ಕೃಷಿ ಬದುಕೆಂಬ ಆತ್ಮನಿರ್ಭರ ಜಾರಿಯಲ್ಲಿರಲಿ: ಕೆ.ಟಿ. ಗಂಗಾಧರ್

ಈಗ ಮುಖ್ಯವಾಗಿ ಭಾರತ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯಿದೆಗಳು ಮತ್ತು ಜಾರಿಗೆ ತರಲು ತಯಾರಿರುವ ಒಂದು ವಿದ್ಯುಚ್ಛಕ್ತಿ ಮಸೂದೆ. ಈ ನಾಲ್ಕೂ ವಿಷಯಗಳು ಇಡೀ ಭಾರತದ ಕೃಷಿಯನ್ನು ಬಂಡವಾಳಶಾಹಿಗಳಿಗೆ ಮತ್ತು ವಾಣಿಜ್ಯಕ್ಕೆ ಓಪನ್ ಮಾಡಿಟ್ಟ ಹಾಗಿವೆ. ಅಂದರೆ ಪ್ರಭುತ್ವ ಬಂಡವಾಳಶಾಹಿಗಳ ಹಂಗಲ್ಲಿ ಕೆಲಸ ಮಾಡುತ್ತಿರುವ ಹಾಗಿದೆ. ಆ ಬಂಡವಾಳ ಶಾಹಿಗಳು ಈ ಹಂಗನ್ನೇ ಬಳಸಿ ಇಡೀ ಭಾರತದ ಕೃಷಿ ಭೂಮಿ, ಕೃಷಿ ಜ್ಞಾನ, ಕೃಷಿ ಉತ್ಪನ್ನ, ಮಾರುಕಟ್ಟೆ, ಸಂಸ್ಕರಣೆ, ಎಲ್ಲವನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡು ರೈತರಿಗೆ ದುಡ್ಡಿಲ್ಲದೇ ಏನೂ ಮಾಡಲು ಸಾಧ್ಯವಿಲ್ಲ ಅನ್ನುವ ಸ್ಥಿತಿಯನ್ನು ತರಬಲ್ಲವು.

ಆದರೆ, ಭಾರತದ ಕೃಷಿ ಸಂಸ್ಕೃತಿ ಮತ್ತು ಆಹಾರ ಸಂಸ್ಕೃತಿ ಎಲ್ಲೇ ಹೋದರೂ ನಿಮಗೆ ಕಾಣಲು ಸಿಗುವುದಿಲ್ಲ. ಅಗ್ರಿಕಲ್ಚರ್ ಅಂದರೆ ಇಂಡಿಯನ್ ಕಲ್ಚರ್ ಅಂತ. ಇಂಡಿಯನ್ ಕಲ್ಚರ್ ಅಂದರೆ ಅಗ್ರಿಕಲ್ಚರ್ ಅಂತ. ಅಂದರೆ ಭಾರತದ ವ್ಯವಸಾಯ ಯಾವುದೇ ಪುಷ್ಟಿಕರ ಪ್ಯಾಕೇಜಿಂದ ಬಂದದ್ದಲ್ಲ, 4000 ವರ್ಷಗಳ ಇತಿಹಾಸ ಭಾರತದ ಕೃಷಿ ಜ್ಞಾನಕ್ಕಿದೆ. ಅಂತಹ ಜ್ಞಾನವನ್ನು ಕೈಗಾರಿಕೋದ್ಯಮಿಗಳಿಗೆ, ಬಂಡವಾಳಶಾಹಿಗಳಿಗೆ ಮಾರಾಟ ಮಾಡುವ ಕಾಯ್ದೆ ಇದಾಗಿದೆ. ಇದನ್ನು ಜಾರಿ ಮಾಡಲು ಸಾಧ್ಯವಿಲ್ಲ.

