ಈಗ ಗಲ್ಲಿ ಗಲ್ಲಿಗಳಲ್ಲಿ ಎಮರ್ಜೆನ್ಸಿ: ಎನ್.ಎಸ್. ಶಂಕರ್

ಎಮರ್ಜೆನ್ಸಿ ಘೋಷಣೆಯಾದಾಗ ನಾನು ಅದೇ ತಾನೇ ಬಿ.ಎಸ್ಸಿ ಮೊದಲ ವರ್ಷಕ್ಕೆ ಪ್ರವೇಶ ಪಡೆದಿದ್ದೆ. ಕೆಲವು ದಿನ ಕಳೆದಂತೆ ನನಗೆ, ತುರ್ತುಸ್ಥಿತಿಯಿಂದ ಒಳ್ಳೆಯದೇ ಆಗುತ್ತಿರಬೇಕು. ರೈಲುಗಳು ಸಮಯಕ್ಕೆ ಸರಿಯಾಗಿ ಓಡಾಡುತ್ತಿವೆ, ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಹಾಜರಾಗಿ ಮೈ ಬಗ್ಗಿಸಿ ಕೆಲಸ ಮಾಡುತ್ತಿದ್ದಾರೆ. ಇತ್ಯಾದಿ ಅನಿಸುತ್ತಿತ್ತು. ಒಮ್ಮೆ ಊರಿಗೆ ಹೋಗಿದ್ದಾಗ ಹೀಗೇ ಹೇಳಿ ನಮ್ಮಪ್ಪನಿಂದ ಉಗಿಸಿಕೊಂಡೆ.

ಸ್ವಾತಂತ್ರ್ಯ ಯೋಧರಾಗಿದ್ದ ನಮ್ಮಪ್ಪ ಆ ಕಾಲದಿಂದಲೂ ಕಾಂಗ್ರೆಸ್ಸಿನ ಕಟ್ಟಾ ಬೆಂಬಲಿಗರಾಗಿದ್ದವರು, ಈಗ ಬದಲಾಗಿದ್ದರು. ಕಾರಣ ಸರಳ. 'ಜೆಪಿಯಂಥವರನ್ನು ಜೈಲಿಗೆ ಕಳಿಸಿದ ಈ ಸರ್ಕಾರ ದುಷ್ಟ ಸರ್ಕಾರ'. ಆಮೇಲೆ ಜಯಪ್ರಕಾಶ್ ನಾರಾಯಣರ ಬಗ್ಗೆ ನನಗೆ ಸಾಕಷ್ಟು ತಿಳಿಸಿ ಹೇಳಿದ ಮೇಲೆ ತುರ್ತು ಪರಿಸ್ಥಿತಿ ಕುರಿತ ನನ್ನ ಗ್ರಹಿಕೆ ಬದಲಾಗತೊಡಗಿತು.

ಕೃಷಿ ಉಳಿಸಿ- ಪ್ರಜಾಪ್ರಭುತ್ವ ಉಳಿಸಿ ಘೋಷಣೆಯ ಈ ಕಾರ್ಯಕ್ರಮ ಜೂನ್ 26 ರಂದೇ ಆಯೋಜನೆಗೊಂಡಿರುವುದಕ್ಕೆ ಐತಿಹಾಸಿಕ ಕಾರಣವಿದೆ. ಇದೇ ಜೂನ್ 26ಕ್ಕೆ ಭಾರತದಲ್ಲಿ ಎಮೆರ್ಜೆನ್ಸಿ ಹೇರಿ 46 ವರ್ಷವಾಯಿತು. (1975 ಜೂನ್ 25 ಮಧ್ಯರಾತ್ರಿ). ಈಗಲೂ ಅಘೋಷಿತ ತುರ್ತುಪರಿಸ್ಥಿತಿಯಲ್ಲೇ ಇದ್ದೇವೆ. ಈ ಕುರಿತು ಸಾಹಿತಿ, ಚಲನಚಿತ್ರ ನಿರ್ದೇಶಕ ಎನ್.ಎಸ್. ಶಂಕರ್ ಮನದಾಳವನ್ನು ಒನ್ಇಂಡಿಯಾ ಕನ್ನಡದೊಂದಿಗೆ ಹಂಚಿಕೊಂಡಿದ್ದಾರೆ. ಮುಂದೆ ಓದಿ..

