ರಾಯಚೂರು; ಭಾರಿ ಮಳೆಯಿಂದ ಹತ್ತಿ ಬೆಳೆ ನಾಶ, ವಿಷದ ಬಾಟಲಿ ಹಿಡಿದ ರೈತ
ರಾಯಚೂರು, ಅಕ್ಟೋಬರ್, 14; ಕಳೆದ ಎರಡು, ಮೂರು ದಿನಗಳಿಂದ ಜಿಲ್ಲೆಯಲ್ಲಿ ಭಾರಿ ಮಳೆ ಸುರಿದಿದ್ದು, ರೈತರು ಬೆಳೆದ ಬೆಳೆಗಳು ಸಂಪೂರ್ಣಾವಾಗಿ ಜಲಾವೃತವಾಗಿವೆ. ಹತ್ತಿ, ತೊಗರಿ ಸೇರಿದಂತೆ ಮತ್ತಿತರ ಬೆಳೆಗಳು ಸಂಪೂರ್ಣವಾಗಿ ನೀರುಪಾಲಾಗಿದ್ದು, ರೈತರ ಬದುಕನ್ನೇ ಬೀದಿಗೆ ಬರುವಂತೆ ಮಾಡಿದೆ. ಹಾಗೆಯೇ ಮಾನ್ವಿ ತಾಲೂಕಿನ ನೀರ ಮಾನ್ವಿಯ ರೈತ ಶಿವರಾಜ ಎಂಬುವವರ ಜಮೀನಿನಲ್ಲಿ ಹತ್ತಿ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಹತ್ತಿ ಬೆಳೆಯನ್ನು ಕಳೆದುಕೊಂಡ ರೈತ ಶಿವರಾಜ ಕಣ್ಣೀರಿಟ್ಟಿದ್ದಾರೆ.
ಕಳೆದ ಒಂದು ತಿಂಗಳಿನಲ್ಲಿ ಬಿಟ್ಟು ಬಿಡದೆ ಸುರಿದ ಮಳೆಗೆ ಸಾವಿರಾರು ಹೆಕ್ಟೇರ್ ಜಮೀನು ಜಲಾವೃತವಾಗಿದೆ. ಬೆಳೆ ನಷ್ಟದಿಂದ ರೈತರು ಕಂಗಾಲಾಗಿದ್ದರೂ ಸರ್ಕಾರ ಮಾತ್ರ ಪರಿಹಾರ ಒದಗಿಸುವ ಕೆಲಸವನ್ನು ಮಾಡುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಹತ್ತಿ ಬೆಳೆ ಕಾಯಿ ಬಿಡುವ ಹಂತದಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬೆರೆದಿದ್ದಾನೆ. ಇದರಿಂದ ಸಂಪೂರ್ಣವಾಗಿ ಹತ್ತಿ ಬೆಳೆ ನಾಶವಾಗಿದೆ. ಹಳ್ಳದ ನೀರು ಹೊಲಕ್ಕೆ ನುಗ್ಗಿದ ಪರಿಣಾಮ ಇಡೀ ಹತ್ತು ಹೆಕ್ಟೇರ್ ಜಮೀನಿನಲ್ಲಿ ಬೆಳೆದ ಹತ್ತಿ ಬೆಳೆ ನಾಶವಾಗಿದೆ. ಇದು ಯುವ ರೈತನ ಪಾಲಿಗೆ ಭಾರಿ ಸಂಕಷ್ಟ ತಂದೊಡ್ಡಿದೆ.

