ತುಂಗಭದ್ರಾ ಡ್ಯಾಂ ನೀರಿನ ಮಟ್ಟ; ರೈತರಲ್ಲಿ ಮನವಿ ಏನು?
ಬಳ್ಳಾರಿ, ಅಕ್ಟೋಬರ್ 19: ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ಮುಂಗಾರು ಹಂಗಾಮಿನ ಬೆಳೆಗಳನ್ನು ಸಂರಕ್ಷಿಸಲು ಜಲಾಶಯದಲ್ಲಿ ಲಭ್ಯವಾಗಬಹುದಾದ ನೀರಿನ ಪ್ರಮಾಣವನ್ನು ಅಂದಾಜಿಸಿ ಕಾಲುವೆಗಳಿಗೆ ನೀರು ಹರಿಸಲು ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.
2023-24ನೇ ಸಾಲಿನ 119ನೇ ತುರ್ತು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರ ತೀರ್ಮಾನದಂತೆ ಕಾಲುವೆಗಳ ಮೂಲಕ ಮುಂಗಾರು ಹಂಗಾಮಿನ ಬೆಳೆಗಳನ್ನು ಸಂರಕ್ಷಿಸಲು ನೀರು ಹರಿಸಲು ನಿರ್ಧರಿಸಲಾಗಿದೆ.

ಸಭೆಯಲ್ಲಿ ತೀರ್ಮಾನ ಮಾಡಿದಂತೆ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಅ.1 ರಿಂದ ನ.30 ರವರೆಗೆ 4100 ಕ್ಯೂಸೆಕ್‌ನಂತೆ ಲಭ್ಯತೆ ಅನುಸಾರ ನೀರು ಹರಿಸಲಾಗುವುದು. ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಅ.01 ರಿಂದ ನ.10 ರವರೆಗೆ 1000 ಕ್ಯೂಸೆಕ್‌ನಂತೆ ಲಭ್ಯತೆ ಅನುಸಾರ ಹರಿಸಲಾಗುವುದು.
ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಅ.01 ರಿಂದ ನ.30 ರವರೆಗೆ 750 ಕ್ಯೂಸೆಕ್‌ನಂತೆ ನೀರು ಹರಿಸಲಾಗುವುದು. ರಾಯ ಬಸವಣ್ಣ ಕಾಲುವೆಗೆ ನ.01 ರಿಂದ ಡಿ.10 ರವರೆಗೆ 200 ಕ್ಯೂಸೆಕ್‌ನಂತೆ ನೀರು ಹರಿಸುವುದನ್ನು ಮುಂದುವರಿಸಲಾಗುವುದು.
ಪ್ರಸ್ತುತ ಆಧುನೀಕರಣ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿರುವುದರಿಂದ ಡಿ.10 ರಿಂದ 2024ರ ಫೆ.10 ರವರೆಗೆ ನೀರು ಸ್ಥಗಿತಗೊಳಿಸಲಾಗುವುದು. ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ನ.30 23 ಕ್ಯೂಸೆಕ್‌ನಂತೆ ನೀರುಜಲಾಶಯದ ನೀರಿನ ಮಟ್ಟ 1600 ಅಡಿ ತಲಪುವವರೆಗೆ ಅಥವಾ ಲಭ್ಯತೆ ಅನುಸಾರ ಮುಂಬರುವ ಒಳಹರಿವನ್ನು ಪರಿಗಣಿಸಿ ಮುಂದುವರಿಸಲಾಗುವುದು ಎಂದು ತಿಳಿಸಲಾಗಿದೆ.
ತುಂಗಭದ್ರಾ ಜಲಾಶಯದ ನೀರಿನ ಮಟ್ಟ 554.44 ಮೀ., ಒಟ್ಟು ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯ 151.75. ಅಕ್ಟೋಬರ್ 19ರ ನೀರಿನ ಮಟ್ಟ 43.81 ಟಿಎಂಸಿ ಅಡಿ. ಕಳೆದ ವರ್ಷ ಇದೇ ಸಮಯದಲ್ಲಿ 105.30 ಅಡಿ ನೀರಿನ ಸಂಗ್ರಹವಿತ್ತು.
ರೈತರಲ್ಲಿ ಮನವಿ ಏನು?; ತುಂಗಭದ್ರಾ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಮಿತವ್ಯಯವಾಗಿ ಬಳಸಿ ಅಧಿಕೃತ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದು ನಿಂತಿರುವ ನಿಗದಿತ ಬೆಳೆಗಳನ್ನು ಸಂರಕ್ಷಿಸಲು ಹಾಗೂ ಸಮರ್ಪಕ ನೀರು ನಿರ್ವಹಣೆಗೆ ಇಲಾಖೆಯೊಡನೆ ಸಹಕರಿಸಬೇಕು ಎಂದು ರೈತರಲ್ಲಿ ಮನವಿ ಮಾಡಲಾಗಿದೆ.
ಪ್ರಸಕ್ತ ಅಂದಾಜಿಸಿದ ನೀರಿನ ಪ್ರಮಾಣವು ತುಂಗಭದ್ರಾ ಜಲಾಶಯಕ್ಕೆ ಹರಿದು ಬರುವ ಒಳಹರಿವಿನ ಪ್ರಮಾಣದ ಮೇಲೆ ಅವಲಂಬಿತವಾಗಿದ್ದು, ಮುಂದೆ ಒಳ ಹರಿವಿನ ಪ್ರಮಾಣದಲ್ಲಿ ಕೊರತೆ ಉಂಟಾದಲ್ಲಿ ಪರಿಷ್ಕೃತ ಪ್ರಕಟಣೆಯನ್ನು ಪ್ರಕಟಿಸಲಾಗುವುದು ಎಂದು ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಮುನಿರಾಬಾದ್ ತುಂಗಭದ್ರಾ ಯೋಜನಾ ವೃತ್ತದ ಕನೀನಿನಿ ಅಧೀಕ್ಷಕ ಅಭಿಯಂತರ ಎಲ್. ಬಸವರಾಜ್ ತಿಳಿಸಿದ್ದಾರೆ.












Click it and Unblock the Notifications