ಕೊರೊನಾ ನಂತರ ಆರ್ಥಿಕವಾಗಿ ರೈತರ ಕೈ ಹಿಡಿದ ಅನಾನಸ್: ಹೊಸ ತಳಿ ಪರಿಚಯಿಸಿದ ಇಲಾಖೆ!
ಕಾರವಾರ, ಆಗಸ್ಟ್ 27: ಕೊರೊನಾದಿಂದಾಗಿ ಎರಡು ವರ್ಷಗಳು ಬೆಳೆದ ಬೆಳೆ ಕೊಳ್ಳುವವರಿಲ್ಲದೇ, ಕೊಂಡರು ಸರಿಯಾದ ದರ ಸಿಗದೆ ರೈತರ ಬದುಕು ಬೀದಿಗೆ ಬಂದಿತ್ತು. ಸದ್ಯ ಹೆಮ್ಮಾರಿಯ ಅಬ್ಬರ ಕಡಿಮೆಯಾಗಿದ್ದು ಉತ್ತರಕನ್ನಡ ಜಿಲ್ಲೆಯಲ್ಲಿ ಅನಾನಸ್ ಬೆಳೆ ಕೂಡ ರೈತರ ಕೈಹಿಡಿದಿದೆ. ಇದೀಗ ತೋಟಗಾರಿಕಾ ಇಲಾಖೆ ಹೊಸ ಬೆಳೆಯನ್ನು ರೈತರಿಗೆ ಪರಿಚಯಿಸುವ ಮೂಲಕ ಇನ್ನಷ್ಟು ಉತ್ತಮ ಬೆಳೆ ಪಡೆಯುವ ಚಿಂತನೆ ಬಿತ್ತಿದ್ದು ರೈತರಿಗೂ ಇದರ ನಿರೀಕ್ಷೆ ಹೆಚ್ಚಾಗಿದೆ.
ಕೊರೊನಾ ನಂತರದಲ್ಲಿ ಕೃಷಿಕರ ಬದುಕು ದುಸ್ತರವಾಗಿದೆ. ಆರ್ಥಿಕವಾಗಿ ಚೇತರಿಸಿಕೊಳ್ಳಲು ಸಾಕಷ್ಟು ಪರದಾಟ ನಡೆಯುತ್ತಿದೆ. ಆದರೆ, ಉತ್ತರಕನ್ನಡ ಜಿಲ್ಲೆಯ ಬನವಾಸಿ ಭಾಗಗಳಲ್ಲಿ ಈ ಭಾರಿ ಅನಾನಸ್ ಬೆಳೆ ರೈತರ ಕೈ ಹಿಡಿದಿದೆ. ಬನವಾಸಿ ಭಾಗದಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಅನಾನಸ್ ಬೆಳೆಯಲಾಗುತ್ತಿದ್ದು, ಈ ಭಾರಿ ಉತ್ತಮ ಇಳುವರಿ ಕೂಡ ಲಭ್ಯವಾಗಿದೆ.
ಇದರಿಂದ ಈಗಾಗಲೇ ಕೋಯ್ಲು ಮಾಡಿ ಉತ್ತರ ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ರವಾನಿಸಲಾಗುತ್ತಿದೆ. ಅತಿ ಕಡಿಮೆ ಅವಧಿಯಲ್ಲಿ ಬೆಳೆಯುವ ಬೆಳೆ ಇದೀಗ ರೈತರ ಕೈ ಹಿಡಿದಿದ್ದು ಆರ್ಥಿಕ ಶಕ್ತಿ ತುಂಬುತ್ತಿದೆ.

ಕಾಡಿದ್ದ ಕೂಲಿಕಾರರ ಸಮಸ್ಯೆ
ಇನ್ನು ಕೊರೊನಾ ನಂತರದಲ್ಲಿ ಕೃಷಿಕರು ತಮ್ಮ ಆದಾಯ ಕುಂಠಿತದಿಂದ ಸಾಕಷ್ಟು ಸಮಸ್ಯೆ ಅನುಭವಿಸಿದ್ದರು. ಕೂಲಿಕಾರರ ಸಮಸ್ಯೆಯಿಂದಾಗಿಯೂ ಬೆಳೆ ಬೆಳೆಯಲು ತೊಂದರೆಯಾಗಿತ್ತು. ಅಡಿಕೆ ಹೊರತುಪಡಿಸಿ ಉಳಿದ ಬೆಳೆಗಳಿಗೆ ಬೆಲೆ ಕಡಿಮೆಯಾಗಿ ರೈತರು ಕೈಸುಟ್ಟುಕೊಂಡಿದ್ದರು. ಅಲ್ಲದೆ ಬೆಳೆದ ಬೆಳೆಗೂ ಸರಿಯಾದ ಬೆಲೆ ಸಿಗದೆ ಬೀದಿಗೆ ಎಸೆದಿದ್ದರು. ಸಾಲ ಮಾಡಿ ಬೆಳೆದ ರೈತರು ಬಡ್ಡಿ ತುಂಬುವುದಕ್ಕೂ ಪರದಾಡಬೇಕಾಗಿತ್ತು.