 ಇಂದಿರಾ ಗಾಂಧಿಯವರನ್ನು ಬೈದು ಒಮ್ಮೆ ಭಾಷಣ

ಇಂದಿರಾ ಗಾಂಧಿಯವರನ್ನು ಬೈದು ಒಮ್ಮೆ ಭಾಷಣ

ಊರಿಂದ ಬಂದ ಮೇಲೆ ಯಥಾಪ್ರಕಾರ ಕಾಲೇಜು, ಹಾಸ್ಟೆಲ್ಲು ಅಂತ ಇದ್ದಾಗ ನಮ್ಮಂಥವರೇ ಕೆಲವು ಹುಡುಗರು ಹಾಸ್ಟೆಲ್ಲಿಗೆ ಬಂದು ಕಲ್ಲಚ್ಚಿನ ಕೆಲವು ಕರಪತ್ರಗಳನ್ನು ಕೊಟ್ಟರು. ಎಲ್ಲವೂ ತುರ್ತುಸ್ಥಿತಿಯನ್ನು ವಿರೋಧಿಸುವ ಕರಪತ್ರಗಳು. ಅವನ್ನು ಓದುವುದಲ್ಲದೆ ಬೇರೆ ಬೇರೆ ಹಾಸ್ಟೆಲ್ಲುಗಳಿಗೆ ಹೋಗಿ ಹಂಚಲೂ ಹೇಳಿದರು. ಅಲ್ಲಿಂದ ಅದೂ ಒಂದು ಚಟುವಟಿಕೆ ಆರಂಭವಾಯಿತು. ಅವನ್ನು ಓದಿ ಚಿಗುರಿದ ಜ್ಞಾನವನ್ನು ಪ್ರದರ್ಶಿಸಲು ಕಾಲೇಜಿನಲ್ಲಿ ಸಣ್ಣ ಗುಂಪು ಸೇರಿಸಿ ಇಂದಿರಾ ಗಾಂಧಿಯವರನ್ನು ಬೈದು ಒಮ್ಮೆ ಭಾಷಣ ಮಾಡಿದೆ. ಆಗ ಪ್ರಿನ್ಸಿಪಾಲರು ಕರೆದು 'ಹೀಗೆಲ್ಲ ಮಾಡಬೇಡಪ್ಪ, ಸುಮ್ಮಸುಮ್ಮನೆ ಅಪಾಯ ತಂದುಕೊಳ್ಳಬೇಡ' ಎಂದು ನಯವಾಗಿ ಬುದ್ಧಿ ಹೇಳಿದರು!

 ಜೈಲಿನಲ್ಲಿದ್ದ ವಿರೋಧಿ ಮುಖಂಡರೆಲ್ಲ ಬಿಡುಗಡೆಯಾದರು

ಜೈಲಿನಲ್ಲಿದ್ದ ವಿರೋಧಿ ಮುಖಂಡರೆಲ್ಲ ಬಿಡುಗಡೆಯಾದರು

ಆಗಿನಿಂದ ಆ ಚೇಷ್ಟೆ ನಿಲ್ಲಿಸಿದೆನಾದರೂ, ರಾತ್ರಿ ಹೊತ್ತು ಹಾಸ್ಟೆಲು ಹಾಸ್ಟೆಲು ಸುತ್ತಿ ಕರಪತ್ರ ಹಂಚುವ ಕೆಲಸ ಮಾತ್ರ ಮುಂದುವರೆಯಿತು.

ಆಮೇಲೆ ಸ್ನೇಹಿತರಿಂದ ಗೊತ್ತಾಗಿದ್ದು, ನಮ್ಮ ಕೈಗೆ ಈ ಕರಪತ್ರಗಳನ್ನು ಕೊಟ್ಟವರೆಲ್ಲ ಆರ್‍ಎಸ್‍ಎಸ್ ಹುಡುಗರು! ಆಗ ಸಹಜವಾಗಿಯೇ ನನಗೆ ಆರೆಸ್ಸೆಸ್ ಸಂಘಟನೆಯ ಬಗ್ಗೆ ಒಳ್ಳೆಯ ಭಾವನೆಯೇ ಬಂತು. ಆಯಿತು, ತುರ್ತುಸ್ಥಿತಿಯೂ ಮುಗಿದು ಚುನಾವಣೆಯೂ ಘೋಷಣೆ ಆಯಿತು. ಜೈಲಿನಲ್ಲಿದ್ದ ವಿರೋಧಿ ಮುಖಂಡರೆಲ್ಲ ಬಿಡುಗಡೆಯಾಗಿ ಹೊರಬಂದರು. ಆಗ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ವಿರೋಧಿಗಳ ಬೃಹತ್ ಸಭೆ ಏರ್ಪಾಡಾಗಿ ಆ ಸಭೆಗೆ ರಾಷ್ಟ್ರೀಯ ಮುಖಂಡರೆಲ್ಲ ಬಂದಿದ್ದರು. ನಮ್ಮ ಹಾಸ್ಟೆಲ್ಲಿಗೆ ಹತ್ತಿರ. ಜೊತೆಗೆ ಕುತೂಹಲವೂ ಇತ್ತಲ್ಲ, ನಾನೂ ಹೋಗಿದ್ದೆ.

 ಇಷ್ಟೊಂದು ಸೊರಗಿ ಹೋಗಿದ್ದೀಯಲ್ಲೋ?

ಇಷ್ಟೊಂದು ಸೊರಗಿ ಹೋಗಿದ್ದೀಯಲ್ಲೋ?

ನನ್ನ ಜೊತೆ ದೇವಾನಂದ್ ಅಂತ, ನಮ್ಮ ಹಾಸ್ಟೆಲ್ ಹುಡುಗರ ಸ್ನೇಹಿತ. ಅದೇ ಕರಪತ್ರದ ಗೆಳೆಯ. ಆತನ ಜೊತೆ ಮೈದಾನ ಪ್ರವೇಶಿಸುವ ಮುನ್ನವೇ ಇನ್ನೊಬ್ಬ ಯುವಕ ಬಂದು ಇವನನ್ನು ಮಾತಾಡಿಸಿದ. ಅವನನ್ನು ಕಂಡವನೇ ದೇವಾನಂದ್ ಅತ್ಯುತ್ಸಾಹದಿಂದ 'ಇದೇನೋ ದತ್ತ? ಇಷ್ಟೊಂದು ಸೊರಗಿ ಹೋಗಿದ್ದೀಯಲ್ಲೋ? ಯಾವಾಗ ಬಂದೆ?' ಎಂದು ಕಕ್ಕುಲತೆ ಪ್ರದರ್ಶಿಸಿದ. ಯಾವಾಗ ಬಂದೆ ಅಂದರೆ ಜೈಲಿನಿಂದ ಯಾವಾಗ ಬಂದೆ ಅಂತ! ಆತ ಎಮರ್ಜೆನ್ಸಿಯನ್ನು ಜೈಲಿನಲ್ಲೇ ಕಳೆದವನು. 'ನಿನ್ನೆ ತಾನೇ ಬಿಡುಗಡೆಯಾಯಿತು' ಅಂದ. ದೇವಾನಂದ್ ಆಮೇಲೆ ತನ್ನ ಗೆಳೆಯನ ಪರಿಚಯ ಮಾಡಿಸಿದ.