 ಆಹಾರ ಭದ್ರತೆ ಮತ್ತು ಭಾರತದ ಆಹಾರ ಸಾರ್ವಭೌಮತೆ

ಆಹಾರ ಭದ್ರತೆ ಮತ್ತು ಭಾರತದ ಆಹಾರ ಸಾರ್ವಭೌಮತೆ

"ಸಾಧ್ಯವಿಲ್ಲ ಅಂದರೆ ಕೇವಲ ರೈತರು ಹೇಳ್ತಿದ್ದಾರೆ ಅನ್ನುವ ಕಾರಣಕ್ಕಲ್ಲ. ಇಂದು ಊಟ ಮಾಡುವ ಪ್ರತಿಯೊಬ್ಬರೂ, ಗ್ರಾಹಕರಾದಿಯಾಗಿ ಆಹಾರ ಭದ್ರತೆಯನ್ನು ಮತ್ತು ಭಾರತದ ಆಹಾರ ಸಾರ್ವಭೌಮತೆಯನ್ನು (ಆಹಾರ ಭದ್ರತೆ ಬೇರೆ ಆಹಾರ ಸಾರ್ವಭೌಮತ್ವ ಬೇರೆ. ಸಿದ್ದರಾಮಯ್ಯ ಒಂದು ರೂಪಾಯಿಗೆ ಕೆಜಿ ಅಕ್ಕಿ ಕೊಟ್ಟದ್ದು ಭದ್ರತೆ, ಸಾರ್ವಭೌಮತೆ ಅಂದರೆ ಬೀಜ, ಜ್ಞಾನ, ಭೂಮಿ, ಉತ್ಪಾದನೆ, ಮಾರಾಟ ಎಲ್ಲವೂ ರೈತನ ಕೈಯಲ್ಲಿರುವಂಥದ್ದು, ದೇಶೀಯ ಸರ್ಕಾರದ ಕೈಯಲ್ಲಿರುವಂಥದ್ದು) ಸಾಧಿಸಲು ಕೆಲಸ ಮಾಡುವ ಪ್ರತಿಯೊಬ್ಬರೂ ಈ ಕಾನೂನುಗಳ ಪರವಿರಬೇಕು.''

ಬಂಡವಾಳಶಾಹಿಗಳಿಗೆ ಭೂಮಿಯನ್ನು ವರ್ಗಾಯಿಸಬೇಕು

ಬಂಡವಾಳಶಾಹಿಗಳಿಗೆ ಭೂಮಿಯನ್ನು ವರ್ಗಾಯಿಸಬೇಕು

"ಈಗ ಭಾರತ ಸರ್ಕಾರ ತಂದಿರುವ ಈ ಕಾಯ್ದೆಗಳಲ್ಲಿ ಮೊದಲು ದೇಶೀಯ ಬಂಡವಾಳವನ್ನು ಹೂಡಿ ದೇಶೀಯ ಬಂಡಾವಾಳಶಾಹಿಗಳಿಗೆ ಭೂಮಿಯನ್ನು ವರ್ಗಾಯಿಸತಕ್ಕಂಥದ್ದು. ಆ ಮೂಲಕ ಮಲ್ಟಿ ನ್ಯಾಷನಲ್ ಕಂಪನಿಗಳಿಗೆ ಭೂಮಿಯನ್ನು ವರ್ಗಾಯಿಸುವುದು. ಉದಾಹರಣೆಗೆ ಮಹಿಕೋ ಅನ್ನುವುದೊಂದು ಕಂಪನಿ ಬಂತು. ಅದರಲ್ಲಿ ಇಂಡಿಯನ್ ಮಹಿಕೋ ಅಂತ ಶುರುವಾಯಿತು. ಇಲ್ಲಿಯವರು ಒಬ್ಬ ಅದಕ್ಕೆ ಕೆಲಸ ಮಾಡಿ, ಇದು ನಮ್ಮ ದೇಶದ್ದೇ ಅನ್ನುವಂತೆ ಬಿಂಬಿಸಲಾಯಿತು. ಆದರೆ ಆ ತಂತ್ರಜ್ಞಾನಕ್ಕೆ ರಾಯಲ್ಟಿ ಕೊಡುತ್ತಿರುವ ವಿಷಯ ಎಲ್ಲೂ ಪ್ರಸ್ತಾಪಿಸುವುದಿಲ್ಲ. ಹಾಗೆಯೇ ಇನ್-ಸುಝುಕಿ ಜಪಾನ್‌ನಿಂದ ಬಂದದ್ದು. ಟಿವಿಎಸ್ ಸುಜುಕಿ ಇಲ್ಲೇ ತಯಾರು ಮಾಡಿದರೂ ರಾಯಲ್ಟಿ ಇನ್-ಸುಝುಕಿಗೆ ಹೋಗುತ್ತದೆ. ನಮ್ಮ ದುಡ್ಡು ತಾನೇ ಅದು.''

