. ಏಲಕ್ಕಿ ಗಿಡಗಳನ್ನು ಬೀಜಗಳಿಂದ ಅಥವಾ ಕಾಡಿನಲ್ಲಿ ಬೀಜ ಬಿದ್ದು ಹುಟ್ಟುತ್ತಿದ್ದ ಸಸಿಗಳಿಂದ ಅಭಿವೃದ್ಧಿ ಮಾಡಲಾಗುತ್ತಿತ್ತು. ಸೆಪ್ಟಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಬೀಜಗಳಿಂದ ಅಥವಾ ಕಾಡಿನಲ್ಲಿ ಬಿದ್ದು ಹುಟ್ಟುತ್ತಿದ್ದ ಸಸಿಗಳನ್ನು ಸಂಗ್ರಹಿಸಿ ತಂದು ಪಾತಿ ಮಾಡಿ ಅದರಲ್ಲಿ ನೆಟ್ಟು ಆರೈಕೆ ಮಾಡಲಾಗುತ್ತಿತ್ತು.
ನಂತರ ಆ ಗಿಡಗಳು ಜೂನ್ ವೇಳೆಗೆ ತೋಟಕ್ಕೆ ನೆಡಲು ಯೋಗ್ಯವಾಗುತ್ತಿದ್ದವು. ಮುಂಗಾರು ಆರಂಭದ ದಿನಗಳು ಅಂದರೆ ಜೂನ್ ತಿಂಗಳಲ್ಲಿ ಈ ಗಿಡಗಳನ್ನು ತೋಟಗಳಲ್ಲಿ ನೆಡಲಾಗುತ್ತಿತ್ತು. ಹೀಗೆ ನೆಟ್ಟ ಗಿಡಗಳು ಮೂರು ವರ್ಷಕ್ಕೆ ಫಸಲು ಬಿಡುತ್ತಿದ್ದವು. ಅಲ್ಲದೆ, ಹತ್ತಾರು ವರ್ಷಗಳ ಜೀವಂತವಾಗಿದ್ದು ಫಸಲು ನೀಡುತ್ತಿದ್ದವು.
ತೋಟದ ಮಧ್ಯೆ ಯಾವುದಾದರೂ ಗಿಡಗಳು ಸತ್ತು ಹೋದರೆ ಮತ್ತೆ ಅಲ್ಲಿಗೆ ಹೊಸದಾಗಿ ಗಿಡ ನೆಡುವ ಕೆಲಸ ಮಾಡಲಾಗುತ್ತಿತ್ತು. ಮರಗಳಿಂದ ಆವೃತವಾಗಿ ನೆರಳಿನ ಪ್ರದೇಶಗಳಲ್ಲಿ ಏಲಕ್ಕಿ ತೋಟಗಳು ನಿರ್ಮಾಣ ಆಗುತ್ತಿದ್ದವು. ಇನ್ನು ಬಹಳಷ್ಟು ಜನರು ಏಲಕ್ಕಿ ನರ್ಸರಿ ಮಾಡುವುದರಿಂದಲೇ ಜೀವನ ಕಟ್ಟಿಕೊಳ್ಳುತ್ತಿದ್ದರು.
ಜೂನ್ ತಿಂಗಳಲ್ಲಿ ಏಲಕ್ಕಿ ತೋಟಗಳತ್ತ ಮುಖ ಮಾಡುತ್ತಿದ್ದ ರೈತರು ಏಲಕ್ಕಿ ಗಿಡಗಳನ್ನು ನೆಡುವುದು, ಹಳೆಯ ತೋಟಗಳಲ್ಲಿ ಬೆಳೆದ ಕಾಡುಗಳನ್ನು ತೆರವುಗೊಳಿಸುವ ಕೆಲಸಗಳಲ್ಲಿ ನಿರತರಾಗಿಬಿಡುತ್ತಿದ್ದರು. ಇನ್ನು ಆ ದಿನಗಳಲ್ಲಿ ಕೊಡಗಿನಲ್ಲಿ ಇವತ್ತಿನಂತೆ ಬೇರೆ, ಬೇರೆ ಉದ್ಯಮ, ವ್ಯಾಪಾರ ವಹಿವಾಟು ಬೆಳೆದಿರಲಿಲ್ಲ. ಜನರೆಲ್ಲರೂ ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದರು.