 ಆರ್‍ಎಸ್‍ಎಸ್ ನಡೆಸಿದ ಹೋರಾಟಕ್ಕೆ ಮತ್ತೊಂದು ಮುಖ

ಆರ್‍ಎಸ್‍ಎಸ್ ನಡೆಸಿದ ಹೋರಾಟಕ್ಕೆ ಮತ್ತೊಂದು ಮುಖ

'ಇವನು ದತ್ತಾತ್ರೇಯ ಹೊಸಬಾಳೆ ಅಂತ. ಜೈಲಿಂದ ನಿನ್ನೆ ಬಿಟ್ಟಿದ್ದಾರೆ' ಆ ದತ್ತಾತ್ರೇಯ ಹೊಸಬಾಳೆಯನ್ನು ನಾನು ಮುಖತಃ ಕಂಡಿದ್ದು ಅದೇ ಮೊದಲು, ಅದೇ ಕೊನೆ. ಈಗೇನಿದ್ದರೂ ಪೇಪರುಗಳಲ್ಲಿ ಸುದ್ದಿ ಓದಬೇಕಷ್ಟೇ. ಅಂತೂ ಅವರೆಲ್ಲ ಆಗ ನಮ್ಮ ಪಾಡಿಗೆ ಹೀರೋಗಳಾಗಿದ್ದರು, ತ್ಯಾಗಜೀವಿಗಳಾಗಿದ್ದರು. ತಮ್ಮ ನಂಬಿಕೆಗಳಿಗೆಳಿಗಾಗಿ ಜೈಲಿಗೆ ಹೋಗಲೂ ಹಿಂಜರಿಯದ ಹೋರಾಟಗಾರರಾಗಿದ್ದರು. ಇರಲಿ. ಇಷ್ಟೆಲ್ಲ ಆದ ಮೇಲೆ ಏನಾಯಿತು? ನಮ್ಮ ಬುದ್ಧಿ ಇಷ್ಟಿಷ್ಟೇ ಬಲಿಯುತ್ತ ಬಂದಂತೆ ತುರ್ತುಸ್ಥಿತಿಯಲ್ಲಿ ಆರ್‍ಎಸ್‍ಎಸ್ ನಡೆಸಿದ ಹೋರಾಟಕ್ಕೆ ಮತ್ತೂ ಒಂದು ಮುಖ ಇದೆ ಎಂದು ಮನವರಿಕೆಯಾಗುತ್ತ ಬಂತು.

 ಆರ್‍ಎಸ್‍ಎಸ್‌ನ ಸ್ವಂತ ಆಯ್ಕೆಯಾಗಿರಲಿಲ್ಲ

ಆರ್‍ಎಸ್‍ಎಸ್‌ನ ಸ್ವಂತ ಆಯ್ಕೆಯಾಗಿರಲಿಲ್ಲ

ಮೊದಲನೆಯದಾಗಿ ಹೋರಾಟ ಆರ್‍ಎಸ್‍ಎಸ್‌ನ ಸ್ವಂತ ಆಯ್ಕೆಯಾಗಿರಲಿಲ್ಲ. ಇಂದಿರಾ ಗಾಂಧಿ ಎಮರ್ಜೆನ್ಸಿ ಘೋಷಣೆ ಮಾಡಿದ ಕೂಡಲೇ ವಿರೋಧಿ ಮುಖಂಡರನ್ನು ಜೈಲಿಗೆ ತಳ್ಳಿದ ಹಾಗೆಯೇ ಆರ್‍ಎಸ್‍ಎಸ್, ಎಬಿವಿಪಿ ಮತ್ತು ಆನಂದಮಾರ್ಗ ಸಂಘಟನೆಗಳನ್ನು ನಿಷೇಧಿಸಿ, ಆಯಾ ಮುಂದಾಳುಗಳನ್ನೂ ಹಿಡಿದು ಒಳತಳ್ಳಿದರು. ಪರಿಣಾಮ, ಆರ್‍ಎಸ್‍ಎಸ್ ಅನಿವಾರ್ಯವಾಗಿ ವಿರೋಧಿ ಬಣವಾಯಿತು. ಅರ್ಥಾತ್ ಹೋರಾಟವನ್ನು ಬಲವಂತವಾಗಿ ಆ ಸಂಘಟನೆಯ ಗಂಟಲಿಗೆ ತುರುಕಿದಂತಾಯ್ತು. ಇದು ಅರ್ಥವಾದರೆ ಮುಂದಕ್ಕೆ ತುರ್ತುಸ್ಥಿತಿ ಉದ್ದಕ್ಕೂ ಅವರ ನಡವಳಿಕೆ ಅದೇಕೆ ನಸುಗುನ್ನಿಕಾಯಿಯ ಹಾಗಿತ್ತು ಎನ್ನುವುದೂ ಅರ್ಥವಾಗುತ್ತದೆ...!

 ತುರ್ತು ಪರಿಸ್ಥಿತಿಯಲ್ಲಿ ಮಾಡಿದ್ದೇನು?

ತುರ್ತು ಪರಿಸ್ಥಿತಿಯಲ್ಲಿ ಮಾಡಿದ್ದೇನು?

