ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಮತ ನೀಡದಂತೆ ರಾಕೇಶ್ ಟಿಕಾಯತ್ ಮನವಿ
ಕೋಲ್ಕತಾ, ಮಾರ್ಚ್ 13: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಕಣಕ್ಕೆ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಧುಮುಕಿದ್ದಾರೆ.
ಶನಿವಾರ ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ರಾಕೇಶ್ ಟಿಕಾಯತ್ ಅವರು ಕಿಸಾನ್ ಮಹಾ ಪಂಚಾಯತ್ ಸಭೆ ನಡೆಸಲಿದ್ದಾರೆ. ಶನಿವಾರ ಸಂಜೆ 4 ಗಂಟೆಗೆ ರೈತರನ್ನು ಉದ್ದೇಶಿಸಿ ಮಾತನಾಡಲಿರುವ ಟಿಕಾಯತ್, ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡದಂತೆ ಮನವಿ ಮಾಡಿಕೊಳ್ಳಲಿದ್ದಾರೆ.
ಈ ಬಾರಿ ಸಿಎಂ ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮದಿಂದ ಸ್ಪರ್ಧೆಗಿಳಿದಿದ್ದು, ಮಮತಾ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸುವೇಂದು ಅಧಿಕಾರಿ ಎದುರಾಳಿಯಾಗಿದ್ದಾರೆ.

ಪಂಚ ರಾಜ್ಯಗಳಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ(ಎಸ್‍ಕೆಎಂ) ಬಿಜೆಪಿ ವಿರುದ್ಧ ಅಭಿಯಾನ ನಡೆಸಲು ನಿರ್ಧರಿಸಿದೆ. ಎಸ್‍ಕೆಎಂ ಭಾಗವಾಗಿ ಪಶ್ಚಿಮ ಬಂಗಾಳದಲ್ಲಿ ಪ್ರವಾಸ ಕೈಗೊಂಡಿರುವ ರಾಕೇಶ್ ಟಿಕಾಯತ್, ಕೋಲ್ಕತ್ತಾದ ನಂದಿಗ್ರಾಮ, ಸಿಂಗೂರ್ ಮತ್ತು ಅಸನ್ಸೋಲ್ ನಲ್ಲಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
ಪಶ್ಚಿಮ ಬಂಗಾಳದ 294 ಕ್ಷೇತ್ರಗಳಲ್ಲಿ ರೈತರು ಟ್ರ್ಯಾಕ್ಟರ್ ಮೆರವಣಿಗೆ ನಡೆಸಲಿದ್ದಾರೆ. ರೈತ ಮೆರವಣಿಗೆ ವೇಳೆ ಚುನಾವಣೆಯಲ್ಲಿ ಬಿಜೆಪಿಯನ್ನು ಬಹಿಷ್ಕರಿಸುವಂತೆ ಮನವಿ ಮಾಡಿಕೊಳ್ಳಲಿದ್ದಾರೆ. ಶನಿವಾರ ಕೋಲ್ಕತ್ತಾದಲ್ಲಿ 11 ಗಂಟೆಗೆ ಕೃಷಿ ಕಾನೂನುಗಳ ಕುರಿತು ರೈತ ಮುಖಂಡ ರಾಕೇಶ್ ಟಿಕಾಯತ್ ಮಾತನಾಡಲಿದ್ದಾರೆ.












Click it and Unblock the Notifications