ರೈತರ ಮಾಹಿತಿ; ಕಾಳು ಮೆಣಸಿನ ಸುಧಾರಿತ ಬೇಸಾಯ ಕ್ರಮಗಳು
ಶಿವಮೊಗ್ಗ, ಜನವರಿ 09: ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗಾರರು ಮಿಶ್ರಬೆಳೆಯಾಗಿ ಕಾಳು ಮೆಣಸು ಬೆಳೆಯುವ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಕಾಳು ಮೆಣಸಿನ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗುತ್ತಿದೆ.
ಕೃಷಿ, ತೋಟಗಾರಿಕಾ ಸಂಶೋಧನಾ ಕೇಂದ್ರ, ತೀರ್ಥಹಳ್ಳಿಯಲ್ಲಿ ಕಾಳು ಮೆಣಸಿನ ಸುಧಾರಿತ ಬೇಸಾಯ ಕ್ರಮಗಳು ಎಂಬ ಕುರಿತು ರೈತರಿಗಾಗಿ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ. ಎಂ. ರವಿಕುಮಾರ್ ರೈತರಿಗೆ ಸಲಹೆಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ಕೀಟ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಅಂಜನ್‍ಕುಮಾರ್ ನಾಯ್ಕ, ರೋಗ ಶಾಸ್ತ್ರ ವಿಭಾಗದ ಸಹ ಸಂಶೋಧಕ ಪ್ರದೀಪ್‍ಕುಮಾರ್ ಬಿ. ಎ. ಮತ್ತು ತೀರ್ಥಹಳ್ಳಿಯ ಕೃಷಿ ಅಧಿಕಾರಿಗಳಾದ ಡಾ. ಅಜಿತ್, ಹಲವು ರೈತರು ಉಪಸ್ಥಿತರಿದ್ದರು.
ರೈತರಿಗೆ ನೀಡಿದ ಸಲಹೆಗಳು; ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ, ಡಾ. ಎಂ. ರವಿಕುಮಾರ್, "ಇತ್ತೀಚಿನ ದಿನಗಳಲ್ಲಿ ಅಡಿಕೆ ಬೆಳೆಗಾರರು ಮಿಶ್ರಬೆಳೆಯಾಗಿ ಕಾಳು ಮೆಣಸು ಬೆಳೆಯುವ ಬಗ್ಗೆ ಒಲವು ತೋರುತ್ತಿದ್ದು, ಈ ಬೆಳೆಯ ಕುರಿತಾದ ತರಬೇತಿ ಕಾರ್ಯಕ್ರಮ ಮಹತ್ವಪೂರ್ಣವಾಗಿದೆ" ಎಂದರು. ಮಲೆನಾಡಿನ ಕಾಳು ಮೆಣಸಿನ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಸಮಸ್ಯೆಗಳ ಕುರಿತು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಶಿವಮೊಗ್ಗದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಸ್ಯ ಸಂರಕ್ಷಣಾ ವಿಭಾಗದ ವಿಜ್ಞಾನಿಯಾದ ಡಾ. ಆರ್. ಗಿರೀಶ್ ಮಾತನಾಡಿ, ಕಾಳು ಮೆಣಸಿನ ವಿವಿಧ ತಳಿಗಳ ಪರಿಚಯ ಮಾಡಿಕೊಟ್ಟು, ಮಲೆನಾಡಿಗೆ ಸೂಕ್ತವಾದ ಕಾಳು ಮೆಣಸಿನ ತಳಿಗಳ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು.
ಕಾಳು ಮೆಣಸಿನ ಕೃಷಿಯಲ್ಲಿ ತೋಟದ ಮಣ್ಣಿನ ರಸಸಾರ ತಟಸ್ಥವಾಗಿರುವುದು, ಸಮರ್ಪಕ ಪೋಷಕಾಂಶಗಳ ಪೂರೈಕೆ ಮಾಡುವುದು ಅತ್ಯಗತ್ಯ. ಸುಧಾರಿತ ಕ್ರಮಗಳ ಅಳವಡಿಕೆಯಿಂದ ಕಾಳು ಮೆಣಸಿನಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ ಎಂದು ಹೇಳಿದರು.