ಅಷ್ಟಕ್ಕೂ ಅವರುಗಳು ತುರ್ತು ಪರಿಸ್ಥಿತಿಯಲ್ಲಿ ಮಾಡಿದ್ದೇನು? ಅದಕ್ಕೆ ಇತಿಹಾಸದಲ್ಲಿ ತುಸುವೇ ಹಿಂದೆ ಹೋಗಿ ಪರಿಶೀಲಿಸಬೇಕು.
1974ರಲ್ಲಿ ಬಿಹಾರ ವಿಧಾನಸಭೆ ವಿಸರ್ಜನೆಗಾಗಿ ಒತ್ತಾಯಿಸಿ ವಿದ್ಯಾರ್ಥಿ ಸಮೂಹ ಜೆಪಿ ನೇತೃತ್ವದಲ್ಲಿ ಭಾರೀ ಆಂದೋಲನ ಹೂಡಿತ್ತು. ಆ ಹೋರಾಟದಲ್ಲಿ ಜೆಪಿ ತಮ್ಮ ಲೋಕ ಸಂಘರ್ಷ ಸಮಿತಿಯ ಕಾರ್ಯದರ್ಶಿ ಸ್ಥಾನಕ್ಕೆ ಆರೆಸ್ಸೆಸ್‍ನ ಹಿರಿಯ ತಲೆ ನಾನಾಜಿ ದೇಶಮುಖ್‍ರನ್ನು ನೇಮಿಸಿಕೊಂಡಿದ್ದರು. (ಅರೆಸೆಸ್ ಫ್ಯಾಸಿಸ್ಟ್ ಸಂಘಟನೆಯಾದರೆ, ನಾನು ಕೂಡ ಫ್ಯಾಸಿಸ್ಟನೇ ಎಂಬ ಜೆಪಿ ಹೇಳಿಕೆ ಕುಖ್ಯಾತವಾಗಿದೆ). ಅದೇ ನವೆಂಬರ್ 4ರಂದು ಪಾಟ್ನಾದಲ್ಲಿ ಭಾರೀ ಪ್ರತಿಭಟನಾ ಮೆರವಣಿಗೆ ನಡೆಯುವಾಗ ಪೊಲೀಸರು ಜೆಪಿ ಮೇಲೆ ಲಾಠಿಗಳೊಂದಿಗೆ ಮುಗಿಬಿದ್ದು, ಕೈ ಕಾಲು ಕುತ್ತಿಗೆ ಮೂಳೆಗಳನ್ನೆಲ್ಲ ಮುರಿದು ಹಾಕಿದರು. ಆಗ ನಾನಾಜಿ ದೇಶಮುಖ್ ಜೆಪಿಯವರನ್ನು ಅವುಚಿಕೊಂಡು ಲಾಠಿ ಏಟುಗಳಿಗೆ ತಾವೇ ಮೈಯೊಡ್ಡಿ ಅವರನ್ನು ಕಾಪಾಡಿದರು. ಈ ಘಟನೆ ಅವರಿಬ್ಬರನ್ನೂ ರಾಷ್ಟ್ರೀಯ ಹೀರೋಗಳಾಗಿ ಮಾಡಿದ ಹಾಗೆಯೇ ಇಡೀ ದೇಶದಲ್ಲಿ ಕಾಂಗ್ರೆಸ್ ವಿರೋಧಿ ಹವಾ ವ್ಯಾಪಕವಾಗಲು ಕಾರಣವಾಯಿತು.

 ಆರ್‍ಎಸ್‍ಎಸ್ ಸಂಘಟನೆಯನ್ನೇ ನಿಷೇಧಿಸಲಾಯಿತು

ಆರ್‍ಎಸ್‍ಎಸ್ ಸಂಘಟನೆಯನ್ನೇ ನಿಷೇಧಿಸಲಾಯಿತು

ಜೂನ್ 25- 26ರ ನಡುರಾತ್ರಿ ಎಮರ್ಜೆನ್ಸಿ ಘೋಷಣೆ ಆಗುತ್ತಿದ್ದಂತೆಯೇ ಆರ್‍ಎಸ್‍ಎಸ್ ಮತ್ತು ಎಬಿವಿಪಿಯ ಹಲವಾರು ಮುಖಂಡರನ್ನು ಬಂಧಿಸಲಾಯಿತು. ಅನೇಕರು ಕೈಗೆ ಸಿಕ್ಕದೆ ಪರಾರಿಯಾದರು. ಜೂನ್ 30ರಂದು ಆರ್‍ಎಸ್‍ಎಸ್ ಮುಖ್ಯಸ್ಥ ಬಾಳಾಸಾಹೇಬ್ ದೇವರಸ್‍ರನ್ನು ನಾಗಪುರದಲ್ಲಿ ವಶಕ್ಕೆ ಪಡೆಯಲಾಯಿತು. ಜುಲೈ 4 ರಂದು ಆರ್‍ಎಸ್‍ಎಸ್ ಸಂಘಟನೆಯನ್ನೇ ನಿಷೇಧಿಸಲಾಯಿತು. ಜೂನ್ 27ರಂದು ಹಲವಾರು ವಿದೇಶೀ ಮುಖಂಡರಿಗೆ ತಂತಿ ಸಂದೇಶ ಕಳಿಸಿದ ಇಂದಿರಾ, '...ಮಹಾತ್ಮ ಗಾಂಧೀಜಿ ಹತ್ಯೆಯಲ್ಲಿ ಭಾಗಿಯಾಗಿದ್ದ ಹಿಂದೂ ಮತಾಂಧ ಸಂಘಟನೆ ಆರ್‍ಎಸ್‍ಎಸ್‌ನೊಂದಿಗೆ ಜೆಪಿಯವರು ಕೈ ಜೋಡಿಸಿದ್ದಾರೆ...' ಎಂಬ ಸಮಜಾಯಿಷಿ ಕೊಟ್ಟು ತುರ್ತುಸ್ಥಿತಿಯನ್ನು ಸಮರ್ಥಿಸಿಕೊಂಡರು.

