Malnad Weather: ಮಲೆನಾಡಿನ ಕಾಫಿ, ಅಡಿಕೆ ಮತ್ತು ಕಾಳುಮೆಣಸು ಇಳುವರಿಗೆ ಭಾರೀ ಹೊಡೆತ ಕೊಟ್ಟ ಬಿಸಿಲು
ಚಿಕ್ಕಮಗಳೂರು, ಮೇ. 07: ಈ ಬಾರಿಯ ಬೇಸಿಗೆಯ ಧಗೆ ಉತ್ತರ ಕರ್ನಾಟಕ ಮತ್ತು ಬಯಲುಸೀಮೆ ಭಾಗದಲ್ಲಿ ಮಾತ್ರ ತನ್ನ ಝಳ ತೋರಿಸಿಲ್ಲ, ಬದಲಿಗೆ ಮಲೆನಾಡು ಭಾಗದಲ್ಲಿಯೂ ಭಾರಿ ಪ್ರಭಾವ ಬೀರಿದೆ. ಜನರ ಜೊತೆಗೆ ಬೆಳೆಗಳ ಮೇಲೂ ಕೆಟ್ಟ ಪರಿಣಾಮ ಬೀರಿದ್ದು, ಇಳುವರಿ ಕಡಿಮೆಯಾಗುವ ಆತಂಕದಲ್ಲಿದ್ದಾರೆ ಮಲೆನಾಡ ಮಂದಿ.
ಮಲೆನಾಡಿನ ಕಾಫಿ, ಅಡಿಕೆ ಮತ್ತು ಕಾಳು ಮೆಣಸಿನ ಬೆಳೆಗಳ ಮೇಲೆ ಬಿಸಿಗಾಳಿ ಜತೆಗೆ ತೀವ್ರ ತಾಪಮಾನ ಪರಿಣಾಮ ಬೀರಿದೆ. ಉಷ್ಣಾಂಶದ ಮಟ್ಟವು 36 ಡಿಗ್ರಿ ಸೆಲ್ಸಿಯಸ್‌ಗೆ ಏರುವುದರಿಂದ ವಾಣಿಜ್ಯ ಬೆಳೆಗಳಾದ ಕಾಫಿ, ಅಡಿಕೆ ಮತ್ತು ಕಾಳುಮೆಣಸು ತೀವ್ರವಾಗಿ ಹಾನಿಗೊಳಗಾಗಿವೆ. ಭೂಮಿಯಲ್ಲಿ ತೇವಾಂಶದ ಕೊರತೆಯಿಂದಾಗಿ ಪೀಚು ಅಡಿಕೆಗಳು ಬೀಳಲು ಪ್ರಾರಂಭಿಸಿದವು.

ಅಡಿಕೆ, ಕಾಳು ಮೆಣಸು, ಕಾಫಿ ಮೇಲೆ ಬಿಸಿಲಿನ ಪ್ರಭಾವ
ಯಾವಾಗಲು ಹಸಿರಿನಿಂದ ಕೂಡಿರುವ ಮಲೆನಾಡಿನ ಪ್ರದೇಶದಲ್ಲಿ ಈ ಬಾರಿ ಮಳೆಗಾಗಿ ಜನ ಕಾಯುತ್ತಿದ್ದರು. ಕಳಸ ಮತ್ತು ಮೂಡಿಗೆರೆ ತಾಲೂಕಿನಲ್ಲಿ ಒಂದು ಅಥವಾ ಎರಡು ಬಾರಿ ಸಾಧಾರಣ ಮಳೆಯಾಗಿದ್ದರೂ ಕೂಡ ನಂತರ ಬಂದ ಬಿಸಿಗಾಳಿಯು ತೇವಾಂಶವನ್ನು ಕಡಿಮೆ ಮಾಡಿರುವುದು ಬೆಳೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ.
ಈ ಪರಿಣಾಮ ಕೇವಲ ಅಡಿಕೆ ಬೆಳೆಗೆ ಮಾತ್ರ ಸೀಮಿತವಾಗಿಲ್ಲ. ಸುಡುವ ಬಿಸಿಲು ಮತ್ತು ಶಾಖವು ಮೊಳಕೆಯೊಡೆದ ಕಾಫಿ ಬೀಜಗಳ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ. ಬಲಿಯದ ಕಾಳುಗಳು ಕಪ್ಪಾಗಿವೆ ಅಲ್ಲಯೇ ಉದುರಿ ಹೋಗಿವೆ. ಹೀಗಾಗಿ ಇಳುವರಿಯಲ್ಲಿ ಪ್ರಮುಖ ಕುಸಿತಕ್ಕೆ ಕಾರಣವಾಗಿದೆ.

