Mysuru Dasara: ಅದ್ಧೂರಿ ದಸರಾ ಆಚರಣೆ ಮೇಲೆ ಬರದ ಕರಿನೆರಳು?
ಮೈಸೂರು, ಸೆಪ್ಟೆಂಬರ್, 13: ಈಗಾಗಲೇ ಐತಿಹಾಸಿಕ ಮೈಸೂರು ದಸರಾವನ್ನು ಅದ್ಧೂರಿಯಾಗಿ ಆಚರಣೆ ಮಾಡಲು ಸರ್ವ ರೀತಿಯ ತಯಾರಿಗಳು ನಡೆಯುತ್ತಿವೆ. ಅರಮನೆ ಅಂಗಳ ಪ್ರವೇಶಿಸಿರುವ ಅಭಿಮನ್ಯು ನೇತೃತ್ವದ ಗಜಪಡೆಯ ಮೊದಲ ತಂಡ ತಾಲೀಮನ್ನು ಆರಂಭಿಸಿವೆ. ಹೀಗಿರುವಾಗಲೇ ರಾಜ್ಯವನ್ನು ಬರ ಕಾಡಲಾರಂಭಿಸಿದ್ದು, ಬರದ ನಡುವೆ ಅದ್ಧೂರಿ ದಸರಾ ಆಚರಣೆ ಸಾಧ್ಯನಾ ಎಂಬ ಪ್ರಶ‍್ನೆಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.
ಹಾಗೆನೋಡಿದರೆ ಬರ ಕಾಣಿಸಿದಾಗಲೆಲ್ಲ ಮೈಸೂರು ದಸರಾ ಸರಳವಾಗಿ ನಡೆದ ನಿದರ್ಶನಗಳಿವೆ. ಅದನ್ನು ಮೀರಿ ಈ ಬಾರಿ ಅದ್ಧೂರಿಯಾಗಿ ದಸರಾ ಆಚರಣೆಯನ್ನು ಸರ್ಕಾರ ಮಾಡುತ್ತಾ ಎಂಬುದೇ ಕುತೂಹಲಕಾರಿಯಾಗಿದೆ. ಕಳೆದ ಐದು ವರ್ಷಗಳಲ್ಲಿ ಉತ್ತಮವಾಗಿ ಮಳೆಯಾಗಿತ್ತು. ಕೊರೊನಾದಿಂದಾಗಿ ಒಂದೆರಡು ವರ್ಷಗಳ ಕಾಲ ದಸರಾ ಆಚರಣೆಗೆ ತೊಂದರೆಯಾಗಿತ್ತು. ಹೀಗಾಗಿ ಸರಳ ಮತ್ತು ಸಂಪ್ರದಾಯಬದ್ಧವಾಗಿ ದಸರಾ ನಡೆದಿತ್ತು. ಆದರೆ ಕಳೆದ ವರ್ಷ ಅದೆಲ್ಲವನ್ನು ಮರೆತು ದಸರಾ ಆಚರಣೆ ಅದ್ಧೂರಿಯಾಗಿ ನಡೆದಿತ್ತು. ಆದರೆ ಅಂತಹ ಪರಿಸ್ಥಿತಿ ಈ ವರ್ಷ ಇದೆಯಾ?

ಈ ಬಾರಿಯ ಮುಂಗಾರು ದುರ್ಬಲವಾದ ಪರಿಣಾಮ ಹಳೇ ಮೈಸೂರು ವ್ಯಾಪ್ತಿಯ ಕೆರೆಕಟ್ಟೆಗಳು, ಜಲಾಶಯಗಳು ಭರ್ತಿಯಾಗಲೇ ಇಲ್ಲ. ಮಳೆಯನ್ನು ನಂಬಿ ವ್ಯವಸಾಯ ಮಾಡುವ ರೈತರು ಮತ್ತು ಕೆರೆಕಟ್ಟೆ, ಜಲಾಶಯಗಳ ನೀರನ್ನು ಆಶ್ರಯಿಸಿ ಬೆಳೆಬೆಳೆಯುವ ಕೃಷಿಕರು ಕೈಕಟ್ಟಿ ಕೂರುವಂತಾಗಿದೆ. ಮಳೆ ಸುರಿಯಬಹುದು, ಜಲಾಶಯಗಳಿಂದ ನೀರು ಹರಿಸಬಹುದು ಎಂಬ ನಂಬಿಯಿಂದ ರೈತರು ಬೆಳೆದ ಬೆಳೆಗಳು ಒಣಗುತ್ತಿವೆ. ಜೊತೆಯಲ್ಲಿಯೇ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸಿದ ಪರಿಣಾಮ ಜಲಾಶಯಗಳು ಬರಿದಾಗಿವೆ. ಕುಡಿಯಲು ನೀರಿಲ್ಲದ ಪರಿಸ್ಥಿತಿ ಇರುವಾಗ ಕೃಷಿ ತಾನೆ ಹೇಗೆ ಮಾಡುವುದು? ಕೃಷಿ ಮಾಡಿಲ್ಲವೆಂದರೆ ರೈತರ ಜೀವನ ನಡೆಯುವುದು ಹೇಗೆ?