 ಆರ್‍ಎಸ್‍ಎಸ್‍ನಲ್ಲೇ ಒಮ್ಮತವಿರಲಿಲ್ಲ

ಆರ್‍ಎಸ್‍ಎಸ್‍ನಲ್ಲೇ ಒಮ್ಮತವಿರಲಿಲ್ಲ

ಅಷ್ಟಾಗಿಯೂ ಇಂದಿರಾ ಬಗ್ಗೆ ಆರ್‍ಎಸ್‍ಎಸ್‍ನಲ್ಲೇ ಒಮ್ಮತವಿರಲಿಲ್ಲ. ಕೆಲವರು ಕಟ್ಟಾ ಇಂದಿರಾ ವಿರೋಧಿಗಳಾಗಿದ್ದರೆ, ಇನ್ನು ಹಲವರು ಕ್ಷಮಾಪಣೆ ಕೇಳಿ ಬಿಡುಗಡೆಗೊಂಡರು. ಆರ್‍ಎಸ್‍ಎಸ್ ಮುಖ್ಯಸ್ಥ ಬಾಳಾಸಾಹೇಬ ದೇವರಸ್ ಮತ್ತು ಅಟಲ ಬಿಹಾರಿ ವಾಜಪೇಯಿ ಇಂದಿರಾ ಕಡೆಗೆ ಸ್ನೇಹ ಹಸ್ತ ಚಾಚಿ ಸಂಜಯ್ ಗಾಂಧಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾದರೆ, ನಾನಾಜಿ ದೇಶಮುಖ್, ಮದನ್‍ಲಾಲ್ ಖುರಾನಾ ಮತ್ತು ಆಗಲೂ ರಾಜ್ಯಸಭಾ ಸದಸ್ಯರಾಗಿದ್ದ ಸುಬ್ರಹ್ಮಣ್ಯ ಸ್ವಾಮಿ, ತಪ್ಪಿಸಿಕೊಂಡು ಭೂಗತ ಹೋರಾಟ ಮುಂದುವರೆಸಿದರು. ಇತ್ತ ಹೋರಾಟದಿಂದ ದಣಿದ ಆರ್‍ಎಸ್‍ಎಸ್‌ನ ಪ್ರಾದೇಶಿಕ ಮುಖಂಡರೆಲ್ಲ ಒಂದಾಗಿ ತಮ್ಮ ಪರವಾಗಿ ಇಂದಿರಾಜಿ ಮುಂದೆ ಹಲ್ಲು ಗಿಂಜಿ ರಾಜಿ ಕಬೂಲಿ ಕುದುರಿಸಲು ಏಕನಾಥ ರಾಮಕೃಷ್ಣ ರಾನಡೆಯವರನ್ನು ನೇಮಿಸಿಕೊಂಡರು.

 ಇಂದಿರಾ ಗಾಂಧಿಯವರ ನೆರವು ಪಡೆದಿದ್ದರು

ಇಂದಿರಾ ಗಾಂಧಿಯವರ ನೆರವು ಪಡೆದಿದ್ದರು

ಈ ರಾನಡೆ ಆರ್‍ಎಸ್‍ಎಸ್‌ನಲ್ಲಿ ಎರಡನೇ ಮುಖ್ಯಸ್ಥ ಹುದ್ದೆಯಲ್ಲಿದ್ದವರು. ಜೊತೆಗೆ ವಿವೇಕಾನಂದ ತತ್ವಪ್ರಚಾರ ಮಾಡುವ ಹಲವಾರು ಕಾರ್ಯಕ್ರಮಗಳಿಗೆ ಇಂದಿರಾ ಗಾಂಧಿಯವರ ನೆರವು ಪಡೆದಿದ್ದರು. ಜೊತೆಗೆ ರಾನಡೆಯವರನ್ನು ಸಾಂಸ್ಕೃತಿಕ ಸಂಬಂಧಗಳ ರಾಷ್ಟ್ರೀಯ ಮಂಡಳಿಗೆ ಇಂದಿರಾ ನೇಮಿಸಿದ್ದರು. ದಿಲ್ಲಿಯಲ್ಲಿ ಎಬಿವಿಪಿ ಮುಖ್ಯಸ್ಥರಾಗಿದ್ದ ಅರುಣ್ ಜೇಟ್ಲಿ ತುರ್ತುಸ್ಥಿತಿಯುದ್ದಕ್ಕೂ ಜೈಲಿನಲ್ಲೇ ಕಳೆದರೆ, ಅದೇ ಎಬಿವಿಪಿಯ ಬಲಬೀರ್ ಪುಂಜ್ ಮತ್ತು ಪ್ರಭು ಚಾವ್ಲಾರಂಥ ಇತರೆ ಮುಂದಾಳುಗಳು ಸರ್ಕಾರದ ಇಪ್ಪತ್ತು ಅಂಶದ ಕಾರ್ಯಕ್ರಮ ಮತ್ತು ಸಂಜಯ್ ಗಾಂಧಿಯ ಐದು ಅಂಶಗಳ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿ ಜೈಲುವಾಸ ತಪ್ಪಿಸಿಕೊಂಡರು.