ಎನ್ಆರ್‌ಐಗಳು ಜಮೀನು ಕೊಳ್ಳುವ ಅವಕಾಶವಿತ್ತು

ಎನ್ಆರ್‌ಐಗಳು ಜಮೀನು ಕೊಳ್ಳುವ ಅವಕಾಶವಿತ್ತು

"ಇದಕ್ಕೆ ಇನ್ನೊಂದು ಉದಾಹರಣೆ ಹೇಳುವೆ. ನನ್ನ ಸ್ನೇಹಿತನೊಬ್ಬನ ಮಗ ಇಲ್ಲೇ ಇಂಜಿನಿಯರಿಂಗ್ ಮುಗಿಸಿ ನಂತರ ಉದ್ಯೋಗಕ್ಕಾಗಿ ಅಮೆರಿಕಾಗೆ ಹೋಗಿ ಭಾರತೀಯಳನ್ನೇ ಮದುವೆ ಆಗಿ ಅಲ್ಲೇ ನೆಲೆಸಿದ. ಒಂದಷ್ಟು ವರ್ಷಗಳ ನಂತರ ಅವನು ಭಾರತಕ್ಕೆ ಬಂದಾಗ ಎನ್‌ಆರ್ಐಗಳು ಜಮೀನು ಕೊಳ್ಳುವ ಅವಕಾಶವಿತ್ತು. ಆಗ ಅವನು ಬೆಂಗಳೂರಿನ ಹತ್ತಿರ ಹತ್ತು ಎಕರೆ ಭೂಮಿ ಕೊಂಡವನು ಅದನ್ನು ಲೇಔಟ್ ಮಾಡಿ ಸೈಟ್‌ಗಳಾಗಿ ಪರಿವರ್ತಿಸಿ ಮಾರಿದ. ಅವನು ಹಾಕಿದ ಬಂಡವಾಳಕ್ಕಿಂತ ಬಹಳ ದುಡ್ಡು ಸಿಕ್ಕಿತು. ಅದನ್ನು ಡಾಲರ್ ಆಗಿ ಪರಿವರ್ತಿಸಿಕೊಂಡು ಅಮೆರಿಕಾಗೆ ಹೋದ. ಈಗ ನೋಡಿ ಭಾರತದ ಭೂಮಿ, ಭಾರತದ ರೂಪಾಯಿ, ಲಾಭದ ರೂಪದಲ್ಲಿ ಡಾಲರ್ ಆಗಿ ಅಮೆರಿಕಾ ಸೇರಿತು.''

