ಅಕ್ಕಿ ಬೆಲೆ ಶೇ.15ರಷ್ಟು ಏರಿಕೆ, ತಾಳೆ ಎಣ್ಣೆ ಬೆಲೆ ಹೆಚ್ಚುವ ಸಾಧ್ಯತೆ
ಬೆಂಗಳೂರು, ಜನವರಿ 03: ಭಾರತದಿಂದ ಗೋಧಿ ರಫ್ತನ್ನು ನಿಷೇಧಿಸಿದ ಬಳಿಕ ಸಗಟು ದರದಲ್ಲಿ ಏರಿಕೆ ಆಗಿತ್ತು. ಅದರ ಬೆನ್ನಲ್ಲೆ ಇದೀಗ ಭಾರತದಲ್ಲಿ ಅಕ್ಕಿ ಮತ್ತು ತಾಳೆ ಎಣ್ಣೆ ದುಬಾರಿಯಾಗುತ್ತಿದೆ. ಕಳೆದ ಒಂದು ತಿಂಗಳಲ್ಲಿ ಅಕ್ಕಿ ಬೆಲೆ ಶೇ.15 ರಷ್ಟು ಏರಿಕೆಯಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ತಾಳೆ ಎಣ್ಣೆ ಪ್ರತಿ ಲೀಟರ್‌ಗೆ 5ರಿಂದ 7 ರೂ.ವರೆಗೆ ಹೆಚ್ಚಾಗಬಹುದು ಎನ್ನಲಾಗಿದೆ.
ಬಾಸ್ಮತಿ ತಳಿಯ ಅಕ್ಕಿ ಒಂದು ತಿಂಗಳ ಹಿಂದೆ ಕೆ.ಜಿಗೆ 95 ರೂ.ಗೆ ಹೋಲಿಸಿದರೆ ದಾಖಲೆಯ ಗರಿಷ್ಠ 110 ರೂ.ಗೆ ಮಾರಾಟವಾಗುತ್ತಿದೆ. ಮಳೆಯಿಂದಾ ಉಂಟಾಗಿದ್ದ ಪ್ರವಾಹ ಪರಿಸ್ಥಿತಿಯಿಂದಾಗಿ ದೇಶದ ಭತ್ತದ ಬೆಳೆಯನ್ನು ಹಾನಿಗೊಳಿಸಿದ್ದರಿಂದ ವಿಶ್ವ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯ ನಿರೀಕ್ಷೆಯಲ್ಲಿ ಅಕ್ಕಿ ಗಿರಣಿಗಾರರು ಹೆಚ್ಚು ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಬೆಲೆ ಹೆಚ್ಚಾಗುತ್ತಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಭಾರತೀಯ ಬಾಸ್ಮತಿ ಅಕ್ಕಿಯ ಮಾರಾಟದ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾದ ಇರಾನ್ ದೇಶಗಳಲ್ಲಿ ಉತ್ತಮ ವ್ಯಾಪಾರ ನಡೆಯುತ್ತದೆ. ಖಾರಿಫ್ ಅಕ್ಕಿ ಉತ್ಪಾದನೆಯಲ್ಲಿ ನಿರೀಕ್ಷಿತ ಕುಸಿತ, ಸರ್ಕಾರ ನಡೆಸುತ್ತಿರುವ ಆಹಾರ ಭದ್ರತಾ ಯೋಜನೆಯನ್ನು ಹಿಂತೆಗೆದುಕೊಳ್ಳುವುದು ಮತ್ತು ನೇಪಾಳಕ್ಕೆ ಭತ್ತವನ್ನು ಸುಂಕ ರಹಿತ ರಫ್ತು ಮಾಡುವುದರಿಂದ ಬಾಸ್ಮತಿ ಅಲ್ಲದ ಅಕ್ಕಿಯ ಬೆಲೆಗಳು ಹೆಚ್ಚಾಗುತ್ತಿವೆ ಎಂದು ತಜ್ಞರು ಹಾಗೂ ಅಕ್ಕಿ ಮಾರುಕಟ್ಟೆ ಮತ್ತು ರಫ್ತು ಮಾಡುವ ಸಂಸ್ಥೆಯಾದ ರೈಸ್ ವಿಲ್ಲಾ ಗ್ರೂಪ್‌ನ ಸಿಇಒ ಸೂರಜ್ ಅಗರ್ವಾಲ್ ಹೇಳಿದರು.

ಪ್ರಸಕ್ತ 2022-23 ರಲ್ಲಿ ಖಾರಿಫ್ ಋತುವಿನಲ್ಲಿ ಉತ್ಪಾದನೆಯಾದ ಅಕ್ಕಿ ಪ್ರಮಾಣ 104.99 ಮಿಲಿಯನ್ ಎಂದು ಅಂದಾಜಿಸಲಾಗಿದೆ. ಇದು 2021-22ರ ಹಿಂದಿನ ವರ್ಷದಲ್ಲಿ ಉತ್ಪಾದನೆಯಾಗಿದ್ದ 111.76 ಟನ್‌ಗಳಿಗಿಂತಲೂ 6.77 ಮಿಲಿಯನ್ ಟನ್ ಕಡಿಮೆ ಎಂದು ಅಂಕಿಗಳು ಮಾಹಿತಿ ನೀಡಿವೆ.
ಎರಡನೆಯದಾಗಿ ಕೋವಿಡ್ ಸಮಯದಲ್ಲಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಲಕ್ಷಾಂತರದ ಮಂದಿಗೆ ಉಚಿತವಾಗಿ ಅಕ್ಕಿ ವಿತರಣೆ ಮಾಡುತ್ತಿತ್ತು. ಈ ಕಾರ್ಯಕ್ರಮವನ್ನು 2022ರ ಡಿಸೆಂಬರ್ 31 ರಿಂದ ಹಿಂಪಡೆಯಲಾಯಿತು ಎಂದು ಸೂರಜ್ ಅಗರ್ವಾಲ್ ವಿವರಿಸಿದರು.












Click it and Unblock the Notifications