ರಾಜ್ಯಾದ್ಯಂತ ಕಾಡುತ್ತಿರುವ ಬರ
ರಾಜ್ಯದ 196 ತಾಲೂಕುಗಳಲ್ಲಿ ಬರ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ಮತ್ತು ತಿ.ನರಸೀಪುರ ತಾಲೂಕಿನಲ್ಲಿಯೂ ಬರದ ಛಾಯೆಯಿದ್ದು, ಇವೆರಡೂ ತಾಲೂಕನ್ನು ಬರಪೀಡಿತ ಎಂದು ಘೋಷಿಸಿ ಎಂಬ ಒತ್ತಾಯಗಳು ಕೇಳಿ ಬರುತ್ತಿವೆ. ಸರ್ಕಾರ ಇಷ್ಟರಲ್ಲಿಯೇ ಬರ ಘೋಷಣೆ ಮಾಡಬೇಕಾಗಿತ್ತು. ಆದರೆ ಯಾವುದೇ ಘೋಷಣೆ ಮಾಡಿಲ್ಲ. ಆದರೂ ಇವತ್ತಲ್ಲ ನಾಳೆ ಬರಘೋಷಣೆ ಮಾಡಲೇ ಬೇಕಾಗುತ್ತದೆ. ಬರ ಘೋಷಣೆ ಬಳಿಕ ಅದ್ಧೂರಿ ದಸರಾ ನಡೆಸಲು ಸಾಧ್ಯನಾ? ಹೀಗೊಂದು ಪ್ರಶ್ನೆ ಬಿಟ್ಟು ಬಿಡದೆ ಕಾಡುತ್ತಿದೆ.
ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ರೈತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸುತ್ತಲೇ ಬರುತ್ತಿದ್ದಾರೆ. ಸದ್ಯ ನೀರು ಬಿಡುವುದನ್ನು ನಿಲ್ಲಿಸಲಾಗಿತ್ತಾದರೂ ಮತ್ತೆ ನೀರು ಹರಿಸುವಂತೆ ಆದೇಶ ನೀಡಲಾಗಿದೆ. ಇದು ರೈತರು ಮಾತ್ರವಲ್ಲದೆ, ಹಳೆ ಮೈಸೂರು ಭಾಗದ ಮತ್ತು ಕಾವೇರಿ ನೀರನ್ನು ಆಶ್ರಯಿಸಿರುವ ಜನರನ್ನು ಆತಂಕಕ್ಕೆ ತಳ್ಳಿದೆ. ಇದಕ್ಕೊಂದು ತಾರ್ಕಿಕ ಅಂತ್ಯ ಸಿಗುವ ತನಕ ಪ್ರತಿಭಟನೆಗಳು ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಒಂದೆಡೆ ನೀರು ಉಳಿಸಿಕೊಳ್ಳಲು ಹೋರಾಟ ಮತ್ತೊಂದೆಡೆ ಬೆಳೆಬೆಳೆಯಲು ರೈತರ ಪರದಾಟ ಇದರ ನಡುವೆ ಅದ್ಧೂರಿ ದಸರಾ ನಡೆಸಿ ಸಂಭ್ರಮಿಸುವುದು ಹೇಗೆ?
