ಮೀಟರ್ ಬಡ್ಡಿ ದಂಧೆಕೋರರ ವಿರುದ್ಧ ಜಿಲ್ಲೆಯಾದ್ಯಂತ ಕ್ರಮ
ಕಲಬುರಗಿ, ಜುಲೈ 20 : 'ಆತ್ಮಹತ್ಯೆಯೊಂದೇ ರೈತರ ಸಮಸ್ಯೆಗಳಿಗೆ ಪರಿಹಾರವಲ್ಲ. ರೈತರ ಸಮಸ್ಯೆಗಳಿಗೆ ಹಾಗೂ ನೋವುಗಳಿಗೆ ಸ್ಪಂದಿಸಲು ಸರ್ಕಾರ ಬದ್ಧವಾಗಿದೆ. ರೈತರ ಬೆಂಬಲಕ್ಕೆ ಸರ್ಕಾರವಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಪೌರಾಡಳಿತ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಖಮರುಲ್ ಇಸ್ಲಾಂ ಮನವಿ ಮಾಡಿದ್ದಾರೆ.
ಭಾನುವಾರ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾಜಾಪುರ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ನಾರಾಯಣರೆಡ್ಡಿ ಪೋತಲ ಅವರ ಮನೆಗೆ ಭೇಟಿ ನೀಡಿ ಸಚಿವರು, ರೈತನ ಕುಟುಂಬಕ್ಕೆ ಸಾಂತ್ವನ ಹೇಳಿದರು. ರೈತರ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ, ಯಾರೂ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಕರೆ ನೀಡಿದರು. [ರೈತರಿಗೆ ಸಾಂತ್ವನ ಹೇಳಿದ ಸಿದ್ದರಾಮಯ್ಯ]

ರೈತರು ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಸರ್ಕಾರ ರೈತರಿಗೆ ಎಲ್ಲ ಸಹಾಯ, ಸೌಲಭ್ಯಗಳನ್ನು ಒದಗಿಸಲಿದೆ. ಹೊಲದಲ್ಲಿ ಬಿತ್ತನೆಗೆ ಬೇಕಾದ ಬೀಜ, ಗೊಬ್ಬರ ಮತ್ತು ಕೃಷಿ ಪರಿಕರಗಳನ್ನು ಕೃಷಿ ಇಲಾಖೆಯಿಂದ ಒದಗಿಸಲಾಗುವುದು ಎಂದು ಸಚಿವರು ತಿಳಿಸಿದರು. [ಕರ್ನಾಟಕದಲ್ಲಿ ರೈತರ ಸಾವಿಗೆ ಕಾರಣವೇನು? ಇಲ್ಲಿದೆ ಉತ್ತರ]
ಮೀಟರ್ ಬಡ್ಡಿ ದಂಧೆ ನಡೆಸುವವರ ವಿರುದ್ಧ ಈಗಾಗಲೇ ಜಿಲ್ಲೆಯಾದ್ಯಂತ ಕ್ರಮ ಕೈಗೊಳ್ಳಲಾಗುತ್ತಿದೆ. ಮಿತಿಮೀರಿದ ಬಡ್ಡಿ ವಿಧಿಸುತ್ತಿರುವವರ ವಿರುದ್ಧ ಇದುವರೆಗೆ 24 ಎಫ್‍ಐಆರ್ ದಾಖಲು ಮಾಡಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ರೈತರಿಗೆ 1ಲಕ್ಷ ರೂ. ಪರಿಹಾರವನ್ನು ವಿತರಣೆ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.
ಆತ್ಮಹತ್ಯೆ ಮಾಡಿಕೊಳ್ಳದಂತೆ ರೈತರಲ್ಲಿ ಜಾಗೃತಿ ಮೂಡಿಸಲು ಕರಪತ್ರಗಳನ್ನು ವಿತರಣೆ ಮಾಡಲಾಗುತ್ತಿದೆ ಹಾಗೂ ರೈತರ ನೆರವಿಗಾಗಿ ಜಿಲ್ಲೆಯ ಎಲ್ಲ ತಾಲೂಕುಗಳ ತಹಶೀಲ್ದಾರ್ ಕಚೇರಿಯಲ್ಲಿ ಸಹಾಯವಾಣಿಯನ್ನು ಆರಂಭಿಸಲಾಗಿದೆ ಎಂದು ಸಚಿವರು ವಿವರಣೆ ನೀಡಿದರು.

ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳ ಮತ್ತು ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ಮತ್ತು ರೈತರಲ್ಲಿ ಮನೆ ಮಾಡಿದ ಆತಂಕ ಹಾಗೂ ಹತಾಶ ಭಾವನೆ ನಿವಾರಿಸುವ ನಿಟ್ಟಿನಲ್ಲಿ ಹೋಬಳಿ ಮಟ್ಟದಲ್ಲಿ ರೈತರ ಸಭೆಗಳನ್ನು ನಡೆಸಲಾಗುತ್ತದೆ ಎಂದರು.












Click it and Unblock the Notifications