ಆಗ ಏಲಕ್ಕಿ ಮತ್ತು ಭತ್ತದ ಕೃಷಿ ಪ್ರಧಾನವಾಗಿತ್ತು. ಏಲಕ್ಕಿ ಕೃಷಿ ಮಾಡುವುದರಲ್ಲಿ ಜನ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದರು. ಕಾರಣ ಅದಕ್ಕೆ ಉತ್ತಮ ದರ ದೊರೆಯುತ್ತಿತ್ತು. ಆದ್ದರಿಂದ ಆಗಿನ ಕಾಲದಲ್ಲಿ ಏಲಕ್ಕಿ ಬೆಳೆಗಾರನೆಂದರೆ ಆತನನ್ನು ಶ್ರೀಮಂತನೆಂದೇ ಭಾವಿಸಲಾಗುತ್ತಿತ್ತು.
ಕೊಡಗಿನ ಮುಖ್ಯಪಟ್ಟಣ ಮಡಿಕೇರಿಯಲ್ಲಿ ಎಲ್ಲೆಂದರಲ್ಲಿ ಏಲಕ್ಕಿ ವ್ಯಾಪಾರಿಗಳ ಅಂಗಡಿಗಳಿದ್ದವು. ಹೀಗಾಗಿ ಇಡೀ ನಗರ ಏಲಕ್ಕಿಯ ಸುವಾಸನೆಯಿಂದ ಘಮಘಮಿಸುತ್ತಿತ್ತು. ಏಲಕ್ಕಿ ಮಾರಾಟ ಮಾಡಲು ಬರುವ ರೈತರನ್ನು ವ್ಯಾಪಾರಿಗಳು ತಮ್ಮ ಬಳಿಗೆ ಬರುವಂತೆ ಒತ್ತಾಯಿಸಿ ಕರೆದೊಯ್ಯುತ್ತಿದ್ದರು. ಇದೆಲ್ಲವೂ ಮರೆಯಲಾರದ ನೆನಪುಗಳು. ಇವತ್ತಿಗೂ ಹಿರಿಯರು ಗತಕಾಲದ ಏಲಕ್ಕಿಯ ವೈಭವವನ್ನು ಸ್ಮರಿಸುತ್ತಾರೆ.
ಅದು ಸುವರ್ಣಮಯ ಕಾಲವಾಗಿತ್ತು!
ಈಗ ಏಲಕ್ಕಿಯ ಬೆಲೆ ಕೆಜಿಯೊಂದಕ್ಕೆ ಎರಡು ಸಾವಿರದ ಆಸುಪಾಸಿನಲ್ಲಿದೆ. ಆದರೆ ಮೂರು ದಶಕಗಳ ಹಿಂದೆಯೇ ಕೆ.ಜಿ.ಗೆ ಸಾವಿರದ ಗಡಿ ತಲುಪಿತ್ತು ಎಂದರೆ ಅಚ್ಚರಿ ಆಗುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಕೊಡಗಿನಲ್ಲಿ ಕಾಫಿ, ಕರಿಮೆಣಸು ಎಲ್ಲವೂ ಬೇಸಿಗೆಯಲ್ಲೇ ಫಸಲು ಬರುತ್ತವೆ. ಆ ನಂತರ ಆದಾಯ ತಂದು ಕೊಡುವ ಯಾವ ಬೆಳೆಯೂ ಇಲ್ಲದಾಗಿದೆ.
ಆದರೆ ಏಲಕ್ಕಿ ಆಗಸ್ಟ್ ನಂತರ ಫಸಲಿಗೆ ಬರುತ್ತಿತ್ತು. ನವೆಂಬರ್ ಕೊನೆಯ ತನಕವೂ ಫಸಲು ನೀಡುತ್ತಿತ್ತು. ಹೀಗಾಗಿ ಜನರ ಕೈನಲ್ಲಿ ಹಣ ಹರಿದಾಡುತ್ತಿತ್ತು. ಜೊತೆಗೆ ಏಲಕ್ಕಿಯನ್ನು ಸಂಗ್ರಹಿಸಿಟ್ಟುಕೊಂಡು ಯಾವಾಗ ಬೇಕಾದರೂ ಮಾರಾಟ ಮಾಡಬಹುದಾಗಿದ್ದರಿಂದ ವರ್ಷ ಪೂರ್ತಿ ಏಲಕ್ಕಿಯ ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಹೀಗಾಗಿ ಆ ದಿನಗಳು ಏಲಕ್ಕಿ ಬೆಳೆಗಾರನ ಪಾಲಿಗೆ ಸುವರ್ಣಮಯವಾಗಿದ್ದವು ಎಂದರೆ ತಪ್ಪಾಗಲಾರದು.
