ಟೊಮೆಟೋ ಬೆಲೆ ಹೆಚ್ಚಳಕ್ಕೆ ಕೋಲಾರ ಕಾರಣ! ಹೆಚ್ಚು ಬೆಲೆ ಇದ್ದರೂ ನಷ್ಟದ ಭೀತಿಯಲ್ಲಿ ರೈತರು
ಕೋಲಾರ, ಜೂನ್ 3: ಭಾರತದಾದ್ಯಂತ ಟೊಮೆಟೋ ಬೆಲೆಯಲ್ಲಿ ದಿಢೀರ್ ಹೆಚ್ಚಳವಾಗಿದೆ. ಹಲವು ರಾಜ್ಯಗಳಲ್ಲಿ ಟೊಮೆಟೋ ಬೆಲೆ 100 ರೂಪಾಯಿ ಗಡಿ ದಾಟಿದೆ. ಬೆಂಗಳೂರಿನಲ್ಲಿ ಕೂಡ ಟೊಮೆಟೋ ಬೆಲೆ 100 ರೂಪಾಯಿ ದಾಟಿದೆ. ದೇಶದಲ್ಲಿ ಅತಿ ಹೆಚ್ಚು ಟೊಮೆಟೋ ಬೆಳೆಯುವ ಕೋಲಾರ ಜಿಲ್ಲೆಯೇ ಈ ದಿಢೀರ್ ದರ ಏರಿಕೆಗೆ ಕಾರಣ!.
ಹೌದು, ಇಡೀ ದೇಶಕ್ಕೆ ಟೊಮೆಟೋ ಪೂರೈಸುವ ಪ್ರಮುಖ ಮಾರುಕಟ್ಟೆಗಳಲ್ಲಿ ಕೋಲಾರ ಕೂಡ ಒಂದು. ಹಳ್ಳಿಯಿಂದ ದಿಲ್ಲಿಯವರೆಗೆ ಕೋಲಾರದ ಟೊಮೆಟೋ ತಲುಪುತ್ತದೆ. ಆದರೆ, ಕೋಲಾರ ಮಾರುಕಟ್ಟೆಯಲ್ಲಿ ಟೊಮೆಟೋ ಆವಕ ಕಡಿಮೆಯಾಗುತ್ತಿದೆ.

ಜೂನ್ ತಿಂಗಳಿಂದ ಸೆಪ್ಟೆಂಬರ್ ತಿಂಗಳವರೆಗೆ ಅತಿ ಹೆಚ್ಚು ಟೊಮೆಟೋ ಪೂರೈಸುವುದು ಕೋಲಾರ. ಇಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಗೆ ಟೊಮೆಟೋ ಆವಕ ಭಾರಿ ಕುಸಿತ ಕಂಡಿದೆ. 2023ರ ಜೂನ್‌ನಲ್ಲಿ ಇಲ್ಲಿನ ಎಪಿಎಂಸಿಗೆ ಕೇವಲ 3.2 ಲಕ್ಷ ಕ್ವಿಂಟಾಲ್ ಟೊಮೆಟೋ ಬಂದಿದೆ. 2022ರ ಜೂನ್‌ನಲ್ಲಿ 5.45 ಲಕ್ಷ ಕ್ವಿಂಟಾಲ್ ಟೊಮೆಟೋ ಮಾರುಕಟ್ಟೆಗೆ ಬಂದಿತ್ತು. 2021ರ ಜೂನ್‌ನಲ್ಲಿ ಇದು 9.37 ಲಕ್ಷ ಕ್ವಿಂಟಾಲ್ ತಲುಪಿತ್ತು.
ರೈತರ ನೆಮ್ಮದಿ ಕಸಿದುಕೊಂಡ ವೈರಾಣು!
