RTPS: ಎಲ್ಲೆಲ್ಲೂ ಬೂದಿ... ಎಲ್ಲೆಲ್ಲೂ ಬೂದಿ..: ಹಾರು ಬೂದಿಗೆ ರೋಸಿ ಹೋದ ರಾಜನೂರು....
ರಾಯಚೂರು ಜುಲೈ 19: ಎಲ್ಲೆಲ್ಲೂ ಬೂದಿ....ಎಲ್ಲೆಲ್ಲೂ ಬೂದಿ.. ಇದು ಯಾವುದೇ ಸ್ವಾಮೀಜಿ ನೀಡುವ ಮಾಟ ಮಂತ್ರದ ಬೂದಿ ಅಲ್ಲ. ಬದಲಿಗೆ ಆರ್‌ಟಿಪಿಎಸ್ ವಿದ್ಯುತ್ ಘಟಕಗಳಿಂದ ಹೊರ ಬರುವ ಹಾರುಬೂದಿ. ಪ್ರತಿನಿತ್ಯ ಈ ಬೂದಿ ಸಮಸ್ಯೆ, ದೇವಸೂಗೂರು ಹೋಬಳಿ ಮಟ್ಟದ ವ್ಯಾಪ್ತಿಗಳಲ್ಲಿ ಇರುವ ಹಳ್ಳಿಗಳ ಜನರಿಗೆ ನರಕಯಾತನೆ ಆಗಿದೆ.
ವಿದ್ಯುತ್ ಘಟಕಗಳ ನಿರ್ಮಾಣಕ್ಕಾಗಿ ಡಿ.ಯದ್ಲಾಪುರ, ದೇವಸೂಗೂರು ಸೇರಿದಂತೆ ಸುತ್ತಲಿನ ಕೆಲ ಗ್ರಾಮಗಳ ಜನರು ಭೂಮಿ ನೀಡಿದ್ದಾರೆ. ಆದರೆ ಭೂಮಿ ನೀಡಿದ ಜನರಿಗೆ ಈಗ ಸಂಕಷ್ಟ ಎದುರಾಗಿದೆ. ಬೂದಿಯಿಂದ ಕೂಡಿದ ಗಾಳಿ ಉಸಿರಾಡುವಂತಾಗಿದೆ. ಬೂದಿ ಬಿದ್ದ ನೀರು, ಆಹಾರ ಸೇವಿಸುವಂತಾಗಿದೆ. ಹೀಗಾಗಿ ಜನರಿಗೆ ಆರೋಗ್ಯದ ಬಗ್ಗೆ ಭೀತಿ ಶುರುವಾಗಿದೆ.

ನಿಂತ ನಿಂತಲ್ಲೇ ಜನರ ಮೇಲೆ ಬೂದಿ ಬೀಳುತ್ತಿದ್ದು ಹಾರು ಬೂದಿಯಿಂದಾಗಿ ಜನ ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಹಾರುಬೂದಿ ಸಮಸ್ಯೆಗೆ ಸುತ್ತಲಿನ ಗ್ರಾಮಸ್ಥರು ನಲುಗಿ ಹೋಗಿದ್ದಾರೆ. ಪ್ರತಿ ಮನೆ ಮನೆಗಳಲ್ಲಿ, ಕಣ್ಣಿಗೆ ಕಾಣದ ಹಾರುಬೂದಿ ಬೀಳುತ್ತಿದೆ.
ಅಷ್ಠ ಅಲ್ಲ ಅಡುಗೆ ಮಾಡುವ ಸಾಮಾಗ್ರಿಗಳ ಮೇಲೆ, ವಾಹನಗಳ ಮೇಲೆ ಬೀಳುವುದರ ಜೊತೆಗೆ, ನಿಂತಲ್ಲೇ ತಲೆಯ ಮೇಲೂ ಬೂದಿ ಬಿದ್ದು, ಕಪ್ಪು ಕೂದಲು ಹೋಗಿ ಬಿಳಿ ಕೂದಲಿನಂತಾಗುತ್ತಿದೆ. ನಿತ್ಯ ಕಷ್ಟ ಅನುಭವಸುತ್ತಿರುವ ಜನರು ಪಾಡು ಹೇಳ ತೀರದಂತಾಗಿದೆ.
ಆರ್‌ಟಿಪಿಎಸ್ ಎಂಟು ಘಟಕಗಳಿಂದ ಪೂರ್ಣ ಪ್ರಮಾಣದ ಉತ್ಪಾದನೆಯಾದಲ್ಲಿ 25ಸಾವಿರ ಮೆಟ್ರಿಕ್ ಟನ್ ಅಧಿಕ ಕಲ್ಲಿದ್ದಲು ಉರಿಯುತ್ತದೆ. ಇದರಿಂದ ಶೇಕಡಾ 25 ರಷ್ಟು ಹಸಿ ಬೂದಿ ಉತ್ಪಾದನೆಯಾದರೆ, ಇನ್ನೂಳಿದ ಶೇ.75ರಷ್ಟು ಹಾರುಬೂದಿ ಬರುತ್ತದೆ. ಬೂದಿಯನ್ನು ಸಿಮೆಂಟ್ ಕಾರ್ಖಾನೆಗಳು ಖರೀದಿಸುತ್ತಿದ್ದು , ಲಾರಿಗಳು, ಟಿಪ್ಪರ್ ಗಳು, ಟ್ಯಾಂಕರ್ ಗಳ ಮೂಲಕ ಬೂದಿಯನ್ನು ಸಾಗಿಸಲಾಗುತ್ತಿದೆ.

