ಅಕ್ಟೋಬರ್ 9, 10 ರಾಹುಲ್ ರಾಜ್ಯ ಪ್ರವಾಸ, ಕಾರ್ಯಕ್ರಮಗಳು
ಬೆಂಗಳೂರು, ಸೆಪ್ಟೆಂಬರ್ 30 : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಪ್ರವಾಸದ ಕುರಿತು ಎದ್ದಿದ್ದ ಗೊಂದಲಗಳು ಬಗೆಹರಿದಿವೆ. ಅ.9 ಮತ್ತು 10ರಂದು ರಾಹುಲ್ ರಾಜ್ಯ ಪ್ರವಾಸ ಮಾಡಲಿದ್ದಾರೆ. ಮಂಡ್ಯ, ಹಾವೇರಿಗೆ ಭೇಟಿ ನೀಡಲಿರುವ ಅವರು, ಬೆಂಗಳೂರಿನಲ್ಲಿಯೂ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಮೊದಲು ರಾಹುಲ್ ಗಾಂಧಿ ಅ.6 ಮತ್ತು 7ರಂದು ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಅವರ ಕಚೇರಿ ಹೇಳಿತ್ತು. ಈಗ ಅವರ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಲಾಗಿದೆ. ಅ.9ರ ಶುಕ್ರವಾರ ಮತ್ತು ಅ.10ರ ಶನಿವಾರ ರಾಹುಲ್ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. [ರೈತ ಆತ್ಮಹತ್ಯೆ, ಲೋಕಸಭೆಯಲ್ಲಿ ಯಡಿಯೂರಪ್ಪ ಘರ್ಜನೆ]

ರಾಹುಲ್ ಗಾಂಧಿ ಕಾರ್ಯಕ್ರಮಗಳು : ಅಕ್ಟೋಬರ್ 8ರಂದು ರಾತ್ರಿ ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಅ.9ರಂದು ಬೆಳಗ್ಗೆ 10 ಗಂಟೆಗೆ ಮಂಡ್ಯ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಶ್ರೀರಂಗಪಟ್ಟಣ, ಕೆ.ಆರ್.ಪೇಟೆ ತಾಲೂಕಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಭೇಟಿ ಕೊಟ್ಟು ಸಾಂತ್ವನ ಹೇಳಲಿದ್ದಾರೆ. [ರೈತರ ಆತ್ಮಹತ್ಯೆಗಳು ನೋವು ತಂದಿದೆ]
ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿಗೆ ಆಗಮಿಸಲಿರುವ ರಾಹುಲ್ ಗಾಂಧಿ ಅರಮನೆ ಮೈದಾನದಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಗ್ರಾಮ ಪಂಚಾಯಿತಿಗೆ ನೂತನವಾಗಿ ಆಯ್ಕೆಯಾದ ಸದಸ್ಯರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ ಕೆಪಿಸಿಸಿ ಪದಾಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.
ಅಕ್ಟೋಬರ್ 10 ರ ಕಾರ್ಯಕ್ರಮ : ಅ.10ರ ಶನಿವಾರ ಬೆಳಗ್ಗೆ ಹಾವೇರಿ ಪ್ರವಾಸ ಮಾಡಲಿದ್ದಾರೆ. ಹಾವೇರಿಯಲ್ಲಿ ರಾಹುಲ್ ಪಾದಯಾತ್ರೆ ನಡೆಸಲಿದ್ದು, ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸಾಂತ್ವನ ಹೇಳುವುದರ ಜೊತೆಗೆ ರೈತ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.












Click it and Unblock the Notifications