PM Kisan Samman: ಪಿಎಂ ಕಿಸಾನ್ ಸಮ್ಮಾನ್ ನಿಧಿ ಹಣ 12,000ಕ್ಕೆ ಏರಿಕೆ
ಬೆಂಗಳೂರು, ಡಿಸೆಂಬರ್ 10: ಕೇಂದ್ರ ಸರ್ಕಾರ ರೈತರಿಗೆ ಆರ್ಥಿಕ ಬೆಂಬಲ ನೀಡಲು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯನ್ನು ಜಾರಿಗೊಳಿಸಿದೆ. ಕೆಲವು ಮಾನದಂಡಗಳಿಗೆ ಒಳಪಟ್ಟು ದೇಶಾದ್ಯಂತ ಎಲ್ಲಾ ಕೃಷಿಯೋಗ್ಯ ಭೂಮಿ ಹೊಂದಿರುವ ರೈತ ಕುಟುಂಬಗಳಿಗೆ ವಾರ್ಷಿಕ ಹಣಕಾಸಿನ ನೆರವನ್ನು ಈ ಯೋಜನೆಯಡಿ ನೀಡಲಾಗುತ್ತದೆ. ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಈ ಹಣ ಸಂದಾಯವಾಗುತ್ತಿದ್ದು, ಮಧ್ಯವರ್ತಿಗಳ ಯಾವುದೇ ಕಾಟವಿಲ್ಲ.
ಸದ್ಯ ಕಿಸಾನ್ ಸಮ್ಮಾನ್ ಯೋಜನೆಯಡಿ ವಾರ್ಷಿಕ ರೂ. 6000 ಅನ್ನು ಮೂರು ಸಮಾನ ಕಂತುಗಳಲ್ಲಿ ರೂ. 2000ದಂತೆ ನೇರವಾಗಿ ರೈತರ ಆಧಾರ್ ಸೀಡೆಡ್ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಆದರೆ ಈಗ ಈ ಹಣವನ್ನು ವಾರ್ಷಿಕ 12,000 ರೂ.ಗಳಿಗೆ ವರ್ಗಾವಣೆ ಮಾಡಲಾಗುತ್ತದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕಿಸಾನ್ ಸಮ್ಮಾನ್ ನಿಧಿ ಮೊತ್ತ ಏರಿಕೆ?; 2025-26ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆ ಇತ್ತೀಚೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಪಾಲ್ಗೊಂಡಿದ್ದ ರೈತರು, ರೈತ ಸಂಘಟನೆಗಳ ಪ್ರಮುಖರು ಹಲವು ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದರು.
ದೀರ್ಘಾವಧಿ ಸಾಲಗಳ ಮೇಲಿನ ಬಡ್ಡಿದರಗಳನ್ನು ಕಡಿತಗೊಳಿಸುವುದು, ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಆರ್ಥಿಕ ನೆರವನ್ನು 12,000 ರೂ.ಗಳಿಗೆ ಏರಿಕೆ ಮಾಡುವುದು, ಕನಿಷ್ಠ ಬೆಂಬಲ ಬೆಲೆ ಯೋಜನೆ ಮುಂತಾದವುಗಳ ಕುರಿತು ಸರ್ಕಾರದ ಗಮನವನ್ನು ಸೆಳೆಯಲಾಯಿತು.
ಹಣಕಾಸು ಸಚಿವರ ಮುಂದೆ ದೀರ್ಘಾವಧಿ ಸಾಲಗಳ ಮೇಲಿನ ಬಡ್ಡಿದರಗಳನ್ನು ಶೇ 1ರಷ್ಟು ನಿಗದಿಗೊಳಿಸಬೇಕು ಎಂದು ಬೇಡಿಕೆ ಸಲ್ಲಿಸಲಾಯಿತು. ಇದೇ ಮಾದರಿಯಲ್ಲಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೀಡುವ ಆರ್ಥಿಕ ನೆರವನ್ನು ವಾರ್ಷಿಕ 6 ರಿಂದ 12 ಸಾವಿರ ರೂ.ಗಳಿಗೆ ಏರಿಕೆ ಮಾಡುವ ಕುರಿತು ಬಜೆಟ್‌ನಲ್ಲಿ ಘೋಷಣೆ ಮಾಡಬೇಕು ಎಂದು ಮನವಿ ಸಲ್ಲಿಕೆ ಮಾಡಲಾಗಿದೆ.
