ಯಲಬುರ್ಗಾಕ್ಕೆ ಕೃಷ್ಣಾ ನದಿ ನೀರು; ಪ್ರಾಯೋಗಿಕ ಪರೀಕ್ಷೆ ಯಶಸ್ವಿ
ಕೊಪ್ಪಳ ಏತ ನೀರಾವರಿ ಯೋಜನೆಯು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರಡಿಯ ಒಂದು ಪ್ರಮುಖ ಉಪ ಯೋಜನೆ ಅನ್ವಯ ಯಲಬುರ್ಗಾ ತಾಲೂಕಿಗೆ ಕೃಷ್ಣಾ ನದಿ ನೀರು ಹರಿದು ಬಂದಿದೆ.
ಕೊಪ್ಪಳ, ಮಾರ್ಚ್ 03; ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಜನರಿಗೆ ಸಿಹಿಸುದ್ದಿ ಇದು. ತಾಲೂಕಿನ ಭೂತಾಯೊಡಲಿಗೆ ಕೃಷ್ಣಾ ನದಿ ನೀರು ಹರಿದು ಬಂದಿದೆ. ಅನ್ನದಾತರ ಬಹುದಿನಗಳ ಕನಸು ನನಸಾದಂತಾಗಿದೆ. ಕೃಷ್ಣಾ ನದಿ ನೀರು ಹರಿಸುವ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ. ರಾಜ್ಯದ ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಬಸಪ್ಪ ಆಚಾರ್ ಈ ಕ್ಷಣಕ್ಕೆ ಸಾಕ್ಷಿಯಾದರು.
ಯಲಬುರ್ಗಾ ತಾಲ್ಲೂಕಿನ ಹಗೆದಾಳನ ಜಾಕವೆಲ್ ಸಂಪ್ ವೀಕ್ಷಣೆ ಮಾಡಿದ ಬಳಿಕ ಸಚಿವ ಹಾಲಪ್ಪ ಬಸಪ್ಪ ಆಚಾರ್ ಪತ್ರಿಕಾಗೋಷ್ಠಿ ನಡೆಸಿದರು. "ಜಲಜಲ ಹರಿಯುವ ಬಿಸಿಲಿನ ಯಲಬುರ್ಗಾ ಭೂತಾಯೊಡಲಿಗೆ ಕೃಷ್ಣೆ ಹರಿದು ತಣಿಸಿದ್ದಾಳೆ. ಇದರಿಂದ ಕ್ಷೇತ್ರದ ಅನ್ನದಾತರ ಬಹುದಿನಗಳ ಕನಸು ನನಸಾದಂತಾಗಿದೆ. ಯಲಬುರ್ಗಾ ತಾಲೂಕಿಗೆ ಕೃಷ್ಣಾ ನದಿ ನೀರು ಹರಿಸುವ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ" ಎಂದರು.

ಕೊಪ್ಪಳ ಏತ ನೀರಾವರಿ ಯೋಜನೆಯು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರಡಿಯ ಒಂದು ಪ್ರಮುಖ ಉಪ ಯೋಜನೆ. ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ನೀರನ್ನು ಎರಡು ಹಂತದಲ್ಲಿ ಲಿಫ್ಟ್ ಮಾಡಿ ಕೊಪ್ಪಳ ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳ 1.12 ಲಕ್ಷ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈ ಯೋಜನೆಯ ಮೂಲಕ ಕುಷ್ಟಗಿ ತಾಲೂಕಿನ 43,760 ಹೆಕ್ಟೇರ್, ಯಲಬುರ್ಗಾ ತಾಲೂಕಿನ 45,320 ಹೆಕ್ಟೇರ್, ಕೊಪ್ಪಳ ತಾಲೂಕಿನ 3,200 ಹೆಕ್ಟೇರ್ ಮತ್ತು ಕನಕಗಿರಿ ತಾಲೂಕಿನ 4,000 ಹೆಕ್ಟೇರ್ ಪ್ರದೇಶವು ನೀರಾವರಿ ಕ್ಷೇತ್ರವಾಗಿ ಪರಿವರ್ತನೆಯಾಗಲಿದೆ.