ಸಾಮಾನ್ಯವಾಗಿ, ಕಾಫಿ ಬೆಳೆಯುವವ ರೈತರು ವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಕಾಫಿಯನ್ನು ಆರಿಸಿದ ನಂತರ ಜನವರಿ ಮತ್ತು ಫೆಬ್ರವರಿಯಲ್ಲಿ ಎಸ್ಟೇಟ್‌ನಲ್ಲಿರುವ ಮರಗಳನ್ನು ಕತ್ತರಿಸುತ್ತಾರೆ. ಆದ್ದರಿಂದ, ಕಾಫಿ ಗಿಡಗಳು ಬಿಸಿಲಿಗೆ ಬಲಿಯಾಗುತ್ತವೆ. ಈ ಬಾರಿಯ ಬಿಸಿಲು ಹಿಂದೆಂದೂ ಕಂಡಿರದ ಬಿಸಿಲಾದ ಕಾರಣ ಹೆಚ್ಚಾಗಿಯೇ ಹಾನಿಯಾಗಿದೆ.
ಕಾಫಿ ಇಳುವರಿಯಲ್ಲಿ ತೀವ್ರ ಕುಸಿತ
ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಮ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆಗೆ ಮಾತನಾಡಿ, ಕಾಫಿ ಬೆಳೆಗಳ ಇಳುವರಿಯಲ್ಲಿ ತೀವ್ರ ಕುಸಿತ ಉಂಟಾಗಲಿದೆ. ಇದೇ ರೀತಿಯ ಹವಾಮಾನ ಮುಂದುವರಿದರೆ, ಮುಂದಿನ ವರ್ಷವೂ ಉತ್ತಮ ಬೆಲೆಯನ್ನು ನಾವು ನಿರೀಕ್ಷಿಸಲಾಗುವುದಿಲ್ಲ ಎಂದಿದ್ದಾರೆ.
ಇನ್ನು, " ಅರೇಬಿಕಾ ಕಾಫಿಗೆ ಹೋಲಿಸಿದರೆ ರೊಬಸ್ಟಾ ಕಾಫಿಯ ಬೆಲೆ ತುಸು ಏರಿಕೆಯಾಗಿದೆ. ಆದರೆ ಅರೇಬಿಕಾ ಕಾಫಿಗೆ ಹೋಲಿಸಿದರೆ ರೊಬಸ್ಟಾ ಕಡಿಮೆ ಪ್ರಮಾಣದಲ್ಲಿ ಬೆಳೆಯಲಾಗುತ್ತಿದ್ದು, ಅರೇಬಿಕಾ ಬೆಲೆ ಸ್ಥಿರವಾಗಿಲ್ಲ" ಎನ್ನುತ್ತಾರೆ ಕಾಫಿ ಬೆಳೆಗಾರ ಬೆರನಗೋಡು ಮಹೇಶ್. ಮತ್ತೊಬ್ಬರು ಕಾಫಿ ತೋಟಗಳಲ್ಲಿ ಸೂರ್ಯನ ಕಿರಣಗಳು ಬಿದ್ದು ಹಾನಿಯಾಗುವುದರಿಂದ ಮರ ಕಡಿಯುವುದನ್ನು ಮುಂದೆ ಹಾಕುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ. ಸದ್ಯ ಎಲ್ಲಾ ಸಮಸ್ಯೆಗಳಿಗೆ ಉತ್ತಮ ಮಳೆಯೊಂದೆ ಪರಿಹಾರ ಎಂದು ಕಾದು ಕುಳಿತಿದ್ದಾರೆ ಮಲೆನಾಡಿನ ರೈತರು.












Click it and Unblock the Notifications