ಕೃಷಿ ವಿಶೇಷ: ಕರಾವಳಿ ಮಣ್ಣಿನಲ್ಲಿ ಕಲ್ಲಂಗಡಿ ಬೆಳೆದ ಕೃಷಿಕ; ಹೊಸ ಪ್ರಯೋಗಕ್ಕೆ ಭಾರೀ ಬೇಡಿಕೆ
ಉಡುಪಿ, ಮಾರ್ಚ್ 25: ಉಡುಪಿಯ ಪೇಟೆಂಟ್ ಪಡೆದ ತರಕಾರಿ ಯಾವುದೆಂದರೆ ಅದು ಮಟ್ಟುಗುಳ್ಳ. ಮಟ್ಟುಗುಳ್ಳ ಬಿಟ್ಟರೆ ಉಡುಪಿಯ ಭೂಮಿಯಲ್ಲಿ ರೈತರು ಬೇರೆ ತರಕಾರಿ ಕೃಷಿ ಮಾಡುತ್ತಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಪ್ರಯೋಗಶೀಲ ರೈತರೊಬ್ಬರು ಅದೇ ಭೂಮಿಯಲ್ಲಿ ಕಲ್ಲಂಗಡಿ ಕೃಷಿ ಮಾಡಿ ಖುಷಿ ಕಂಡಿದ್ದಾರೆ. ಕರಾವಳಿಯ ಮಣ್ಣಲ್ಲೂ ಕಲ್ಲಂಗಡಿ ಬೆಳೆಯಬಹುದು ಅಂತ ತೋರಿಸಿಕೊಟ್ಟಿದ್ದಾರೆ.
ಕರಾವಳಿ ಮಣ್ಣಲ್ಲಿ ಕೃಷಿಕರು ಕೆಲವೇ ಬಗೆಯ ತರಕಾರಿ, ಹಣ್ಣುಗಳನ್ನು ಮಾತ್ರ ಬೆಳೆಯುತ್ತಾರೆ. ಈ ಮಣ್ಣಿಗೆ ಇದೇ ಬೆಳೆ ಅಂತ ಕೆಲ ರೈತರು ಸೀಮಿತ ಮಾಡಿಕೊಳ್ಳುವುದೂ ಇದೆ. ಮಣ್ಣಿನ ಗುಣ, ಅತಿಯಾದ ಮಳೆ, ಜಾನುವಾರುಗಳ ಉಪಟಳವೂ ಇದಕ್ಕೆ ಕಾರಣವಾಗಿರಬಹುದು. ಆದರೆ ಇತ್ತೀಚಿನ ವರ್ಷಗಳಲ್ಲಿ ಕರಾಯ ಪ್ರಯೋಗಶೀಲ ರೈತರು ಹೊಸ ಹೊಸ ಬೆಳೆಯನ್ನು ಬೆಳೆದು ಸೈ ಅನ್ನಿಸಿಕೊಂಡ ಉದಾಹರಣೆ ಕಾಣಸಿಗುತ್ತಿದೆ.
ಉಡುಪಿ ಜಿಲ್ಲೆಯ ಮಟ್ಟುವಿನ ಪ್ರಗತಿಪರ ಕೃಷಿಕ ಯಶೋಧರ್ ಕಲ್ಲಂಗಡಿ ಹಣ್ಣು ಕರಾವಳಿಯ ಮಣ್ಣಿಗೂ ಸೈ ಅಂತಾ ತೋರಿಸಿಕೊಟ್ಟಿದ್ದಾರೆ. ಯಶೋಧರ್ ಈ ಹಿಂದೆ ಗದ್ದೆಗಳಲ್ಲಿ ಮಟ್ಟುಗುಳ್ಳವನ್ನು ಮಾತ್ರ ಬೆಳೆಯುತ್ತಿದ್ದರು. ಮಟ್ಟುಗುಳ್ಳ ಪೇಟೆಂಟ್ ಪಡೆದ ಕರಾವಳಿ ಏಕಮಾತ್ರ ತರಕಾರಿ ಕೂಡ ಆಗಿದೆ. ಆದರೆ ಹೆಚ್ಚಿನ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದ ಕೆಲವೊಮ್ಮೆ ಮಟ್ಟುಗುಳ್ಳ ಇಳುವರಿ ಸರಿಯಾಗಿ ಸಿಗುತ್ತಾ ಇರಲಿಲ್ಲ.

ಹೀಗಾಗಿ ಪ್ರಯೋಗಶೀಲ ಪ್ರಗತಿಪರ ಕೃಷಿ ಯಶೋಧರ ಅವರು ಕಲ್ಲಂಗಡಿ ಕೃಷಿ ಕೈ ಹಾಕಿದ್ದರು. ಮೊದಮೊದಲು ಸಣ್ಣ ಪ್ರದೇಶದಲ್ಲಿ ಕಲ್ಲಂಗಡಿ ಕೃಷಿ ಮಾಡಿ, ಸದ್ಯ ಎಕರೆಗಟ್ಟಲೇ ಭೂಮಿಯಲ್ಲಿ ಕಲ್ಲಂಗಡಿ ಬೆಳೆಯುತ್ತಿದ್ದಾರೆ. ಉಡುಪಿ ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಕರಾವಳಿ ಕಲ್ಲಂಗಡಿ ಅಂತ ಹೆಚ್ಚಿನ ಬೇಡಿಕೆಯಿದೆ.

ಯಶೋಧರ ಅವರ ಕಲ್ಲಂಗಡಿ ಪ್ರಯೋಗ ನೋಡಿದ ಅವರ ಊರಿನ ಅಕ್ಕಪಕ್ಕದ ಕೃಷಿಕರು ತಾವು ಕೂಡ ಕಲ್ಲಂಗಡಿ ಬೆಳೆ ಮಾಡುತ್ತಿದ್ದಾರೆ. ಒಂದು ಕಡೆ ಸಮುದ್ರ ಮತ್ತೊಂದು ಕಡೆ ನದಿ ಇರುವ ಮಟ್ಟುವಿನ ಉಪ್ಪುನೀರು ಮತ್ತು ಸಿಹಿ ನೀರು ಮಿಶ್ರಿತವಾದ ಭೂಮಿಯಲ್ಲಿ ಬೆಳೆದ ಕಲ್ಲಂಗಡಿ ಅತ್ಯಂತ ರುಚಿಕರವಾಗಿದೆ. ಸಾವಯವವಾಗಿ ಬೆಳೆಯುವ ಕಲ್ಲಂಗಡಿಯನ್ನು ವ್ಯಾಪಾರಿಗಳು ಮನೆಯಿಂದ ಖರೀದಿ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಕೇವಲ ಮಟ್ಟುಗುಳ್ಳ ತರಕಾರಿ ಬೆಳೆಗೆ ಮಾತ್ರ ಸೀಮಿತ ಆಗಿದ್ದ ಮಟ್ಟುವಿನ ಗದ್ದೆಗಳಲ್ಲಿ ಸದ್ಯ ಕಲ್ಲಂಗಡಿ ಹಣ್ಣು ಕಾಣಿಸಿಕೊಳ್ಳುತ್ತಿದೆ. ರೈತರು ಒಂದೇ ಬಗೆಯ ತರಕಾರಿ ಮಾಡುವುದಕ್ಕಿಂತ ಬೇರೆ ಬೇರೆ ಬೆಳೆಯ ಬಗ್ಗೆಯೂ ಯೋಚನೆ ಮಾಡಿದರೆ ಉತ್ತಮ ಆದಾಯ ಗಳಿಸಬಹುದು.












Click it and Unblock the Notifications