ನೀರಾವರಿ ಯೋಜನೆ ವಿವರಗಳು; ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಅಡಿ ಕೊಪ್ಪಳ ಏತ ನೀರಾವರಿ ಯೋಜನೆಯನ್ನು ಎರಡು ಹಂತಗಳಲ್ಲಿ ಕೈಗೊಳ್ಳಲಾಗಿದೆ. 12.815 ಟಿಎಂಸಿ ನೀರು ಬಳಸಿ ಸಾಂಪ್ರದಾಯಿಕ ನೀರಾವರಿ ವ್ಯವಸ್ಥೆಯಾದ ಕಾಲುವೆ ಜಾಲ ಬದಲಾಗಿ ಸುಮಾರು 2.85 ಲಕ್ಷ ಎಕರೆ ಅಚ್ಚುಕಟ್ಟು ಕ್ಷೇತ್ರಕ್ಕೆ ಸೂಕ್ಷ್ಮ ನೀರಾವರಿ ವ್ಯವಸ್ಥೆ (ಮೈಕ್ರೋ ಇರಿಗೇಷನ್) ಯನ್ನು ಅಳವಡಿಸಲು ಯೋಜನೆ ರೂಪಿಸಲಾಗಿದೆ.
ಯೋಜನೆಯ ಒಂದನೇ ಹಂತದಲ್ಲಿ ಈ ಹಿಂದೆ ಬಸವಸಾಗರ ಹಿನ್ನೀರನ್ನು ಹುನಗುಂದ ತಾಲೂಕು ಮುರೋಳ ಗ್ರಾಮದಿಂದ ಎತ್ತಿ ಕುಷ್ಟಗಿ ತಾಲೂಕು ಕಲಾಲಬಂಡಿವರೆಗೆ ಹರಿಸಲಾಗಿತ್ತು. ಕಲಾಲಬಂಡಿಯಲ್ಲಿ ಶೇಖರಣೆಯಾದ ನೀರನ್ನು ಈಗ ಎರಡನೇ ಹಂತದಲ್ಲಿ ಕಲಾಲಬಂಡಿಯಿಂದ ಎತ್ತಿ ಹಗೇದಾಳ ಜಾಕವೆಲ್ ಪಂಪಹೌಸ್‌ವರೆಗೆ ಹರಿಸಲಾಗಿದೆ. ಇದರಿಂದಾಗಿ ಯಲಬುರ್ಗಾ ಕ್ಷೇತ್ರದ 12 ಕೆರೆಗಳಿಗೆ ಶೀಘ್ರದಲ್ಲಿಯೇ ನೀರು ಪೂರೈಸಲಾಗುತ್ತದೆ. ನೀರು ಹರಿಸುವ ಪ್ರಯೋಗವೂ ಯಶಸ್ವಿಯಾಗಿದೆ. ಯೋಜನೆಯ 1 ಹಾಗೂ 2ನೇ ಹಂತದ ಕಾಮಗಾರಿ ಬಹುತೇಕ ಪೂರ್ಣಗೊಂಡು ಈ ಯೋಜನೆಗೆ ಅನುಮೋದನೆ ನೀಡಲಾದ 3001.52 ಕೋಟಿ ರೂ. ಮೊತ್ತದಲ್ಲಿ 2655.62 ಕೋಟಿ ರೂ.ಗಳ ಶೇಕಡಾ 88.47 ರಷ್ಟು ಆರ್ಥಿಕವಾಗಿ ಪ್ರಗತಿ ಸಾಧಿಸಲಾಗಿದೆ.