ಬೂದಿಯಿಂದ ನಾನಾ ಕಾಯಿಲೆ
ವಾಹನಗಳಿಂದ ಸಾಗಣೆ ಮಾಡುವ ಬೂದಿ ರಸ್ತೆಯಲ್ಲಿ ಬೀಳುತ್ತಿದೆ. ರಸ್ತೆಯಲ್ಲಿ ಬಿದ್ದ ಬೂದಿ ಬೈಕ್ ಸವಾರಗಳ ಕಣ್ಣಿಲ್ಲಿ ಬಿದ್ದು ಅಪಘಾತಗಳು ಉಂಟಾಗಿ ಬೈಕ್ ಸವಾರರು ಮೃತಪಟ್ಟಿರುವ ಘಟನೆಗಳು ನಡೆದಿವೆ. ಇನ್ನೂ ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಧೂಳಿನಿಂದಾಗಿ ಅನೇಕ ಜನರು ಅಸ್ತಮಾ, ಕಾಮಲೆ, ಕಣ್ಣಿನ ಕಾಯಿಲೆಯಿಂದ ಬಳಲುತ್ತಿದ್ದಾರೆ. ಗಂಟಲು ಕೆರೆತದಂತಹ ಸಮಸ್ಯೆ ಹಲವರಲ್ಲಿ ಕಾಣಿಸಿಕೊಳ್ಳುತ್ತಲೇ ಇದೆ. ಧೂಳಿನಿಂದಾಗಿ ರಿಮ್ಸ್ ಹಾಗೂ ಖಾಸಗಿ ಆಸ್ಪತ್ರೆಗೆ ಹೋಗುವವರ ಸಂಖ್ಯೆಯೂ ಹೆಚ್ಚಾಗಿದೆ.

ರಸ್ತೆ ಬದಿ ವ್ಯಾಪಾರಕ್ಕೆ ತೊಂದರೆ
ಹಾರೂಬೂದಿಯ ಧೂಳುನಿಂದ ಶಕ್ತಿನಗರದ ಎರಡನೇ ಕ್ರಾಸ್ ರಸ್ತೆಯ ಪಕ್ಕದಲ್ಲಿ ವ್ಯಾಪಾರ ಮಾಡುವ ವ್ಯಾಪರಸ್ಥರಿಗೆ ತೊಂದರೆಯಾಗುತ್ತಿದೆ. ಧೂಳಿನಿಂದಾಗಿ ವ್ಯಾಪಾರ ಮಾಡಲು ಆಗುತ್ತಿಲ್ಲ. ಇಲ್ಲಿನ ಜನರ ಸಮಸ್ಯೆಗಳಿಗೆ ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ. ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿದ್ದ ಜಿಲ್ಲಾಡಳಿತ ನಿಯಮ ಉಲ್ಲಂಘಿಸುವ ಲಾರಿ ಮಾಲೀಕರ ಪರ ನಿಂತಿರುವುದು ಬೇಸರ ಉಂಟು ಮಾಡಿದೆ ಎಂದು ವ್ಯಾಪಾರಸ್ಥರು ದೂರಿದ್ದಾರೆ.
ಈ ಭಾಗದ ಜನರಿಗೆ ಅಸ್ತಮಾ, ಕ್ಯಾನ್ಸರ್, ಉಸಿರಾಟ ತೊಂದರೆ ಕಾಯಿಲೆಗಳು ಹೆಚ್ಚಾಗುತ್ತಿವೆ. ಈ ಸಮಸ್ಯೆಗೆ ಆರ್‌ಟಿಪಿಎಸ್ ವಿದ್ಯುತ್ ಘಟಕ ಪರಿಹಾರ ಕಂಡುಕೊಳ್ಳಲು ವಿಫಲವಾಗಿದೆ.












Click it and Unblock the Notifications