ಬೇಸಿಗೆಯಲ್ಲಿ ಪೇರಲ ಬೆಳೆ ನಿರ್ವಹಣೆ; ರೈತರಿಗೆ ಸಲಹೆಗಳು

ರೈತರು ಬೇಸಿಗೆಯಲ್ಲಿ ಪೇರಲ ಬೆಳೆಯನ್ನು ಹೇಗೆ ನಿರ್ವಹಣೆ ಮಾಡಬೇಕು ಎಂದು ಸಲಹೆಗಳನ್ನು ನೀಡಲಾಗಿದೆ. ಬೇಸಿಗೆಯಲ್ಲಿಯೂ ಹಲವು ರೋಗಗಳಿಗೆ ಬೆಳೆಗಳು ತುತ್ತಾಗಿ, ರೈತರು ನಷ್ಟ ಅನುಭವಿಸಬೇಕಾಗುತ್ತದೆ.

ಬೇಸಿಗೆ ಆರಂಭವಾಗಿದೆ. ರೈತರು ಬೆಳೆಗಳ ರಕ್ಷಣೆ ಬಗ್ಗೆ ಗಮನ ಹರಿಸುತ್ತಿದ್ದಾರೆ. ಮಳೆಗಾಲ ಮಾತ್ರವಲ್ಲ ಬೇಸಿಗೆಯಲ್ಲಿಯೂ ಹಲವು ರೋಗಗಳಿಗೆ ಬೆಳೆಗಳು ತುತ್ತಾಗಿ, ರೈತರು ನಷ್ಟ ಅನುಭವಿಸಬೇಕಾಗುತ್ತದೆ. ಬೇಸಿಗೆ ಹಂಗಾಮಿನಲ್ಲಿ ಪೇರಲ ಬೆಳೆ ನಿರ್ವಹಣೆ ಕುರಿತು ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ಬೆಳೆಗಾರರಿಗೆ ಸಲಹೆಗಳನ್ನು ನೀಡಲಾಗಿದೆ. ಒಂದು ಜಿಲ್ಲೆಗೆ ಒಂದು ಉತ್ಪನ್ನ ಯೋಜನೆಯಡಿ ಕೊಪ್ಪಳ ಜಿಲ್ಲೆಗೆ ಪೇರಲ (ಸೀಬೆ) ಆಯ್ಕೆಯಾದ ಬಳಿಕ ಜಿಲ್ಲೆಯಲ್ಲಿ ಪೇರಲ ಬೆಳೆಯ ವಿಸ್ತೀರ್ಣ ದಿನೇ-ದಿನೇ ಹೆಚ್ಚಾಗುತ್ತಿದೆ.

ಒಂದೇ ವರ್ಷದಿಂದ ಇಳುವರಿ ಆರಂಭವಾಗುವ ವಿ. ಎನ್. ಆರ್. ಬಿಹು, ಥೈವಾನ್ ತಳಿಗಳು ಹೆಚ್ಚು ಜನಪ್ರಿಯ ಆಗುತ್ತಿವೆ. ಪೇರಲ ಇತರೇ ಉತ್ತಮ ತಳಿಗಳೆಂದರೆ ಲಕ್ನೋ-49, ಅಲಹಾಬಾದ ಸಫೇದ, ಥೈವಾನ್ ವೈಟ್, ಲಲಿತ ಇವು ಬಿಳಿ ತಿರುಳು ಹೊಂದಿದ ತಳಿಗಳಾದರೆ, ಅರ್ಕಾ ಕಿರಣ, ಅ. ಮೃದುಲಾ, ಥೈವಾನ್ ಫಿಂಕ್, ಗುಜರಾತ ಗೋಲ್ಡ ತಳಿಗಳು ಕೆಂಪು ತಿರುಳು ಹೊಂದಿರುತ್ತವೆ. ಅನೇಕ ಹೈಬ್ರಿಡ್ ತಳಿಗಳು ರೋಗ, ಕೀಟಗಳ ನಿರೋಧಕತೆ ಹೊಂದಿರುವುದಿಲ್ಲ. ಅದರಲ್ಲೂ ಜಂತು ಹುಳುವಿನ ಬಾಧೆ ಥೈವಾನ್ ತಳಿಗಳಲ್ಲಿ ಹೆಚ್ಚು.

