ಗಗನದಲ್ಲಿ ಹಕ್ಕಿಯಾಗುವ ನೆಲ್ಲದ ಹುಲ್ಲು ಕಾಣುವ ಚಂದದ ಅನುಭವಕ್ಕೆ...
ಈ ವಾರ ನಿಮಗೆ ನಮ್ಮ ಹಳ್ಳಿಗಳ ಕತೆಯನ್ನು ಮತ್ತೊಮ್ಮೆ ಹೇಳುತ್ತೇನೆ. ಇದು ಮೊಗೆದಷ್ಟೂ ಸಿಗುವ ಅಕ್ಷಯ ಭಂಡಾರ. ನನ್ನಂಥವನಿಗೆ ಎದುರಾಗುವ ಸಣ್ಣ-ಸಣ್ಣ ಬೆರಗನ್ನೂ ನಿಮ್ಮೆದುರು ಹಂಚಿಕೊಳ್ಳಲು ಇದೊಂದು ವೇದಿಕೆ. ಈ ಲೇಖನ ಓದುತ್ತಿರುವವರಲ್ಲಿ ಹಲವರು ರೈತರೂ ಇರಬಹುದು. ನಿಮ್ಮ ಅನುಭವ ಏನು ಅನ್ನೋದನ್ನೂ ಹಂಚಿಕೊಳ್ಳಿ.
ಹೇಗಾದರೂ ಬೇಸಾಯ ಮಾಡಿ, ಬೆಳೆಯಬಲ್ಲೆ ಎಂಬ ನೇಗಿಲಯೋಗಿಗೆ ಎದುರಾಗುವ ಆನನುಕೂಲಗಳಲ್ಲಿ ಸುಗ್ಗಿ ಮಾಡುವುದೂ ಒಂದು. ಬೆಳೆಗೇ ನೀರಿಲ್ಲದಿರುವಾಗ ಹೆಚ್ಚು ನೀರು ಬಯಸುವ ಕಣವನ್ನು ಮಾಡುವುದು ದೂರದ ಮಾತು. ಹಾಗೆಂದು ಕಣದಲ್ಲಿ ಕಾಳು ಮಾಡುವ ಬೆಳೆಗಳನ್ನು ಬೆಳೆಯದೇ ಇರಲಾಗದು. ಬೆಳೆದ ಮೇಲೆ ಕಾಳು ಮಾಡಲೇಬೇಕಾದುದು ರೈತನ ಪಾಡುಗಳಲ್ಲಿ ಒಂದು.

ಅವುಗಳದೇ ಒಂದಷ್ಟು ಫೋಟೋಗಳನ್ನು ಈ ಲೇಖನದ ಒಟ್ಟಿಗೇ ಜತೆ ಮಾಡಿದ್ದೇನೆ. ಸಂಕ್ರಾಂತಿ ಮುಗಿಸಿದ ಸಂಭ್ರಮದಲ್ಲಿ ನೀವೆಲ್ಲ ಇದ್ದೀರಿ ಎಂದಾದರೆ ಇವುಗಳಿಂದ ಮನಸಿಗೆ ಇನ್ನಷ್ಟು ಖುಷಿಯಾಗುತ್ತದೆ ಎಂಬುದು ನನಗೆ ನಂಬಿಕೆಯೂ ಹೌದು, ವಿಶ್ವಾಸವೂ ಹೌದು.
ಈ ಹಿಂದೆ ಕಣದಲ್ಲಿ ನಡೆಯುತ್ತಿದ್ದ ಕಾಳು ಮಾಡುವ ಕೆಲಸಗಳು ಡಾಂಬರು ರಸ್ತೆಗೆ ಸ್ಥಳಾಂತರಗೊಂಡವು. ಇದು ಪರವಾಗಿಲ್ಲ ಅನ್ನುವ ಮಟ್ಟದ್ದು. ಕೆಲವು ರೈತರಿಗೆ ಈ ಕ್ರಮ ಇಷ್ಟವಿಲ್ಲದ್ದು. ಹಾಗಾಗಿ ಭತ್ತವನ್ನು ಮಾಡಲು ಮನೆಯಂಗಳ ಇಲ್ಲವೆ ಗದ್ದೆಯನ್ನೇ ಆಶ್ರಯಿಸುತ್ತಾರೆ. ಈ ಕ್ರಮದಲ್ಲಿ ಕಾಳು ರೂಢಿಸುವುದನ್ನು "ಪಿಲೇಟು" ಹೊಡೆಯುವುದು ಎನ್ನುತ್ತಾರೆ.

