ರೆಡ್ಡಿ ಸೋದರರು ಅಕ್ರಮ ಗಣಿಗಾರಿಕೆ ನಡೆಸಿಲ್ಲ: ಸಿಎಂ

ಸೋಮವಾರವಷ್ಟೆ ಭಾಗ್ಯಲಕ್ಷ್ಮಿ ಯೋಜನೆಯಡಿಯಲ್ಲಿ ತಾಯಂದಿರಿಗೆ ಸೀರೆ ಹಂಚಿದ ಮೇಲೆ ಆವೇಶಭರಿತರಾಗಿ ಮಾತನಾಡಿದ್ದ ಯಡಿಯೂರಪ್ಪನವರು, ಎಲ್ಲ ಪಕ್ಷಗಳ ಶಾಸಕರು ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದಾರೆ ತಾಯೀ ಎಂದಿದ್ದರು. ನಾಲಿಗೆ ತಪ್ಪಿ ಬಂದ ಮಾತಿಗೆ ರೆಡ್ಡಿಗಳು ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಭಿನ್ನಮತೀಯ ಶಾಸಕ ಆನಂದ್ ಆಸ್ನೋಟಿಕರ್ ಅವರು, ಹಿಟ್ಲರ್ ನಂತೆ ವರ್ತಿಸುತ್ತಿರುವ ಯಡಿಯೂರಪ್ಪನವರು ತಾಸಿಗೊಂದು ಮಾತನಾಡುತ್ತ ಶಾಸಕರ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದರು. ಇದಕ್ಕೆ ಪುರಾವೆ ಎಂಬಂತೆ ಬಿಎಸ್ ವೈ ಈ ಹೇಳಿಕೆ ನೀಡಿದ್ದಾರೆ.
"ನನ್ನ ಪಕ್ಷದ ಸದಸ್ಯರು ಕೂಡ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾದ್ದಾರೆ ಎಂದಿದ್ದಕ್ಕೆ ರೆಡ್ಡಿಗಳ ಕಡೆಯೇಕೆ ಬೆರಳು ತೋರಿಸುತ್ತೀರಿ. ಅವರು ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿಲ್ಲ. ಅಕ್ರಮ ಗಣಿಗಾರಿಕೆ ನಿಲ್ಲಿಸಲು ಸಾಧ್ಯವಾಗದಿದ್ದಕ್ಕೆ ಅಸಮಾಧಾನವಿದೆ" ಎಂದು ಮಾಧ್ಯಮದವರಿಗೆ ಸ್ಪಷ್ಟನೆ ನೀಡಿದ್ದಾರೆ. ಆದರೆ, ಅಕ್ರಮದಲ್ಲಿ ಭಾಗಿಯಾಗಿರುವ ಬಿಜೆಪಿಯ ಶಾಸಕರು ಯಾರು ಎಂಬ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸಿದರು.
ಖನಿಜಗಳಿಂದ ಅತ್ಯಂತ ಸಂಪದ್ಭರಿತವಾಗಿರುವ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಅಕ್ರಮ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ನನ್ನ ಸರಕಾರ ಅದಿರು ರಫ್ತನ್ನು ನಿಷೇಧಿಸಿದೆ. ಇದರಿಂದ ಅಸಮಾಧಾನಗೊಂಡ ಕೆಲವರು ಸರಕಾರ ಅಸ್ಥಿರಗೊಳಿಸಲು ಯತ್ನಿಸಿದರು ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಯಡಿಯೂರಪ್ಪನವರ ಆಡಳಿತ ವೈಖರಿಯಿಂದ ಅಸಮಾಧಾನಗೊಂಡಿದ್ದ ರೆಡ್ಡಿ ಸಹೋದರರು 50ಕ್ಕೂ ಹೆಚ್ಚು ಭಿನ್ನಮತೀಯ ಶಾಸಕರನ್ನು ಹೈದರಾಬಾದಿನಲ್ಲಿ ಸೇರಿಸಿಕೊಂಡು ಯಡಿಯೂರಪ್ಪನವರನ್ನು ಪದಚ್ಯುತಿಗೊಳಿಸಲು ಯತ್ನಿಸಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.
ರೈತರಿಗೆ ಮೋಸವಾಗುವುದಿಲ್ಲ: ತುಂಗಾ ಮೇಲ್ದಂಡೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಶೀಘ್ರ ಪರಿಹಾರ ನೀಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು. ಪ್ರತಿಭಟನೆ ನಡೆಸಿ ಮೃತರಾದ ಮಾಜಿ ಶಾಸಕರ ಪುತ್ರ ಚಂದ್ರಶೇಖರ್ ಬನ್ನಿಕೋಡ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದರು. ರೈತ ಸಮುದಾಯಕ್ಕೆ ಸೂಕ್ತ ಪರಿಹಾರ ವಿತರಣೆ ಮಾಡುವ ಮೂಲಕ ಅವರ ಆತ್ಮಕ್ಕೆ ಶಾಂತಿ ದೊರಕುವಂತೆ ಮಾಡಲಾಗುವುದು ಎಂದು ಯಡಿಯೂರಪ್ಪ ಹೇಳಿದರು.
ತುಂಗಾ ಮೇಲ್ದಂಡೆಗೆ ಭೂಮಿ ನೀಡಿದ್ದ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಮೈ ಮೇಲೆ ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನಿಸಿದ್ದ ಹಾವೇರಿ ಜಿಲ್ಲೆಯ ರೈತ ಮುಖಂಡ ಚಂದ್ರಶೇಖರ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.
ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7












Click it and Unblock the Notifications