ತುಂಗಭದ್ರಾ ಡ್ಯಾಂನಿಂದ ಕಾಲುವೆಗಳಿಗೆ ನೀರು: 24 ಟಾಸ್ಕ್ ಫೋರ್ಸ್ ಕಣ್ಗಾವಲು
ಕೊಪ್ಪಳ, ಏಪ್ರಿಲ್ 7: ಬೇಸಿಗೆಯಲ್ಲಿ ಕುಡಿಯುವ ನೀರು ಹಾಗೂ ಬೆಳೆಗಳಿಗೆ ಯಾವುದೇ ಸಮಸ್ಯೆಯಾಗದಂತೆ ತುಂಗಭದ್ರಾ ಡ್ಯಾಂನಿಂದ ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಿಗೆ ಏಪ್ರಿಲ್ 9 ಅಥವಾ 10ರ ತನಕ ಕಾಲುವೆಗೆ 3 ಸಾವಿರ ಕ್ಯೂಸೆಕ್ಸ್ ನೀರು ಹರಿಸಲು ತೀರ್ಮಾನಿಸಲಾಗಿದೆ. ನೀರು ಹರಿಯುವ ಸಂದರ್ಭದಲ್ಲಿ ತುಂಗಭದ್ರಾ ಎಡದಂಡೆ ಕಾಲುವೆ ಮೇಲೆ 24 ತಾಸು ನಿಗಾವಹಿಸಬೇಕು ಎಂದು ಪ್ರಾದೇಶಿಕ ಆಯುಕ್ತರಾದ ಎಂ. ಸುಂದರೇಶ ಬಾಬು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್ ತಂಗಡಗಿ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಕಾಲುವೆಗೆ ನೀರು ಹರಿಸುವ ಕುರಿತು ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗಿದೆ.

ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಮೂಲಕ ಏಪ್ರಿಲ್ 9 ಅಥವಾ 10ರವರೆಗೆ ಕುಡಿಯುವ ನೀರು ಒಳಗೊಂಡಂತೆ ಹಾಗೂ ಬೆಳೆಗಳ ಸಂರಕ್ಷಣೆಗಾಗಿ 3000 ಕ್ಯೂಸೆಕ್‌ನಂತೆ ನೀರು ಹರಿಸಲು ಸೂಚನೆ ನೀಡಲಾಗಿದೆ. ಫಸಲಿಗಾಗಿ ಕಾಯುತ್ತಿರುವ ಬೆಳೆದು ನಿಂತ ಬೆಳೆಗಳಿಗೆ ನೀರು ಒದಗಿಸಲಾಗುವುದು. ರೈತರು ಆತಂಕ ಪಡಬೇಕಿಲ್ಲ ಎಂದು ಸರ್ಕಾರ ಅಭಯ ನೀಡಿದೆ.
ನೀರು ಕೊನೆಯ ಭಾಗದ ರೈತರಿಗೆ ನೀರು ತಲುಪುವಂತೆ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು. ಯಾವುದೇ ತೊಂದರೆಯಾಗದ ರೀತಿಯಲ್ಲಿ ನಿಷೇಧಾಜ್ಞೆ ಮೂಲಕ ನೀರು ಹರಿಸಲಾಗುವುದು. ರೈತರು ಮತ್ತು ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಸಚಿವರು ಭರವಸೆ ನೀಡಿದ್ದಾರೆ.
ನೀರಿನ ಹರಿವಿನ ಮೇಲೆ ನಿಗಾ: ತುಂಗಭದ್ರಾ ಎಡದಂಡೆ ಕಾಲುವೆಯ ಹಂಚಿಕೆಯಾದ ನೀರನ್ನು ಸಮ ಪ್ರಮಾಣದಲ್ಲಿ ಹಂಚಿಕೆಯಾಗುವಂತೆ ನೋಡಿಕೊಳ್ಳಲು ದಿನದ 24 ತಾಸು ಟಾಸ್ಕ್‌ಪೋರ್ಸ್ ಸಮಿತಿಯವರು ನಿಗಾವಹಿಸಬೇಕೆಂದು ಕಲಬುರಗಿ ವಿಭಾಗದ ಪ್ರಭಾರಿ ಪ್ರಾದೇಶಿಕ ಆಯುಕ್ತ ಎಂ. ಸುಂದರೇಶ ಬಾಬು ಹೇಳಿದ್ದಾರೆ.
ನಂಬರ್-17 ದಾಸನಾಳ ಬ್ರಿಜ್ ಗಂಗಾವತಿ ಇಲ್ಲಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ತುಂಗಭದ್ರಾ ಎಡದಂಡೆ ಕಾಲುವೆಗಳಿಗೆ ಹರಿಸಲಾದ ನೀರಿನ ಸಮರ್ಪಕ ಹಂಚಿಕೆಗೆ ಸಂಬಂದಪಟ್ಟಂತೆ ಪರಿಶೀಲಿಸಿ, ಸಂಬಂದಪಟ್ಟ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಆದೇಶದಂತೆ ತುಂಗಭದ್ರಾ ಎಡದಂಡೆ ಕಾಲುವೆಗೆ ಭೇಟಿ ನೀಡಿ ಸರಿಯಾದ ಪ್ರಮಾಣದಲ್ಲಿ ನೀರಿನ ಹರಿವನ್ನು ಖಾತ್ರಿ ಪಡಿಸಿಕೊಂಡು 3 ಸಾವಿರ ಕ್ಯೂಸೆಕ್‌ನಂತೆ ತುಂಗಭದ್ರಾ ಎಡದಂಡೆ ಕಾಲುವೆಗಳಿಗೆ ಹರಿಸಲಾಗುತ್ತಿರುವ ನೀರು ಈಗಾಗಲೇ ವಿವಿಧ ಡಿಸ್ಟ್ರಿಬ್ಯೂಟಗಳಿಗೆ ಹಂಚಿಕೆಯಂತೆ ಹರಿಸುವುದರ ಜೊತೆಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ನಿಗಾವಹಿಸಬೇಕೆಂದು ಹೇಳಿದರು.
ತುಂಗಭದ್ರಾ ಎಡದಂಡೆ ಕಾಲುವೆ ನೀರು ಯಾವುದೇ ರೀತಿಯಲ್ಲಿ ಅನಾವಶ್ಯಕವಾಗಿ ವ್ಯಯ ಆಗದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಬೇಕೆಂದು ಸೂಚನೆ ನೀಡಿದರು. ಈಗಾಗಲೇ ನಿರ್ಧರಿಸಿದಂತೆ 3 ಸಾವಿರ ಕ್ಯೂಸೆಕ್ ನೀರನ್ನು ಪ್ರತಿದಿನ ಬಿಡಬೇಕು. ಸಂಬಂಧಿಸಿದ ಡಿಸ್ಟ್ರಿಬ್ಯೂಟಗಳಲ್ಲಿ ಈಗಾಗಲೇ ಆದೇಶಿಸಿದಂತೆ ಗೇಜ್‌ಗಳ ನಿಯಂತ್ರಣ ಮಾಡಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಬೇಕು. ಯಾವುದೇ ರೀತಿಯಲ್ಲಿ ನೀರು ಅನಾವಶ್ಯಕವಾಗಿ ವ್ಯಯ ಆಗದಂತೆ ನೋಡಿಕೊಳ್ಳಬೇಕೆಂದು ಎಂದರು.












Click it and Unblock the Notifications