
ರಾಯಚೂರು ಜಿಲ್ಲೆಯಲ್ಲಿ ಹತ್ತಿ ಬಿಡಿಸಲು ಸಿಗದ ಕೂಲಿ ಕಾರ್ಮಿಕರು, ರೈತರಿಗೆ ಆತಂಕ
ರಾಯಚೂರು, ನವೆಂಬರ್, 28: ಜಿಲ್ಲೆಯಲ್ಲಿ ಹತ್ತಿ ಬಿಡಿಸುವ ಕೃಷಿ ಕಾರ್ಮಿಕರಿಗಾಗಿ ರೈತರು ಸರದಿಯಲ್ಲಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮಾರುಕಟ್ಟೆಗೆ ಅತಿ ಬೇಗ ಹತ್ತಿ ಮಾರಾಟ ಮಾಡಬೇಕೆಂದರೂ ಕೂಡ ರೈತರಿಗೆ ಸಾಧ್ಯವಾಗುತ್ತಿಲ್ಲ. ಸ್ಥಳೀಯ ಕಾರ್ಮಿಕರು ದೂರದ ಊರುಗಳಿಗೆ ಕೃಷಿ ಕೆಲಸಕ್ಕೆ ತೆರಳುತ್ತಿದ್ದಾರೆ. ಹೀಗಾಗಿ ಹತ್ತಿ ಬಿಡಿಸುವ ಕಾರ್ಮಿಕರನ್ನು ದೂರದ ಊರುಗಳಿಂದ ಕರೆತರುವುದು ರೈತರಿಗೆ ಅನಿವಾರ್ಯವಾಗಿದೆ. ಹಾಗಾಗಿ ಕೂಲಿ ಕಾರ್ಮಿಕರನ್ನು ಹುಡುಕಾಟಕ್ಕಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಯಚೂರು ತಾಲೂಕಿನ ಅರಿಷಿಣಗಿ, ಮೀರಾಪುರ, ಕಾಡ್ಲೂರು ಸೇರಿದಂತೆ ದೇವದುರ್ಗ, ಮಾನ್ವಿ ತಾಲೂಕುಗಳ ಅನೇಕ ಗ್ರಾಮಗಳ ರೈತರು ನೆರೆಯ ಆಂಧ್ರಪ್ರದೇಶದ ಜಿಲ್ಲೆಗಳಿಂದ ಕಾರ್ಮಿಕರನ್ನು ಕರೆತರುತ್ತಿದ್ದಾರೆ. ಎಡಬಿಡದೆ ಕೈತುಂಬ ಕೆಲಸ ಸಿಗುತ್ತದೆ ಎಂದು ನೆರೆ ರಾಜ್ಯಗಳ ಕೃಷಿ ಕಾರ್ಮಿಕರು ಕುಟುಂಬ ಸಮೇತ ರಾಯಚೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಗುಡಿಸಲು ಹಾಕಿಕೊಂಡು ಬೀಡುಬಿಟ್ಟಿದ್ದಾರೆ. ಅಲ್ಲದೆ, ಪಿಕಪ್ ವಾಹನಗಳಲ್ಲಿಯೂ ಗುಂಪುಗುಂಪಾಗಿ ಹತ್ತಿ ಬಿಡಿಸುವ ಕಾರ್ಮಿಕರು ಹೊರರಾಜ್ಯಗಳಿಂದ ಬಂದು ಹೋಗುತ್ತಿದ್ದಾರೆ.