Summer Tips To Farmers For Protect Guava Crop

ಹಣ್ಣಿನ ನೊಣ ಮತ್ತು ಟಿ. ಸೊಳ್ಳೆ ಬಾಧೆ ಕೂಡ ಹೆಚ್ಚಾಗಿದ್ದು, ಇತ್ತೀಚೆಗೆ ಹಿಟ್ಟು ತಿಗಣೆ ಒಂದು ಪ್ರಭೇದದ ಎಲ್ಲಾ ಪೇರಲ ತಳಿಗಳನ್ನೂ ಬಾಧಿಸುತ್ತದೆ. ಇದು ಎಲೆಗಳ ತಳಭಾಗದಲ್ಲಿ ಮೊಟ್ಟೆಗಳನ್ನಿಡುವುದರಿಂದ ಹುಳುಗಳು ಎಲೆಗಳಿಗೆ ಅಂಟಿಕೊಂಡು ರಸ ಹೀರುತ್ತವೆ. ಇದರಿಂದ ಎಲೆಗಳ ರಸ ನಾಶವಾಗಿ ಎಲೆ ಮುದರಿಕೊಳ್ಳುತ್ತವೆ ಮತ್ತು ಈ ಕೀಟದಿಂದ ಕಪ್ಪು ಜಿಗಿ ವಸರಿ ಎಲೆ ಮೇಲೆ ಹರಡುವುದರಿಂದ ದ್ಯುತಿಸಂಶ್ಲೇಷಣೆ ಸಾಧ್ಯವಾಗದೇ ಇಳುವರಿ ಕಮ್ಮಿ ಆಗುತ್ತದೆ. ಟೀ ಸೊಳ್ಳೆಯಿಂದ ಕಾಯಿಗಳ ಮೇಲೆ ಕಜ್ಜಿಯಂತೆ ಚುಕ್ಕೆಗಳಾಗಿ ಕಜ್ಜಿ ಆದಂತೆ ಕಾಣುತ್ತದೆ. ಎಲೆ, ಮೊಗ್ಗು, ಹೂ ಗಳಲ್ಲಿ ಗಾದರಿಯಂತಾಗಿ ಗುಳ್ಳೆಗಳು ಕಾಣುತ್ತವೆ. ಎಲೆಗಳಲ್ಲಿ ವಿರೂಪವಾಗುತ್ತವೆ ಮತ್ತು ಕೆಂಪು ಮಚ್ಚೆಗಳಾಗುತ್ತವೆ. ಹೂ ಗಳು ಉದುರಿ ಹೋಗಿ ಅಪಾರ ನಷ್ಟವಾಗುತ್ತದೆ. ಕಾಯಿಗಳ ಮೇಲೆ ಸೂಜಿ ಚುಚ್ಚಿದಂತೆ ಗಾಯಗಳಾಗಿ ಕಜ್ಜಿ ರೋಗದಂತೆ ಕಾಣುತ್ತದೆ.

ರೋಗಗಳ ಹತೋಟಿಗಾಗಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳುಗಳಾದ ಡಾ. ಎಂ. ವಿ. ರವಿ ಹಾಗೂ ಕೃವಿಕೇ (ತೋಟಗಾರಿಕೆ & ಕೃಷಿ ಅರಣ್ಯ) ಸಹಾಯಕ ಪ್ರಾಧ್ಯಾಪಕರಾದ ವಾಮನಮೂರ್ತಿ ಪುರೋಹಿತ ಅವರು ಪೇರಲ ಬೆಳೆಗಾರರಿಗೆ ಕೆಲವು ಸಲಹೆ ನೀಡಿರುತ್ತಾರೆ. ಪೇರಲ ಬೆಳೆಯಲ್ಲಿ ನೀರು ಮತ್ತು ಪೋಷಕಾಂಶಗಳ ನಿರ್ವಹಣೆ ಅತೀ ಅವಶ್ಯಕ. ಈಗ ಬೇಸಿಗೆ ಬಿಸಿಲಿನಲ್ಲಿ ಹೂ/ ಕಾಯಿ ಕಚ್ಚಲು ರಂಜಕ, ಪೊಟ್ಯಾಶ್ ಅಲ್ಲದೇ ಲಘು ಪೋಷಕಾಂಶಗಳಾದ ಸತು (ಜಿಂಕ್), ಮ್ಯಾಗ್ನೇಷಿಯಂ ಸಲ್ಫೇಟ್, ಬೋರಾನ್ ಬಳಕೆ ಕೂಡ ಅತೀ ಅವಶ್ಯಕವಾಗಿದೆ. ನಿಯಮಿತವಾಗಿ ನೀರು ಕೊಡುವುದೂ ಕೂಡ ಅಗತ್ಯ.