ವಿವಿಧ ಕಾಮಗಾರಿಗಳು; ಕೊಪ್ಪಳ ಏತ ನೀರಾವರಿ ಯೋಜನೆಯ ಎರಡನೇ ಹಂತದ ಪ್ಯಾಕೇಜ್-2 ಮತ್ತು 3ರಲ್ಲಿ ಬರುವ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿಯ ಕೆ-ವೈ-ಕೆ ಮೇನ್ ನ ಮುಖ್ಯ ಕೊಳವೆ, ಕನಕಗಿರಿ ಹಾಗೂ ಯಲಬುರ್ಗಾ ಬ್ರಾಂಚ್, ಯಲಬುರ್ಗಾ ಫೀಡರ್ ಮತ್ತು ಕೊಪ್ಪಳ ಬ್ರಾಂಚ್ ಹಾಗೂ ಕೆರೆ ತುಂಬಿಸುವ ಟ್ಯಾಂಕ್ ಪೀಡರ್‌ಗಳ ಅಳವಡಿಕೆ ಜಾಕ್‌ವಲ್ ಮತ್ತು ಜಾಕ್‌ವಲ್ ವಿದ್ಯುತ್ ಸಂಪರ್ಕ ಟ್ರಾನ್ಸಮಿಷನ್ ಲೈನ್ ಕಾಮಗಾರಿಯು ಪೂರ್ಣಗೊಳ್ಳುವ ಹಂತದಲ್ಲಿದೆ. ಶೀಘ್ರ ಪ್ರಾಯೋಗಿಕವಾಗಿ ಕೆರೆಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದ್ದಾರೆ.
ಕಲಾಲಬಂಡಿ ಜಾಕವಲ್‌ಗೆ ಸಂಬಂಧಿಸಿದಂತೆ 110 ಕೆ.ವಿ.ವಿದ್ಯುತ್ ಸಂಪರ್ಕ ಕುಷ್ಟಗಿ-ಕಲಾಲಬಂಡಿ ಟ್ರಾನ್ಸಮಿಷನ್ ಲೈನನ್ನು 2023ರ ಫೆಬ್ರವರಿ 24 ರಂದು ಯಶಸ್ವಿಯಾಗಿ ಲೈನ್‌ಚಾರ್ಜ್ ಮಾಡಿ, ಕಲಾಲಬಂಡಿ 110ಕೆವಿ ಉಪಕೇಂದ್ರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿರುತ್ತದೆ. ಪ್ರತಿ ವರ್ಷ ಸತತ ಬರಗಾಲಕ್ಕೆ ಸಿಲುಕಿ ನಲುಗುವ ಯಲಬುರ್ಗಾ, ಕುಷ್ಟಗಿ ಕೊಪ್ಪಳ ತಾಲೂಕಗಳ ರೈತರಿಗೆ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ತಪ್ಪಿಸಲು ಮತ್ತು ನೀರಾವರಿಗೆ ಅನುಕೂಲವಾಗಲು ಕೊಪ್ಪಳ ಏತ ನೀರಾವರಿ ಯೋಜನೆಯ 3ನೇ ಹಂತದ ಕಾಮಗಾರಿಕೈಗೊಳ್ಳಲು ಆರ್ಥಿಕ ಸಹಾಯ ಮಾಡುವಂತೆ 2019ರಲ್ಲಿ ಅಂದಿನ ಮುಖ್ಯಮಂತ್ರಿಗಳಿಗೆ ಸಚಿವರು ಮನವಿ ಮಾಡಿದ್ದಾರೆ.
ಕೊಪ್ಪಳ ಏತ ನೀರಾವರಿ ಯೋಜನೆಯ ಒಂದನೇ ಹಾಗೂ ಎರಡನೇ ಹಂತದ ಕಾಮಗಾರಿಗಳ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ. ಹಗೇದಾಳ ಗ್ರಾಮದ ನೂತನ ಜಾಕ್ವೆಲ್‌ಗೆ ಕೃಷ್ಣ ನದಿಯ ನೀರು ಬಂದಿರುವುದನ್ನು ಕಂಡ ರೈತರು ಸಂತಷ ವ್ಯಕ್ತಪಡಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ಕಾರ್ಯಪಾಲಕ ಅಭಿಯಂತರರಾದ ಆರ್. ಡಿ. ಬಿರಾದಾರ, ತಹಶೀಲ್ದಾರ್ ವಿಠ್ಠಲ್ ಚೌಗಲಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂತೋಷ ಬಿರಾದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.












Click it and Unblock the Notifications