ರಾಜ್ಯದ ರೇಷ್ಮೆ ರೈತರ ಮೊರೆ ಕೇಳುವುದೆ ದೊರೆಗೆ?

ರಸ್ತೆ ಬದಿಯಲ್ಲಿ ಸರ್ಕಾರದ ಸಾಧನೆಗಳನ್ನು ಬಿಂಬಿಸುವ ಪೋಸ್ಟರ್‍ಗಳನ್ನು ರೈತರು ಹರಿದುಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಸಂಕಷ್ಟದಲ್ಲಿರುವ ರೈತರ ಸಮಸ್ಯೆಯನ್ನು ಬಗೆಹರಿಸದಿದ್ದರೂ ರಸ್ತೆಯುದ್ದಕ್ಕೂ ಜಾಹೀರಾತು ನೀಡಿ ಸಾಧನೆ ಸಾಧನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ಸಾಧನೆ ಮಾಡಿರುವ ರಾಜ್ಯ ಸರ್ಕಾರ ರೈತರ ಸಮಸ್ಯೆಯನ್ನು ಬಗೆಹರಿಸಿಲ್ಲವೆಂದು ರೈತರು ಸಿಎಂ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬೆಳಿಗ್ಗೆ ಹತ್ತೂವರೆಯಿಂದ ಸಂಜೆ ಐದುಗಂಟೆಯಾದರೂ ರಸ್ತೆ ಬಿಟ್ಟು ಕದಲದ ರೇಷ್ಮೆ ಬೆಳೆಗಾರರು ಶಾಸಕ ಸೋಮಶೇಖರ್ ರೆಡ್ಡಿಗೂ ದಿಗ್ಬಂಧನ ವಿಧಿಸಿ ರೇಷ್ಮೆ ಗೂಡಿಗೆ ಬೆಂಬಲ ಬೆಲೆ ನೀಡುವವರೆಗೂ ರಾಮನಗರ ಬಿಟ್ಟು ತೆರಳದಂತೆ ಮಾಡಿದರು. ಹಳ್ಳಿಗಾಡಿನ ಮಂದಿಗೆ ಮೊದಲಿನಿಂದಲೂ ಬದುಕಿಗೆ ಆಶ್ರಯವಾಗಿರುವ ರೇಷ್ಮೆ ಬೆಳೆಯ ಬೆಲೆ ಮಾರುಕಟ್ಟೆಯಲ್ಲಿ ದಿಡೀರನೆ ಕುಸಿತಗೊಂಡಿದೆ. ಶೇಕಡಾ 50ರಷ್ಟು ಬೆಲೆ ಇಳಿಕೆಯಾಗಿರುವುದರಿಂದ ರೈತ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಇದೆ ಎಂದು ರೈತಸಂಘದ ಮುಖಂಡ ಸಿ.ಪುಟ್ಟಸ್ವಾಮಿ ಆಕ್ರೋಶವ್ಯಕ್ತಪಡಿಸಿದರು.