ರಾಯಚೂರಿನಲ್ಲಿ ನರೇಗಾ ಕೆಲಸಕ್ಕೆ ಕಾರ್ಮಿಕರ ಕೊರತೆ
ಬೆಳಗ್ಗೆ 11 ಗಂಟೆಯಿಂದ ಸಂಜೆ 5ರವರೆಗೂ ಹಾಜರಿ ಲೆಕ್ಕದಲ್ಲಿ ಹತ್ತಿ ಬಿಡಿಸುವುದಕ್ಕೆ ಒಬ್ಬ ಕಾರ್ಮಿಕರಿಗೆ 300 ರೂಪಾಯಿ ಕೊಡಬೇಕು. ಅಲ್ಲದೆ ಒಂದು ಕೆ.ಜಿ. ಹತ್ತಿ ಬಿಡಿಸಲು 12 ರಿಂದ 14 ರೂಪಾಯಿ ಕರಾರು ಮಾಡುವ ರೂಢಿ ಇದೆ. ಈ ರೀತಿ ಕರಾರು ಮಾಡಿದಾಗ ಕಾರ್ಮಿಕರು ಹೆಚ್ಚು ಪರಿಶ್ರಮವಹಿಸಿ ದಿನಕ್ಕೆ 80 ಕೆ.ಜಿಯವರೆಗೂ ಹತ್ತಿ ಬಿಡಿಸುತ್ತಾರೆ.

ರೈತಾಪಿ ವರ್ಗದವರ ಜೇಬಿಗೆ ಕತ್ತರಿ ಬೀಳುತ್ತಿದೆ
ಇದರಿಂದ ಒಬ್ಬ ಕಾರ್ಮಿಕರು 800 ರೂಪಾಯಿವರೆಗೂ ಕೂಲಿ ಪಡೆಯುತ್ತಾರೆ. ದೂರದ ಊರುಗಳಿಂದ ಕಾರ್ಮಿಕರನ್ನು ಕರೆತರಲು ವಾಹನಕ್ಕೆ ಹೆಚ್ಚುವರಿ ವೆಚ್ಚವನ್ನು ರೈತರೇ ಭರಿಸಬೇಕಾಗುತ್ತದೆ. ಸದ್ಯ ಹತ್ತಿ ಬಿಡಿಸುವ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗಿದೆ. ಅಲ್ಲದೆ ಕೈತುಂಬ ಕೆಲಸ ಮಾಡುವುದಕ್ಕೆ ಇದೇ ಅವಕಾಶವೂ ಆಗಿದೆ. ಸಿರವಾರದಲ್ಲಿ ಹತ್ತಿ ಬಿಡಿಸುವ ಕೆಲಸವೂ ಕೊನೆಯ ಹಂತಕ್ಕೆ ಬಂದಿದ್ದು, ಅಗತ್ಯಕ್ಕೆ ತಕ್ಕಂತೆ ಕೂಲಿಕಾರರು ಲಭ್ಯರಾಗುತ್ತಿದ್ದಾರೆ. ಆದರೆ ರೈತನ ಜೇಬಿಗೆ ಮಾತ್ರ ಕತ್ತರಿ ಬೀಳುತ್ತಿದೆ.
ಪ್ರತಿ ಗ್ರಾಮದಿಂದಲೂ ವಾಹನ ಮಾಲೀಕ ಎಲ್ಲಿಗೆ ಕರೆದ್ಯೊಯ್ಯುತ್ತಾನೋ ಅಲ್ಲಿಗೆ ಕೆಲಸಕ್ಕೆ ಹೋಗುತ್ತಾರೆ. ದಿನಕೂಲಿ ಕೆಲಸವಾದರೆ ಬೆಳಗ್ಗೆ ಹತ್ತು ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಹತ್ತಿ ಬಿಡಿಸುತ್ತಾರೆ. ಒಬ್ಬರು 15 ರಿಂದ 20 ಕೆ.ಜಿ.ಯವರೆಗೆ ಹತ್ತಿ ಬಿಡಿಸುತ್ತಾರೆ. ಕೂಲಿ 200 ರೂಪಾಯಿ ಮತ್ತು ವಾಹನ ಬಾಡಿಗೆ 50 ರೂಪಾಯಿ ಕೊಡಬೇಕು. ಕೆ.