ಅಲ್ಲದೇ ರೈತರು ಸಣ್ಣ ರೈತರಿಗೆ ಶೂನ್ಯ ಪ್ರೀಮಿಯಂ ಬೆಳೆ ವಿಮೆ ಯೋಜನೆ ಜಾರಿಗೊಳಿಸಬೇಕು. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಈ ನೆರವು ಒದಗಿಸಿದರೆ ಬೆಳೆ ನಷ್ಟವಾದಾಗ ಲಕ್ಷಾಂತರ ರೈತರಿಗೆ ಅನುಕೂಲವಾಗಲಿದೆ ಎಂದು ಸಚಿವರ ಗಮನ ಸೆಳೆಯಲಾಗಿದೆ.
ರೈತರು ಜಿಎಸ್‌ಟಿ ವ್ಯಾಪ್ತಿಯಿಂದ ರೈತಿಗೆ ಅಗತ್ಯವಾದ ಯಂತ್ರೋಪಕರಣ, ರಸಗೊಬ್ಬರ, ಬೀಜ ಮತ್ತು ಔಷಧಗಳನ್ನು ಹೊರಗಿಡಬೇಕು. ಆಗ ದರಗಳು ಕಡಿಮೆಯಾಗಲಿದ್ದು, ರೈತರು ಕೊಳ್ಳಲು ಸಹಾಯಕವಾಗಲಿದೆ ಎಂದು ಸಚಿವರಿಗೆ ಮನವಿ ಸಲ್ಲಿಸಲಾಗಿದೆ.
ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ಅಧ್ಯಕ್ಷ ಧರ್ಮೇಂದ್ರ ಮಾಲೀಕ್ ಮಾತನಾಡಿ, ಸದ್ಯ ಜಾರಿಯಲ್ಲಿರುವ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯ ಪರಿಷ್ಕರಣೆ ಅಗತ್ಯವಿದೆ ಎಂದು ಹೇಳಿದ್ದಾರೆ. ಭೂಮಿಯ ಬೆಲೆ, ಕಾರ್ಮಿಕರ ವೇತನ, ಕಟಾವಿನ ನಂತರದ ಪ್ರಕ್ರಿಯೆಗಳನ್ನು ಗಮನದಲ್ಲಿಟ್ಟುಕೊಂಡು ಎಂಎಸ್‌ಪಿಯನ್ನು ಹೆಚ್ಚಳ ಮಾಡಬೇಕಿದೆ. ಕಂಪನಿಗಳ ವೆಬ್‌ಸೈಟ್‌ನಲ್ಲಿ ಯಂತ್ರೋಪಕರಣಗಳ ದರಗಳನ್ನು ಪ್ರದರ್ಶಿಸಬೇಕು ಆಗ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಸದ್ಯ 23 ಉತ್ಪನ್ನಗಳಿಗೆ ಮಾತ್ರ ಕನಿಷ್ಠ ಬೆಂಬಲ ಬೆಲೆ ಯೋಜನೆ ಜಾರಿಯಲ್ಲಿದೆ. ಇದನ್ನು ಇನ್ನಷ್ಟು ಉತ್ಪನ್ನಗಳಿಗೆ ವಿಸ್ತರಣೆ ಮಾಡಬೇಕಿದೆ. ಇದರಿಂದಾಗಿ ಉತ್ಪನ್ನಗಳಿಗೆ ನ್ಯಾಯಯುತವಾದ ಬೆಲೆಗಳು ಸಿಗಲು ರೈತರಿಗೆ ಅನುಕೂಲವಾಗಲಿದೆ. ಕೃಷಿ ಉತ್ಪಾದನೆಯೂ ಹೆಚ್ಚಳವಾಗಲಿದೆ ಎಂದು ತಿಳಿಸಿದರು.












Click it and Unblock the Notifications