ಏಲಕ್ಕಿ ಕೃಷಿಯತ್ತ ನಿರಾಸಕ್ತಿ ತಾಳಿದ್ದೇಕೆ?
ಇಡೀ ಕೊಡಗಿನಲ್ಲಿ ತನ್ನದೇ ಹವಾ ಸೃಷ್ಟಿಸಿ ಬೆಳೆಗಾರರಿಗೆ ಆಸರೆಯಾಗಿ ವೈಭವ ಮೆರೆದಿದ್ದ ಏಲಕ್ಕಿ 90ರ ದಶಕದ ನಂತರ ನಿಧಾನವಾಗಿ ಕಡಿಮೆಯಾಗುತ್ತಾ ಬಂದಿದೆ. ಇದೀಗ ವಾತಾವರಣದ ಏರುಪೇರು, ಬಾಧಿಸಿದ ಕಟ್ಟೆ ರೋಗ, ಬೆಲೆ ಕುಸಿತ, ಕಾಫಿ ಮುಕ್ತ ಮಾರುಕಟ್ಟೆಗೆ ತೆರೆದುಕೊಂಡಿದ್ದು ಮತ್ತು ದರ ಹೆಚ್ಚಳ, ಮಳೆಕೊರತೆ ಹೀಗೆ ಹತ್ತಾರು ಕಾರಣಗಳು ಏಲಕ್ಕಿ ಕೃಷಿಯತ್ತ ಬೆಳೆಗಾರರು ಆಸಕ್ತಿ ಕಳೆದುಕೊಳ್ಳುವಂತೆ ಮಾಡಿದೆ.
ಕೊಡಗಿನಲ್ಲಿ ಹಿಂದೆ ಏಲಕ್ಕಿ ತೋಟಗಳಾಗಿದ್ದ ಪ್ರದೇಶಗಳು ಇದೀಗ ಕಾಫಿ ತೋಟಗಳಾಗಿ ಮಾರ್ಪಟ್ಟಿವೆ. ಕೆಲವೇ ಕೆಲವು ಕಡೆಗಳಲ್ಲಿ ಮಾತ್ರ ಕಂಡು ಬರುತ್ತಿದೆಯಾದರೂ, ಶೇಕಡ 10ರಷ್ಟು ಭಾಗವೂ ಏಲಕ್ಕಿ ತೋಟ ಇಲ್ಲದಿರುವುದು ಮಾತ್ರ ಬೇಸರದ ಸಂಗತಿಯಾಗಿದೆ. ಏಲಕ್ಕಿ ಕೊಡಗಿನಿಂದ ಕಣ್ಮರೆಯಾಗುವಲ್ಲಿ ಅದಕ್ಕೆ ಬಾಧಿಸುತ್ತಿದ್ದ ಕಟ್ಟೆರೋಗವೂ ಪ್ರಮುಖ ಕಾರಣವಾಗಿದೆ.
ಈ ಕಟ್ಟೆರೋಗ ಎಷ್ಟು ತೀವ್ರವಾಗಿತ್ತೆಂದರೆ ಬೆಳೆಗಾರರು ಗಿಡಗಳನ್ನು ನೆಟ್ಟು ಇನ್ನೇನು ಫಸಲು ಬರುತ್ತದೆ ಎನ್ನುವಾಗಲೇ ರೋಗ ತಗುಲಿ ಗಿಡಗಳ ಬೆಳವಣಿಗೆಯಲ್ಲಿ ಕುಂಠಿತಗೊಳ್ಳುತ್ತದೆ. ಅಲ್ಲದೆ ಗಿಡಗಳು ಗಾತ್ರದಲ್ಲಿ ಚಿಕ್ಕದಾಗಿ, ತೆಳ್ಳನೆಯ ಕೃಶವಾದ ತಾಳುಗಳನ್ನು ಹೊಂದಿ ಚಿಕ್ಕದಾದ ಕೊತ್ತುಗಳನ್ನು (ಪುಷ್ಪ ಗೊಂಚಲು) ಬಿಟ್ಟು ಸದ್ದಿಲ್ಲದೆ ಸತ್ತು ಹೋಗುತ್ತಿದ್ದವು. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ಬೆಳೆಗಾರರದ್ದಾಗಿದೆ.