ಕೋಲಾರದಲ್ಲಿ ಹಲವು ಕಾರಣಗಳಿಂದ ರೈತರು ಟೊಮೆಟೋ ಬಳೆಯಿಂದ ಹಿಂದೆ ಸರಿಯುತ್ತಿದ್ದಾರೆ. ಹಲವು ರೈತರು ಟೊಮೆಟೋ ಬೆಳೆಯುತ್ತಿದ್ದರು ರೋಗದ ಕಾರಣ ಇಳುವರಿ ಕಡಿಮೆಯಾಗಿದೆ. ಕೋಲಾರ ಮತ್ತು ನೆರೆಯ ಜಿಲ್ಲೆಗಳಲ್ಲಿ ಈ ಬಾರಿ ಇಳುವರಿ ಕಡಿಮೆಯಾಗಲು ಎಲೆ ಸುರುಳಿ ರೋಗ (ಲೀಫ್ ಕರ್ಲ್ ವೈರಸ್) ಕಾರಣ ಎಂದು ರೈತರು ಹೇಳಿದ್ದಾರೆ.
ಒಮ್ಮೆ ಟೊಮೆಟೋ ನಾಟಿ ಮಾಡಿದರೆ 65-70 ದಿನಗಳ ನಂತರ ಸುಮಾರು 45 ದಿನಗಳ ಕಾಲ ಟೊಮೆಟೋ ಕೊಯ್ಲು ಮಾಡಬಹುದು. ಅಂದರೆ ಒಂದು ಬೆಳೆಯಲ್ಲಿ ಕನಿಷ್ಠ 15 ಬಾರಿ ಟೊಮೆಟೊ ಕಟಾವು ಮಾಡಬಹುದು. ಆದರೆ ಈ ಬಾರಿ ಎಲೆ ಸುರುಳಿ ರೋಗದಿಂದ ಗಿಡಗಳು ಒಣಗುತ್ತಿದ್ದು, 3-5 ಬಾರಿ ಮಾತ್ರ ಟೊಮೆಟೊ ಕೊಯ್ಲು ಮಾಡಲಾಗುತ್ತಿದೆ.

ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರ (ICAR-IIHR)ದ ವಿಜ್ಞಾನಿಗಳು ಕೋಲಾರ ಜಿಲ್ಲೆಯ ವಿವಿಧ ಟೊಮೆಟೋ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಎಲೆ ಸುರುಳಿ ರೋಗ ವೈರಾಣು ಈ ಬಾರಿ ಅರ್ಧಕ್ಕಿಂತ ಹೆಚ್ಚಿನ ಬೆಳೆಯ ಮೇಲೆ ಪರಿಣಾಮ ಬೀರಿದೆ ಎಂದು ಖಚಿತಪಡಿಸಿದ್ದಾರೆ.
ಬೆಳೆಯ ಗುಣಮಟ್ಟ ಕುಸಿತ!
ಕೋಲಾರ ಟೊಮೆಟೋ ಪ್ರಸಿದ್ಧಿ ಪಡೆಯಲು ಮುಖ್ಯ ಕಾರಣ ಅದರ ಗುಣಮಟ್ಟ ಮತ್ತು ಬಾಳಿಕೆ ಅವಧಿ. ದೂರದ ಊರುಗಳಿಗೆ ಸರಬರಾಜು ಮಾಡಲು ಹೆಚ್ಚಿನ ದಿನ ಹಣ್ಣು ಗುಣಮಟ್ಟ ಕಾಪಾಡಿಕೊಳ್ಳಬೇಕು. ಕೋಲಾರ ಟೊಮೆಟೋ 72 ಗಂಟೆಗಳ ಗಟ್ಟಿಯಾಗಿ ಇರುವ ಸಾಮರ್ಥ್ಯ ಹೊಂದಿದ್ದರಿಂದಲೇ ದೂರದ ದೆಹಲಿವರೆಗೂ ತಲುಪಲು ಸುಲಭವಾಗಿತ್ತು. ಆದರೆ ಈಗ ಬರುತ್ತಿರುವ ಟೊಮೆಟೋ 52 ಗಂಟೆಗಳ ನಂತರ ಗುಣಮಟ್ಟವನ್ನು ಕಳೆದುಕೊಳ್ಳುತ್ತಿದೆ ಎಂದು ಡಿಹೆಚ್ ವರದಿ ಮಾಡಿದೆ.
