ತೋಟಗಾರಿಕೆಯ ವಿವಿಧ ಬೆಳೆಗಳಿಗೂ ಬೆಳೆ ವಿಮೆ ಮಾಡಿಸಿ
ಬಳ್ಳಾರಿ, ಜೂನ್ 28; ಈ ಬಾರಿಯ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಆರಂಭವಾಗಿದೆ. ಕೃಷಿ ಇಲಾಖೆ ರೈತರು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ಬೆಳೆ ವಿಮೆ ನೋಂದಣಿ ಮಾಡಿಸಿ ಎಂದು ಕರೆ ನೀಡಿದ್ದಾರೆ. ಈಗ ತೋಟಗಾರಿಕಾ ಬೆಳೆಗಳಿಗೂ ವಿಮೆ ಮಾಡಿಸಲು ಮನವಿ ಮಾಡಲಾಗಿದೆ.
ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯ ಅನ್ವಯ 2023-24ನೇ ಸಾಲಿಗೆ ತೋಟಗಾರಿಕೆಯ ವಿವಿಧ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಿಕೊಳ್ಳಿ ಎಂದು ಕರೆ ನೀಡಿದ್ದಾರೆ.

ಪ್ರಕೃತಿ ವಿಕೋಪಗಳು, ಹವಾಮಾನ ವೈಪರೀತ್ಯಗಳಾದ ಅತಿವೃಷ್ಟಿ, ಅನಾವೃಷ್ಟಿ, ಬಿರುಗಾಳಿ, ಆಲಿಕಲ್ಲು ಮಳೆ, ಪ್ರವಾಹ, ಸಿಡಿಲಿನಿಂದ ಉಂಟಾಗುವ ಬೆಂಕಿ ಅವಘಡ ಇತ್ಯಾದಿ ಕಾರಣಗಳಿಂದ ಸಂಭವಿಸಬಹುದಾದ ಬೆಳೆಹಾನಿಯ ನಷ್ಟದ ಪರಿಹಾರವನ್ನು ಬೆಳೆ ವಿಮೆ ಘಟಕ (ಹಳ್ಳಿ, ಗ್ರಾಮ ಪಂಚಾಯಿತಿ, ಹೋಬಳಿ)ವಾರು ನಿರ್ಧರಿಸಿ ಬೆಳೆ ನಷ್ಟದ ಪರಿಹಾರವನ್ನು ನೀಡುವುದರ ಮೂಲಕ ರೈತರಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆಯು ನೆರವಾಗಲಿದೆ ಎಂದು ಹೇಳಿದ್ದಾರೆ.
ಯೋಜನೆಯಡಿ ಒಳಪಡುವ ಬೆಳೆಗಳು; ಈ ಯೋಜನೆಯಡಿ ಬಳ್ಳಾರಿ ಜಿಲ್ಲೆಗೆ ಕೆಂಪು ಮೆಣಸಿನಕಾಯಿ (ನೀರಾವರಿ). ಬೆಳೆಯು ವಿಮಾ ಪ್ರದೇಶದಲ್ಲಿ ಒಳಪಡುವ ಹೋಬಳಿಗಳು ಕಂಪ್ಲಿ, ಕುರುಗೋಡು, ಕೋಳೂರು, ಬಳ್ಳಾರಿ, ಮೋಕಾ, ರೂಪನಗುಡಿ, ಕರೂರು, ತೆಕ್ಕಲಕೋಟೆ, ಸಿರುಗುಪ್ಪ, ಹಚ್ಚಳ್ಳಿ, ತೋರಣಗಲ್ಲು.
ಈರುಳ್ಳಿ (ನೀರಾವರಿ) ಬೆಳೆಯು ಒಳಪಡುವ ಹೋಬಳಿಗಳು ಸಂಡೂರು, ಚೋರನೂರು, ತೋರಣಗಲ್ಲು ಪ್ರದೇಶಗಳು ಒಳಪಡಲಿವೆ ಎಂದು ರೈತರಿಗೆ ಮಾಹಿತಿ ನೀಡಲಾಗಿದೆ.
ವಿಮಾ ಕಂತು ಮತ್ತು ನೋಂದಣಿ ಅವಧಿ; ಕೆಂಪು ಮೆಣಸಿನಕಾಯಿ (ನೀರಾವರಿ) ವಿಮಾ ಮೊತ್ತ ಪ್ರತಿ ಹೆಕ್ಟೇರ್‌ಗೆ ರೂ.1,07,500 ಹಾಗೂ ಪ್ರತಿ ಹೆಕ್ಟೇರ್‌ಗೆ ರೈತರು ಪಾವತಿಸಬೇಕಾದ ಪ್ರೀಮಿಯಂ ಮೊತ್ತ 5,375 ರೂ. ಆಗಿರುತ್ತದೆ. ವಿಮಾ ಮೊತ್ತ ಪಾವತಿಸಲು ಕೊನೆಯ ದಿನ ಜುಲೈ 31.
ಈರುಳ್ಳಿ (ನೀರಾವರಿ) ವಿಮಾ ಮೊತ್ತ ಪ್ರತಿ ಹೆಕ್ಟೇರ್‌ಗೆ ರೂ. 80,500 ಹಾಗೂ ಪ್ರತಿ ಹೆಕ್ಟೇರ್‌ಗೆ ರೈತರು ಪಾವತಿಸಬೇಕಾದ ಪ್ರೀಮಿಯಂ ಮೊತ್ತ 4,025 ರೂ. ಆಗಿರುತ್ತದೆ. ವಿಮಾ ಮೊತ್ತ ಪಾವತಿಸಲು ಕೊನೆಯ ದಿನ ಜುಲೈ 31 ಆಗಿದೆ.