 ಕ್ಷಮಾಪಣೆ ಕೋರಿ ರಾಜಿ ಸಂಧಾನ

ಕ್ಷಮಾಪಣೆ ಕೋರಿ ರಾಜಿ ಸಂಧಾನ

ಇತ್ತ ಜೆಪಿ- ನಾನಾಜಿ ದೇಶಮುಖ್ ಸ್ನೇಹ ಒಪ್ಪಂದದಿಂದ ಹೊರಗೇ ಉಳಿದುಕೊಂಡಿದ್ದ ಬಾಳಾಸಾಹೇಬ ದೇವರಸ್ ಪುಣೆಯ ಜೈಲಿನಿಂದ, ತಮ್ಮ ಆದಿಪುರುಷ ಸಾವರ್ಕರ್ ಮೇಲ್ಪಂಕ್ತಿಯನ್ನು ಅನುಸರಿಸಿ ಇಂದಿರಾ ಗಾಂಧಿ, ಮಹಾರಾಷ್ಟ್ರ ಮುಖ್ಯಮಂತ್ರಿ ಎಸ್.ಬಿ. ಚವಾಣ್ ಮತ್ತು ಆಚಾರ್ಯ ವಿನೋಬಾ ಭಾವೆಯವರಿಗೆ ಪತ್ರದ ಮೇಲೆ ಪತ್ರ ಬರೆದು ಕ್ಷಮಾಪಣೆ ಕೋರಿ ರಾಜಿ ಸಂಧಾನಕ್ಕಾಗಿ ಪ್ರಯತ್ನಿಸಿದರು. (ವಿನೋಬಾ ಭಾವೆ ತುರ್ತುಸ್ಥಿತಿಯನ್ನು 'ಅನುಶಾಸನ ಪರ್ವ' ಎಂದು ಬಣ್ಣಿಸಿ ಸಮರ್ಥಿಸಿದ್ದರು.) ಸಭೆಯೊಂದಕ್ಕಾಗಿ ಬಂದಿದ್ದ ಲಾಲ್‌ಕೃಷ್ಣ ಅಡ್ವಾಣಿ ಮತ್ತು ವಾಜಪೇಯಿ ಇಬ್ಬರೂ ಬೆಂಗಳೂರಿನಲ್ಲಿ ಬಂಧನಕ್ಕೊಳಗಾದರು. ಆದರೆ ವಾಜಪೇಯಿ ಬಹು ಸಮಯ ಜೈಲಿನಲ್ಲಿರಲಿಲ್ಲ, ಆನತಿ ಕಾಲದಲ್ಲೇ ಇಂದಿರಾ ಜೊತೆ ಒಪ್ಪಂದ ಮಾಡಿಕೊಂಡು ಬಂಧನದ ಬಹುತೇಕ ಅವಧಿಯನ್ನು ಪೆರೋಲ್ ಮೇಲೆ, ತಮ್ಮ ಮನೆಯಲ್ಲೇ ಕಳೆದರು. ತಮ್ಮದೊಂದು ಲೇಖನದಲ್ಲಿ ಸ್ವತಃ ಸುಬ್ರಹ್ಮಣ್ಯ ಸ್ವಾಮಿ, ಆರ್‍ಎಸ್‍ಎಸ್‍ನ ಇಂಥ ನಡವಳಿಕಯನ್ನು ಕಟುವಾಗಿ ಟೀಕಿಸಿ ಮುಂದೊಮ್ಮೆ ಬರೆದರು.

 ತುರ್ತುಸ್ಥಿತಿ ವಿರುದ್ಧದ ಹೋರಾಟಕ್ಕೆ ದ್ರೋಹ

ತುರ್ತುಸ್ಥಿತಿ ವಿರುದ್ಧದ ಹೋರಾಟಕ್ಕೆ ದ್ರೋಹ

'...ಬಿಜೆಪಿ/ ಆರ್‍ಎಸ್‍ಎಸ್‌ನ ಬಹುತೇಕ ನೇತಾರರು ತುರ್ತುಸ್ಥಿತಿ ವಿರುದ್ಧದ ಹೋರಾಟಕ್ಕೆ ದ್ರೋಹ ಬಗೆದರು. ಪುಣೆಯ ಯರವಾಡಾ ಜೈಲಿನಿಂದ ಆರ್‍ಎಸ್‍ಎಸ್ ಮುಖ್ಯಸ್ಥ ಬಾಳಾಸಾಹೇಬ ದೇವರಸ್ ಇಂದಿರಾ ಗಾಂಧಿಯವರಿಗೆ ಹಲವಾರು ಕ್ಷಮಾಪಣೆ ಪತ್ರ ಬರೆದು, ಆ ಕುಖ್ಯಾತ ಇಪ್ಪತ್ತು ಅಂಶದ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ದುಡಿಯುವ ಭರವಸೆ ಕೊಟ್ಟರು. ಆದರೆ ಇಂದಿರಾ ಒಂದೇ ಒಂದು ಪತ್ರಕ್ಕೂ ಮಾರುತ್ತರ ನೀಡಲಿಲ್ಲ. ಅಟಲ್ ಬಿಹಾರಿ ವಾಜಪೇಯಿ ಕೂಡ ಕ್ಷಮಾಪಣಾ ಪತ್ರಗಳನ್ನು ಬರೆದರು. ಇಂದಿರಾ, ವಾಜಪೇಯಿ ಪತ್ರಗಳಿಗೆ ಮಾತ್ರ ಮನ್ನಣೆ ಕೊಟ್ಟರು...' (ದಿ ಹಿಂದೂ, 13 ಜೂನ್ 2000).