ತೊಂಬತ್ತರ ದಶಕದ ನಂತರ ಕಟ್ಟೆರೋಗದ ತೀವ್ರತೆ ಹೆಚ್ಚಾದ ಕಾರಣ ಅದರ ಬಗ್ಗೆ ಆಸಕ್ತಿಯನ್ನು ಬೆಳೆಗಾರ ಕಳೆದುಕೊಳ್ಳತೊಡಗಿದನು. ಅಲ್ಲದೆ ಅದೇ ವೇಳೆಗೆ ಕಾಫಿ ಮಂಡಳಿಯ ಹಿಡಿತದಲ್ಲಿದ್ದ ಕಾಫಿ ಮುಕ್ತ ಮಾರುಕಟ್ಟೆಗೆ ಬಂದಿತು. ಯಾರು ಬೇಕಾದರೂ ಕಾಫಿ ಬೆಳೆಯಬಹುದು ಮತ್ತು ಎಲ್ಲಿ ಬೇಕಾದರೂ ಮಾರಾಟ ಮಾಡುವ ಅವಕಾಶ ದೊರೆಯಿತು. ಆಗಿನಿಂದ ಏಲಕ್ಕಿಯೊಂದಿಗೆ ಹೆಣಗಾಡಿ ಸುಸ್ತಾಗಿದ್ದ ಬೆಳೆಗಾರ ಏಲಕ್ಕಿ ತೋಟವನ್ನು ಕಾಫಿ ತೋಟವನ್ನಾಗಿ ಮಾರ್ಪಡಿಸಿದನು. ಅದೇ ವೇಳೆಗೆ ಏಲಕ್ಕಿ ಬೆಲೆಯೂ ಭಾರೀ ಕುಸಿತ ಕಂಡಿತ್ತು.
ಇನ್ನು ಏಲಕ್ಕಿ ಬೆಳೆದು ಉದ್ಧಾರವಾಗಲ್ಲ ಎಂದರಿತ ಬೆಳೆಗಾರರು ಅದಕ್ಕೆ ವಿದಾಯ ಹೇಳಿಬಿಟ್ಟರು. ಈಗ ಅಳಿದುಳಿದ ಕಡೆಗಳಲ್ಲಿ ಏಲಕ್ಕಿ ಕಂಡು ಬರುತ್ತಿದೆ. ಆದರೂ ಅದನ್ನು ಆಸಕ್ತಿಯಿಂದ ಬೆಳೆಸುವವರ ಸಂಖ್ಯೆ ಕಡಿಮೆಯಾಗಿದೆ. ಕೊಡಗಿನಲ್ಲಿ ಏಲಕ್ಕಿ ಬೆಳೆ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದರೆ, ಅತ್ತ ಕೇರಳದಲ್ಲಿ ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ನೆಲ್ಯಾಣಿ ಎಂಬ ಹೊಸತಳಿ ಸಾಂಪ್ರದಾಯಿಕ ತಳಿಗಿಂತ ಹತ್ತು ಪಟ್ಟು ಇಳುವರಿ ನೀಡುತ್ತದೆ. ಹೀಗಾಗಿ ಕೇರಳದವರು ಏಲಕ್ಕಿ ಕೃಷಿಯಲ್ಲಿ ಬದುಕು ಕಂಡುಕೊಳ್ಳುತ್ತಿದ್ದಾರೆ. ಆದರೆ ಕೊಡಗಿನಿಂದ ಸಂಬಾರ ರಾಣಿ ಏಲಕ್ಕಿ ಬೆಳೆ ಅಂತ್ತವಾಗಿದ್ದು ಮಾತ್ರ ಬೇಸರದ ಸಂಗತಿಯಾಗಿದೆ.












Click it and Unblock the Notifications