ಜಿ. ಲೆಕ್ಕದಲ್ಲಿ ಹತ್ತಿ ಬಿಡಿಸಿದರೆ ಕೂಲಿಕಾರರು ಬೆಳಗ್ಗೆ 7 ರಿಂದ 8 ಗಂಟೆಯೊಳಗೆ ಕೆಲಸಕ್ಕೆ ತೆರಳುತ್ತಾರೆ. ಒಬ್ಬರು ಸುಮಾರು 40ರಿಂದ 70 ಕೆ.ಜಿ.ಯವರೆಗೂ ಶಕ್ತಿಯ ಅನುಸಾರ ಹತ್ತಿಯನ್ನು ಬಿಡಿಸುತ್ತಾರೆ. ಒಂದು ಕೆ.ಜಿ. ಹತ್ತಿ ಬಿಡಿಸಲು 10ರಿಂದ 12 ರೂಪಾಯಿ ಕೂಲಿ ಪಡೆಯುತ್ತಾರೆ. ಇದರಲ್ಲಿ ವಾಹನಗಳಿಗೆ 2 ರೂಪಾಯಿ ಕಮಿಷನ್ ದೊರೆಯುತ್ತದೆ ಎಂದು ಮಾಲೀಕರು ಹೇಳುತ್ತಾರೆ. ಪಟ್ಟಣದ ಇಂದಿರಾನಗರದ ಹುಸೇನಮ್ಮ ಎಂಬ ಮಹಿಳೆಯು ಒಂದು ದಿನ 110 ಕೆ.ಜಿ. ಹತ್ತಿ ಬಿಡಿಸುವ ಮೂಲಕ ಸಾಧನೆ ಮಾಡಿದ್ದಾರೆ.

ಹತ್ತಿ ಬಿಡಿಸುವುದಕ್ಕೆ ಸಿಗದ ಕಾರ್ಮಿಕರು
ರಾಯಚೂರು, ದೇವದುರ್ಗ, ಮಾನ್ವಿ, ಮಸ್ಕಿ, ಸಿರವಾರ ಹಾಗೂ ಲಿಂಗಸುಗೂರು ತಾಲೂಕುಗಳಿಂದ ಅತಿಹೆಚ್ಚು ಕೃಷಿ ಕಾರ್ಮಿಕರು ಮಹಾನಗರಗಳಿಗೆ ಗುಳೆ ಹೋಗುವುದು ಸಾಮಾನ್ಯವಾಗಿದೆ. ಇದೇ ಕಾರಣದಿಂದ ರೈತರಿಗೆ ಸ್ಥಳೀಯವಾಗಿ ಹತ್ತಿ ಬಿಡಿಸುವುದಕ್ಕೆ ಕಾರ್ಮಿಕರು ದೊರೆಯುತ್ತಿಲ್ಲ. ಹೆಚ್ಚುವರಿ ಖರ್ಚು ಮಾಡಿಕೊಂಡು ದೂರದ ಊರುಗಳಿಂದಲೇ ಕಾರ್ಮಿಕರನ್ನು ಕರೆತರಬೇಕಾಗಿದೆ. ಅನೇಕ ಕಡೆಗಳಲ್ಲಿ ಪಾಲಕರು ಶಾಲಾ ಮಕ್ಕಳನ್ನು ಕೂಡ ಹತ್ತಿ ಬಿಡಿಸುವ ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಘಟಕದವರು ವಿವಿಧೆಡೆ ದಾಳಿ ನಡೆಸಿ, ಮಕ್ಕಳನ್ನು ರಕ್ಷಿಸುತ್ತಿದ್ದಾರೆ. ಆದರೂ ಸಂಪೂರ್ಣ ಬಾಲಕಾರ್ಮಿಕ ಪದ್ಧತಿಯನ್ನು ತಡೆಯುವುದಕ್ಕೆ ಸಾಧ್ಯವಾಗಿಲ್ಲ. ಪಿಕ್‌ಅಪ್ ವಾಹನಗಳಲ್ಲೇ ರಾಜಾರೋಷವಾಗಿ ಬಾಲಕರನ್ನು ತುಂಬಿಸಿಕೊಂಡು ಸಂಚರಿಸುವ ದೃಶ್ಯಗಳು ಕಣ್ಣಿಗೆ ಬೀಳುತ್ತಲೇ ಇವೆ.