 ಮುಂಗಾರು ಮಳೆ ಬರುತ್ತಿದ್ದ ಹಾಗೆ ಭೂಮಿಯ ಹದ

ಮುಂಗಾರು ಮಳೆ ಬರುತ್ತಿದ್ದ ಹಾಗೆ ಭೂಮಿಯ ಹದ

"ಹೀಗೆ ದೇಶೀಯ ಉತ್ಪಾದನೆ ಬಂಡವಾಳ ತೊಡಗಿಸುವುದನ್ನು ಮಲ್ಟಿ ನ್ಯಾಷನಲ್ ಕಂಪನಿಗಳು ಡಾಲರ್ ಮಾಡಿಕೊಂಡು ತೆಗೆದುಕೊಂಡು ಹೋಗುವರೇ ಹೊರತು ಅದನ್ನು ನಮ್ಮ ದೇಶದಲ್ಲಿ ತೊಡಗಿಸುವುದಿಲ್ಲ. ಆ ದುಡ್ಡು ನಮ್ಮ ದೇಶದಲ್ಲಿ ಮೂಲವಾಗಿ ಬಂಡವಾಳವಾಗಿ ತೊಡಗಿಸುವುದಿಲ್ಲ. ದೇಶ ಅಭಿವೃದ್ಧಿ ಹೇಗೆ ಆಗುತ್ತೆ? ಹಾಗಾಗಿ ಮೊದಲು ಬಿತ್ತನೆ ಬೀಜವನ್ನು ನಾಶ ಮಾಡ್ತಾರೆ, ನಂತರ ಕೃಷಿ ಸಂಕೃತಿಯನ್ನು ನಾಶ ಮಾಡ್ತಾರೆ.''

"ಕೃಷಿ ಸಂಸ್ಕೃತಿ ಅಂದರೆ, ಮುಂಗಾರು ಮಳೆ ಬರುತ್ತಿದ್ದ ಹಾಗೆ ಭೂಮಿಯ ಹದ ನೋಡಿಕೊಂಡು ಅಡ್ಡುಕ್ಕೆ ಹೊಡೆಯೋದು, ಸೀಳುಕ್ಕೆ ಹೊಡೆಯೋದು, ಕುಂಟೆ ಹೊಡೆಯೋದು, ಹರಗೋದು, ಹದ ನೋಡಿ ಬಿತ್ತುವುದು, ಬಿತ್ತನೆ ಬೀಜ ತರುವುದು ಇದೆಲ್ಲಾ ಕಲ್ಚರ್. ಇದು ನಮ್ಮಪ್ಪನಿಂದ ನನಗೆ, ಅವರಪ್ಪನಿಂದ ಅವನಿಗೆ... ಹೀಗೆ ಪರಂಪರಾನುಗತವಾಗಿ ಬಂದಿರುವಂಥದ್ದು. ಈಗೇನಾದರೂ ಭೂಮಿ ಹಸ್ತಾಂತರ ಆದರೆ ನನ್ನ ಮಗನಿಗೆ ಆ ಕಲ್ಚರ್ ವರ್ಗಾವಣೆಯಾಗುವುದಿಲ್ಲ. ಅವನು ಇಡೀ ಅಗ್ರಿಕಲ್ಚರ್ ಅನ್ನೇ ಮರೆತುಬಿಡ್ತಾನೆ. ಆಗ ಇಂಡಿಯನ್ ಅಗ್ರಿ ಕಲ್ಚರ್ ಜ್ಞಾನವೇ ನಾಶವಾಗಿ ಹೋಗಿರುತ್ತದೆ. (ಮೊಸರು ಮಾಡಲು ಹಾಲಿಗೆ ಹೆಪ್ಪು ಹಾಕ್ತಿವಲ್ಲ ಆ ಹೆಪ್ಪು ಅನ್ನುವುದು ಜ್ಞಾನ, ಅದೇ ಕಲ್ಚರ್)''