ಎರಡೂವರೆ ಕೆ.ಜಿ ತೂಗವ ನೂತನ ತಳಿ
ಆದರೆ ಇತ್ತೀಚಿನ ದಿನಗಳಲ್ಲಿ ಅನಾನಸ್ ಬೆಳೆಗೆ ಉತ್ತಮ ಬೆಲೆ ಬರುತ್ತಿರುವ ಹಿನ್ನೆಲೆಯಲ್ಲಿ ರೈತರ ಆಸಕ್ತಿ ಇನ್ನಷ್ಟು ಹೆಚ್ಚಾಗಿದೆ. ಇದೇ ಕಾರಣಕ್ಕೆ ಆದಾಯವನ್ನು ಮತ್ತಷ್ಟು ಹೆಚ್ಚಿಸಲು ಬಹುಬೇಡಿಕೆ ಹೊಂದಿರುವ ಫಿಲಿಫೈನ್ಸ್ ಮೂಲದ 'ಎಂಡಿ -2' ತಳೀಯ ಅನಾನಸ್‍ನ್ನು ಪರಿಚಯಿಸುವ ಪ್ರಾಯೋಗಿಕ ಯೋಜನೆಯನ್ನು ತೋಟಗಾರಿಕಾ ಇಲಾಖೆ ಕೈಗೆತ್ತಿಕೊಂಡಿದೆ.
"ಸದ್ಯ ಎಂಡಿ-2 ತಳಿಯ ಅನಾನಸ್ ದೇಶದ ಅಸ್ಸಾಂ ಭಾಗದಲ್ಲಿ ಬೆಳೆಯಲಾಗುತ್ತಿದೆ. ಸಾಮಾನ್ಯ ಅನಾನಸ್‍ಗಳು ಸರಾಸರಿ 2 ಕೆ.ಜಿ ತೂಗಿದರೆ, ಈ ತಳಿಯ ಹಣ್ಣುಗಳು ಎರಡೂವರೆ ಕೆ.ಜಿ ತೂಕದವರೆಗೆ ಬೆಳೆಯುತ್ತವೆ. ರೈತರಿಗೂ ಇದು ಲಾಭದಾಯಕವಾಗಲಿದೆ," ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸತೀಶ್ ಹೆಗಡೆ.

ಉತ್ತರ ಭಾರತಕ್ಕೆ ಪೂರೈಕೆ
ಸದ್ಯ ಬನವಾಸಿ ವ್ಯಾಪ್ತಿಯಲ್ಲಿ ರಾಜಾ, ಗೇಂಟ್-ಕ್ಯೂ ತಳಿಯ ಅನಾನಸ್‍ಗಳನ್ನು ವ್ಯಾಪಕ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಹೀಗೆ ಬೆಳೆದ ಬೆಳೆಗಳನ್ನು ಉತ್ತರ ಭಾರತದ ದೆಹಲಿ, ಹರಿಯಾಣಕ್ಕೆ ಪೂರೈಕೆ ಮಾಡಲಾಗುತ್ತಿದೆ. ಆದರೆ ಹೊಸ ಬೆಳೆಯನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹಿಸುತ್ತಿರುವ ತೋಟಗಾರಿಕಾ ಇಲಾಖೆ ರೈತರನ್ನು ಮತ್ತಷ್ಟು ಸಬಲರನ್ನಾಗಿ ಮಾಡಿ ಆ ಮೂಲಕ ಬೆಳೆಯ ಪ್ರಮಾಣ ಹೆಚ್ಚಿಸಲು ಮುಂದಾಗಿದೆ.

ಎಂಡಿ –2 ತಳಿಗೂ ಆದ್ಯತೆ ನೀಡಲು ಸಲಹೆ
ಒಟ್ಟಾರೆಯಾಗಿ ಬನವಾಸಿ ಭಾಗದಲ್ಲಿ ಸದ್ಯ ಬೆಳೆಯುತ್ತಿರುವ ಅನಾನಸ್‍ಗಳಲ್ಲಿ ಬಹುಪಾಲು ಉತ್ತರ ಭಾರತದ ರಾಜ್ಯಗಳಿಗೆ ರವಾನೆಯಾಗುತ್ತಿವೆ. ಅಲ್ಲಿ ಅವುಗಳನ್ನು ಸಂಸ್ಕರಿಸಿ ಬೇರೆ ಬೇರೆ ಉತ್ಪನ್ನಗಳಾಗಿ ಬಳಸಲಾಗುತ್ತಿದೆ. ಇದರ ಜೊತೆಗೆ ಇದೀಗ ಎಂಡಿ -2 ತಳಿಗೂ ಆದ್ಯತೆ ನೀಡಲು ರೈತರಿಗೆ ತಿಳಿಸಲಾಗಿದ್ದು, ಪ್ರಯತ್ನ ನಡೆಯುತ್ತಿದೆ. ಈ ಹಣ್ಣುಗಳಿಗೆ ಸ್ಥಳೀಯವಾಗಿಯೂ ಮಾರುಕಟ್ಟೆಗಳಲ್ಲಿಯೂ ಬೇಡಿಕೆ ಇರಲಿದೆ ಎನ್ನುವುದು ಅಧಿಕಾರಿಗಳ ಸಲಹೆಯಾಗಿದೆ.












Click it and Unblock the Notifications