ಚಿಕ್ಕಬಳ್ಳಾಪುರ: ಕಳೆದ ತಿಂಗಳು ಗಗನಕ್ಕೇರಿದ್ದ "ಆ" ಕೆಂಪು ಸುಂದ್ರಿಯ ಬೆಲೆ ಈಗ ಪಾತಾಳಕ್ಕೆ ಕುಸಿತ, ಅನ್ನದಾತ ಕಂಗಾಲು
ಚಿಕ್ಕಬಳ್ಳಾಪುರ, ಅಕ್ಟೋಬರ್, 02: ಕಳೆದ ಜುಲೈ-ಆಗಸ್ಟ್ ತಿಂಗಳಲ್ಲಿ ಬಂಗಾರದಂತೆ ಮೆರೆದಿದ್ದ ಕೆಂಪು ಸುಂದರಿ ಟೊಮೆಟೊ ಬೆಲೆ ಈಗ ಪಾತಾಳಕ್ಕೆ ಕುಸಿದಿದೆ. 1 ತಿಂಗಳ ಕಾಲ ಭಾರೀ ದರ ಏರಿಕೆಯಿಂದ ಟೊಮೆಟೊ ದೇಶದೆಲ್ಲೆಡೆ ಸುದ್ದಿ ಮಾಡಿತ್ತು. ಅದರಲ್ಲೂ ಟೊಮೆಟೊ ಬೆಳೆದ ಕೆಲ ರೈತರು ಕೋಟ್ಯಾಧಿ ಪತಿಗಳಾದ ಉದಾಹರಣೆಗಳು ಇವೆ.
ಒಂದೆರಡು ತಿಂಗಳು ಕಳೆಯುತ್ತಿದ್ದಂತೆ ಈಗ ಟೊಮೆಟೊ ದರ ಕಡಿಮೆಯಾಗಿದ್ದು ಸಾಮಾನ್ಯ ಅಂಗಡಿಗಳಲ್ಲಿ ಒಂದು ಟೀ-ಕಾಫಿಗೆ ಖರ್ಚಾಗುವ 10 ರೂಪಾಯಿಗೆ ಒಂದು ಕೆ.ಜಿ. ಟೊಮೆಟೊ ಮಾರಾಟವಾಗುತ್ತಿದೆ. ಇದರಿಂದ ಉತ್ತಮ ಬೆಲೆಯ ನಿರೀಕ್ಷೆಯಲ್ಲಿ ಟೊಮೆಟೊ ಬೆಳೆದ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಟೆಮೊಟೊ ಬೆಲೆಗಾರರಿಗೆ ಕೋಲಾರದಲ್ಲಿರುವ ಟೆಮೊಟೊ ಮಾರುಕಟ್ಟೆಯು ಅತಿದೊಡ್ಡ ಮಾರಾಟ ಕೇಂದ್ರವಾಗಿದೆ. ನಂತರದ ಸ್ಥಾನವು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಈ ಭಾಗದ ಎರಡನೇ ಅತಿದೊಡ್ಡ ಟೊಮೆಟೊ ಮಾರುಕಟ್ಟೆಯಾಗಿದೆ.
ಬಾಗೇಪಲ್ಲಿಯ ಎಪಿಎಂಸಿಯಲ್ಲಿ ಈ ಹಿಂದೆ 15 ಕೆ.ಜಿ ಬಾಕ್ಸ್ ಟೊಮೆಟೊ 2,900-3000 ರೂಪಾಯಿವರೆಗೂ ಮಾರಾಟವಾಗಿತ್ತು. ಬೆಲೆ ಏರಿಕೆಯಿಂದ ಗ್ರಾಹಕರು ಕಣ್ಣೀರು ಸುರಿಸಿದ್ದರು. ಆದರೆ ಈಗ ಟೊಮೆಟೊ ಬೆಲೆ ಪಾತಾಳಕ್ಕೆ ಕುಸಿದಿದ್ದು, ಗ್ರಾಹಕರು ನಿಟ್ಟುಸಿರು ಬಿಟ್ಟರೆ, ಟೊಮೆಟೊ ಬೆಳೆದ ರೈತರು ಕಣ್ಣೀರು ಸುರಿಸುವಂತಾಗಿದೆ.