ಹೊರರಾಜ್ಯಗಳಿಂದ ಕಾರ್ಮಿಕರ ಆಗಮನ
ಮಾನ್ವಿ ತಾಲೂಕಿನಲ್ಲಿ ಗ್ರಾಮೀಣ ಭಾಗದ ಬಡ ಮಹಿಳೆಯರು, ಕೂಲಿಕಾರ್ಮಿಕರು ನಗರ ಪ್ರದೇಶಗಳಿಗ ಗುಳೆ ಹೋಗಿದ್ದು, ಇದರಿಂದ ಸ್ಥಳೀಯ ಕೃಷಿ ಚಟುವಟಿಕೆಗಳಿಗೆ ಕೂಲಿಕಾರ್ಮಿಕರ ಕೊರತೆ ಉಂಟಾಗಿದೆ. ತಾಲೂಕಿನ ಗ್ರಾಮೀಣ ಭಾಗದಲ್ಲಿ ಹತ್ತಿ ಬಿಡಿಸುವ ಕಾರ್ಯ ಭರದಿಂದ ಸಾಗಿದ್ದು, ಹತ್ತಿ ಬೆಳೆಗಾರರಿಗೆ ಸಿಂಧನೂರು, ಮಸ್ಕಿ ತಾಲೂಕಿನ ಗ್ರಾಮಗಳ ಕೂಲಿಕಾರ್ಮಿಕರು ಆಸರೆಯಾಗಿದ್ದಾರೆ. ತುಂಗಭದ್ರಾ ಎಡದಂಡೆ ನಾಲೆ ವ್ಯಾಪ್ತಿಯ ಮೇಲ್ಭಾಗದ ಸಿಂಧನೂರು, ಮಸ್ಕಿ ತಾಲೂಕುಗಳಲ್ಲಿ ಭತ್ತ ಬೆಳೆಯಲು ಆದ್ಯತೆ ನೀಡಲಾಗುತ್ತದೆ. ಈ ತಾಲೂಕುಗಳಲ್ಲಿ ಪ್ರಸ್ತುತ ಭತ್ತ ಕಟಾವು ಮುಗಿದಿರುವ ಕಾರಣ ದುಡಿಮೆ ಇಲ್ಲದೆ ಕೂಲಿಕಾರ್ಮಿಕರು ಮಾನ್ವಿ, ಸಿರವಾರಗಳತ್ತ ಮುಖ ಮಾಡಿದ್ದಾರೆ. ಪ್ರತಿದಿನ ಬೆಳಗ್ಗೆ ಟಂ ಟಂ ವಾಹನಗಳಲ್ಲಿ ಬರುವ ಕಾರ್ಮಿಕರು ಸಂಜೆಯ ಹೊತ್ತಿಗೆ ಸ್ವಗ್ರಾಮಗಳಿಗೆ ಮರಳುತ್ತಾರೆ. ಪ್ರತಿ ಒಂದು ಕೆ.ಜಿ ಹತ್ತಿ ಬಿಡಿಸಲು 11ರಿಂದ 13ರೂಪಾಯಿವರೆಗೆ ಕೂಲಿ ಅಥವಾ ಒಂದು ದಿನಕ್ಕೆ ಒಬ್ಬರಿಗೆ ಕೂಲಿ 250ರಿಂದ 300 ರೂಪಾಯಿ ನೀಡಲಾಗುತ್ತದೆ. ಕೂಲಿ ಕಾರ್ಮಿಕರನ್ನು ಕರೆತರುವ ವಾಹನದ ಬಾಡಿಗೆ ವೆಚ್ಚವನ್ನು ಜಮೀನಿನ ಮಾಲೀಕರು ನೀಡುತ್ತಾರೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ರಾಯಚೂರು-ಸಿಂಧನೂರು ರಾಜ್ಯ ಹೆದ್ದಾರಿಯಲ್ಲಿ ಕೂಲಿ ಕಾರ್ಮಿಕರನ್ನು ಹೊಂದಿರುವ ಟಂಟಂ ವಾಹನಗಳು ಅಧಿಕ ಸಂಖ್ಯೆಯಲ್ಲಿ ಕಂಡುಬರುವುದು ಸಾಮಾನ್ಯವಾಗಿದೆ.