ಬೆಂಚಿನ ಎತ್ತರಕ್ಕೆ ಹಲಗೆಯನ್ನಿಟ್ಟು, ನೆಲ್ಲು ಹರಿಯನ್ನು ಸಾಧಾರಣ ಗಾತ್ರದ ಕಂತೆ ಮಾಡಿ, ಅದಕ್ಕೆ ಹಗ್ಗ ಇಲ್ಲವೆ ಹುರಿಯನ್ನು ಸುತ್ತಿ, ಹಲಗೆಗೆ ಬಡಿಯುತ್ತಾರೆ. ಕಾಳು ಉದುರಿದ ಮೇಲೆ ಹುಲ್ಲನ್ನು ನಿರ್ದಿಷ್ಟ ದೂರಕ್ಕೆ ಎಸೆಯುತ್ತಾರೆ. ಆಗ ಅದಕ್ಕೆ ಸುತ್ತಿದ್ದ ಹಗ್ಗ ಬುಗುರಿಯಾಡಿಸುವಾಗ ಬಿಚ್ಚಿಕೊಳ್ಳುವ ದಾರದಂತೆ ಬಿಚ್ಚಿಕೊಳ್ಳುತ್ತದೆ.
ದಾರದಿಂದ ಬಿಡುಗಡೆ ಪಡೆದ ಹುಲ್ಲು ಗಗನ ಮಾರ್ಗದಲ್ಲಿ ಹಾರುವ ದೊಡ್ಡ ಹಕ್ಕಿಯಂತೆಯೋ ಅಥವಾ ಪ್ಯಾರಾಚುಟ್ ನಂತೆಯೋ ಸಾಗಿ ನಿಧಾನ ಭೂಮಿಗಿಳಿದು ರಾಶಿಯಾಗುತ್ತದೆ. ಇಲ್ಲಿ ಪ್ಲೇಟು ಹೊಡೆಯುವವನ ಕೌಶಲ ಮತ್ತು ಅನುಭವ ಮುಖ್ಯವಾಗಿ ಅವನು ಎಸೆಯುವ ಹುಲ್ಲು ಎಲ್ಲೆಲ್ಲಿಯೋ ಚದುರದೆ ಒಂದೇ ಕಡೆ ಬಿದ್ದು, ಗುಡ್ಡೆಯಾಗುತ್ತದೆ. ಇದನ್ನು ನೋಡುವುದು ಒಂದು ಅದ್ಭುತ ಅನುಭವ.

ಹೀಗೆ ಕಾಳು ಮಾಡುವುದರಿಂದ ಭತ್ತದಲ್ಲಿ ಹೆಚ್ಚಿನ ಕಲ್ಲು- ಮಣ್ಣು ಬೆರೆಯುವುದಿಲ್ಲ. ರಸ್ತೆಗೆ ಹಾಕಿ ಕಾಳು ವಿಂಗಡಿಸಿದರೆ ಈ ಮಾತ್ರದ ಶುದ್ಧತೆ ಸಾಧ್ಯವಾಗದು. ರಸ್ತೆಗೆ ಒಟ್ಟಿ ಕಾಳನ್ನು ವಿಂಗಡಿಸಬಹುದಾದರೂ ಅಲ್ಲಿಯೇ ಅರವಿ ಒಣಗಿಸಲಾಗುವುದಿಲ್ಲ. ಏಕೆಂದರೆ ಭಾರ ವಾಹನಗಳ ಚಕ್ರಗಳ ಅಡಿಗೆ ಸಿಕ್ಕಿದ ಭತ್ತ ಪುಡಿಯಾಗುತ್ತದೆ.

ಗದ್ದೆಯಲ್ಲಿ ದೊಡ್ಡ ಪ್ಲಾಸ್ಟಿಕ್ ಹಾಳೆಯ ಮೇಲೂ ಟಾರ್ಪಾಲಿನ ಮೇಲೂ ಹರಡಿ ಒಣಗಿಸಬಹುದು. ಇದನ್ನು ಮೂಟೆಗಳಿಗೆ ತುಂಬಿ ಮನೆ ಸಾಗಿಸುವುದು ಸುಲಭ. ಆದರೆ ಕೊಂಚ ಶ್ರ ಮ ವಹಿಸಬೇಕಾಗುತ್ತದೆ. ಶ್ರೀನಿವಾಸಪುರ ತಾಲೂಕಿನ ಮುದಿಮಡಗು ಪಂಚಾಯಿತಿಯ ಆನೆಪಲ್ಲಿಯ ರೈತ ಮಂಜುನಾಥರೆಡ್ಡಿ ಪ್ರತಿ ಭತ್ತದ ಬೆಳೆಯ ಸುಗ್ಗಿ ಮಾಡುವುದು ಪ್ಲೇಟ್ ಹೊಡೆಯುವ ಪದ್ಧತಿಯಲ್ಲಿಯೇ ಎಂಬುದು ವಿಶೇಷ.












Click it and Unblock the Notifications