ಕೃಷಿ ಕೂಲಿ ಕಾರ್ಮಿಕರ ವೇತನ ವೆಚ್ಚಳಕ್ಕೆ ಸಂಘಟನೆಗಳ ಆಗ್ರಹ: ಪ್ರತಿಭಟನೆಗೆ ನಿರ್ಧಾರ
ಬೆಂಗಳೂರು, ಜುಲೈ 21: ಕೃಷಿ ಕೂಲಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಗಸ್ಟ್ 1ರಂದು ದೇಶಾದ್ಯಂತ 500 ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ, ಹಕ್ಕೊತ್ತಾಯ ಮನವಿ ಸಲ್ಲಿಸಲು ಕೃಷಿ ಕೂಲಿಕಾರ ಸಂಘಟನೆಗಳ ಒಕ್ಕೂಟ ತಿಳಿಸಿದೆ.
ಕೃಷಿ ಕೂಲಿಕಾರರು, ಗೇಣಿದಾರ ರೈತರು ಮತ್ತು ಇತರ ರೈತಾಪಿ ದುಡಿಮೆಗಾರರು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕೃಷಿಯನ್ನೇ ಅವಲಂಬಿಸಿದ್ದಾರೆ. 2011 ರ ಜನಗಣತಿ ಪ್ರಕಾರ ದೇಶದಲ್ಲಿ 11,86,69,264 ಕೃಷಿಕರಿದ್ದಾರೆ, ಕೂಲಿ ಕಾರ್ಮಿಕರ ಸಂಖ್ಯೆ 14,45,29,833 ರಷ್ಟಿದೆ. ಕೃಷಿಕರಿಗಿಂತ ಕೃಷಿ ಕಾರ್ಮಿಕರ ಸಂಖ್ಯೆಯೇ ಹೆಚ್ಚಾಗಿದ್ದು ಇವರ ಹಿತಾಸಕ್ತಿ ಕಾಪಾಡಲು ಯಾವುದೇ ಕಾನೂನು ರೂಪಿಸಿಲ್ಲ, ಕೂಡಲೇ ಇವರ ಕಲ್ಯಾಣಕ್ಕಾಗಿ ಕಾನೂನು ರೂಪಿಸಬೇಕು ಎಂದು ಕೃಷಿ ಕೂಲಿಕಾರ ಸಂಘಟನೆಗಳ ಒಕ್ಕೂಟ ಹೇಳಿದೆ.
ಕೃಷಿಕರ ಸಂಖ್ಯೆ ಕಡಿಮೆಯಾಗುತ್ತಿದ್ದು, ಕೃಷಿ ಕೂಲಿ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ ಕೃಷಿ ಕೂಲಿಕಾರರಿಗೆ ಕೃಷಿಯಲ್ಲಿ ಕೆಲಸದ ಲಭ್ಯತೆ ಕಡಿಮೆಯಾಗುತ್ತಿದೆ. ಕೃಷಿಯಲ್ಲಿ ಯಾಂತ್ರೀಕರಣ, ಕಂಪನೀಕರಣ ತೀವ್ರಗೊಳ್ಳುತ್ತಿದ್ದು ಗ್ರಾಮೀಣ ನಿರುದ್ಯೋಗ ಹೆಚ್ಚುತ್ತಿದೆ. ಕೃಷಿ ಕೂಲಿಕಾರರು ಹಳ್ಳಿಗಳನ್ನು ತೊರೆದು ನಗರ ಪ್ರದೇಶಗಳಿಗೆ ವಲಸೆ ಹೋಗುವುದು ಹೆಚ್ಚಾಗುತ್ತಿದೆ. ವಲಸೆ ಹೋದ ಸ್ಥಳಗಳಲ್ಲಿ ಕೂಲಿಕಾರರು ಯಾತನಾಮಯ ಜೀವನ ಸಾಗಿಸುತ್ತಿರುತ್ತಾರೆ ಎಂದು ಒಕ್ಕೂಟ ತಿಳಿಸಿದೆ.

ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿ ಮಾಡಿ
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಬೆಲೆ ಏರಿಕೆಗೆ ತಕ್ಕಂತೆ ಇವರ ಕೂಲಿ ದರಗಳು ಹೆಚ್ಚಾಗುತ್ತಿಲ್ಲ. ಕೂಡಲೇ ಕೂಲಿಯನ್ನು ಹೆಚ್ಚು ಮಾಡಬೇಕು ಎಂದು ಒತ್ತಾಯಿಸಿದೆ.