ಕಾರ್ಮಿಕರು ಪಡೆಯುತ್ತಿರುವ ಕೂಲಿ ಎಷ್ಟು?
ಸಿಂಧನೂರು ತಾಲೂಕಿನ ಗ್ರಾಮೀಣ ಪ್ರದೇಶಗಳ ಕೃಷಿ ಕೂಲಿ ಕಾರ್ಮಿಕ ಮಹಿಳೆಯರು ಹತ್ತಿ ಬಿಡಿಸಲು ಬೇರೆ ತಾಲೂಕುಗಳಿಗೆ ತೆರಳುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ತಾಲೂಕು ವ್ಯಾಪ್ತಿಯಲ್ಲಿ ಭತ್ತ ಹಾಗೂ ಜೋಳದ ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದ್ದು, ಈಗಾಗಲೇ ಭತ್ತ ಕಟಾವು ಕಾರ್ಯ ಆರಂಭಗೊಂಡಿದೆ. ಅಲ್ಪ ಪ್ರಮಾಣದಲ್ಲಿ ಹತ್ತಿ ಬೆಳೆಯಲಾಗಿದೆ. ಆದರೆ ಪಕ್ಕದ ಮಾನ್ವಿ, ಸಿರಗುಪ್ಪ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹತ್ತಿ ಬೆಳೆಯಲಾಗಿದೆ. ತಾಲೂಕಿನ ವಿವಿಧ ಗ್ರಾಮಗಳ ಕೃಷಿ ಕೂಲಿ ಕಾರ್ಮಿಕ ಮಹಿಳೆಯರನ್ನು ಬುಲೆರೋ, ಗೂಡ್ಸ್ ವಾಹನಗಳಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚಿಗೆ ಜನರನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಕೆ.ಜಿ. ಹತ್ತಿ ಬಿಡಿಸಲು 10ರಿಂದ 12 ರೂಪಾಯಿ ನೀಡುತ್ತಿದ್ದು, ದಿನಕ್ಕೆ ಒಬ್ಬರು 30 ರಿಂದ 40 ಕೆ.ಜಿ ಬಿಡಿಸುತ್ತಾರೆ. ಇವರು ದಿನಕ್ಕೆ 400ರಿಂದ 500 ರೂಪಾಯಿ ಕೂಲಿ ಪಡೆಯುತ್ತಾರೆ. ದಿನದಿಂದ ದಿನಕ್ಕೆ ಹತ್ತಿ ಬಿಡಿಸಲು ಮಹಿಳೆಯರನ್ನು ಕರೆದುಕೊಂಡು ಹೋಗುವುದು ಹೆಚ್ಚಾಗಿದೆ.
'ಕೃಷಿ ಕೂಲಿ ಕಾರ್ಮಿಕ ಮಹಿಳೆಯರು ಬೇರೆಡೆಗೆ ಹತ್ತಿ ಬಿಡಿಸಲು ತೆರಳುತ್ತಿದ್ದು, ತಾಲೂಕಿನಲ್ಲಿ ಬೆಳೆದ ಹತ್ತಿಯನ್ನು ಬಿಡಿಸಲು ಕಾರ್ಮಿಕರು ಸಿಗದಂತಾಗಿದೆ. ಕೆಲವರು ಕೆ.ಜಿ. ಹತ್ತಿ ಬಿಡಿಸಲು 12 ರೂಪಾಯಿ ತೆಗೆದುಕೊಂಡರೆ, ಇನ್ನು ಕೆಲವರು 300ರಿಂದ 400 ರೂಪಾಯಿವರೆಗೆ ದಿನಕೂಲಿ ಪಡೆದು ಕೆಲಸ ಮಾಡುತ್ತಿದ್ದಾರೆ' ಎಂದು ಶ್ರೀನಿವಾಸ ಬಾದರ್ಲಿ ಹಾಗೂ ಪಾಡುರಂಗ ಆಯನೂರು ತಿಳಿಸಿದರು.