ಉತ್ತಮ ಫಸಲು, ಬೇಡಿಕೆ ಕುಸಿತ
ಹೆಚ್ಚು ಮಳೆಯಾಗದ ಹಿನ್ನೆಲೆ ಟೆಮೊಟೊ ಬೆಳೆಯಲು ಯಾವುದೇ ತೊಂದರೆಯಾಗದ ಹಿನ್ನೆಲೆ ಬಹುತೇಕ ರೈತರು ಉತ್ತಮ ಬೆಳೆಯನ್ನು ಬೆಳೆದಿದ್ದು, ಉತ್ತಮ ಪಸಲು ಸಹ ಬಂದಿದೆ. ಹಾಗೆಯೇ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಮಾರುಕಟ್ಟೆಗೆ ಬರುತ್ತಿದೆ. ಮತ್ತು ಇತರ ರಾಜ್ಯಗಳಿಂದ ಬೇಡಿಕೆ ಕುಸಿದಿರುವುದು ಬೆಲೆ ಕುಸಿತಕ್ಕೆ ಕಾರಣವಾಗಿದೆ ಏನಾಲಾಗುತ್ತಿದೆ.
ಜುಲೈ ಮತ್ತು ಆಗಸ್ಟ್‌ನಲ್ಲಿ 2,500ರಿಂದ 2,900 ರೂಪಾಯಿಗೆ ಮಾರಾಟವಾಗುತ್ತಿದ್ದ 15 ಕೆ.ಜಿ. ಟೊಮೆಟೊ ಬಾಕ್ಸ್ ಈಗ ಕೇವಲ 70 ರಿಂದ 150 ರೂ.ಗೆ ಮಾರಾಟವಾಗುತ್ತಿದೆ. ಬೆಲೆ ಏರಿಕೆ ಇದೆ ಎಂದು ರೈತರು ದೊಡ್ಡ ಪ್ರಮಾಣದಲ್ಲಿ ಟೊಮೆಟೊ ಬೆಳೆದಿದ್ದರು. ಹೀಗಾಗಿ ಈಗ ಮಾರುಕಟ್ಟೆಯಲ್ಲಿ ರಾಶಿ ರಾಶಿ ಟೊಮೆಟೊ ಬಂದಿಳಿದಿದ್ದು, ರೈತರು ಬೆಳೆದ ಬೆಳೆಗೆ ಚಿನ್ನದ ಬೆಲೆ ಸಿಗದಿದ್ದರೂ ಪರವಾಗಿಲ್ಲ ಕನಿಷ್ಠ ಬೆಲೆ ಸಿಕ್ಕರೆ ಸಾಕು ಎಂಬಂತಾಗಿದೆ ಈಗಿನ ಟೊಮೆಟೊ ಬೆಳೆದ ರೈತರ ಪರಸ್ಥಿತಿ.
ಸರ್ಕಾರ ನೆರವಿಗೆ ಬರಬೇಕು
ಬೆಲೆ ಹೆಚ್ಚಳಗೊಂಡಾಗ ಗ್ರಾಹಕರಿಗೆ ಹೊರೆಯಗದಂತೆ ಬೆಲೆ ನಿಯಂತ್ರಣದಂತಹ ಕ್ರಮ ತೆಗೆದುಕೊಳ್ಳುವ ಸರ್ಕಾರಗಳು, ಬೆಳೆ ಬೆಳೆದರೂ ಬೆಲೆ ಕಳೆದುಕೊಂಡಾಗ ಕನಿಷ್ಠ ದರ ನಿಗದಿಗೊಳಿಸಲಿ. ಈ ಮೂಲಕ ನಮ್ಮ ನೆರವಿಗೂ ಸರ್ಕಾರ ಬರಲಿ ಎಂದು ಟೆಮೊಟೊ ಬೆಳೆಗರಾರು ಅಗ್ರಹಿಸಿದ್ದಾರೆ. ಹಾಗೆಯೇ ರೈತರು ಕಷ್ಟಪಟ್ಟು ಮೂರು ತಿಂಗಳು ದುಡಿಮೆಯ ಪ್ರತಿಫಲವಾಗಿ ಬೆಳೆ ಬರುತ್ತದೆ. ಹೀಗೆ ಬೆಳೆ ಬಂದಂತಹ ಸಂದರ್ಭದಲ್ಲಿ ತಮ್ಮ ಬೆಳೆಗಳಿಗೆ ಬೆಲೆ ಸಿಗದಿದ್ದಾಗ ಬೆಳೆಯನ್ನು ಇಂತಿಷ್ಟು ದಿನಗಳ ಕಾಲ ಎಂದು ಸಂರಕ್ಷಿಸಿಕೊಳ್ಳಲು ಕೋಲ್ಡ್ ಸ್ಟೋರೇಜ್‌ಗಳನ್ನ ನಿರ್ಮಿಸುವಂತೆ ಆಗ್ರಹಿಸಿದ್ದಾರೆ.












Click it and Unblock the Notifications