ಉಡುಪಿ: ಗದ್ದೆಗಿಳಿದು ವಿದ್ಯಾರ್ಥಿಗಳಿಗೆ ಕೃಷಿ ಪಾಠ ಹೇಳಿಕೊಟ್ಟ ಶಿಕ್ಷಕರು
ಉಡುಪಿ, ಜುಲೈ.11: ಭತ್ತ ಕೃಷಿಯಿಂದ ಕರಾವಳಿಯ ಜನರು ವಿಮುಖರಾಗುತ್ತಿದ್ದಾರೆ. ಭತ್ತದ ಗದ್ದೆಗಳಲ್ಲಿ ಅಪಾರ್ಟ್ ಮೆಂಟ್ ಗಳು ತಲೆ ಎತ್ತುತ್ತಿವೆ. ಹೀಗಾಗಿ ಹಿರಿಯರೇ ಕೃಷಿ ಚಟುವಟಿಕೆಗಳಿಂದ ದೂರವಾಗುತ್ತಿದ್ದಾರೆ.
ಇನ್ನು ಈ ತಲೆಮಾರಿನ ಮಕ್ಕಳಿಗೆ ಕೃಷಿಯ ಬಗ್ಗೆ ಗೊತ್ತಿರಲು ಹೇಗೆ ಸಾಧ್ಯ? ಅದಕ್ಕಾಗಿ ಈ ಹೊತ್ತಿನಲ್ಲೇ ಉಡುಪಿಯಲ್ಲಿ ವಿದ್ಯಾರ್ಥಿಗಳಿಗೆ ಅವರ ಕೈಯಿಂದಲೇ ಭತ್ತದ ಕೃಷಿ ಮಾಡಿಸುವ ಮೂಲಕ ಅವರನ್ನು ಕೃಷಿಯತ್ತ ಆಕರ್ಷಿಸುವ ಕಾರ್ಯ ನಡೆಯಿತು.

ಸಂಭ್ರಮಿಸಿದ ಮಕ್ಕಳು
ನಿಟ್ಟೂರು ಪ್ರೌಢಶಾಲೆಯ 50ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಸ್ವತಃ ನೇಜಿ ನೆಟ್ಟು, ಭತ್ತ ಕೃಷಿಯ ವಿವಿಧ ಹಂತಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ನಿಜಕ್ಕೂ ನಿಟ್ಟೂರು ಶಾಲೆಯ ವಿದ್ಯಾರ್ಥಿಗಳು ಅದೃಷ್ಟವಂತರು. ಕಾರಣ ಪಠ್ಯೇತರ ಚಟುವಟಿಕೆಯ ಅಂಗವಾಗಿ ಇವರಿಗೆ ಗದ್ದೆಯಲ್ಲೇ ಭತ್ತದ ಕೃಷಿಯ ಬಗ್ಗೆ ಹೇಳಿಕೊಡಲಾಯಿತು.
ಇಂತಹದ್ದೊಂದು ಅಪೂರ್ವ ಅವಕಾಶ ಒದಗಿಸಿದ್ದು ನಿಟ್ಟೂರು ಪ್ರೌಢಶಾಲೆಯ ಆಡಳಿತ ವರ್ಗ. 50ಕ್ಕೂ ಹೆಚ್ಚಿನ ವಿದ್ಯಾರ್ಥಿಗಳನ್ನು ಗದ್ದೆಗೆ ಕರೆದುಕೊಂಡು ಬಂದು, ಅವರ ಕೈಯಿಂದಲೇ ನೇಜಿ ನೇಡಿಸುವ ಅಪರೂಪದ ಕಾರ್ಯಕ್ರಮ ನಡೆಸಿಕೊಟ್ಟರು.

