ಮುಂಗಾರು ಮಳೆ; ಅಡಿಕೆ ಬೇಸಾಯಕ್ಕೆ ಸಲಹೆಗಳು
2022ನೇ ಸಾಲಿನ ಮುಂಗಾರು ಅವಧಿ ಅಧಿಕೃತವಾಗಿ ಜೂನ್ 1ರಿಂದ ಆರಂಭವಾಗಿದೆ. ಈಗಾಗಲೇ ಕೇರಳಕ್ಕೆ ರಾಜ್ಯಕ್ಕೆ ನೈಋತ್ಯ ಮುಂಗಾರು ಆಗಮನವಾಗಿದೆ. ಕರ್ನಾಟಕದಲ್ಲಿಯೂ ಮುಂಗಾರು ಪೂರ್ವ ಮಳೆ ಕೃಷಿ ಚಟುವಟಿಕೆಗಳ ಆರಂಭಕ್ಕೆ ಅವಕಾಶ ಮಾಡಿಕೊಟ್ಟಿದೆ.
ಗುರುವಾರ ನೈಋತ್ಯ ಮುಂಗಾರು ಕರ್ನಾಟಕಕ್ಕೆ ಆಗಮಿಸುವ ನಿರೀಕ್ಷೆ ಇದೆ. ರೈತರು ಕೃಷಿ ಚಟುವಟಿಕೆಗಳಲ್ಲಿ ಬ್ಯುಸಿಯಾಗಲಿದ್ದಾರೆ. ಮಳೆಗಾಲದ ಬೇಸಾಯ ಕ್ರಮಗಳು, ಬೆಳೆಗಳ ರಕ್ಷಣೆ, ಕೀಟ ಹತೋಟಿ ಕುರಿತು ಕೃಷಿ ವಿಜ್ಞಾನ ಕೇಂದ್ರ ರೈತರಿಗೆ ಸಲಹೆಗಳನ್ನು ನೀಡಿದೆ.
ಕೇಂದ್ರ ನೀಡಿದ ಸಲಹೆಗಳನ್ನು ಪಾಲಿಸುವ ಮೂಲಕ ರೈತರು ಬೇಸಾಯ ಕೈಗೊಂಡು ಹೆಚ್ಚಿನ ಇಳುವರಿ ಪಡೆಯಬಹುದು. ಪ್ರಮುಖವಾಗಿ ಅಡಕೆ ತೋಟಗಳ ನಿರ್ವಹಣೆ ಬಗ್ಗೆ ರೈತರಿಗೆ ಅನೇಕ ಕ್ರಮಗಳನ್ನು ಶಿಫಾರಸು ಮಾಡಲಾಗಿದೆ.
ಮಳೆಗಾಲದಲ್ಲಿ ಅಡಿಕೆ ಬೆಳೆಗೆ ಕೊಳೆ ರೋಗ ಸಾಮಾನ್ಯ. ಇದನ್ನು ಹತೋಟಿ ಮಾಡಲು ಅನೇಕ ಕ್ರಮಗಳನ್ನು ಶಿಫಾರಸು ಮಾಡಲಾಗಿದೆ. ಅಡಿಕೆ ಬೆಳೆಯುವ ರೈತರು ಇದರ ಉಪಯೋಗ ಪಡೆದುಕೊಳ್ಳಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಡಾ. ವೀರೇಂದ್ರ ಕುಮಾರ್ ಹೇಳಿದ್ದಾರೆ.
ಅಡಕೆ ಬೇಸಾಯ, ರೋಗದ ಬಾಧೆ, ಬೆಳೆ ರಕ್ಷಣೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದ ರೈತರು ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥರು, ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು, ಕೊಡಗು ಜಿಲ್ಲೆ ಇವರನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ. ದೂರವಾಣಿ ಸಂಖ್ಯೆ 08274-247274 ಕರೆ ಮಾಡಬಹುದಾಗಿದೆ.

ಕಾಯಿಗಳನ್ನು ಆರಿಸಿ ತೆಗೆಯಿರಿ
ಮಳೆಗಾಲ ಪ್ರಾರಂಭವಾಗುವುದಕ್ಕಿಂತ ಮುಂಚಿತವಾಗಿ ಕಳೆದ ವರ್ಷ ರೋಗ ಪೀಡಿತ ಕಾಯಿಗಳು ತೋಟದಲ್ಲಿ ಬಿದ್ದಿದ್ದರೆ ಅಂತಹ ಕಾಯಿಗಳನ್ನು ಆರಿಸಿ ತೆಗೆದು ಸುಡಬೇಕು. ಕೊಳೆ ರೋಗವನ್ನು ಹತೋಟಿ ಮಾಡಲು ರೈತರು ಶೇ. 1ರ ಬೋರ್ಡೊ ದ್ರಾವಣವನ್ನು ಸರಿಯಾಗಿ ತಯಾರಿಸಿ ಮೊದಲನೆ ಸಿಂಪರಣೆಯನ್ನು ಜೂನ್ ತಿಂಗಳ ಮೊದಲನೆ ವಾರದೊಳಗೆ ಕಡ್ಡಾಯವಾಗಿ ಸಿಂಪರಣೆ ಮಾಡಲೇಬೇಕು.