ಜಲಾಶಯಗಳಲ್ಲಿ ನೀರು ಖಾಲಿ ಆದರೆ ಕುಡಿಯಲು ನೀರು ಸಿಗುವುದೇ ಕಷ್ಟವಾಗುವ ಪರಿಸ್ಥಿತಿ ಇದೆ. ನಮ್ಮ ರಾಜಕೀಯ ನಾಯಕರು ರಾಜ್ಯದ ಹಿತಕ್ಕಾಗಿ ರಾಜಕೀಯ ಪ್ರತಿಷ್ಠೆ ಬದಿಗಿಟ್ಟು ಒಂದಾಗಿ ಹೋರಾಟ ಮಾಡಲು ಇಚ್ಛಾಸಕ್ತಿಯ ಕೊರತೆಯಿರುವುದು ಎದ್ದು ಕಾಣಿಸುತ್ತಿದೆ. ಹೀಗಾಗಿಯೇ ಪ್ರತಿಬಾರಿಯೂ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಕಳೆದ ಐದು ವರ್ಷಗಳಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿತ್ತು. ಆದರೆ ಸಮೃದ್ಧ ಮಳೆಯಾಗಿ ಕೆರೆಕಟ್ಟೆಗಳು, ಜಲಾಶಯಗಳು ತುಂಬಿದ್ದಲ್ಲದೆ ಯಥೇಚ್ಛವಾಗಿ ತಮಿಳುನಾಡಿಗೆ ನೀರು ಹರಿದು ಹೋಗಿತ್ತು. ಹೀಗಾಗಿ ಕಾವೇರಿ ನೀರಿನ ವಿವಾದವಾಗಲೇ ಇಲ್ಲ.
ಇದೀಗ ಅಧಿಕಾರದಲ್ಲಿರುವ ಸಿದ್ಧರಾಮಯ್ಯ ನೇತೃತ್ವದ ಸರ್ಕಾರಕ್ಕೆ ಕಾವೇರಿ ನೀರು ವಿವಾದ ಈ ಬಾರಿ ಮುನ್ನಲೆಗೆ ಬರುತ್ತದೆ ಎಂಬ ಯಾವ ನಿರೀಕ್ಷೆಯೂ ಇರಲಿಲ್ಲ. ಮುಂಗಾರು ಮಳೆ ಉತ್ತಮವಾಗಿ ಸುರಿಯುತ್ತದೆ. ನಾಡು ಸುಭೀಕ್ಷವಾಗಿರುತ್ತದೆ ಎಂದೇ ನಂಬಿದ್ದರು. ಆದರೆ ಆಗಿದ್ದೇ ಬೇರೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಜಲಾಶಯಗಳಲ್ಲಿ ನಿರೀಕ್ಷಿತ ನೀರು ಸಂಗ್ರಹವಾಗಿಲ್ಲ. ಇದರಿಂದ ಸರ್ಕಾರ ಕಾವೇರಿ ನೀರು ವಿವಾದವನ್ನು ಮತ್ತು ರೈತರ ಆಕ್ರೋಶವನ್ನು ಎದುರಿಸಲೇ ಬೇಕಾಗಿದೆ.
ಇನ್ನು ಹಳೇ ಮೈಸೂರು ವ್ಯಾಪ್ತಿ ಹೊರತುಪಡಿಸಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯೇ ಇಲ್ಲದಂತಾಗಿದೆ. ಹೀಗಾಗಿ ರೈತರು ಬರದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಸರ್ಕಾರ ಆ ಬಗ್ಗೆಯೂ ಗಮನಹರಿಸಬೇಕಾಗಿದೆ. ಶೀಘ್ರವೇ ತಮ್ಮ ತಾಲೂಕು, ಜಿಲ್ಲೆಗಳನ್ನು ಬರಪೀಡಿತ ಎಂದು ಘೋಷಿಸಿ ಎಂಬ ಒತ್ತಡಗಳು ಸರ್ಕಾರದ ಮೇಲೆ ಬರಲಾರಂಭಿಸಿವೆ. ಹೀಗಿರುವಾಗ ಸರ್ಕಾರ ಯಾವ ರೀತಿ ಕ್ರಮಗಳನ್ನು ಕೈಗೊಳ್ಳುತ್ತದೆ. ಅದು ದಸರಾ ಅದ್ಧೂರಿ ಆಚರಣೆ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ? ಎಂಬಿತ್ಯಾದಿ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದೆ.












Click it and Unblock the Notifications