ಸರ್ಕಾರದ ಆದೇಶಕ್ಕೂ ಕ್ಯಾರೇ ಎನ್ನದ ಜಿಲ್ಲಾಡಳಿತ: ಸಂಕಷ್ಟದಲ್ಲಿ ರೈತರು
ರಾಜ್ಯ ಸರ್ಕಾರವೇ ಬೆಂಬಲ ಬೆಲೆ ಕೇಂದ್ರವನ್ನು ತೆಗೆದು ರೈತರಿಗೆ ನೆರವಾಗಿ ಎಂದು ಹೇಳಿ ಒಂದು ತಿಂಗಳು ಕಳೆದಿದ್ದರೂ ಧಾರವಾಡ ಜಿಲ್ಲಾಡಳಿತ ಕ್ಯಾರೇ ಎನ್ನುತ್ತಿಲ್ಲ. ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭ ಮಾಡಿದರೂ ಮುಂದಿನ ಪ್ರಕ್ರಿಯೆಗಳನ್ನು ನಡೆಸಿಲ್ಲ. ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಹೆಸರುಕಾಳು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಆದರೆ, ಈ ಬೆಳೆಯನ್ನು ಬೆಳೆದ ರೈತರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದಕ್ಕೆಲ್ಲ ಜಿಲ್ಲಾಡಳಿತದ ನಿರ್ಲಕ್ಷ್ಯವೇ ಕಾರಣ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಸರುಕಾಳು ಖರೀದಿ ಕೇಂದ್ರ ತೆರೆಯುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿ ಒಂದು ತಿಂಗಳೇ ಆಗಿದೆ. ಆದರೆ, ಹೆಸರುಕಾಳು ಖರೀದಿ ಪ್ರಕ್ರಿಯೆ ಪ್ರಾರಂಭವಾಗದೆ ಬೆಳೆಗಾರರು ಪರದಾಡುತ್ತಿದ್ದಾರೆ. ಹೆಸರುಕಾಳು ಸಂಗ್ರಹ ಮಾಡಿ ಇಟ್ಟುಕೊಳ್ಳುವುದು ಸಹ ಸವಾಲಿನ ಕೆಲಸವಾಗಿದೆ. ಕೇಂದ್ರ ಸರ್ಕಾರ ಹೆಸರುಕಾಳು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ಮುಂದಾಗಿದೆ. ರಾಜ್ಯಗಳಿಗೆ ಈ ನಿಟ್ಟಿನಲ್ಲಿ ಈಗಾಗಲೇ ನಿರ್ದೇಶನವನ್ನೂ ನೀಡಿದೆ. ಕೇಂದ್ರ ಸರ್ಕಾರದ ಬೆಂಬಲ ಬೆಲೆ ಸೂಚಿಸಿದೆ. ರಾಜ್ಯ ಸರ್ಕಾರವು ಆಗಸ್ಟ್‌ನಲ್ಲೇ ಹೆಸರುಕಾಳು ಖರೀದಿ ಕೇಂದ್ರಗಳನ್ನು ಪ್ರಾರಂಭಿಸುವಂತೆ ಸೂಚನೆ ನೀಡಿತ್ತು. ಧಾರವಾಡ ಜಿಲ್ಲೆಯಲ್ಲಿ ಒಟ್ಟು 20 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಆದರೆ, ಇಲ್ಲಿಯವರೆಗೆ ಕೇವಲ ನೋಂದಣಿ ಪ್ರಕ್ರಿಯೆ ಮಾತ್ರ ನಡೆಸಲಾಗಿದೆ. ಕಾಳು ಖರೀದಿ ಮಾಡುತ್ತಿಲ್ಲ.ಇದು ಈ ಭಾಗದ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಹೆಸರುಕಾಳು ಬೆಳೆದವರಿಗೆ ಸಂಕಷ್ಟ
