Tungabhadra Dam: ಮಲೆನಾಡು ಭಾಗದಲ್ಲಿ ಮಳೆ, ತುಂಗಭದ್ರಾ ತುಂಬುವ ನಿರೀಕ್ಷೆ
ಬಳ್ಳಾರಿ, ಆಗಸ್ಟ್ 18: ಒಂದು ವಾರದ ಬಳಿಕ ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್‌ಗೇಟ್‌ಗೆ 5 ಎಲಿಮೆಂಟ್‌ಗಳನ್ನು ಅಳವಡಿಕೆ ಮಾಡಲಾಗಿದೆ. ಈ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಡ್ಯಾಂನಿಂದ ನೀರಿನ ಹೊರ ಹರಿವು ನಿಯಂತ್ರಣದಲ್ಲಿದೆ. ಒಳಹರಿವು ಸಹ ಹೆಚ್ಚಾಗಿದ್ದು, ರೈತರು ಸಂತಸಗೊಂಡಿದ್ದಾರೆ. ಡ್ಯಾಂ ಮತ್ತೆ ಭರ್ತಿಯಾಗಲಿದೆಯೇ? ಎಂದು ಕಾದು ನೋಡುತ್ತಿದ್ದಾರೆ.
ಚೈನ್ ಲಿಂಕ್ ಕಟ್ ಆಗಿ ಜಾರಿ ಹೋಗಿದ್ದ 19ನೇ ಕ್ರಸ್ಟ್‌ಗೇಟ್‌ಗೆ ಅಡಿ ಎತ್ತರದ 5 ಎಲಿಮೆಂಟ್‌ಗಳನ್ನು ಅಳವಡಿಕೆ ಮಾಡಿ ಗೇಟ್ ಮೂಲಕ ನೀರಿನ ಹೊರ ಹರಿವು ಬಂದ್ ಮಾಡಲಾಗಿದೆ. ಡ್ಯಾಂನ ಒಟ್ಟು ನೀರು ಸಂಗ್ರಹ ಸಾಮರ್ಥ್ಯ 105.79 ಟಿಎಂಸಿ ಅಡಿ. ಸದ್ಯ ಡ್ಯಾಂನಲ್ಲಿ 71.14 ಅಡಿ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಸಮಯದಲ್ಲಿ 87.56 ಟಿಎಂಸಿ ಅಡಿ ನೀರಿನ ಸಂಗ್ರಹವಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ, "ಭಾರೀ ಪ್ರಮಾಣದ ನೀರಿನ ಹೊರಹರಿವಿದ್ದರೂ ಗೇಟ್ ಅಳವಡಿಕೆಯಂತಹ ಕಷ್ಟಸಾಧ್ಯವಾದ ಕಾರ್ಯವನ್ನು ಸಾಧ್ಯವಾಗಿಸಿ, ನಾಡಿನ ರೈತರನ್ನು ಆತಂಕದಿಂದ ಮುಕ್ತಗೊಳಿಸಿದ್ದೇವೆ. ತುಂಗಭದ್ರಾ ಜಲಾಶಯದ ನೀರನ್ನು ಆಧರಿಸಿ ಎರಡು ಬೆಳೆ ಬೆಳೆಯುವ ರೈತರು ಇನ್ನು ನಿಶ್ಚಿಂತರಾಗಿ ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳಬಹುದು" ಎಂದು ರೈತರಿಗೆ ಸಿಹಿಸುದ್ದಿ ನೀಡಿದ್ದಾರೆ.
ಡ್ಯಾಂನ 19ನೇ ಗೇಟ್‌ನಲ್ಲಿ ಅಂತಿಮವಾಗಿ ಸ್ಟಾಪ್ ಲಾಗ್ ಗೇಟ್ ಅನ್ನು ಕೂರಿಸಲಾಗಿದೆ. ಕಡಿಮೆ ಅವಧಿಯಲ್ಲಿ ಈ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಲಾಗಿರುತ್ತದೆ. 30 ಟಿಎಂಸಿಗೂ ಹೆಚ್ಚು ನೀರು ಉಳಿತಾಯವಾಗಿರುತ್ತದೆ ಎಂದು ವಿಜಯನಗರ ಜಿಲ್ಲಾಡಳಿತ ಹೇಳಿದೆ.
ಡ್ಯಾಂ ತುಂಬುವ ನಿರೀಕ್ಷೆ: ವಿಜಯನಗರ ಜಿಲ್ಲಾಡಳಿತ ಗೇಟ್ ದುರಸ್ತಿ ಕಾರ್ಯವನ್ನು ಕನ್ನಯ್ಯ ನಾಯ್ಡು ನಿವೃತ್ತ ಅಧಿಕಾರಿಗಳು, ತುಂಗಭದ್ರಾ ಸ್ಟೀಲ್ ಪ್ಲಾಂಟ್ಸ್ ಹೊಸಪೇಟೆ ಇವರ ನಿರ್ದೇಶನದಲ್ಲಿ ನಡೆಸಿದ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ, ಕಾರ್ಮಿಕರಿಗೆ ಗೌರವ ಪೂರ್ವಕವಾಗಿ ಅಭಿನಂದನೆಗಳನ್ನು ಸಲ್ಲಿಸಿದೆ.