ಇದೇ ರೀತಿ ರೇಷ್ಮೆ ರೀಲರ್‍ಸ್‌ಗಳು ಕೂಡ ಬೆಲೆ ಇಳಿಕೆಯಿಂದ ದಿಕ್ಕು ತೋಚಲಾರದೆ ಬೀದಿಗೆ ಬೀಳುವ ಪರಿಸ್ಥಿತಿ ತಲುಪಿದ್ದಾರೆ. ಅಧಿಕಾರಿಗಳು ಮತ್ತು ಸಚಿವರುಗಳು ರೇಷ್ಮೆ ಬೆಳೆಗಾರರಿಗೆ ಅನ್ಯಾಯವನ್ನು ಸರಿಪಡಿಸದಿದ್ದರೆ ಸಚಿವರ ಹಾಗೂ ಅಧಿಕಾರಿಗಳ ಮನೆಗೆ ಬೀಗ ಜಡಿದು ಪ್ರತಿಭಟನೆ ನಡೆಸಬೇಕಾಗುತ್ತದೆಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ಎಚ್ಚರಿಸಿದರು. ರೈತರು ಪ್ರತಿಭಟನೆ ನಡೆಸಿದ ನಂತರ ಉಸ್ತುವಾರಿ ಸಚಿವ ಬಚ್ಚೇಗೌಡ ಮತ್ತು ಅಧಿಕಾರಿಗಳು ನೂಲು ಖರೀದಿ ಕೇಂದ್ರಕ್ಕೆ ತಕ್ಷಣವೆ 3 ಕೋಟಿ ರು. ಬಿಡುಗಡೆ ಮಾಡುತ್ತೇವೆಂದು ಹೇಳಿದ್ದಾರೆಂದು ಶಾಸಕ ಕೆ.ರಾಜು ಸ್ಥಳಕ್ಕೆ ಭೇಟಿ ನೀಡಿದ ನಂತರ ಹೇಳಿದರು.
3 ಕೋಟಿ ರು. ಹಣ ಬಿಡುಗಡೆಯಿಂದ ರೈತರ ಸಮಸ್ಯೆ ಬಗೆಹರಿಯುವುದಿಲ್ಲ. ಖರೀದಿ ಕನಿಷ್ಠ 25 ಕೋಟಿ ರು.ಯಾದರೂ ಹಣ ಬಿಡುಗಡೆ ಮಾಡಿದರೆ ರೈತರ ಸಮಸ್ಯೆಯನ್ನು ಬಗೆಹರಿಸಬಹುದು. ರೈತರ ಹೋರಾಟದಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಂದರೆ ಸರ್ಕಾರವೇ ಹೊಣೆಯಾಗುತ್ತದೆಂದು ಸ್ಥಳೀಯ ಶಾಸಕ ಕೆ.ರಾಜು ಎಚ್ಚರಿಸಿದರು.
ಎಷ್ಟೇ ಶ್ರಮ ಪಟ್ಟರೂ ರೈತರು ಸಮಸ್ಯೆಯ ಸುಳಿಯಲ್ಲೇ ಸಿಲುಕಿ ನಲುಗುವಂತಾಗಿದೆ. ಮತ್ತೆ ಮತ್ತೆ ರೈತರು ಸಂಕಷ್ಟಕ್ಕೊಳಗಾಗುವುದು ಮರುಕಳಿಸಬಾರದು. ಆ ಕಾರಣಕ್ಕಾಗಿ ರೇಷ್ಮೆ ಬೆಳೆಗಾರರು ಒಂದು ನಿಯೋಗವನ್ನ ತಕ್ಷಣವೇ ಸಿಎಂ ಯಡಿಯೂರಪ್ಪನವರೊಂದಿಗೆ ಚರ್ಚೆ ನಡೆಸಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲಾಗುವುದೆಂದು ರೈತರಿಂದ ದಿಗ್ಬಂಧನಕ್ಕೊಳಗಾಗಿದ್ದ ಶಾಸಕ ಸೋಮಶೇಖರ್ ರೆಡ್ಡಿ ಹೇಳಿದರು.
ರಾಮನಗರ ಮಾತ್ರವಲ್ಲ ರಾಜ್ಯದ ಎಲ್ಲೆಡೆ ರೇಷ್ಮೆ ಬೆಳೆಯುವ ರೈತರಿಂದ ವ್ಯಾಪಕವಾಗಿ ಪ್ರತಿಭಟನೆಗಳಾಗುತ್ತಿವೆ. ರೈತರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿರುವ ಮತ್ತು ರೈತರಿಗಾಗಿಯೇ ಮುಂಗಡ ಪತ್ರ ಮಂಡಿಸಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ರೈತರ ಮೊರೆ ಕೇಳುವುದೆ?











Click it and Unblock the Notifications