ಭತ್ತದ ಬೆಳೆಯಲ್ಲಿ ಬೆಂಕಿ ರೋಗ; ನಿಯಂತ್ರಣಕ್ಕೆ ಸಲಹೆ
ಬೆಂಗಳೂರು, ಅಕ್ಟೋಬರ್ 06: ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭತ್ತದ ಬೆಳೆಯು ತೆನೆ ಒಡೆಯುವ ಹಂತದಲ್ಲಿದೆ. ಬೆಳೆಗೆ ಬೆಂಕಿ ರೋಗ ಕಾಣಿಸಿಕೊಂಡಿದೆ. ಮೋಡ ಮುಸುಕಿದ, ಹೆಚ್ಚು ಆದ್ರತೆಯಿಂದ ಕೂಡಿದ ವಾತಾವರಣದಲ್ಲಿ ಈ ರೋಗದ ತೀವ್ರತೆ ಹೆಚ್ಚಾಗಿ ಕಂಡು ಬರುತ್ತದೆ.
ಬೆಂಕಿ ರೋಗ ಶಿಲೀಂಧ್ರದಿಂದ ಬರುವ ರೋಗವಾಗಿದೆ. ಬೆಳೆಯ ಎಲ್ಲಾ ಹಂತಗಳಲ್ಲೂ ಕಾಣಿಸಿಕೊಂಡು ಇಳುವರಿ ಮೇಲೆ ಈ ರೋಗ ಪರಿಣಾಮ ಬೀರುತ್ತದೆ. ಕೃಷಿ ಇಲಾಖೆ ಈ ರೋಗವನ್ನು ಹತೋಟಿ ಮಾಡಲು ರೈತರಿಗೆ ಸಲಹೆಗಳನ್ನು ನೀಡಿದೆ.
ರೈತರು ಬೆಂಕಿ ರೋಗದ ಲಕ್ಷಣಗಳನ್ನು ಗುರುತಿಸಿ ಪತ್ತೆ ಹಚ್ಚಬೇಕು. ಗರಿಗಳ ಮೇಲೆ ವಜ್ರಾಕಾರದ ಕಂದು ಬಣ್ಣದ ಚುಕ್ಕೆಗಳುಂಟಾಗಿ ಆ ಚುಕ್ಕೆಗಳ ಮಧ್ಯಭಾಗವು ಬೂದು ಬಣ್ಣ ಹೊಂದಿರುತ್ತದೆ ಇದು ರೋಗದ ಪ್ರಮುಖ ಲಕ್ಷಣವಾಗಿದೆ.

ಚುಕ್ಕೆಗಳು ದೊಡ್ಡದಾದಂತೆ ಒಂದಕ್ಕೊಂದು ಸೇರಿಕೊಂಡು ಎಲೆಗಳು ಸುಟ್ಟಂತೆ ಭಾಸವಾಗುತ್ತದೆ. ತೆನೆಯ ಹಂತದಲ್ಲಿ ತೆನೆಯ ಕುತ್ತಿಗೆಯ ಭಾಗದಲ್ಲಿ ಕಂದು ಮಚ್ಚೆ ಕಂಡುಬಂದು ನಂತರ ತೆನೆ ಒಣಗಿ ಕಾಳು ಜೊಳ್ಳಾಗುತ್ತದೆ.
ರೋಗದ ನಿರ್ವಹಣೆ: ಗದ್ದೆಯಲ್ಲಿ ಹಾಗೂ ಗದ್ದೆ ಬದುಗಳಲ್ಲಿ ಕಳೆ ತೆಗೆದು ಜಮೀನಿನಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು. ತಕ್ಷಣ ಸಾರಜನಕಯುಕ್ತ ರಾಸಾಯನಿಕ ಗೊಬ್ಬರ ಕೊಡುವುದನ್ನು ನಿಲ್ಲಿಸಬೇಕು. ಆದಷ್ಟು 2 ಹಂತಗಳಲ್ಲಿ ಮೇಲುಗೊಬ್ಬರವಾಗಿ ಕೊಡಬೇಕು.
ಸಾವಯುವ ಹಾಗೂ ನೈಸರ್ಗಿಕ ಕೃಷಿ ಅನುಸರಿಸುತ್ತಿರುವ ರೈತರು 10 ಲೀಟರ್ ನೀರಿಗೆ 1 ಲೀಟರ್ ಹುಳಿಮಜ್ಜಿಗೆ ಬೆರೆಸಿ ಸಿಂಪಡಿಸಿ. ರಾಸಾಯನಿಕ ಸಿಂಪರಣೆಗಾಗಿ 4 ಗ್ರಾಂ. ಕಾರ್ಬನ್ ಡೈಜಿಂ 50 ಡಬ್ಲ್ಯು.ಪಿ. / 0.6 ಗ್ರಾಂ ಟ್ರ್ಯೈಸೈಕ್ಲೊಜೋಲ್ 75 ಡಬ್ಲ್ಯು.ಪಿ. / 1 ಮಿ.ಲೀ. ಎಡಿಫಿನ್‍ಫಾಸ್ 50 ಇ.ಸಿ. / 1 ಮಿ.ಲೀ. ಕಿಟಾಜಿನ್ 48 ಇ.ಸಿ. ಇವುಗಳಲ್ಲಿ ಯಾವುದಾರೊಂದನ್ನು 1 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.












Click it and Unblock the Notifications