ಆತಂಕಬೇಡ, ನಮ್ಮ ಜಿಲ್ಲೆಯ ತಜ್ಞರ ಮತ್ತು ಗೌರವಾನ್ವಿತ ಕಾರ್ಮಿಕರ ಶ್ರಮದ ಬಗ್ಗೆ ಅಭಿಮಾನವಿರಲಿ ತುಂಗಭದ್ರ ಡ್ಯಾಂನ ಗೇಟ್ ನಂಬರ್ 19 ನೀರಿನ ಸೆಳೆತಕ್ಕೆ ಅವಘಡ ಸಂಭವಿಸಿದಾಗ ಡ್ಯಾಂನಲ್ಲಿ ನೀರು ಸಂಗ್ರಹವಾಗಿದ್ದು 102 ಟಿಎಂಸಿ. ಪ್ರಾಥಮಿಕ ಮಾಹಿತಿ ಪ್ರಕಾರ ಸುಮಾರು 60 ಟಿಎಂಸಿ ನೀರನ್ನು ಹೊರಹಾಕಿ ರಿಪೇರಿ ಮಾಡಬೇಕಾಗಿರುವುದು ಎಂದು ಚಿಂತಿಸಲಾಗಿತ್ತು.
ಆದರೆ ತಜ್ಞರ ಯಶಸ್ಸಿನಿಂದ ಮತ್ತು ಕಾರ್ಮಿಕರ ಕಠಿಣ ಶ್ರಮದಿಂದ ಕೇವಲ 30 ಟಿಎಂಸಿ ಮಾತ್ರ ನೀರನ್ನು ಹೊರಹರಿಸಿ ಸಂಪೂರ್ಣ ರಿಪೇರಿ ಮಾಡಲಾಗಿರುತ್ತದೆ. ಇದರಿಂದ 30 ಟಿಎಂಸಿಗೂ ಹೆಚ್ಚು ನೀರು ಉಳಿತಾಯ ಮಾಡಿ, ಸದ್ಯ ಡ್ಯಾಂನಲ್ಲಿ 70ಕ್ಕೂ ಹೆಚ್ಚು ಟಿಎಂಸಿ ನೀರು ಲಭ್ಯವಿರುತ್ತದೆ.
ಮುಂದುವರೆದು ಪ್ರತಿದಿನ ಮೂರರಿಂದ ನಾಲ್ಕು ಟಿಎಂಸಿ ನೀರು ನದಿಯಲ್ಲಿ ಒಳಹರಿವು ಇದೆ. ಮಾಹಿತಿಗಳ ಪ್ರಕಾರ ಮುಂದಿನ ವಾರದಲ್ಲಿ ಮಲೆನಾಡು ಪ್ರದೇಶದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸಾಧ್ಯತೆಯಿದ್ದು, ನಿಸರ್ಗದ ಕೃಪೆಯಿಂದ ಬರುವ 10 ದಿನದೊಳಗಾಗಿ ತುಂಗಭದ್ರಾ ಡ್ಯಾಂ ತುಂಬುವ ಎಲ್ಲಾ ಸಾಧ್ಯತೆ ಇದೆ. ಹಾಗಾಗಿ ಯಾರು ಆತಂಕ ಪಡ ಬಾರದಾಗಿ ಜಿಲ್ಲಾಡಳಿತ ಕೋರಿದೆ ಎಂದು ವಿಜಯನಗರ ಜಿಲ್ಲಾಡಳಿತ ತಿಳಿಸಿದೆ.
2023ರಲ್ಲಿ ಮಳೆ ಕೊರತೆಯ ಕಾರಣ ತುಂಗಭದ್ರಾ ಡ್ಯಾಂ ಭರ್ತಿಯಾಗಿರಲಿಲ್ಲ. ಆದ್ದರಿಂದ ರೈತರು ಬೆಳೆಗಳಿಗೆ ನೀರಿಲ್ಲದೇ ಸಂಕಷ್ಟ ಅನುಭವಿಸಿದ್ದರು. ಆದರೆ ಈ ಬಾರಿ ಭಾರೀ ಮಳೆಯ ಕಾರಣ ಡ್ಯಾಂ ಭರ್ತಿಯಾಗಿತ್ತು. 19ನೇ ಗೇಟ್ ಚೈನ್ ಲಿಂಕ್ ಕಟ್ ಆದ ಕಾರಣ ಒಂದು ವಾರ ನದಿಗೆ ನೀರು ಹರಿದು ಹೋಗಿದ್ದು, ರೈತರಲ್ಲಿ ಆತಂಕ ಮೂಡಿಸಿತ್ತು.












Click it and Unblock the Notifications