 ಆರ್ಯರು ಮೂಲ ನಿವಾಸಿಗಳ ಸಂಸ್ಕೃತಿ ನಾಶ ಮಾಡಬೇಕು ಎಂದುಕೊಂಡಿದ್ದರು

ಆರ್ಯರು ಮೂಲ ನಿವಾಸಿಗಳ ಸಂಸ್ಕೃತಿ ನಾಶ ಮಾಡಬೇಕು ಎಂದುಕೊಂಡಿದ್ದರು

"ಎರಡು ಮೂರು ವರ್ಷಗಳಾದ ನಂತರ ಈ ಹೊಲ ನನ್ನದಲ್ಲ ಯಾರೋ ಕಂಪನಿಯವನು ಬೆಳೆದುಕೊಡುತ್ತಿದ್ದಾನೆ. ಈ ಬೆಳೆ ನನ್ನದಲ್ಲ, ಯಾರದೋ ಕಂಪನಿಯವರದ್ದು. ಈ ಊರು ನನ್ನದಲ್ಲ, ಯಾರೋ ಬಂದು ಏನೋ ಮಾಡ್ಕೊಂಡು ಹೋಗ್ತಾರೆ. ಎನ್ನುವಂತಹ ಸ್ಥಿತಿ ನಿರ್ಮಾಣವಾಗುತ್ತದೆ. ದೇಶಾಭಿಮಾನ ಮುಂದಿನ ಪೀಳಿಗೆಗೆ ಸಂಪೂರ್ಣವಾಗಿ ನಾಶವಾಗುತ್ತದೆ. ಆದ್ದರಿಂದ ಈಗ ಬಂದಿರುವ ಕಾಯ್ದೆ ಕೇವಲ ರೈತನ ಹೊಟ್ಟೆಪಾಡಿನದ್ದಲ್ಲ, ಮಿಗಿಲಾಗಿ ಭಾರತದ ಸಂಸ್ಕೃತಿಯನ್ನು ನಾಶ ಮಾಡುವಂಥದ್ದು.

ಇದು ಆರ್ಯರಿಗೆ ಬೇಕಾಗಿದೆ. ಆರ್ಯರು ಇದನ್ನೇ ಬಯಸಿದ್ದು. ಮೂಲ ನಿವಾಸಿಗಳ ಕಲ್ಚರ್ ಅನ್ನು ನಾಶ ಮಾಡಬೇಕು ಅಂತ ಹೆಣಗುತ್ತಿದ್ದರು. ಆದರೆ ಇಂದು ಸಂವಿಧಾನದ ಪ್ರಕಾರವೇ ನಾಶ ಮಾಡಲು ಮೋದಿಯವರ ಮೂಲಕ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ.''

 ಗ್ರಾಮೀಣ ಭಾಗದ ಶೇ.70ರಷ್ಟು ಜನರಿಗೆ ಉದ್ಯೋಗ

ಗ್ರಾಮೀಣ ಭಾಗದ ಶೇ.70ರಷ್ಟು ಜನರಿಗೆ ಉದ್ಯೋಗ

"ಇದು ಒಂದು ಭಾಗವಾದರೆ, ಇನ್ನೊಂದು ಭಾಗ " Indian Agriculture provides employment guarantee as well as food guarantee " ಅನ್ನುವುದು ಇನ್ನೊಂದು ಮುಖ್ಯ ಅಂಶ. ಗ್ರಾಮೀಣ ಭಾಗದ ಶೇ.70ರಷ್ಟು ಜನರಿಗೆ ವ್ಯವಸಾಯ ಉದ್ಯೋಗ ಭರವಸೆಯನ್ನು ಕೊಟ್ಟಿದೆ. ನೀವು ಕೇಳಬಹುದು, ರೈತರೆಲ್ಲ ಬಡತನದಲ್ಲೇ ಇದ್ದಾರೆ, ಉದ್ಯೋಗದ ಗ್ಯಾರಂಟಿ ಅಂತ ಹೇಳುತ್ತಿದ್ದೀರಾ ಅಂತ. ನಿಜ, ರೈತರು ಬೆಳಗ್ಗೆ ಎದ್ದಾಗಿನಿಂದ ಮಲಗುವವರೆಗೂ ಒಂದಲ್ಲ ಒಂದು ಕೆಲಸ ಇರುತ್ತದೆ. ಇಷ್ಟು ಪ್ರಮಾಣದ ಉದ್ಯೋಗವನ್ನು ಯಾವ ಕ್ಷೇತ್ರವೂ ಕೊಡಲಾರದು. ಅವನ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯದಿರುವುದಕ್ಕೆ, ಅವನ ಬಡತನಕ್ಕೆ ಕಾರಣ ತಪ್ಪಾದ ಆರ್ಥಿಕ ನೀತಿಗಳು.''

