ಕಬ್ಬನ್ ಪಾರ್ಕ್‌ನಲ್ಲಿ ಭಾನುವಾರ ವಾಹನ ಸಂಚಾರ ಶಾಶ್ವತ ನಿಷೇಧ
ಬೆಂಗಳೂರು, ಜೂ. 01 : ಕಬ್ಬನ್ ಪಾರ್ಕ್‌ನಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದ 'ಭಾನುವಾರದ ವಾಹನ ಸಂಚಾರ ನಿಷೇಧ' ಶಾಶ್ವತವಾಗಿ ಜಾರಿಗೆ ಬರಲಿದೆ. ತೋಟಗಾರಿಕಾ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ತೋಟಗಾರಿಕಾ ಸಚಿವ ಶಾಮನೂರು ಶಿವಶಂಕರಪ್ಪ ಹಸಿರು ನಿಶಾನೆ ನೀಡಿದ್ದಾರೆ.
ಸಚಿವ ಶಾಮನೂರು ಶಿವಶಂಕರಪ್ಪ ಅವರು ಮಾಧ್ಯಮಗಳಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಪ್ರತಿ ಭಾನುವಾರ ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರ ನಿಷೇಧಿಸುವ ಪ್ರಸ್ತಾವನಗೆ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ. ಸರ್ಕಾರಿ ರಜಾದಿನಗಳಲ್ಲಿಯೂ ಸಂಚಾರ ನಿಷೇಧಿಸುವ ಪ್ರಸ್ತಾಪ ಇಲಾಖೆ ಮುಂದಿದೆ ಎಂದು ಹೇಳಿದ್ದಾರೆ. [ಕಬ್ಬನ್ ಪಾರ್ಕಿನಲ್ಲಿ 'ಸಂಡೇ ಸಂಚಾರ' ಬಂದ್]

ತೋಟಗಾರಿಕಾ ಇಲಾಖೆ ಮತ್ತು ಬೆಂಗಳೂರು ಸಂಚಾರಿ ಪೊಲೀಸರು ಮೇ 24ರ ಭಾನುವಾರದಿಂದ ಮೂರು ವಾರಗಳ ಕಾಲ ಪ್ರಾಯೋಗಿಕವಾಗಿ ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರ ನಿಷೇಧಿಸಿದ್ದರು. ಇದಕ್ಕೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಇಲಾಖೆಯ ಕಾರ್ಯವನ್ನು ಜನರು ಸ್ವಾಗತಿಸಿದ್ದಾರೆ. [ವಾಹನ ಸಂಚಾರ ನಿಷೇಧ ಏಕೆ?]
ಮೇ 31ರ ಭಾನುವಾರ ಸಚಿವ ಶಾಮನೂರ ಶಿವಶಂಕರಪ್ಪ ಅವರು ಕಬ್ಬನ್ ಪಾರ್ಕ್‌ಗೆ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿನ ಜನರೊಂದಿಗೆ ಮಾತಕತೆ ನಡೆಸಿರುವ ಅವರು ವಾಹನ ಸಂಚಾರ ನಿಷೇಧದ ಕುರಿತು ಮಾಹಿತಿ ಸಂಗ್ರಹಣೆ ಮಾಡಿದ್ದಾರೆ.
ಕಬ್ಬನ್ ಪಾರ್ಕ್‌ನಲ್ಲಿ ಶಬ್ದ ಮತ್ತು ವಾಯು ಮಾಲಿನ್ಯ ತಡೆಗಟ್ಟಲು ವಾಹನ ಸಂಚಾರ ನಿಷೇಧಕ್ಕೆ ಅನುಮತಿ ನೀಡಬೇಕು ಎಂದು ತೋಟಗಾರಿಕಾ ಇಲಾಖೆ 2014ರ ಡಿಸೆಂಬರ್‌ನಲ್ಲಿ ಸರ್ಕಾರ ಮತ್ತು ಸಂಚಾರಿ ಪೊಲೀಸರಿಗೆ ಮನವಿ ಮಾಡಿತ್ತು. 2015ರಲ್ಲಿ ಅದು ಪ್ರಾಯೋಗಿಕವಾಗಿ ಜಾರಿಗೆ ಬಂದಿದೆ.
ಪ್ರತಿ ಭಾನುವಾರ ಪಾರ್ಕ್‌ನಲ್ಲಿ ವಾಹನ ಸಂಚಾರ ನಿಷೇಧಿಸುವ ಇಲಾಖೆ ಪ್ರಸ್ತಾವನೆಗೆ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದು, ಶೀಘ್ರದಲ್ಲೇ ಈ ಕುರಿತ ಆದೇಶ ಹೊರಬೀಳುವ ಸಾಧ್ಯತೆ ಇದೆ. ಇನ್ನು ಮುಂದೆ ಕಬ್ಬನ್ ಪಾರ್ಕ್‌ನಲ್ಲಿ ಪಾರಿವಾಳಗಳಿಗೆ ಭಾನುವಾರ ಶುದ್ಧಗಾಳಿ ದೊರೆಯಲಿದೆ.












Click it and Unblock the Notifications