Summer Tips To Farmers For Protect Guava Crop

ಟೀ ಸೊಳ್ಳೆ ನಿರ್ವಹಣೆಗಾಗಿ ಬೇವಿನ ಎಣ್ಣೆ 2 ಮಿ. ಲಿ. ಅಥವಾ ಲ್ಯಾಂಬ್ಡಾಸಿಯಾಲೋಥ್ರಿನ್ 1 ಮಿ. ಲಿ. ಅಥವಾ ಮೆಲಾಥಿಯಾನ್ 50 ಇಸಿ 2 ಮಿ. ಲಿ. ಕೀಟನಾಶಕಗಳನ್ನು 15 ದಿನಗಳಿಗೊಮ್ಮೆ ಬದಲಾಯಿಸುತ್ತಾ ಸಿಂಪರಣೆ ಮಾಡುತ್ತಿರಬೇಕು. ಹಣ್ಣಿನ ನೊಣದ ಬಾಧೆ ನಿಯಂತ್ರಣಕ್ಕೆ ಮೆಲಾಥಿಯಾನ್ 50 ಇಸಿ 2 ಮಿ. ಲಿ. ಅಥವಾ ರೋಗರ್ 1.7 ಮಿ. ಲಿ. ಒಂದು ಲೀಟರ್ ನೀರಿಗೆ ಬೆರೆಸಿ ಅದರ ಜೊತೆಗೆ ಪ್ರತಿ ಲೀಟರ್ ನೀರಿಗೆ 10 ಗ್ರಾಂ ಬೆಲ್ಲ ಬೆರೆಸಿ ಸಿಂಪಡಿಸುತ್ತಿರಬೇಕು. ಮಿಥೈಲ್ ಯುಜಿನಾಲ್ ಯುಕ್ತ ಮೋಹಕ ಬಲೆಗಳನ್ನು ಎಕರೆಗೆ 10 ರಂತೆ ಅಳವಡಿಸುವುದರಿಂದ ಈ ಹುಳದ ಬಾಧೆಯನ್ನು ನಿವಾರಿಸಬಹುದು. ಜಂತು ಹುಳುವಿನ ಹತೋಟಿಗಾಗಿ ಎಕರೆಗೆ 1 ಕ್ವಿಂಟಾಲ್ ನಂತೆ ಬೇವಿನ ಇಂಡಿಯನ್ನು ಬಳಸಬೇಕು. ಇದಲ್ಲದೇ, ಸಾವಯವ ಗೊಬ್ಬರದೊಂದಿಗೆ ಪ್ಯಾಸಿಲೋಮೈಸಿಸ್ ಲಿಲಾಸಿನಸ್ ಎನ್ನುವ ಜೈವಿಕಗೊಬ್ಬರವನ್ನು ಪ್ರತಿ ಗಿಡಕ್ಕೆ 30 ಗ್ರಾಂ ನಷ್ಟು ಬಳಸಬೇಕು.