 ಆಹಾರ ಭದ್ರತೆ ನಮ್ಮಲ್ಲೇ ಇತ್ತು

ಆಹಾರ ಭದ್ರತೆ ನಮ್ಮಲ್ಲೇ ಇತ್ತು

"ಇದರ ಜೊತೆಗೆ ಫುಡ್ ಗ್ಯಾರಂಟಿ. ಎರಡು ಎಕರೆ ಜಮೀನಿದ್ದ ರೈತನೂ ತನಗೆ ಬೇಕಾದ ಆಹಾರ ಬೆಳೆಗಳ ಜೊತೆಗೆ ದನಗಳಿಗೆ ಮೇವನ್ನೂ ಬೆಳೆಯಬಲ್ಲ. ಇದರಿಂದ ಅವನ ಆಹಾರ ಭದ್ರತೆಯೂ ಆಯಿತು. ಆಹಾರ ಭದ್ರತೆ ನಮ್ಮಲ್ಲೇ ಇತ್ತು. ಅದನ್ನು ನಮ್ಮಿಂದ ಕಿತ್ತುಕೊಂಡು ಈಗ ಬಾಳೇಹಣ್ಣು ಕೊಡ್ತೀನಿ, ಅನಾನಸ್ ಕೊಡ್ತೀನಿ ಅಂದ್ರೆ ಅದರಲ್ಲಿ ಹೊಟ್ಟೆ ತುಂಬುತ್ತಾ? ಆ ಮೂರೂ ಕಾಯ್ದೆಗಳಿಂದ ಮೇಲಿನ ಎಲ್ಲವೂ ನಮ್ಮಿಂದ ದೂರವಾಗುತ್ತವೆ. ಇದು ಕೇವಲ ನನ್ನೊಬ್ಬನ ವಾದವಲ್ಲ. ಎಲ್ಲಾ ರೈತ ಹೋರಾಟಗಾರರ, ರೈತ ನಾಯಕರ ವಾದ. ಕೆಲವರ ಭಾಷೆ ಬೇರೆಯಾಗಿರಬಹುದು, ಆದರೆ ಎಲ್ಲರ ನಿಲುವು ಇದೇ ಆಗಿದೆ.''

 ನಮ್ಮದೆಲ್ಲ ಬಹುಪಾಲು ಒಣ ಬೇಸಾಯ

ನಮ್ಮದೆಲ್ಲ ಬಹುಪಾಲು ಒಣ ಬೇಸಾಯ

"ಇಂದು ನಮ್ಮದೆಲ್ಲ ಬಹುಪಾಲು ಒಣ ಬೇಸಾಯ. ಇದರಿಂದ ಅಂತರ್ಜಲವನ್ನು ತೆಗೆದು ನೀರಾವರಿ ಮಾಡಿರುವವರು ನಾವು. ಭಾರತದ ಕೃಷಿ ಭೂಮಿಯಲ್ಲಿ ಕೇವಲ ಶೇ.5 ಪ್ರದೇಶದಲ್ಲಿಯಷ್ಟೇ ಜಲಾಶಯಗಳ ಸಹಾಯದಿಂದ ವ್ಯವಸಾಯ ನಡೆಯುತ್ತಿದೆ. ಶೇ.30-40 ರೈತರು ಅಂತರ್ಜಲವನ್ನೇ ಅವಲಂಭಿಸಿದ್ದಾರೆ. ಇದಕ್ಕೆ ಎಲೆಕ್ಟ್ರಿಸಿಟಿ ಅಗತ್ಯವಿದೆ. ಈಗ ಕರ್ನಾಟಕದಲ್ಲಿ ವ್ಯವಸಾಯಕ್ಕಾಗಿ ಉಚಿತವಾಗಿ ವಿದ್ಯುತ್ ಪೂರೈಕೆಯಾಗುತ್ತಿದೆ. ಬೇರೆ ರಾಜ್ಯಗಳಲ್ಲಿ ಬೇರೆ ರೀತಿಯ ನಿಯಮಗಳಿವೆ. ಒಂದು ವೇಳೆ ಈ ವಿದ್ಯುತ್ ಅನ್ನು ಉತ್ಪಾದನೆ, ನಿರ್ವಹಣೆ, ಮಾರಾಟ ಮಾಡುವುದನ್ನು ಈಗ ಖಾಸಗೀಕರಣಗೊಳಿಸಲು ಹೊರಟಿದ್ದಾರೆ. ಈಗಾಗಲೇ ಒಂದು ಬಿಲ್ ರೆಡಿ, ನಾಳೆ ಬರುತ್ತದೆ. ಅದನ್ನೂ ನಾವೀಗ ಸೇರಿಸಿದ್ದೇವೆ.''