ಕೋಲಾರ ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ಎನ್. ಮಾತನಾಡಿ, "ಉತ್ತಮ ಗಾತ್ರ, ಬಣ್ಣ ಮತ್ತು ಗುಣಮಟ್ಟ ಹೊಂದಿರುವ ಟೊಮೆಟೋ ಮಾರುಕಟ್ಟೆಗೆ ಬರುತ್ತಿಲ್ಲ. ಈ ಮೊದಲು ಜೂನ್‌ನಲ್ಲಿ ಪ್ರತಿದಿನ 2.5-3 ಲಕ್ಷ ಬಾಕ್ಸ್ ಟೊಮೆಟೋ ಪೂರೈಕೆ ಮಾಡುತ್ತಿದ್ದೆವು. ಆದರೆ ಜೂನ್ 29ರಂದು ದೇಶದ 10 ರಾಜ್ಯಗಳಿಗೆ 29 ಟ್ರಕ್ ಲೋಡ್ (68,912 ಬಾಕ್ಸ್) ಟೊಮೆಟೊವನ್ನು ಮಾತ್ರ ಪೂರೈಸಿದೆ. ಬಾಂಗ್ಲಾದೇಶ, ಶ್ರೀಲಂಕಾ ದೇಶಗಳಿಗೂ ಇಲ್ಲಿಂದಲೇ ಟೊಮೆಟೋ ಸರಬಾರಜಾಗುತ್ತದೆ" ಎಂದು ಹೇಳಿದ್ದಾರೆ.
ಬೆಲೆ ಮತ್ತಷ್ಟು ಏರಿಕೆ ಸಾಧ್ಯತೆ!
ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಟೊಮೆಟೊ ಬೆಲೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಈಗ ಸಸಿಗಳನ್ನು ನಾಟಿ ಮಾಡಿದರು ಕೊಯ್ಲಿಗೆ ಬರು 70-80 ದಿನಗಳನ್ನು ತೆಗೆದುಕೊಳ್ಳುತ್ತದೆ. ಇನ್ನು ಹವಾಮಾನ ಕೈಕೊಟ್ಟರೆ ಬರುವ ಬೆಳೆಯೂ ಕೈಸೇರುವ ಬಗ್ಗೆ ಗ್ಯಾರಂಟಿ ಇಲ್ಲ. ಈ ಸಮಯದಲ್ಲಿ ಭಾರತದ ಯಾವ ಭಾಗದಲ್ಲಿ ಕೂಡ ಈ ಪ್ರಮಾಣದಲ್ಲಿ ಟೊಮೆಟೋ ಬೆಳೆಯುವುದಿಲ್ಲ ಕಾರಣ ಅಲ್ಲಿನ ಹವಾಮಾನ ಪರಿಸ್ಥಿತಿ.
"ಜೂನ್‌ನಲ್ಲಿ ಒಂದು ಬಾಕ್ಸ್‌ಗೆ ಟೊಮೆಟೊ ಬೆಲೆ 300 ರಿಂದ 1,250 ರೂ.ಗಳ ನಡುವೆ ಇದ್ದರೆ, ಈ ವರ್ಷ ಅದು 350-ರೂ. 1,500 ರಷ್ಟಿದೆ, ಭಾನುವಾರ ಒಂದು ಬಾಕ್ಸ್ ಟೊಮೆಟೋ ದರ 1700 ರೂಪಾಯಿಗೆ ಮುಟ್ಟಿದೆ" ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ.
ಬೆಲೆ ಹೆಚ್ಚಾದರೂ ರೈತರಿಗೆ ನಷ್ಟದ ಭೀತಿ!