ಪ್ರಮುಖ ರೋಗಗಳು ಯಾವುದು?; ಎಲೆ ಚುಕ್ಕೆ ರೋಗವು ಕ್ಸಾಂತೋಮೋನಾಸ್ ಎನ್ನುವ ದುಂಡಾಣುವಿನಿಂದ ಬರುತ್ತದೆ. ಇದರ ಹತೋಟಿಗಾಗಿ ಗಾಳಿ ಬೆಳಕು ಚೆನ್ನಾಗಿ ಆಡುವಂತೆ ಗಿಡಗಳನ್ನು ಬೆಳೆಸಬೇಕು. ಪ್ರತಿ ಗಿಡಕ್ಕೆ ಅರ್ಧ ಕೇಜಿಯಷ್ಟು ಬೇವಿನ ಹಿಂಡಿಯನ್ನು ಬೆರೆಸಿ, ಅದರ ಜೊತೆಗೆ ಬ್ಲೀಚಿಂಗ್ ಪುಡಿಯನ್ನು 30 ಗ್ರಾಂ ನಷ್ಟು ಸೇರಿಸಬೇಕು. ರೋಗ ಬಂದನಂತರ ಸಿ.ಒ.ಸಿ. ಪುಡಿ 3 ಗ್ರಾಂ. ಜೊತೆಗೆ ಅರ್ಧ ಗ್ರಾಂ ಬ್ಯಾಕ್ಟೀರಿಮೈಸಿನ್ ಎನ್ನುವ ದುಂಡಾಣು ನಾಶಕವನ್ನು 1 ಲೀಟರ್ ನೀರಿಗೆ ಬೆರೆಸಿ 15 ದಿನಗಳಿಗೊಮ್ಮೆ ಸಿಂಪಡಿಸಬೇಕು. ಇದಲ್ಲದೇ ಹೊಲವನ್ನು ಕಸಮುಕ್ತವಾಗಿ ಇಡಬೇಕು. ಇದಲ್ಲದೇ ಎಕರೆಗೆ 10 ಕೆಜಿ ಯಷ್ಟು ಬ್ಲೀಚಿಂಗ್ ಪುಡಿ ಬಳಸಬೇಕು ಮತ್ತು ಲಘು ಪೋಷಕಾಂಶಗಳ ಬಳಕೆ ಅತೀ ಅವಶ್ಯಕ.

ಚಿಬ್ಬು ರೋಗವು ಕೊಲ್ಯಾಟೋಟ್ರಿಕಮ್ ಎನ್ನುವ ಶಿಲೀಂಧ್ರದಿಂದ ಹರಡುತ್ತದೆ. ಇತ್ತೀಚಿನ ದಿನಗಳಲ್ಲಿ ಈ ರೋಗದ ಬಾಧೆ ಹೆಚ್ಚಾಗಿದ್ದು, ನಿರ್ವಹಣೆ ಕಷ್ಟವಾಗುತ್ತಿದೆ. ಇದಕ್ಕಾಗಿ ಕಸದಿಂದ ಮುಕ್ತ ಹೊಲ ಅತೀ ಅವಶ್ಯಕ. ರೋಗದ ಬಾಧೆ ಕಾಣಿಸಿಕೊಂಡಾಗ ಮಿಥೈಲ್‌ಥೈಯೋಫಿನೈಟ್ ಎನ್ನುವ ಶಿಲೀಂಧ್ರನಾಶಕವನ್ನು 1 ಗ್ರಾಂ 1 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಹತ್ತಿರದಲ್ಲಿ ದಾಳಿಂಬೆ ತೋಟಗಳಿರದಂತೆ ನೋಡಿಕೊಳ್ಳಬೇಕು. ಅತೀ ಸಾಂಧ್ರ ಪದ್ಧತಿಯಲ್ಲಿ ಬೇಸಾಯ ಮಾಡಬಾರದು. ಹಸ್ತಾ ಮತ್ತು ಅಂಬೇ ಬಾಹರ್ ನಲ್ಲಿ ಮಾತ್ರ ಹಣ್ಣುಗಳನ್ನು ಬಿಡಬೇಕು. ಈ ರೀತಿಯಾಗಿ ನಿರ್ವಹಣೆ ಮಾಡುವುದರ ಮೂಲಕ ಉತ್ತಮ ಇಳುವರಿ ಮತ್ತು ಆದಾಯವನ್ನು ಪಡೆಯಬಹುದಾಗಿದೆ.

ಆಸಕ್ತ ರೈತರು ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ವಿಸ್ತರಣಾ ಮುಂದಾಳು ಡಾ. ಎಂ. ವಿ. ರವಿ ಅವರನ್ನು 9480696319 ಹಾಗೂ ಸಹಾಯಕ ಪ್ರಾಧ್ಯಾಪಕರು ವಾಮನಮೂರ್ತಿ ಪುರೋಹಿತರನ್ನು 9482672039 ಸಂಖ್ಯೆ ಮೂಲಕ ಸಂಪರ್ಕಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+