Tomato Price: ಟೊಮ್ಯಾಟೋ ಬೆಳೆಯಲು ಹೊರಟಿದ್ದೀರಾ? ಇದನ್ನೊಮ್ಮೆ ಓದಿ
ಟೊಮ್ಯಾಟೋ ಎನ್ನುವ ಕೆಂಪು ಸುಂದರಿಗೆ ಈಗ ಬಂಗಾರದ ಬೆಲೆ ಬಂದಿದೆ. ಟೊಮ್ಯಾಟೋ ಬಗ್ಗೆ ಮಾಧ್ಯಮಗಳಲ್ಲಿ ಅತಿ ರಂಜಿತ ವರದಿಗಳು ಕೂಡ ಬರುತ್ತಿವೆ. ಟೊಮ್ಯಾಟೋ ಬೆಳೆದು ಅಲ್ಲೊಬ್ಬ ರೈತ ಅಷ್ಟು ಲಕ್ಷ, ಇಷ್ಟು ಕೋಟಿ ಗಳಿಸಿದ ಎಂದೆಲ್ಲಾ ವರದಿಯಾಗುತ್ತಿದೆ. ಹೌದು, ಇಂದಿನ ಬೆಲೆಯಲ್ಲಿ ರೈತ ಲಕ್ಷಗಟ್ಟಲೆ ಹಣ ದುಡಿದಿರುವುದು ನಿಜ. ಹಾಗಂತ, ನೀವೂ ಕೂಡ ಲಕ್ಷ, ಕೋಟಿಯ ಆಸೆಗೆ ಟೊಮ್ಯಾಟೋ ಬೆಳೆಯಲು ಹೊರಟಿದ್ದೀರಾ? ಈ ಸ್ಟೋರಿಯನ್ನೊಮ್ಮೆ ಓದಿ.
ಟೊಮ್ಯಾಟೋ, ಈರುಳ್ಳಿ ರೈತನಿಗೆ ಎಷ್ಟು ಲಾಭ ತಂದುಕೊಡುವ ಬೆಳೆಗಳೋ ಅಷ್ಟೇ ನಷ್ಟವನ್ನು ಕೂಡ ಉಂಟು ಮಾಡುತ್ತವೆ. ಹಲವು ಬಾರಿ ಕೊಳ್ಳುವವರೇ ಇಲ್ಲದೆ ಈರುಳ್ಳಿ ಹೊಲದಲ್ಲೇ ಕೊಳೆಯಲು ಬಿಟ್ಟದ್ದನ್ನು ನೋಡಿದ್ದೇವೆ. ಇನ್ನು ಅದೆಷ್ಟು ಬಾರಿ ರೈತರು ಟೊಮ್ಯಾಟೋ ಬೆಲೆ ಕುಸಿತದಿಂದ ಕಂಗಾಲಾಗಿ ರಸ್ತೆಗೆ ಸುರಿದು ಹೋಗಿದ್ದನ್ನು ನೋಡಿದ್ದೇವೆ.

ಈಗ ಬೆಲೆ ಹೆಚ್ಚಾಗಿದೆ, ಎಲ್ಲರಿಗೂ ಟೊಮ್ಯಾಟೋ ಬೆಳೆಯುವ ಉತ್ಸಾಹ ಬಂದಿರುತ್ತದೆ. ಮಿತಿ ಮೀರಿ ಟೊಮ್ಯಾಟೋ ಬೆಳೆಯುವುದರಿಂದ ಒಮ್ಮೆಲೆ ದರ ಕುಸಿಯುವ ಭೀತಿ ಕೂಡ ಇದೆ. ಈ ಮೊದಲು ಕೂಡ ಹಲವು ಬಾರಿ ಈ ರೀತಿ ಆಗಿದೆ, ಬೆಲೆ ಹೆಚ್ಚಾಗಿದೆ ಎಂದು ಎಲ್ಲರೂ ಟೊಮ್ಯಾಟೋ ಬೆಳೆದರೆ ದರ ಪಾತಾಳಕ್ಕೆ ಕುಸಿಯುತ್ತದೆ. ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಟೊಮ್ಯಾಟೋ ಬೆಳೆಯುವ ರೈತ ಮತ್ತೆ ಕೈಸುಟ್ಟುಕೊಳ್ಳಬೇಕಾಗುತ್ತದೆ.