 ಆರ್‍ಎಸ್‍ಎಸ್‌ನ ಸ್ಥೈರ್ಯ ಇಡಿಯಾಗಿ ಕುಸಿದುಹೋಯಿತು

ಆರ್‍ಎಸ್‍ಎಸ್‌ನ ಸ್ಥೈರ್ಯ ಇಡಿಯಾಗಿ ಕುಸಿದುಹೋಯಿತು

ದಕ್ಷಿಣ ದಿಲ್ಲಿಯಲ್ಲಿ ನಾನಾಜಿ ದೇಶಮುಖ್ ಕೂಡ ಸೆರೆ ಸಿಕ್ಕ ಮೇಲೆ ಆರ್‍ಎಸ್‍ಎಸ್‌ನ ಸ್ಥೈರ್ಯ ಇಡಿಯಾಗಿ ಕುಸಿದುಹೋಯಿತು. 76ರ ಸೆಪ್ಟೆಂಬರ್ ವೇಳೆಗೆ ಸಂಘಟನೆಯ ಸಮಸ್ತರೂ ಶರಣಾಗಲು ತಯಾರಾಗಿಬಿಟ್ಟರು. 1976ರ ನವೆಂಬರ್‌ನಲ್ಲಿ ಆರ್‍ಎಸ್‍ಎಸ್‌ನ 30 ಮಂದಿ ಮುಂದಾಳಗಳು, ಎಲ್ಲ ಆರ್‍ಎಸ್‍ಎಸ್ ಕಾರ್ಯಕರ್ತರನ್ನು ಬಿಡುಗಡೆ ಮಾಡುವುದಾದರೆ ತಾವು ತುರ್ತುಸ್ಥಿತಿಯನ್ನು ಬೆಂಬಲಿಸುವುದಾಗಿ ಆಶ್ವಾಸನೆ ಕೊಟ್ಟು ಪತ್ರ ಬರೆದರು. ಅದು 'ಶರಣಾಗತಿ ಪತ್ರ'ವೆಂದೇ ಹೆಸರಾಯಿತು.
1976ರ ಡಿಸೆಂಬರ್ ಕಡೆ ವಾರದಲ್ಲಿ ಗೃಹ ಖಾತೆ ರಾಜ್ಯ ಸಚಿವ (ಈತ ಸಂಜಯ್ ಗಾಂಧಿ ಅಂತರಂಗ ಕೂಟದ ಸದಸ್ಯ) ಓಂ ಮೆಹ್ತಾರನ್ನು ವಾಜಪೇಯಿ ಹೋಗಿ ಭೇಟಿ ಮಾಡಿ ಬಂದರು. ಅವರಿಬ್ಬರ ಸಭೆಯಲ್ಲಿ ಏನು ನಡೆಯಿತೆಂದು ಬಹಿರಂಗವಾಗದಿದ್ದರೂ, ಸಭೆ ಮುಗಿಸಿ ಬಂದ ಕೂಡಲೇ ವಾಜಪೇಯಿ, ಎಬಿವಿಪಿಯ ಎಲ್ಲ ಸದಸ್ಯರೂ ಇಂದಿರಾ ಗಾಂಧಿಯವರಿಗೆ ಬೇಷರತ್ತಾಗಿ ಶರಣಾಗಬೇಕೆಂದು ಕರೆ ಕೊಟ್ಟರು. ಆದರೆ ಎಬಿವಿಪಿ ಆ ಆದೇಶವನ್ನು ತಿರಸ್ಕರಿಸಿತು.

 ಹೋರಾಟಗಾರರನ್ನೇ ಪೊಲೀಸರಿಗೆ ಹಿಡಿದು ಕೊಟ್ಟವರು

ಹೋರಾಟಗಾರರನ್ನೇ ಪೊಲೀಸರಿಗೆ ಹಿಡಿದು ಕೊಟ್ಟವರು

ಆ ಕಾಲದಲ್ಲಿ ವಾಜಪೇಯಿ, ಆರ್‍ಎಸ್‍ಎಸ್‌ನೊಂದಿಗೆ ತಮ್ಮ ಸಂಬಂಧ ಕಡಿದುಕೊಳ್ಳಲು ತಯಾರಿರುವುದಾಗಿಯೂ, ಜೊತೆಗೆ ಭೂಗತರಾಗಿದ್ದ ಸುಬ್ರಹ್ಮಣ್ಯ ಸ್ವಾಮಿ, ಮಾಧವರಾವ್ ಮುಳೆ ಮತ್ತಿತರ ನಾಯಕರ ಚಲನವಲನದ ಸುಳಿವು ನೀಡುವುದಾಗಿಯೂ ಓಂ ಮೆಹ್ತಾರಿಗೆ ಭರವಸೆ ನೀಡಿದ್ದರೆಂಬ ವದಂತಿಗಳು ಹಾರಾಡಿದವು. ವಾಜಪೇಯಿ ಎಷ್ಟೆಂದರೂ ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲಿ ಹೋರಾಟಗಾರರನ್ನೇ ಪೊಲೀಸರಿಗೆ ಹಿಡಿದು ಕೊಟ್ಟವರು. ಇದು ಇತಿಹಾಸ, ಈ ಇತಿಹಾಸ ಬಿಡಿ.