 ರೈತರಿಗೆ ವೈಜ್ಞಾನಿಕ ಬೆಲೆ ಕೊಡಿ

ರೈತರಿಗೆ ವೈಜ್ಞಾನಿಕ ಬೆಲೆ ಕೊಡಿ

"ನಾವು ಕರೆಂಟಿಗೆ ದುಡ್ಡು ಕೊಡುವುದಿಲ್ಲ ಅಂತೇನೂ ಹೇಳುವುದಿಲ್ಲ. ನಾವು ಕರೆಂಟಿಗೆ ದುಡ್ಡು ಕೊಡುತ್ತೇವೆ, ಫರ್ಟಿಲೈಜರ್ ಸಬ್ಸಿಡಿ ಬೇಡ, ಬೀಜದ ಸಬ್ಸಿಡಿ ಬೇಡ, ಅಲ್ಪಾವಧಿ, ದೀರ್ಘಾವಧಿ ಸಾಲಗಳಿಗೆ ಬಡ್ಡಿ ರಿಯಾಯಿತಿಯೂ ಬೇಡ. ಆದರೆ ನಮಗೆ ಕೇವಲ ನಮ್ಮ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಕೊಡಿ. ಅದಾದರೆ ಎಲ್ಲಾ ಸಬ್ಸಿಡಿಗಳನ್ನೂ ನಿರಾಕರಿಸಿ ನಿಮ್ಮ ಕರೆಂಟ್ ಬಿಲ್ಲನ್ನು ಕಟ್ಟುವ ಶಕ್ತಿ ನಮ್ಮ ರೈತರಿಗೆ ಬರುತ್ತದೆ. ವೈಜ್ಞಾನಿಕ ಬೆಲೆ ಇಲ್ಲವಾಗಿರುವುದರಿಂದಲೇ ನಮ್ಮ ರೈತರು ಸಾಲಗಾರರಾಗಿದ್ದಾರೆ. ಪುಕ್ಕಟ್ಟೆ ಕರೆಂಟ್ ಕೊಡಿ, ಯೂರಿಯಾ ಸಬ್ಸಿಡಿ ಕೊಡಿ ಅಂತ ಕೇಳುತ್ತಿರುವುದು. ನಮಗೆ ಅವ್ಯಾವುದೂ ಬೇಡ. ಆದರೆ ಎಲ್ಲಿಯವರೆಗೆ ವೈಜ್ಞಾನಿಕ ಬೆಲೆಯನ್ನು ಭಾರತ ಸರ್ಕಾರ ಒಪ್ಪುವುದಿಲ್ಲವೋ ಅಲ್ಲಿಯವರೆಗೆ ಇಂತಹ ಅನುದಾನಗಳನ್ನು ಕಂಪಲ್ಸರಿಯಾಗಿ ಭಾರತ ಸರ್ಕಾರ ನೀಡಲೇಬೇಕು. ಅದರಲ್ಲಿ ಯಾವುದೇ ಬದಲಾವಣೆಯಿಲ್ಲ.''

