ಅಂಚೆ ಕಚೇರಿಯಲ್ಲಿಯೇ ಸಿಗಲಿದೆ ರೈತರಿಗೆ ಸಾಲ, ಅಲ್ಲೇ ಮರು ಪಾವತಿಸಿ
ಬೆಂಗಳೂರು, ಮಾರ್ಚ್ 01; ಭಾರತದ ಗ್ರಾಮೀಣ ಮಟ್ಟದಲ್ಲಿ ಉತ್ತಮ ಸಂಪರ್ಕ ಜಾಲ ಹೊಂದಿರುವ ಭಾರತೀಯ ಅಂಚೆ ಇಲಾಖೆ ರೈತರಿಗೆ ಸಹಾಯಕವಾಗುವ ಕಾರ್ಯಕ್ರಮವನ್ನು ರೂಪಿಸುತ್ತಿದೆ. ರೈತರು ವಿವಿಧ ಸಾಲವನ್ನು ಇನ್ನು ಅಂಚೆ ಕಚೇರಿಯಲ್ಲಿಯೇ ಪಡೆಯಬಹುದು, ಅಲ್ಲದೇ ಇಎಂಐ ಸಹ ಇಲ್ಲೇ ಪಾವತಿ ಮಾಡಬಹುದಾಗಿದೆ.
ಕರ್ನಾಟಕದ ಅಂಚೆ ವೃತ್ತ ಇಂತಹ ಕಾರ್ಯಕ್ರಮವೊಂದನ್ನು ರೂಪಿಸಿದೆ. ಹೆಚ್‌ಡಿಎಫ್‌ಸಿ ಬ್ಯಾಂಕ್ ಜೊತೆ ಕೈ ಜೋಡಿಸಿ ರೈತರಿಗೆ ನೆರವು ನೀಡಲು ಮುಂದಾಗಿದೆ. ಶೀಘ್ರವೇ ಗ್ರಾಮದಲ್ಲಿರುವ ಅಂಚೆ ಕಚೇರಿಯಲ್ಲಿ ರೈತರು ಹೆಚ್‌ಡಿಎಫ್‌ಸಿ ಬ್ಯಾಂಕ್ ಸಾಲವನ್ನು ಪಡೆಯಬಹುದಾಗಿದೆ. ಬ್ಯಾಂಕ್ ಸಾಲ ಪಡೆದವರು ಪಟ್ಟಣಕ್ಕೆ ಹೋಗದೇ ಅಂಚೆ ಕಚೇರಿಯಲ್ಲಿಯೇ ಸಾಲದ ಕಂತು ಕಟ್ಟಬಹುದಾಗಿದೆ.

ರಾಜ್ಯದಲ್ಲಿ ಇದು ಮೊದಲ ಇಂತಹ ಪ್ರಯತ್ನವಾಗಿದೆ. ಅಂಚೆ ಇಲಾಖೆ ಗ್ರಾಮೀಣ ಮಟ್ಟದಲ್ಲಿ ಜನರಿಗೆ ಸುಲಭವಾಗಿ ಲಭ್ಯವಿದೆ. ಆದ್ದರಿಂದ ಇಂತಹ ಯೋಜನೆಯಿಂದ ರೈತರು, ಬ್ಯಾಂಕ್ ಮತ್ತು ಅಂಚೆ ಇಲಾಖೆಗೆ ಸಹ ಅನುಕೂಲವಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಬ್ಯಾಂಕ್‌ನಲ್ಲಿ ಲಭ್ಯವಿರುವ ಸಾಲದ ಸೌಲಭ್ಯಗಳ ಕುರಿತು ಗ್ರಾಮೀಣ ಜನರಿಗೆ ಸರಿಯಾದ ಮಾಹಿತಿ ಇಲ್ಲ. ಅಂಚೆ ಕಚೇರಿಯಲ್ಲಿ ಸ್ಥಳೀಯ ಭಾಷೆಯಲ್ಲಿಯೇ ಇಂತಹ ಮಾಹಿತಿ ಸಿಗುವ ವ್ಯವಸ್ಥೆ ಮೂಲಕ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಅಂಚೆ ಇಲಾಖೆ ಸಿಪಿಎಂಜೆ ರಾಜೇಂದ್ರ ಎಸ್. ಕುಮಾರ್ ಈ ಕುರಿತು ಮಾತನಾಡಿದ್ದಾರೆ, "ರೈತರಿಗೆ ಆರ್ಥಿಕ ನೆರವು ನೀಡಲು ಗ್ರಾಮೀಣ ಮಟ್ಟದಲ್ಲಿ ಬ್ಯಾಂಕ್ ಜೊತೆ ಅಂಚೆ ಇಲಾಖೆ ಸಹಕಾರ ನೀಡಲಿದೆ. ಬ್ಯಾಂಕಿನ ಅರ್ಹತೆಗೆ ಆಧಾರದಲ್ಲಿ ಅಂಚೆ ಕಚೇರಿಯಲ್ಲಿಯೇ ಸಾಲ ನೀಡಲಾಗುತ್ತದೆ. ಯಾರಿಗೆ ಸಾಲ ನೀಡಬೇಕು ಎಂಬುದನ್ನು ಬ್ಯಾಂಕ್ ನಿರ್ಧರಿಸಲಿದೆ" ಎಂದು ಹೇಳಿದರು.