ಧಾರವಾಡ ಸೇರಿದಂತೆ ಸುತ್ತಮುತ್ತಲಿನ ಭಾಗದ ಜನ ಹೆಸರುಕಾಳು ಬೆಳೆದು ಅದನ್ನು ಮಾರಾಟ ಮಾಡಲು ಸಾಧ್ಯವಾಗದೆ. ಸೂಕ್ತ ಸಂಗ್ರಹ ವ್ಯವಸ್ಥೆಯೂ ಇಲ್ಲದೆ ಪರದಾಡುತ್ತಿದ್ದಾರೆ. ಜಿಲ್ಲಾಡಳಿತ ಖರೀದಿ ಕೇಂದ್ರವನ್ನೇನೋ ತೆಗೆದಿದೆ. ಆದರೆ, ಹೆಸರುಕಾಳು ಖರೀದಿ ಮಾಡುವ ಬಗ್ಗೆ ಮಾತ್ರ ಇಲ್ಲಿಯವರೆಗೆ ಯಾವುದೇ ಮಾಹಿತಿ ನೀಡಿಲ್ಲ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ಧಾರವಾಡ, ನವಲಗುಂದ, ಅಣ್ಣಿಗೇರಿ, ಕುಂದಗೋಳ, ಮೊರಬ, ಆರೇಕುರಹಟ್ಟಿ, ಬ್ಯಾಹಟ್ಟಿ, ನೂಲ್ವಿ ಸೇರಿ 20 ಕೇಂದ್ರಗಳಲ್ಲಿ ಈ ವರೆಗೆ 4,123 ರೈತರು ಹೆಸರುಕಾಳು ಖರೀದಿಗೆ ಕೊಡಲು ನೋಂದಣಿ ಮಾಡಿಕೊಂಡಿದ್ದಾರೆ.
ಗದಗ ಹಾಗೂ ಧಾರವಾಡ ಜಿಲ್ಲೆಯ ಮುಕ್ತ ಮಾರುಕಟ್ಟೆಯಲ್ಲಿ ಹೆಸರುಕಾಳು ದರ ಕಡಿಮೆ ಇದೆ. ಹುಬ್ಬಳ್ಳಿ ಎಪಿಎಂಸಿಯಲ್ಲಿ ಹೆಸರುಕಾಳು ಬುಧವಾರ ಪ್ರತಿ ಕ್ವಿಂಟಾಲ್‌ಗೆ 6,500 ರೂಪಾಯಿಗೆ ಮಾರಾಟವಾಗಿದೆ. ಬೆಂಬಲ ಬೆಲೆಯಡಿ ಪ್ರತಿ ಕ್ವಿಂಟಾಲ್‌ಗೆ 8,682 ರೂ. ನಿಗದಿ ಮಾಡಲಾಗಿದೆ. 2 ಸಾವಿರ ರೂಪಾಯಿಗೂ ಹೆಚ್ಚು ವ್ಯತ್ಯಾಸ ಇರುವುದರಿಂದ ರೈತರು ಬೆಂಬಲ ಬೆಲೆ ಅಡಿಯಲ್ಲಿ ಯಾವಾಗ ಹೆಸರುಕಾಳು ಖರೀದಿ ಆಗುತ್ತದೆಯೋ ಎಂದು ಕಾದು ಕುಳಿತಿದ್ದಾರೆ. ರೈತರು ನಿತ್ಯವೂ ಖರೀದಿ ಕೇಂದ್ರಗಳಿಗೆ ಹೋಗಿ ಕೇಳಿದರೂ, ಅಧಿಕಾರಿಗಳಿಂದ ಸಮರ್ಪಕ ಉತ್ತರ ಬರುತ್ತಿಲ್ಲ. ಖರೀದಿ ಕೇಂದ್ರಗಳಲ್ಲಿ ಸಾಫ್ಟ್‌ವೇರ್ ಅಳವಡಿಕೆ ಹಾಗೂ ಪರಿಶೀಲನೆ ಕೆಲಸ ನಡೆಯುತ್ತಿದೆ. ಇನ್ನೆರಡು ದಿನದಲ್ಲಿ ಖರೀದಿ ಮಾಡಲಾಗುತ್ತದೆ ಎಂದು ಅಧಿಕಾರಿಗಳು ರೈತರಿಗೆ ಹೇಳಿ ಕಳುಹಿಸುತ್ತಿದ್ದಾರೆ.