 ವೋಟ್ ಕಿತ್ತುಕೊಳ್ಳುವ ಮೋಡಿಯ ಮಾತುಗಳು ಬೇಡ

ವೋಟ್ ಕಿತ್ತುಕೊಳ್ಳುವ ಮೋಡಿಯ ಮಾತುಗಳು ಬೇಡ

"ಡಾ. ಸ್ವಾಮಿನಾಥನ್ ವರದಿ ಸ್ವಲ್ಪ ಮಟ್ಟಿಗೆ ವೈಜ್ಞಾನಿಕ ಬೆಲೆಗೆ ಹತ್ತಿರವಾಗಿತ್ತು. ನಾವು ಅದರ ಹಿನ್ನೆಲೆಯಲ್ಲಿ ಚಳವಳಿ ಮಾಡುತ್ತಿದ್ದೆವು. ಇದೇ ಬಿಜೆಪಿ ಜನ ಜಂತರ್ ಮಂತರ್ ವೇದಿಕೆ ಮೇಲೆ ಬಂದು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸ್ವಾಮಿನಾಥನ್ ವರದಿಯನ್ನು ಶೇ.100 ಜಾರಿಗೆ ತರುತ್ತೇವೆ ಅಂದರು. ಆದರೆ ಬಂದ ಎರಡೇ ವರ್ಷಕ್ಕೆ ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸಲು ಆಗಲ್ಲವೆಂದು ಮೋದಿಯವರು ಸುಪ್ರೀಂ ಕೋರ್ಟಿನಲ್ಲಿ ಅಫಿಡವಿಟ್ ಹಾಕಿದರು. ಇದನ್ನು ನಾವು ಒಪ್ಪಲು ಸಾಧ್ಯವಿಲ್ಲ. ಈ ರೀತಿಯ ಸುಳ್ಳು ಆಶ್ವಾಸನೆಗಳನ್ನು ಕೊಟ್ಟು 5 ವರ್ಷಗಳಿಗೊಮ್ಮೆ ಜನರ ವೋಟ್‌ಗಳನ್ನು ಕಿತ್ತುಕೊಳ್ಳುವ ಈ ಮೋಡಿಯ ಮಾತುಗಳು ಬೇಡ.''

Recommended Video

    ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಅಮೃತಬಳ್ಳಿ ತಂದಿಟ್ಟ ಅಪಾಯ ನೋಡಿ | Oneindia Kannada
     ನಿಮ್ಮ ಮಾತಿಗೆ ತಕ್ಕ ಹಾಗೆ ನಡೆದುಕೊಳ್ಳಿ

    ನಿಮ್ಮ ಮಾತಿಗೆ ತಕ್ಕ ಹಾಗೆ ನಡೆದುಕೊಳ್ಳಿ

    "ಭಾರತದ ರೈತರು, ಭಾರತದ ಕೃಷಿ ಜ್ಞಾನ, ಭಾರತದ ಮಾರುಕಟ್ಟೆ, ಎಲ್ಲ ಕೂಡ ಆತ್ಮನಿರ್ಭರತೆಯೇ. ಆತ್ಮನಿರ್ಭರ ಭಾರತ ಎಂದರೆ ನಿನ್ನ ಹುಟ್ಟಿನಿಂದ ಬಂದಿರುವ ಜ್ಞಾನ ಮತ್ತು ಕೌಶಲ್ಯದಿಂದ ನಿನ್ನ ಜೀವನ ನಡೆಸು ಎಂದರ್ಥ. ನಮ್ಮ ರಕ್ತಗತವಾಗಿ ಬಂದಿರುವ ಕೃಷಿ ಜ್ಞಾನವೂ ಆತ್ಮ ನಿರ್ಭರವೇ ಮೋದಿಯವರೇ..! ನಿಮಗೆ ಆ ಪದವನ್ನು ಯಾರು ಹೇಳಿಕೊಟ್ಟರೋ ಗೊತ್ತಿಲ್ಲ, ಹೇಳಿಬಿಟ್ಟಿದ್ದೀರ. ಈಗಲಾದರೂ ನಿಮ್ಮ ಮಾತಿಗೆ ತಕ್ಕ ಹಾಗೆ ನಡೆದುಕೊಳ್ಳಿ ಎಂದು ಮೋದಿಯವರನ್ನು ಒತ್ತಾಯಿಸುತ್ತೇನೆ.''

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+