ನಾಳೆಯಿಂದಲೇ ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರಿನ ಹರಿವು ಸ್ಥಗಿತ; ದಾವಣಗೆರೆ ಜಿಲ್ಲೆ ರೈತರಿಗೆ ಆತಂಕ
ದಾವಣಗೆರೆ, ನವೆಂಬರ್, 21: ಭದ್ರಾ ಜಲಾಶಯದಿಂದ ಮುಂಗಾರು ಬೆಳೆಗಳಿಗೆ ಬಲದಂಡೆ ಮತ್ತು ಎಡದಂಡೆ ಕಾಲುಗಳಲ್ಲಿ ಸೆಪ್ಟೆಂಬರ್ 6ರಿಂದ ನೀರು ಹರಿಸಲಾಗುತ್ತಿದ್ದು, ನೀರಾವರಿ ಸಲಹಾ ಸಮಿತಿ ಸಭೆಯ ತೀರ್ಮಾನದಂತೆ ನವೆಂಬರ್ 22 ರಿಂದ ಸ್ಥಗಿತಗೊಳ್ಳಲಿದೆ. ಆದ್ದರಿಂದ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ರೈತರು ಮತ್ತು ಸಂಬಂಧಪಟ್ಟವರು ಸಹಕರಿಸುವಂತೆ ಕರ್ನಾಟಕ ನೀರಾವರಿ ನಿಗಮದ ಭದ್ರಾ ಯೋಜನಾ ವೃತ್ತ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ಶೇಕಡ 70ರಷ್ಟು ಭದ್ರಾ ಅಚ್ಚುಕಟ್ಟು ಪ್ರದೇಶವಿದ್ದು, ರೈತರು ಸುಮಾರು 1.4 ಲಕ್ಷ ಎಕರೆಯಲ್ಲಿ ಭತ್ತದ ಬೆಳೆ ಬೆಳೆಸಿದ್ದಾರೆ. ನಿತ್ಯ ನೀರು ಬೇಡುವ ಭತ್ತದ ಬೆಳೆ ಉಳಿಸಿಕೊಳ್ಳಲು ರೈತರು ಎಲ್ಲಾ ನಮೂನೆಗಳ ಹೋರಾಟ ಮಾಡಿದ್ದರೂ ಸಹ ರಾಜ್ಯದ ಕಾಂಗ್ರೆಸ್ ಸರ್ಕಾರ ರೈತರ ಕೂಗಿಗೆ ಕ್ಯಾರೆ ಎನ್ನದೆ ಮತ್ತೆ ನೀರು ನಿಲುಗಡೆಗೆ ಮುಂದಾಗಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ಕೆಲ ದಿನಗಳ ಹಿಂದೆಯಷ್ಟೇ ಹರಿಹರ ಶಾಸಕ ಬಿ.ಪಿ.ಹರೀಶ್ ಅವರು ಕೆಪಿಸಿಸಿ ಅಧ್ಯಕ್ಷ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ನೂರು ದಿನಗಳ ಕಾಲ ನೀರು ಹರಿಸಲು ನಿರ್ಧರಿಸಲಾಗಿತ್ತು. ಮಳೆ ಬಂದ ಕಾರಣ ಮತ್ತೆ ನೀರು ಸ್ಥಗಿತಗೊಳಿಸಲಾಗಿತ್ತು. ಇನ್ನು ಹತ್ತು ದಿನಗಳ ಕಾಲ ಹೆಚ್ಚು ಅವಧಿ ನೀರು ಹರಿಸಬೇಕು ಎಂಬ ಮನವಿ ಮಾಡಿದ್ದರು. ಇದಕ್ಕೂ ಯಾವುದೇ ಸ್ಪಂದನೆ ದೊರೆತಿಲ್ಲ.
ದಾವಣಗೆರೆ ಜಿಲ್ಲೆಯಲ್ಲಿ ಹೆಚ್ಚಾಗಿ ರೈತರು ಭತ್ತ ಬೆಳೆದಿದ್ದಾರೆ. ಲಕ್ಷಾಂತರ ಟನ್‌ಗಟ್ಟಲೇ ಭತ್ತ ಆಗಲಿದ್ದು, ರೈತರು ಈಗ ಮತ್ತೆ ನಾಲೆಯಲ್ಲಿ ನೀರು ಸ್ಥಗಿತಗೊಳಿಸಿರುವ ಕಾರಣ ಆತಂಕಕ್ಕೆ ಒಳಗಾಗಿದ್ದಾರೆ. ಈಗ ಭತ್ತ ಕೈಗೆ ಬರುತ್ತಿದ್ದು, ಈಗ ನೀರಿನ ಅವಶ್ಯಕತೆ ಇದೆ. ಆದ್ದರಿಂದ ಸರ್ಕಾರವು ಭದ್ರಾ ಬಲದಂಡೆ ನಾಲೆಯಲ್ಲಿ ನೀರು ಹರಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಸಂಸತ್ ಸದಸ್ಯ ಜಿ.ಎಂ.ಸಿದ್ದೇಶ್ವರ ಅವರ ನೇತೃತ್ವದಲ್ಲಿ ರೈತರ ನಿಯೋಗ ಉಪಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಮತ್ತು ಭದ್ರಾ ನೀರಾವರಿ ಸಲಹಾ ಸಮಿತಿ (ಐ.ಸಿ.ಸಿ) ಅಧ್ಯಕ್ಷ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿ, ಭತ್ತದ ಬೆಳೆಯ ವಾಸ್ತವ ಸ್ಥಿತಿ ವಿವರಿಸಿ, ನಿರಂತರವಾಗಿ ನೀರು ಹರಿಸಬೇಕು ಎಂದು ಆಗ್ರಹಿಸಲಾಗಿತ್ತು.