ನರೇಗಾ ಅಡಿಯಲ್ಲಿ ವರ್ಷದಲ್ಲಿ 200 ದಿನಗಳ ಕೆಲಸ ಮತ್ತು 600 ರುಪಾಯಿ ದಿನಗೂಲಿ ನೀಡಬೇಕು. ಸಮಯಕ್ಕೆ ಸರಿಯಾಗಿ ಪಾವತಿ ಮಾಡಬೇಕು, ಈ ಯೋಜನೆಯನ್ನು ನಗರ ಪ್ರದೇಶಗಳಿಗೆ ವಿಸ್ತರಣೆ ಮಾಡಬೇಕು ಎಂದು ಒತ್ತಾಯಿಸಿದೆ. 55 ವರ್ಷ ದಾಟಿದ ಎಲ್ಲ ಕೃಷಿ ಕೂಲಿಕಾರರಿಗೆ ಮತ್ತು ಇತರ ಗ್ರಾಮೀಣ ಕೆಲಸಗಾರರಿಗೆ ತಿಂಗಳಿಗೆ ರೂ. 5000 ರ ದರದಲ್ಲಿ ನಿವೃತ್ತಿ ವೇತನ ನೀಡುವಂತೆ ಮನವಿ ಮಾಡಿದೆ.ದಲಿತರು ಮತ್ತು ಇತರ ಕೂಲಿಕಾರರ ನಡುವೆ ತಾರತಮ್ಯ ಮಾಡಲಾಗುತ್ತದೆ. ಮಹಿಳಾ ಹಾಗೂ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಲೇ ಇವೆ. ಮತಾಂಧ ಶಕ್ತಿಗಳು ಆಳುವವರ ಕುಮ್ಮಕ್ಕು ಪಡೆದು ದುಡಿಯುವ ಜನರಲ್ಲಿ ಇರಬೇಕಾದ ಐಕ್ಯತೆಯನ್ನು ನಾಶಮಾಡಲು ಯತ್ನಿಸುತ್ತಿವೆ ಎಂದು ಆರೋಪಿಸಿದೆ.
ಕಾರ್ಮಿಕರಿಗೆ ಮನೆ ನಿರ್ಮಿಸಿಕೊಡಲು ಒತ್ತಾಯ
ಬಡ ಭೂರಹಿತರು ಸಾಗುವಳಿ ಮಾಡುತ್ತಾ ಬಂದಿರುವ ಭೂಮಿಯ ಹಕ್ಕುಪತ್ರ ವಿತರಿಸುವ ಬದಲಾಗಿ ಅವರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಸರ್ಕಾರಿ ಭೂಮಿಯನ್ನು ಅತ್ಯಲ್ಪ ಬೆಲೆಗೆ ತಮಗೆ ಬೇಕಾದ ಖಾಸಗಿ ಸಂಘ ಸಂಸ್ಥೆಗಳಿಗೆ ನೀಡುತ್ತಿದ್ದಾರೆ ಎಂದು ಹೇಳಿದೆ.
ಶೌಚಾಲಯ, ಅಡುಗೆ ಮನೆ ಕೈತೋಟ, ದನದ ಕೊಟ್ಟಿಗೆಯನ್ನು ಒಳಗೊಂಡ ಹಿತ್ತಲು ಸಹಿತದ ಪಕ್ಕಾ ಮನೆ ನೀಡುವುದನ್ನು ಖಚಿತ ಪಡಿಸಬೇಕು. ಮನೆ ಕಟ್ಟಲು ನೀಡುವ ಅನುದಾನವನ್ನು ಕೇಂದ್ರದಿಂದ 5 ರು. ಲಕ್ಷ ಮತ್ತು ರಾಜ್ಯ ಸರ್ಕಾರದಿಂದ 5 ಲಕ್ಷ ರು. ನೀಡುವಂತೆ ಕೇಳಿದೆ.
ಭೂಸ್ವಾಧೀನ ಕಾಯ್ದೆ ಜಾರಿಗೆ ಒತ್ತಾಯ
ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಿಗೆ ಸೂಕ್ತ ಪರಿಹಾರ ಹಾಗೂ ಪರ್ಯಾಯ ಭೂಮಿ ವಿತರಣೆಯೊಂದಿಗೆ 2013 ರ ಭೂಸ್ವಾಧೀನ ಕಾಯ್ದೆಯನ್ನು ಜಾರಿಗೆ ತರಬೇಕು. ಪುನವರ್ತಿಸತಿ ಕಲ್ಪಿಸದೆ ಯಾರನ್ನೂ ಒಕ್ಕಲೆಬ್ಬಿಸಬಾರದು. ಪುನರ್ವಸತಿ ಕೇಂದ್ರಗಳಲ್ಲಿ ವಾಸಕ್ಕೆ ಸಮರ್ಪಕ ಮನೆ, ಆರೋಗ್ಯ ಹಾಗೂ ಶಿಕ್ಷಣ ಸೌಲಭ್ಯಗಳನ್ನು ತಪ್ಪದೆ ಒದಗಿಸಬೇಕು ಎಂದು ಒತ್ತಾಯಿಸಿದೆ.