ರೈತರು ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕಚೇರಿಯನ್ನು ಸಂಪರ್ಕಿಸಬಹುದು.
ಕರೆ ಮಾಡಲು ದೂರವಾಣಿ ಸಂಖ್ಯೆ ಬಳ್ಳಾರಿ ಮತ್ತು ಕುರುಗೊಡು ತಾಲೂಕು 08392-278177, 9480257282 ಹಾಗೂ ಸಂಡೂರು 08395-260389, 9740934208 ಮತ್ತು ಸಿರುಗುಪ್ಪ ಮತ್ತು ಕಂಪ್ಲಿ 08396-222066, 9448910277.
ಕೃಷಿ ಇಲಾಖೆ ಬೆಳೆಗಳು; ಬಳ್ಳಾರಿ ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ಮುಂಗಾರು ಹಂಗಾಮಿನ ಕೃಷಿ ಬೆಳೆಗಳ ವಿಮೆ ಮಾಡಿಸಲು ಸಹ ಕರೆ ನೀಡಲಾಗಿದೆ.
ಯೋಜನೆಯಡಿ ಗ್ರಾಮ ಪಂಚಾಯಿತಿ ಮಟ್ಟದ ಬೆಳೆಗಳಾದ ಭತ್ತ (ನೀರಾವರಿ), ಮುಸುಕಿನ ಜೋಳ (ಮಳೆಯಾಶ್ರಿತ) ಹಾಗೂ ಹೋಬಳಿ ಮಟ್ಟದಲ್ಲಿ ತಿಳಿಸಿರುವ ಬೆಳೆಗಳಾದ ಜೋಳ (ನೀರಾವರಿ/ ಮಳೆಯಾಶ್ರಿತ), ರಾಗಿ (ಮಳೆಯಾಶ್ರಿತ), ಸಜ್ಜೆ (ನೀರಾವರಿ/ ಮಳೆಯಾಶ್ರಿತ), ನವಣೆ (ಮಳೆಯಾಶ್ರಿತ), ತೊಗರಿ (ನೀರಾವರಿ/ ಮಳೆಯಾಶ್ರಿತ), ಉರುಳಿ (ಮಳೆಯಾಶ್ರಿತ), ಸೂರ್ಯಕಾಂತಿ (ನೀರಾವರಿ/ ಮಳೆಯಾಶ್ರಿತ), ಎಳ್ಳು (ಮಳೆಯಾಶ್ರಿತ), ಹತ್ತಿ (ನೀರಾವರಿ/ ಮಳೆಯಾಶ್ರಿತ), ನೆಲಗಡಲೆ (ನೀರಾವರಿ/ ಮಳೆಯಾಶ್ರಿತ), ಈರುಳ್ಳಿ (ನೀರಾವರಿ), ಕೆಂಪು ಮೆಣಸಿನಕಾಯಿ (ನೀರಾವರಿ) ಬೆಳೆಗಳಾಗಿದ್ದು, ರೈತರು ತಮ್ಮ ಬೆಳೆಗಳಿಗೆ ಬ್ಯಾಂಕುಗಳಲ್ಲಿ ವಿಮೆ ಮಾಡಿಸಬೇಕು.
ಬೆಳೆ ವಿಮೆಯನ್ನು ಮಾಡಿಸಲು ಭತ್ತಕ್ಕೆ (ನೀರಾವರಿ) ಆ.16, ಮುಸುಕಿನ ಜೋಳಕ್ಕೆ (ನೀರಾವರಿ/ ಮಳೆಯಾಶ್ರಿತ) ಜು.31, ಜೋಳಕ್ಕೆ (ನೀರಾವರಿ/ ಮಳೆಯಾಶ್ರಿತ) ಜು.31, ಸೂರ್ಯಕಾಂತಿಗೆ (ನೀರಾವರಿ/ ಮಳೆಯಾಶ್ರಿತ) ಜು.31, ತೊಗರಿಗೆ (ನೀರಾವರಿ) ಜು.31, ತೊಗರಿಗೆ (ಮಳೆಯಾಶ್ರಿತ) ಆ.16, ಹತ್ತಿ ಬೆಳೆಗೆ (ನೀರಾವರಿ/ ಮಳೆಯಾಶ್ರಿತ) ಜು.31, ಕೆಂಪು ಮೆಣಸಿನಕಾಯಿ ಬೆಳೆಗೆ (ನೀರಾವರಿ/ ಮಳೆಯಾಶ್ರಿತ) ಜು.31, ಈರುಳ್ಳಿ (ನೀರಾವರಿ) ಜು.31, ರಾಗಿ (ಮಳೆಯಾಶ್ರಿತ) ಆ.16, ನವಣೆ (ಮಳೆಯಾಶ್ರಿತ) ಆ.16, ಹುರುಳಿ (ಮಳೆಯಾಶ್ರಿತ) ಆ.16, ನೆಲಗಡಲೆ (ನೀರಾವರಿ/ ಮಳೆಯಾಶ್ರಿತ) ಆ.16, ಸಜ್ಜೆ ಬೆಳೆಗೆ (ನೀರಾವರಿ/ ಮಳೆಯಾಶ್ರಿತ) ಆ.16 ಕೊನೆಯ ದಿನ ಆಗಿರುತ್ತದೆ.











Click it and Unblock the Notifications