ಖರೀದಿ ಪ್ರಕ್ರಿಯೆಯನ್ನು ಅನಗತ್ಯ ವಿಳಂಬ ಮಾಡುತ್ತಿರುವುದರಿಂದ ರೈತರು ಅನಿವಾರ್ಯವಾಗಿ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ. ಬೆಂಬಲ ಬೆಲೆಯಲ್ಲಿ ಖರೀದಿ ಆರಂಭವಾಗುತ್ತಿದ್ದಂತೆ ದೊಡ್ಡ ಪ್ರಮಾಣದಲ್ಲಿ ಹೆಸರುಕಾಳು ಇಲ್ಲಿಗೂ ಬರುತ್ತದೆ. ಈ ಮೂಲಕ ಅಧಿಕಾರಿಗಳು ಯಾರಿಗೆ ಲಾಭ ಮಾಡಿಕೊಡಲು ಹೊರಟಿದ್ದಾರೆ ಎಂದು ರೈತರು ಪ್ರಶ್ನೆ ಮಾಡುತ್ತಿದ್ದಾರೆ.
2024ರ ಮುಂಗಾರು ಹಂಗಾಮಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ಒಟ್ಟು 2,70,840 ಹೆಕ್ಟೇರ್ ಬಿತ್ತನೆ ಪ್ರದೇಶ ನಿಗದಿ ಮಾಡಲಾಗಿತ್ತು. ಇದರಲ್ಲಿ ಪ್ರಮುಖ ಬೆಳೆ ಹೆಸರು 67,150 ಹೆಕ್ಟೇರ್ ಬಿತ್ತನೆಯ ಗುರಿ ಇತ್ತು. ಆದರೆ, ಗುರಿ ಮೀರಿ ಹೆಸರು ಬಿತ್ತನೆಯಾಗಿದ್ದು, 94,956 ಹೆಕ್ಟೇರ್‌ನಲ್ಲಿ ಬೆಳೆಯಲಾಗಿದೆ. ಸುಮಾರು 27ಸಾವಿರ ಹೆಕ್ಟೇರ್ ಹೆಚ್ಚು ಬಿತ್ತನೆಯಾಗಿದೆ. ಹಾಗಾಗಿ, ಗುರಿ ಮೀರಿ ಬಿತ್ತನೆಯಾಗಿದ್ದು, ನಿರೀಕ್ಷೆಗಿಂತ ಹೆಚ್ಚು ಫಸಲು ಬಂದಿದೆ. ಹೆಸರುಕಾಳು ಫಸಲು ಕೈಗೆ ಬಂದು ಒಂದೂವರೇ ತಿಂಗಳು ಕಳೆದಿದೆ.
ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿಲ್ಲ ಎಂದು ಬೆಂಬಲ ಬೆಲೆ ಖರೀದಿ ಕೇಂದ್ರಗಳಿಗೆ ಕೊಡಬೇಕೆಂದರೆ ಪ್ರಕ್ರಿಯೆ ಇನ್ನೂ ಶುರುವಾಗಿಲ್ಲ.ಈಗಾಗಲೇ ಇದ್ದ ಫಸಲನ್ನು ದಲ್ಲಾಳಿಗೆ ಕೊಟ್ಟು ಬಂದಿದ್ದೇವೆ. ಸಣ್ಣ ರೈತರು ಫಸಲು ಇಟ್ಟುಕೊಳ್ಳಲು ಪರದಾಡುತ್ತಿದ್ದಾರೆ. ಜಿಲ್ಲಾಡಳಿತ ಕೂಡಲೇ ಹೆಸರುಕಾಳು ಖರೀದಿ ಆರಂಭಿಸಬೇಕು ಎಂದು ರೈತ ಮುಖಂಡರಾದ ಶಿವಣ್ಣ ಹುಬ್ಬಳ್ಳಿ ಹಾಗೂ ಪಾಟೀಲ್ ಎನ್ನುವವರು ಒತ್ತಾಯಿಸಿದ್ದಾರೆ.












Click it and Unblock the Notifications