ದಲಿತರ ಮೇಲಿನ ದೌರ್ಜನ್ಯಗಳನ್ನು ಕಟ್ಟುನಿಟ್ಟಾಗಿ ತಡೆಗಟ್ಟಬೇಕು. ಎಸ್‌ಸಿ ಮತ್ತು ಎಸ್‌ಟಿ ದೌರ್ಜನ್ಯ ತಡೆಕಾಯ್ದೆ 1989 ನ್ನು ಬಲಪಡಿಸಿ ಸಮರ್ಪಕವಾಗಿ ಜಾರಿಮಾಡಬೇಕು. ಪೊಲೀಸ್ ಠಾಣೆಯಲ್ಲೇ ಜಾಮೀನು ನೀಡಲು ಅವಕಾಶ ನೀಡುವ ಸೆಕ್ಷನ್ 41 ಅನ್ನು ರದ್ದು ಮಾಡಬೇಕು. ದಲಿತರ ವಿರುದ್ಧ ದೌರ್ಜನ್ಯ ಎಸಗುವ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಪ್ರಕರಣವನ್ನು ದಾಖಲು ಮಾಡಬೇಕು ಎಂದು ಹೇಳಿದೆ.

ವೇತನ ದರ ಹೆಚ್ಚಳಕ್ಕೆ ಒತ್ತಾಯ
ಖಾಸಗಿ ರಂಗದಲ್ಲಿ ಮೀಸಲಾತಿ ಜಾರಿಮಾಡಬೇಕು. ಮೀಸಲು ಕ್ಷೇತ್ರದಲ್ಲಿ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿಮಾಡಬೇಕು. ಕೃಷಿ ಕೂಲಿಕಾರರ ಕನಿಷ್ಟ ವೇತನವನ್ನು ಪರಿಷ್ಕರಿಸಬೇಕು ಮತ್ತು ಅದನ್ನು ಹಣದುಬ್ಬರ ದರಕ್ಕೆ ಜೋಡಿಸಬೇಕು. ಸಮಾನ ವೇತನ ನೀಡಬೇಕು. ಕೃಷಿ ಕೂಲಿಕಾರರ ವೇತನವು ಇತ್ತೀಚಿನ ವೇತನ ಆಯೋಗದ ವರದಿಗೆ ಅನುಗುಣವಾಗಿರಬೇಕು ಮತ್ತು ಪ್ರತಿ ಎರಡು ವರ್ಷಕ್ಕೊಮ್ಮೆ ಅದನ್ನು ಪರಿಷ್ಕರಿಸಬೇಕು ಎಂದು ಕೇಳಿದೆ.
ಸೂಕ್ತ ರಕ್ಷಣಾ ಕ್ರಮಗಳನ್ನು ಅಳವಡಿಸಿ ಅಪಾಯಕಾರಿ ಕ್ರಿಮಿನಾಶಕಗಳ ಬಳಕೆಯನ್ನು ನಿಯಂತ್ರಿಸಬೇಕು. ಕೃಷಿ ಕೂಲಿಕಾರರ ವಾಸಪ್ರದೇಶಗಳಲ್ಲಿ ಮತ್ತು ಇತರ ಗ್ರಾಮೀಣ ವಠಾರಗಳಲ್ಲಿ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕು. ಕೃಷಿ ಕೂಲಿಕಾರ ಕುಟುಂಬಗಳಿಗೆ ಉಚಿತ ವಿದ್ಯುತ್ ಸಂಪರ್ಕವನ್ನು ಒದಗಿಸಬೇಕು. ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಭೂರಹಿತ ಬಡವರ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದೆ.
ಕೃಷಿ ಕೂಲಿಕಾರರ ನಡುವೆ ಕೆಲಸ ನಿರ್ವಹಿಸುತ್ತಿರುವ ಸಂಘಟನೆಗಳು ದೆಹಲಿಯಲ್ಲಿ ಸಭೆ ಸೇರಿ ಕೂಲಿಕಾರರ ಪ್ರಮುಖ 28 ಹಕ್ಕೊತ್ತಾಯಗಳ ಪಟ್ಟಿ ಮಾಡಿದೆ. ದೇಶಾದ್ಯಂತ ಇವುಗಳನ್ನು ಪ್ರಚಾರ ಮಾಡಲು ಸಂಘಟನೆಗಳ ಒಕ್ಕೂಟ ನಿರ್ಧರಿಸಿದೆ. ಅಗಸ್ಟ್ 1 ರಂದು ಸೋಮವಾರ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪೂರ್ವತಯಾರಿಯೊಂದಿಗೆ ಪ್ರದರ್ಶನ, ಪ್ರತಿಭಟನೆಗಳನ್ನು ಏರ್ಪಡಿಸಲಾಗುವುದು. ಪ್ರತಿಭಟನೆಯ ಕೊನೆಯಲ್ಲಿ 28 ಹಕ್ಕೊತ್ತಾಯಗಳ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದೆ.












Click it and Unblock the Notifications