ಹಾಗಾದ್ರೆ ಟೊಮ್ಯಾಟೋ ಬೆಳೆಯುವುದು ಬೇಡವಾ?
ದರ ತೀವ್ರ ಕುಸಿತವಾಗುತ್ತದೆ ಎಂದು ಟೊಮ್ಯಾಟೋ ಬೆಳೆಯುವುದೇ ಬೇಡವಾ ಎನ್ನುವ ಪ್ರಶ್ನೆ ಮೂಡಬಹುದು. ಆದರೆ ಬರೀ ಟೊಮ್ಯಾಟೋ ಒಂದನ್ನೇ ಬೆಳೆಯುವ ಬದಲು ಮಿಶ್ರ ಬೆಳೆಗಳ ಕಡೆಗೆ ಗಮನ ಕೊಡುವುದು ಒಳ್ಳೆಯದು. ಅಕಸ್ಮಾತ್ ಟೊಮ್ಯಾಟೋ ದರ ಕುಸಿದರು ಮತ್ತೊಂದು ಬೆಳೆಗೆ ಲಾಭ ಸಿಕ್ಕರೆ ನಷ್ಟವನ್ನು ಸರಿದೂಗಿಸಿಕೊಳ್ಳಬಹುದು.
ಒಂದೇ ಬಾರಿ ಎಕರೆಗಟ್ಟೆಲೆ ಟೊಮ್ಯಾಟೋ ಬೆಳೆಯುವ ಬದಲು, ಹಲವು ಬ್ಯಾಚ್‌ಗಳಲ್ಲಿ ಟೊಮ್ಯಾಟೋ ಬೆಳೆಯುವ ಬಗ್ಗೆ ಕೂಡ ರೈತ ಚಿಂತಿಸಬಹುದು. ರೈತ ಟೊಮ್ಯಾಟೋ ಬೆಳೆದು ಲಕ್ಷಗಟ್ಟಲೆ ಲಾಭ ಪಡೆದ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಓದಬಹುದು, ಆದರೆ ರಸ್ತೆಗೆ ಟೊಮ್ಯಾಟೋ ಸುರಿದ ಘಟನೆಗಳು ಕೂಡ ಇಲ್ಲೇ ಇವೆ ಎನ್ನುವುದನ್ನು ಮರೆಯಬಾರದು.
ಟೊಮ್ಯಾಟೋ ಹೆಚ್ಚು ಬಂಡವಾಳ ಮತ್ತು ಶ್ರಮ ಬೇಡುವ ಬೆಳೆ. ಅದರಲ್ಲೂ ಹಳದಿ ಸುರುಳಿ ರೋಗ, ಎಲೆ ಮುದುರು ರೋಗ ಟೊಮ್ಯಾಟೋ ಬೆಳೆಯನ್ನು ತೀವ್ರವಾಗಿ ಬಾಧಿಸುತ್ತಿದೆ. 10 ಬಾರಿ ಕಟಾವು ಮಾಡುವ ಕಡೆ ಕೇವಲ 3-4 ಬಾರಿ ಮಾತ್ರ ಕಟಾವು ಮಾಡುತ್ತಿದ್ದಂತೆ ಗಿಡಗಳು ಒಣಗುತ್ತಿವೆ. ಹೆಚ್ಚಿನ ಔಷಧಿ, ಗೊಬ್ಬರ ಬೇಕಾಗುತ್ತದೆ.
ಬೆಲೆ ಏರಿಕೆಯಾಗುತ್ತಿದ್ದಂತೆ ದೇಶದ ಹಲವು ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಟೊಮ್ಯಾಟೋ ನಾಟಿ ಮಾಡಿರುತ್ತಾರೆ. ಇದೇ ಕಾರಣಕ್ಕೆ ರೈತರು ಹೆಚ್ಚಿನ ಪ್ರಮಾಣದಲ್ಲಿ ಟೊಮ್ಯಾಟೋ ಬೆಳೆಯುವ ಬದಲು, ಬ್ಯಾಚ್‌ಗಳಲ್ಲಿ, ಮಿಶ್ರಬೆಳೆ ಪದ್ಧತಿಯಲ್ಲಿ ಬೆಳೆದರೆ ಉತ್ತಮ ಎನ್ನುವುದು ತಜ್ಞರ ಅಭಿಪ್ರಾಯ.












Click it and Unblock the Notifications