ಕೊಳೆ ರೋಗದ ಹತೋಟಿ
ರೈತರು ಪರಿಣಾಮಕಾರಿಯಾಗಿ ಕೊಳೆರೋಗವನ್ನು ಹತೋಟಿ ಮಾಡಲು ಶೇ. 1ರ ಬೋರ್ಡೊ ದ್ರಾವಣವನ್ನು ಅಡಿಕೆಯ ಗೊಂಚಲು, ಸುಳಿ ಮತ್ತು ಎಲೆಗಳು ಸಂಪೂರ್ಣ ತೊಯ್ಯುವ ಹಾಗೆ ಸಿಂಪಡಿಸಬೇಕು. ಪ್ರತಿ ಅಡಿಕೆಯ ಬುಡದ ಭಾಗಕ್ಕೆ 3 ರಿಂದ 5 ಲೀಟರ್ ಕಾಪರ್ ಆಕ್ಸಿಕ್ಲೋರೈಡ್ (ಬ್ಯಾರಲ್‍ಗೆ 500 ಗ್ರಾಂ) ದ್ರಾವಣವನ್ನು ಸುರಿಯಬೇಕು. ಬೋರ್ಡೊ ದ್ರಾವಣವನ್ನು ಸಿಂಪರಣೆ ಮಾಡುವುದಕ್ಕಿಂತ ಮೊದಲು ಕಡ್ಡಾಯವಾಗಿ ದ್ರಾವಣದ ರಸಸಾರವನ್ನು ಪರೀಕ್ಷಿಸಿ ನಂತರ ಸಿಂಪರಣೆಗೆ ಉಪಯೋಗಿಸಬೇಕು.

ಬಸಿಗಾಲುವೆಗಳನ್ನು ನಿರ್ಮಾಣ ಮಾಡಿ
ಅಡಕೆ ತೋಟದಲ್ಲಿ ನೀರು ನಿಲ್ಲದ ಹಾಗೆ ಬಸಿಗಾಲುವೆಗಳನ್ನು ನಿರ್ಮಿಸಬೇಕು. ಅಡಿಕೆ ಕಾಯಿ ಹೊಡೆದು ಬೀಳುವ/ ಸೀಳುವ ಸಮಸ್ಯೆ ಇದ್ದಲ್ಲಿ ಪ್ರತಿ ಅಡಿಕೆ ಗಿಡಕ್ಕೆ 25 ರಿಂದ 30 ಗ್ರಾಂ ಬೋರಾಕ್ಸ್ ಅನ್ನು ಕೊಡಬೇಕು. ಪ್ರತಿ ಮರವೊಂದಕ್ಕೆ ವರ್ಷಕ್ಕೆ 20 ಕಿ. ಗ್ರಾಂ. ನಂತೆ ಕೊಟ್ಟಿಗೆ ಗೊಬ್ಬರ ಹಾಗೂ ಹಸಿರೆಲೆ ಗೊಬ್ಬರವನ್ನು ಕೊಡಬೇಕು.

ಗಿಡಕ್ಕೆ ಯಾವ ಗೊಬ್ಬರ ಕೊಡಬೇಕು
ಪ್ರತಿ ಗಿಡಕ್ಕೆ 220 ಗ್ರಾಂ ಯೂರಿಯಾ, 200 ಗ್ರಾಂ ಶಿಲಾರಂಜಕ ಮತ್ತು 230 ಗ್ರಾಂ ಎಂ.ಓ.ಪಿನ್ನು ಕೊಡಬೇಕು. ಈ ಪ್ರಮಾಣದ ಗೊಬ್ಬರವನ್ನು ಒಂದು ಗಿಡಕ್ಕೆ ಒಂದು ವರ್ಷಕ್ಕೆ ಕೊಡಬೇಕಾದ ಪ್ರಮಾಣವಾಗಿದ್ದು ಮೊದಲನೇ ಕಂತನ್ನು ಜೂನ್ ತಿಂಗಳಿನಲ್ಲಿ ಮತ್ತು ಎರಡನೇ ಕಂತಿನ ಗೊಬ್ಬರವನ್ನು ಆಗಸ್ಟ್ ತಿಂಗಳಿನಲ್ಲಿ ಕೊಡಬೇಕು ಎಂದು ಕೇಂದ್ರ ರೈತರಿಗೆ ಸಲಹೆಯನ್ನು ನೀಡಿದೆ.












Click it and Unblock the Notifications