ಸಂಸದರ ನೇತೃತ್ವದ ನಿಯೋಗದ ಆಗ್ರಹಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಡಿ.ಕೆ.ಶಿವಕುಮಾರ್ ಮತ್ತು ಮಧು ಬಂಗಾರಪ್ಪ ಅವರು ನೀರು ನಿಲುಗಡೆ ಮಾಡದೆ ನಿರಂತರ ನೀರು ಹರಿಸಲು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಮತ್ತು ಜಿಲ್ಲೆಯ ಎಲ್ಲಾ ಶಾಸಕರೊಂದಿಗೆ ಚರ್ಚಿಸಿ ತೀರ್ಮಾನಿಸುವುದಾಗಿ ಭರವಸೆ ನೀಡಿದ್ದರು. ಈಗ ಅವರು ಕೊಟ್ಟ ಭರವಸೆ ಹುಸಿಯಾಗಿದೆ.
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ದಾವಣಗೆರೆ ಜಿಲ್ಲೆಯಲ್ಲಿ ಭತ್ತ ಬೆಳೆದ ರೈತರ ಹಿತಾಸಕ್ತಿ ಕಾಪಾಡುವಲ್ಲಿ ಸಂಪೂರ್ಣ ನಿರಾಸಕ್ತಿ ವಹಿಸಿದರು. ಅವರ ಇಚ್ಚಾಶಕ್ತಿ ಕೊರತೆಯಿಂದ ಜಿಲ್ಲೆಯ ರೈತರ ಹೋರಾಟಕ್ಕೆ ಕಿಂಚಿತ್ತೂ ಮನ್ನಣೆ ಸಿಕ್ಕಿಲ್ಲ. ರೈತರು ಅವರನ್ನು ಭೇಟಿ ಮಾಡಿ ನೀರು ನಿಲುಗಡೆ ಮಾಡಿದಂತೆ ಪ್ರಯತ್ನಿಸಿ ಎಂದು ಗೋಗರೆದರೂ ಅವರು ಮೊಂಡುತನ ಮುರಿದು ಕಂಗಾಲಾದ ರೈತರ ಸಂಕಷ್ಟಕ್ಕೆ ಧಾವಿಸಲಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ.
ರೈತರ ಗಮನ ಬೇರೆಡೆಗೆ ಸೆಳೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡೋಣ ಅಂತಾ ಹೇಳಿ ತಪ್ಪಿಸಿಕೊಂಡರು. ಜಿಲ್ಲಾ ಉಸ್ತುವಾರಿ ಸಚಿವರ ಧೋರಣೆ ಸಂಪೂರ್ಣವಾಗಿ ರೈತ ವಿರೋಧಿಯಾಗಿದೆ. ರಾಜ್ಯದಲ್ಲಿ ತೀವ್ರ ಬರದ ಪರಿಣಾಮವಾಗಿ ವಿದ್ಯುತ್ ಕ್ಷಾಮ ತಲೆದೋರಿದೆ. ರಾಜ್ಯದ ಜನತೆ ಕೇಳದಿದ್ದರೂ ಎಲ್ಲರ ಮನೆಗಳಿಗೆ ತಿಂಗಳಿಗೆ 200 ಯೂನಿಟ್ ವಿದ್ಯುತ್ ಪುಕ್ಕಟೆ ಕೊಡುವುದಾಗಿ ಗ್ಯಾರಂಟಿ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಗೃಹ ಜ್ಯೋತಿ ಯೋಜನೆ ಜಾರಿ ಮಾಡಿದೆ.
ಇದರಿಂದ ವಿದ್ಯುತ್ ಬಳಕೆ ಪ್ರಮಾಣ ಹೆಚ್ಚಾಗಿದೆ. ಮಳೆ ಕೊರತೆಯಿಂದ ಜಲ ವಿದ್ಯುತ್ ಮತ್ತು ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಗಾಳಿಯೂ ಕಡಿಮೆ ಬಿಸಿಲು ಕಡಿಮೆ ಇರುವುದರಿಂದ ಪವನ ಮತ್ತು ಸೌರ ವಿದ್ಯುತ್ ಉತ್ಪಾದನೆಯು ಕುಂಠಿತವಾಗುತ್ತದೆ. ಕುಂಭಕರ್ಣ ಸರ್ಕಾರದ ನಿಷ್ಪ್ರಯೋಜಕ ವಿದ್ಯುತ್ ಸಚಿವರ ನಿರ್ಲಿಪ್ತ ಕಾರ್ಯಕ್ಷಮತೆಯಿಂದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಕಲ್ಲಿದ್ದಲು ದಾಸ್ತಾನು ಮಾಡಿಕೊಂಡಿಲ್ಲ. ಇದರಿಂದ ಶಾಖೋತ್ಪನ್ನ ವಿದ್ಯುತ್ ಉತ್ಪಾದನೆಯು ಸಮರ್ಪಕವಾಗಿಲ್ಲ ಎಂಬುದು ಭಾರತೀಯ ರೈತ ಒಕ್ಕೂಟದ ಆರೋಪ.












Click it and Unblock the Notifications