ಸಾವಯವ ಗೊಬ್ಬರವನ್ನು ಒದಗಿಸುವ ಮುನ್ನ ಟ್ರೈಕೋಡರ್ಮ, ಸೂಡೋಮೋನಾಸ್, ಬ್ಯಾಸಿಲಸ್ ಮುಂತಾದ ಸೂಕ್ಷ್ಮಾಣು ಜೀವಿಗಳಿಂದ ಉಪಚರಿಸಿ ನಂತರ ಬಳ್ಳಿಗಳಿಗೆ ಕೊಡಬೇಕು. ಶೀಘ್ರ ಸೊರಗು ರೋಗದ ನಿರ್ವಹಣೆಗೆ ಬೋರ್ಡೋ ದ್ರಾವಣವನ್ನು ಸರಿಯಾದ ಕ್ರಮದಲ್ಲಿ ತಯಾರಿಸಬೇಕು ಎಂದರು.
ಬೋರ್ಡೋ ದ್ರಾವಣದ ರಸಸಾರ ಕಡಿಮೆಯಾದರೆ ಎಲೆಗಳನ್ನು ಸುಡುತ್ತದೆ ಹಾಗೆಯೇ ರಸಸಾರ ಹೆಚ್ಚಾದರೆ ಬೋರ್ಡೋ ದ್ರಾವಣವು ರೋಗಾಣುವಿನ ಮೇಲೆ ಪ್ರಭಾವ ಬೀರುವುದಿಲ್ಲ. ಹಾಗಾಗಿ ತಟಸ್ಥರಸಸಾರದ ಬೋರ್ಡೋ ದ್ರಾವಣ ತಯಾರಿಕೆ ಅತ್ಯಗತ್ಯ ಎಂದು ತಿಳಿಸಿದರು.
ತಟಸ್ಥ ಬೋರ್ಡೋ ದ್ರಾವಣ ತಯಾರಿಕೆಯಲ್ಲಿ ಬಳಸಬೇಕಾದ ಕ್ರಮಗಳನ್ನು ವಿಸ್ತಾರವಾಗಿ ತಿಳಿಸಿ, ನಿಧಾನ ಸೊರಗುರೋಗದ ನಿರ್ವಹಣೆಗೆ ಬೇವಿನ ಹಿಂಡಿಯನ್ನು ಬಳಸುವಂತೆ ಸಲಹೆಯನ್ನು ನೀಡಿದರು.
ಕಾಳುಮೆಣಸಿ ಸಸಿಗಳನ್ನು ರೈತರು ತಾವೇ ತಯಾರಿಸಿಕೊಳ್ಳಬಹುದು, ಇದಕ್ಕಾಗಿ ನೆಲದಲ್ಲಿ ಹಬ್ಬಿರುವ ಓಡು ಬಳ್ಳಿಗಳನ್ನು ಬಳಸಬೇಕು ಮತ್ತು ಉತ್ಕೃಷ್ಟ ಸಸಿಗಳನ್ನು ಬೆಳೆಸುವ ಕ್ರಮಗಳ ಬಗ್ಗೆ ತರಬೇತಿಯಲ್ಲಿ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ರೈತರ ಹಲವು ಪ್ರಶ್ನೆಗಳಿಗೆ ಉತ್ತರಿಸಿ ಆಯಾ ಪ್ರದೇಶಕ್ಕೆ ಅನುಗುಣವಾಗಿ ತಳಿಗಳನ್ನು ಬಳಸುವಂತೆ ಮತ್ತು ಸಮರ್ಪಕ ಪೋಷಕಾಂಶಗಳನ್ನು ಒದಗಿಸುವಂತೆ ತಿಳಿಸಲಾಯಿತು.












Click it and Unblock the Notifications