ಬೆಲೆ ಗಗನಕ್ಕೇರಿದೆ ರೈತರು ಲಕ್ಷ ಲಕ್ಷ ದುಡಿಯುತ್ತಾರೆ ಎಂದು ನೀವು ಭಾವಿಸಿದರೆ ನಿಜವಾದ ಪರಿಸ್ಥಿತಿಯೇ ಬೇರೆ ಇದೆ. ರೋಗದ ಕಾರಣ ಇಳುವರಿ ಭಾರಿ ಕಡಿಮೆಯಾಗಿದ್ದು ಹೆಚ್ಚಿನ ದರ ಸಿಕ್ಕರೂ ರೈತರು ಲಾಭ ನೋಡುವುದು ದುಸ್ತರವಾಗಿದೆ. ಒಂದು ಎಕರೆ ಟೊಮೆಟೋ ಕೃಷಿ ಮಾಡಲು ಕೆಲವು ರೈತರು ಲಕ್ಷ ಲಕ್ಷ ಸುರಿದಿದ್ದಾರೆ. ರೋಗದ ಕಾರಣ ಕೀಟ ನಾಶಕ ಸಿಂಪಡನೆಗೆ ಖರ್ಚು ದುಪ್ಪಟ್ಟಾಗಿದೆ.
''ಕೆಸಿ ವ್ಯಾಲಿ ಯೋಜನೆಯಿಂದ ಕೋಲಾರದ ಟೊಮೇಟೊ ಹೊಲಗಳಲ್ಲಿ ಕ್ರಿಮಿಕೀಟಗಳ ಕಾಟ ಹೆಚ್ಚಿದೆ. ಅಲ್ಲದೆ, ತೋಟಗಾರಿಕೆ ಇಲಾಖೆ ರೈತರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು. ಎಲೆ ಸುರುಳಿ ರೋಗ ಆರು ತಿಂಗಳ ಹಿಂದೆ ಕಾಣಿಸಿಕೊಂಡಿತ್ತು; ಇಲಾಖೆ ಪರಿಹಾರ ಕಂಡುಕೊಂಡಿದ್ದರೆ ನಾವು ಈ ದುಸ್ಥಿತಿಯನ್ನು ಅನುಭವಿಸಬೇಕಾಗುತ್ತಿರಲಿಲ್ಲ" ಎಂದು ಶಿವಪ್ಪ ಎನ್ನುವ ರೈತರು ಹೇಳಿದ್ದಾರೆ ಎಂದು ಡಿಹ್ ಹೇಳಿದೆ.
ಈ ವರ್ಷ ಕೋಲಾರ, ಚಿಕ್ಕಬಳ್ಳಾಪುರದ ಬಹುತೇಕ ಎಲ್ಲ ಭಾಗಗಳಲ್ಲಿ ರೋಗ ಬಾಧೆ ಕಾಣಿಸಿಕೊಂಡಿದ್ದು, ಶೇ 50ರಷ್ಟು ಬೆಳೆ ನಷ್ಟವಾಗಿದೆ ಎಂದು ಕೋಲಾರದ ತೋಟಗಾರಿಕೆ ಉಪನಿರ್ದೇಶಕ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.
"ಹೆಚ್ಚಿನ ತಾಪಮಾನ ಮತ್ತು ಮಳೆ ಕಡಿಮೆಯಾದ ಕಾರಣ ಬಿಳಿ ನೊಣದ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ ಇದು ಎಲೆ ಸುರುಳಿ ರೋಗ ಹೆಚ್ಚಲು ಕಾರಣವಾಗಿದೆ. ಜೂನ್‌ನಿಂದ ಆಗಸ್ಟ್‌ನಿಂದ ಕೋಲಾರದಲ್ಲಿ ಹೆಚ್ಚಿನ ಟೊಮೆಟೋ ಬೆಳೆಯುತ್ತಾರೆ. ಈ ರೋಗ ರೈತರಿಗೂ ನಷ್ಟವನ್ನು ಉಂಟು ಮಾಡುವುದರಿಂದ, ವೈವಿಧ್ಯಮಯ ಬೆಳೆ ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ" ಎಂದರು.












Click it and Unblock the Notifications