ವಿದ್ಯಾರ್ಥಿಗಳಿಗೆ ಪ್ರೇರಣೆ
ಇದೇ ಮೊದಲ ಬಾರಿಗೆ ಗದ್ದೆಗೆ ಇಳಿದ ಮಕ್ಕಳು ತುಂಬಾ ಖುಷಿಯಿಂದಲೇ ಭತ್ತದ ನೇಜಿ ನೆಟ್ಟು ಸಂಭ್ರಮಪಟ್ಟರು. ಹಾಗೆ ನೋಡಿದರೆ, ಇವರಲ್ಲಿ ಬಹುತೇಕರು ಗ್ರಾಮೀಣ ಪ್ರದೇಶದವರೇ. ತಮ್ಮ ತಮ್ಮ ಮನೆಗಳಲ್ಲಿ ಭತ್ತದ ಗದ್ದೆಗಳಿದ್ದರೂ ಇವರು ಮಾತ್ರ ಈ ಹಂತದಲ್ಲಿ ಗದ್ದೆಗೆ ಇಳಿಯುತ್ತಿರಲಿಲ್ಲ.
ಈ ತಲೆಮಾರಿನ ವಿದ್ಯಾರ್ಥಿಗಳ ಪೈಕಿ ಶೇ.95 ಕ್ಕೂ ಹೆಚ್ಚು ಜನರು ಉದ್ಯೋಗ ಅರಸಿ ಬೇರೆ ಬೇರೆ ಸ್ಥಳಕ್ಕೆ ಹೋಗುತ್ತಾರೆ. ಉಳಿದ ಶೇ.5 ಮಂದಿ ಊರಲ್ಲೇ ಉಳಿದರೂ ಕೃಷಿಯ ಬಗ್ಗೆ ಅಂತಹ ಆಸಕ್ತಿ ತೋರುತ್ತಿಲ್ಲ.
ಕರಾವಳಿಯ ಪ್ರಮುಖ ಬೆಳೆಯೇ ಭತ್ತ. ಹೀಗಾಗಿ ಭತ್ತದ ಕೃಷಿಯ ಬಗ್ಗೆ ವಿದ್ಯಾರ್ಥಿಗಳಿಗೆ ಸ್ವತಃ ಅವರ ಕೈಯಿಂದಲೇ ಮಾಡಿಸಿ ಪ್ರೇರಣೆ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು.

ವಿವಿಧ ಹಂತಗಳ ಮಾಹಿತಿ
ಮಕ್ಕಳಿಗೆ ನೇಜಿ ನೆಡುವುದನ್ನು ಕಲಿಸುವುದರ ಜೊತೆಗೆ ಅವರಿಗೆ ಭತ್ತದ ಕೃಷಿಯ ವಿವಿಧ ಹಂತಗಳ ಬಗ್ಗೆಯೂ ಮಾಹಿತಿ ನೀಡಲಾಯಿತು.
ಇಷ್ಟಕ್ಕೇ ಸಾಲದು, ಪ್ರತೀ ಶಾಲೆಯಲ್ಲೂ ತಿಂಗಳಿಗೊಮ್ಮೆ ವಿದ್ಯಾರ್ಥಿಗಳಿಗೆ ಕೃಷಿ ಪಾಠ ಅಂತ ಮೀಸಲಿಟ್ಟರೆ ಮಕ್ಕಳಲ್ಲಿ ಕೃಷಿಯ ಬಗ್ಗೆ ಸ್ವಲ್ಪವಾದರೂ ಆಸಕ್ತಿ ಹುಟ್ಟುವಂತೆ ಮಾಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಯಬೇಕಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.

ರಾಜ್ಯದಲ್ಲಿ ಮಾದರಿ ಶಾಲೆ
ನಿಟ್ಟೂರು ಪ್ರೌಢಶಾಲೆ ಹಲವು ಬಾರಿ ರಾಜ್ಯದಲ್ಲಿ ಮಾದರಿಯೆನಿಸಿಕೊಂಡಿತ್ತು. ಬಡ ವಿದ್ಯಾರ್ಥಿಗಳ ಕಷ್ಟಕಾರ್ಪಣ್ಯಕ್ಕೆ ನೆರವಾಗುವ ಮೂಲಕ ಮಕ್ಕಳ ಪಾಲಿಗೆ ಈ ಶಾಲೆ ನಂದಗೋಕುಲ ಎನಿಸಿಕೊಂಡಿದೆ. ನೀವು ನಂಬಲೇಬೇಕು. ರಾಜ್ಯದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಬಿಸಿಯೂಟದ ಪರಿಕಲ್ಪನೆ ಮೊದಲು ಮೂಡಿಸಿದ್ದೇ ಇದೇ ಶಾಲೆ.












Click it and Unblock the Notifications