ಕೂಲಿಕಾರರಿಂದ ಹೆಚ್ಚು ಹಣಕ್ಕೆ ಬೇಡಿಕೆ
ದೇವದುರ್ಗ ತಾಲೂಕಿನಾದ್ಯಂತ ಕೂಲಿ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹತ್ತಿ ಬಿಡಿಸುವ ಕಾರ್ಯ ಬರದಿಂದ ಸಾಗಿದ್ದು, ಪ್ರಥಮ ಬಿಡಿ ಬಿಡಿಸುವ ವೇಳೆ ಇದ್ದ ಕೂಲಿಗಿಂತ ಎರಡನೇ ಬಿಡಿ ಹತ್ತಿ ಬಿಡಿಸುವ ಕೂಲಿ ಕಾರ್ಮಿಕರಿಗೆ ಹೆಚ್ಚಿನ ಕೂಲಿ ಸಿಗುತ್ತಿದೆ. ಒಂದು ದಿನಕ್ಕೆ 300 ರೂಪಾಯಿ ಕೂಲಿ ಸಿಗುತ್ತದೆ. ಆದರೆ ಕೂಲಿ ಬದಲಿಗೆ ಕೆ.ಜಿ. ಲೆಕ್ಕಾಚಾರದಲ್ಲಿ ಹತ್ತಿ ಬಿಡಿಸುವ ಕಾರ್ಯದಲ್ಲಿ ಕೂಲಿ ಕಾರ್ಮಿಕರು ತೊಡಗಿದ್ದಾರೆ. ಪ್ರತಿಯೊಬ್ಬ ಕೂಲಿ ಕಾರ್ಮಿಕರು ಒಂದು ದಿನಕ್ಕೆ ಕೆ.ಜಿ.ಗೆ 10 ರೂ.ನಂತೆ ಸುಮಾರು 70 ರಿಂದ 80 ಕೆ.ಜಿ ಹತ್ತಿಯನ್ನು ಬಿಡಿಸುತ್ತಾರೆ. ಒಂದು ದಿನಕ್ಕೆ 800 ರಿಂದ 900 ರೂಪಾಯಿ ಕೂಲಿ ಪಡೆಯುತ್ತಿದ್ದಾರೆ. ಮೆಣಸಿನಕಾಯಿ ಬೆಳೆ ಇನ್ನೂ ಬಾರದ ಹಿನ್ನೆಲೆ ಮತ್ತು ಭತ್ತದ ಬೆಳೆಯನ್ನು ಯಂತ್ರದ ಮೂಲಕ ಕಟಾವು ಮಾಡುವುದರಿಂದ ಹತ್ತಿ ಬಿಡಿಸುವ ಕಾರ್ಮಿಕರ ಲಭ್ಯವಿದೆ. ಆದರೆ ಕೂಲಿಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗಿದೆ ಎಂದು ರೈತ ಮಲ್ಲಪ್ಪ ಹೇಳಿದ್ದಾರೆ. ಕಳೆದ ವರ್ಷದಂತೆ ಈ ವರ್ಷವೂ ಉತ್ತಮ ಬೆಲೆ ಇರುವುದರಿಂದ ಎಲ್ಲಾ ರೈತರು ಉತ್ತಮ ಇಳುವರಿಯ ವಿಶ್ವಾಸದಲ್ಲಿದ್ದಾರೆ. ಆದರೆ ಕೂಲಿ ಕಾರ್ಮಿಕರಿಗೆ ಹೆಚ್ಚಾಗಿ ಹಣ ಖರ್ಚಾಗುತ್ತಿರುವುದರಿಂದ ರೈತರಿಗೆ ಆರ್ಥಿಕ ಹೊರೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.