ಹತ್ತಿ ಬೆಳೆ ನಾಶ, ಕಣ್ಣೀರಿಡುತ್ತಿರುವ ರೈತ
ಹಳ್ಳದಿಂದ ನೀರು ಹೊಲಕ್ಕೆ ನುಗ್ಗುವುದನ್ನು ತಡೆಯಲಾಗದ ಅಸಹಾಯಕ ಸ್ಥಿತಿ ನಿರ್ಮಾಣವಾಗಿದೆ. ರೈತ ಶಿವರಾಜ ಪ್ರತಿ ಹಕ್ಟೇರ್‌ಗೆ 20ರಿಂದ 30 ಸಾವಿರ ಖರ್ಚು ಮಾಡಿದ್ದರು ಎನ್ನಲಾಗಿದೆ. ಬೆಳೆ ಕೈಗೆ ಬರುವ ಹಂತದಲ್ಲಿ ಎಲ್ಲವೂ ನೀರು ಪಾಲಾಗಿರುವುದನ್ನು ಕಂಡು ರೈತ ಕಣ್ಣೀರಲ್ಲಿ ಕೈತೊಳೆಯುವಂತಹ ಪರಿಸ್ಥತಿ ನಿರ್ಮಾಣವಾಗಿದೆ. ಕೈಯಲ್ಲಿ ವಿಷದ ಬಾಟಲಿ ಹಿಡಿದು ಕಣ್ಣೀರು ಹಾಕುವ ರೈತನ ಗೋಳನ್ನು ಕೇಳುವವರು ಜಿಲ್ಲೆಯಲ್ಲಿ ಯಾರು ಇಲ್ಲದಂತಾಗಿದೆ. ಹತ್ತು ಹೆಕ್ಟೇರ್ ಜಮೀನಿಗೆ ಸುಮಾರು 3 ಲಕ್ಷ ವೆಚ್ಚ ಖರ್ಚು ಮಾಡಿದ ರೈತ ಶಿವರಾಜ ಇದೀಗ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಭಾರಿ ಮಳೆಯಿಂದ ಹತ್ತಿ ಬೆಳೆ ಸರ್ವನಾಶ
ಮಾರುಕಟ್ಟೆಯಲ್ಲಿ ಹತ್ತಿಯ ಬೆಲೆ ಗಗನಕ್ಕೇರಿದೆ. ಹತ್ತಿ ಬೆಳೆಯಿಂದ ತಾನು ಮಾಡಿದ್ದ ಸಾಲವನ್ನು ಸಂಪೂರ್ಣವಾಗಿ ತೀರಿಸಬಹುದು ಎಂಬ ಕನಸು ಕಂಡಿದ್ದರು. ಆದರೆ ಇದೀಗ ಭಾರಿ ಮಳೆಯಿಂದ ಹತ್ತಿ ಬೆಳೆ ಸಂಪೂರ್ಣವಾಗಿ ಹಾಳಾಗಿದ್ದು, ಯುವ ರೈತ ಶಿವರಾಜ ಕಂಗಾಲಾಗಿದ್ದಾರೆ. ಈ ಬಗ್ಗೆ ಅಳಲು ತೋಡಿಕೊಂಡ ಶಿವರಾಜ ಇಲ್ಲಿಯವರೆಗೂ ಸರ್ಕಾರದಿಂದ ಯಾವುದೇ ಪರಿಹಾರ ದೊರೆತಿಲ್ಲ ಎಂದು ಹೇಳುವ ಮೂಲಕ ಅಳಲು ತೋಡಿಕೊಂಡಿದ್ದಾರೆ.

ಜನಪ್ರತಿನಿಧಿಗಳ ವಿರುದ್ದ ಜನಾಕ್ರೋಶ
ಕೇವಲ ಸಮೀಕ್ಷೆ ವರದಿ ಎನ್ನುವುದರಲ್ಲಿ ಕಾಲ ಕಳೆಯಲಾಗುತ್ತಿದೆ. ಮೊದಲ ಮಳೆಗೆ 16 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾದ ಬಗ್ಗೆ ವರದಿ ನೀಡಲಾಗಿತ್ತು. ಬೆಳೆ ನಷ್ಟದ ವರದಿ ನೀಡಿದ್ದರೂ ಇಲ್ಲಿಯವರೆಗೆ ಯಾವುದೇ ಪರಿಹಾರವನ್ನು ನೀಡಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಮತ್ತೆ ಇದೀಗ ಮಳೆ ಮುಂದುವರೆದಿದ್ದು, ರೈತರು ಮತ್ತಷ್ಟು ಬೆಳೆ ನಷ್ಟ ಆಗುವ ಸಂಕಷ್ಟದಲ್ಲಿ ಇದ್ದಾರೆ.

ಭರವಸೆಯಾಗಿಯೇ ಉಳಿದ ಪರಿಹಾರ
ಇಷ್ಟೆಲ್ಲ ಸಮಸ್ಯೆಗಳು ಆದರೂ ಕೂಡ ಜನಪ್ರತಿನಿಧಿಗಳು ಮಾತ್ರ ಇತ್ತ ತಲೆಹಾಕುತ್ತಿಲ್ಲ. ಜಿಲ್ಲೆಯ ರೈತರು ಮಳೆಯಿಂದ ಭಾರಿ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಉಸ್ತುವಾರಿ ಸಚಿವರು ಇವರೆಗೂ ಜನರ ಸಮಸ್ಯೆಗಳನ್ನು ಆಲಿಸಿಲ್ಲ. ಜಿಲ್ಲೆಗೆ ಎರಡು ಬಾರಿ ಮುಖ್ಯಮಂತ್ರಿಗಳು ಭೇಟಿ ಕೊಟ್ಟಿದ್ದರು. ಆದರೆ ಅವರು ಜನರ ಕಷ್ಟಗಳಿಗೆ ಯಾವುದೇ ಸ್ಪಂದನೆ ನೀಡಿಲ್ಲ. ನಾಳೆ ಕಂದಾಯ ಸಚಿವ ಆರ್.ಅಶೋಕ್ ಇಲ್ಲಿಯೇ ವಾಸ್ತವ್ಯ ಹೂಡುತ್ತಿದ್ದಾರೆ. ಇವರಿಂದಾನಾದರೂ ಪರಿಹಾರ ದೊರೆಯುವುದೇ ಎನ್ನುವುದು ಜನರ ಪ್ರಶ್ನೆ ಆಗಿದೆ.












Click it and Unblock the Notifications