"ಸಾಲ ನೀಡುವುದು ಮಾತ್ರವಲ್ಲ ಬ್ಯಾಂಕಿನ ಸಾಲವನ್ನು ಅಂಚೆ ಕಚೇರಿಯಲ್ಲಿಯೇ ರೈತರು ಪಾವತಿ ಮಾಡಬಹುದಾಗಿದೆ. ಬ್ಯಾಂಕಿನ ಕೃಷಿ ಸಾಲ ಪಡೆಯಲು ಅರ್ಜಿಗಳನ್ನು ಸಹ ಅಂಚೆ ಕಚೇರಿಯಲ್ಲಿ ಪಡೆಯಬಹುದಾಗಿದೆ. ಇದರಿಂದಾಗಿ ರೈತರು ಬ್ಯಾಂಕ್ ಹುಡುಕಿಕೊಂಡು ಪಟ್ಟಣಕ್ಕೆ ಹೋಗುವುದು ತಪ್ಪಲಿದೆ. ಅವರ ಸಮಯವು ಉಳಿತಾಯವಾಗಲಿದೆ" ಎಂದು ವಿವರಣೆ ನೀಡಿದರು.
ಬ್ಯಾಂಕ್ ಸಾಲದ ಇಎಂಐಯನ್ನು ಇ-ಪೇಮೆಂಟ್ ಮೂಲಕ ಕಟ್ಟಬಹುದು. ಅಂಚೆ ಕಚೇರಿಯಲ್ಲಿಯೂ ಇದೇ ಮಾದರಿಯಲ್ಲಿ ಪಾವತಿ ಮಾಡಲು ವ್ಯವಸ್ಥೆ ಮಾಡಲಾಗುತ್ತದೆ. ಹೆಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಮೀಣ ಕ್ಷೇತ್ರದ ರೈತರಿಗಾಗಿ ಹಲವು ಯೋಜನೆಗಳನ್ನು ರೂಪಿಸಿದೆ. ಇದು ಅಂಚೆ ಕಚೇರಿ ಮೂಲಕ ರೈತರಿಗೆ ಸಿಗಲಿದೆ ಎಂದು ಅಂದಾಜಿಸಲಾಗಿದೆ.
ಪಶುಸಂಗೋಪನೆ ಸಾಲ, ತೋಟಗಾರಿಕೆ ಸಾಲ, ಕೃಷಿ ಸಾಲ, ಫೌಲ್ಟ್ರಿಂ ಫಾರಂ ಸಾಲ ಸೇರಿದಂತೆ ವಿವಿಧ ಸಾಲಗಳು ಹೆಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಲಭ್ಯವಿದೆ. ಆದರೆ ರೈತರಿಗೆ ಈ ಕುರಿತು ಸರಿಯಾದ ಮಾಹಿತಿ ಇಲ್ಲ. ಅಂಚೆ ಕಚೇರಿಯಲ್ಲಿಯೇ ಮಾಹಿತಿ ಸಾಲ ಸಿಗುವುದರಿಂದ ಮಧ್ಯವರ್ತಿಗಳ ಕಾಟವಿಲ್ಲದೇ ರೈತರು ತಮಗೆ ಅಗತ್ಯ ಇರುವ ಆರ್ಥಿಕ ನೆರವು ಪಡೆಯಬಹುದಾಗಿದೆ.












Click it and Unblock the Notifications