ಹೂಡಿಕೆ ಸಮ್ಮೇಳನ ವಿರೋಧಿಸಿ ಕತ್ತೆ ಸವಾರಿ
ಬೆಂಗಳೂರು, ಜೂ.1: ರಾಜ್ಯದಲ್ಲಿ ಜಾಗತಿಕ ಬಂಡವಾಳಹೂಡಿಕೆದಾರರ ಸಮಾವೇಶ ವಿರೋಧಿಸಿ ಜೂ. 2 ರಂದು ಕೆಂಪೇಗೌಡ ನಿಲ್ದಾಣದಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷ ಕತ್ತೆಗಳ ಸಮಾವೇಶವನ್ನು ಹಮ್ಮಿಕೊಳ್ಳಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ವಾಟಾಳ್ ನಾಗರಾಜ್ ತಿಳಿಸಿದರು.
ಈಗಾಗಲೇ ಬಂಡವಾಳ ಹೂಡಿಕೆದಾರರು ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ರೈತರ ಜಮೀನನ್ನು ಪಡೆದು ಅವರನ್ನು ಬೀದಿಪಾಲು ಮಾಡಿದ್ದಾರೆ. ಇದೀಗ ಮತ್ತೆ ಬಂಡವಾಳ ಹೂಡಿಕೆ ಹೆಸರಿನಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ಎಕರೆ ಪ್ರದೇಶವನ್ನು ಸರ್ಕಾರ ಹೂಡಿಕೆದಾರರಿಗೆ ಹಂಚಲು ಮುಂದಾಗುತ್ತಿರುವುದು ಖಂಡನೀಯ ಎಂದರು.
ನೆರೆ ಸಂತ್ರಸ್ತರಿಗೆ ಇಲ್ಲ ಸೂರು: ಸರ್ಕಾರದ ಈ ನೀತಿಯಿಂದ ಆಹಾರ ಉತ್ಪಾದನೆ ಕಡಿಮೆಯಾಗುತ್ತದೆ. ಬೆಂಗಳೂರಿನ ಜಾಗವನ್ನು ಖಾಸಗಿಯವರು ತಮ್ಮ ಸ್ವಂತ ಆಸ್ತಿ ಮಾಡಿಕೊಂಡಿದ್ದಾರೆ ಎಂದು ದೂರಿದರು. ಉತ್ತರ ಕರ್ನಾಟಕ ನೆರೆಹಾವಳಿಗೆ ತುತ್ತಾಗಿ 7-8 ತಿಂಗಳು ಕಳೆದಿದ್ದರೂ, ಇದುವರೆವಿಗೂ ಸರ್ಕಾರ ಯಾವುದೇ ಮನೆ ನಿರ್ಮಾಣ ಮಾಡಿಕೊಟ್ಟಿಲ್ಲ. ಅಲ್ಲಿನ ಜನರು ತಾತ್ಕಾಲಿಕ ಶೆಡ್‌ಗಳಲ್ಲಿ ವಾಸವಾಗಿದ್ದಾರೆ.
ಇದರಿಂದ ಹೆಣ್ಣು ಮಕ್ಕಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ದೂರಿದರು. ಯಾವುದೇ ಕಾರಣಕ್ಕೂ ಹೂಡಿಕೆದಾರರಿಗೆ ರೈತರ ಭೂಮಿಯನ್ನು ಬಿಟ್ಟಿಕೊಡುವುದಿಲ್ಲ. ಅದ್ದರಿಂದ ಈ ನೀತಿಯನ್ನು ವಿರೋಧಿಸಿ ಬುಧವಾರ ಬೆಳಗ್ಗೆ 11 ಗಂಟೆಗೆ ಕತ್ತೆಗಳ ಸಮಾವೇಶವನ್ನು ನಡೆಸಲು ತಿರ್ಮಾನಿಸಿದ್ದೇವೆ ಎಂದರು.











Click it and Unblock the Notifications