 ಪ್ರಧಾನಿ ಬಣ್ಣಿಸಿದಂತೆ ‘ಕರಾಳ ದಿನಗಳೇ’ ಹೌದು

ಪ್ರಧಾನಿ ಬಣ್ಣಿಸಿದಂತೆ ‘ಕರಾಳ ದಿನಗಳೇ’ ಹೌದು

ಇಂದಿರಾ ಗಾಂಧಿ ದೇಶದ ಮೇಲೆ ಹೇರಿದ ಎಮರ್ಜೆನ್ಸಿ ನಿಜಕ್ಕೂ, ನಮ್ಮ ನಲ್ಮೆಯ ಪ್ರಧಾನಿ ಬಣ್ಣಿಸಿದಂತೆ 'ಕರಾಳ ದಿನಗಳೇ' ಹೌದು. ಮೋದಿ ಹೇಳಿದಂತೆ ಆ ದಿನಗಳನ್ನು ಮರೆಯಲೂಬಾರದು. ಆದರೆ ಇದಕ್ಕಿಂತ ಚೋದ್ಯ ಇನ್ನೇನಿದೆ?! ಇದು ಹೇಗಿದೆಯೆಂದರೆ, ಒಂದು ಪುಟ್ಟ ಕಥೆ ಹೇಳುತ್ತೇನೆ. ಒಂದೂರಿನಲ್ಲಿ ಒಬ್ಬ ಒಂದು ಕೊಲೆ ಮಾಡಿದ. ಅದಕ್ಕೆ ಶಿಕ್ಷೆ ಆಯಿತು. ಕೊಲೆಗಾರ ಜೈಲಿಗೆ ಹೋಗಿ ಪೂರ್ಣ ಶಿಕ್ಷೆ ಅನುಭವಿಸಿ ಹೊರಬಂದ. ಬಂದವನು ಮುಂದಕ್ಕೆ ತೆಪ್ಪಗೆ ಮರ್ಯಾದೆಯಿಂದ ಜೀವನ ಸಾಗಿಸತೊಡಗಿದ. ಈ ಮಧ್ಯೆ ಇನ್ನೊಬ್ಬ ನೂರು ಕೊಲೆ ಮಾಡಿ ಇನ್ನೂ ಪೊಲೀಸರ ಕೈಗೂ ಸಿಕ್ಕಿ ಬೀಳದವನು ಬಂದು ಈ ಮೊದಲಿನವನತ್ತ ಬೊಟ್ಟು ಮಾಡಿ 'ಕೊಲೆಗಾರ, ಕೊಲೆಗಾರ' ಅಂತ ಚೀರತೊಡಗಿದ.

 ಗಲ್ಲಿ ಗಲ್ಲಿಗಳಲ್ಲಿ ತುರ್ತುಸ್ಥಿತಿ ಹೆಡೆ ಬಿಚ್ಚುತ್ತಿದೆ

ಗಲ್ಲಿ ಗಲ್ಲಿಗಳಲ್ಲಿ ತುರ್ತುಸ್ಥಿತಿ ಹೆಡೆ ಬಿಚ್ಚುತ್ತಿದೆ

ಇಂದಿರಾ ಗಾಂಧಿ ಎಮರ್ಜೆನ್ಸಿ ಹೇರಿದರು. ಪ್ರಜಾತಂತ್ರದ ಕತ್ತು ಹಿಸುಕಿ ಸರ್ವಾಧಿಕಾರಿ ಆಡಳಿತ ನಡೆಸಿದರು. ಎಲ್ಲ ಸರಿ. ಆದರೆ ಜನ ಅದಕ್ಕೆ ತಕ್ಕ ಶಿಕ್ಷೆ ಕೊಟ್ಟು ಅವರನ್ನು ಮನೆಗೆ ಕಳಿಸಿದರು. ಎರಡು ವರ್ಷಗಳ ನಂತರ ಅದೇ ಜನ ಮತ್ತೆ ಅವರನ್ನೇ ಅಧಿಕಾರಕ್ಕೆ ತಂದರು. ಮತ್ತು ತಮ್ಮ ಎರಡನೇ ಅವಧಿಯಲ್ಲಿ ಸ್ವತಃ ಇಂದಿರಾ ಜನತಂತ್ರದ ಘನತೆಗೆ ಕುಂದು ಬರದಂತೆ ನಡೆದುಕೊಂಡು ಕಡೆಗೆ ಹುತಾತ್ಮರಾದರು. ಆದರೆ, ಸಂಘ ಪರಿವಾರದ ಈ ಜನರ ವರಸೆ ನೋಡಿ, ಎಲ್ಲ ಹಂತಗಳಲ್ಲೂ ಜನತಂತ್ರದ ಕತ್ತು ಹಿಸುಕುತ್ತ ನಡೆದಿರುವ ಇವರ ದರ್ಬಾರಿನಲ್ಲಿ ಸರ್ಕಾರ ಬಿಡಿ, ಬೀದಿಬೀದಿಗಳಲ್ಲಿ ದಮನದ ಪಡೆಗಳು ಅಟ್ಟಹಾಸ ಮಾಡುತ್ತಿವೆ. ದನಿ ಎತ್ತಿದವರು ವರ್ಷಗಟ್ಟಲೇ ಜಾಮೀನು ಕೂಡ ಸಿಕ್ಕದೆ ಜೈಲುಗಳಲ್ಲೇ ಕೊಳೆಯುತ್ತಿದ್ದಾರೆ. ಅತ್ತ ರೈತರು, ರೈತ ವಿರೋಧಿ ಕೃಷಿ ಕಾಯ್ದೆಗಳ ರದ್ದು ಕೋರಿ ಆರು ತಿಂಗಳಿನಿಂದ ಬೀದಿ ಮೇಲೇ ಇದ್ದರೂ, ಅವರಲ್ಲಿ 520 ಜನ ಸಾವನ್ನಪ್ಪಿದರೂ, ಅವರನ್ನು ಕರೆದು ಮಾತನಾಡಲು ನಮ್ಮ ಚೌಕೀದಾರ್ ಫಕೀರನಿಗೆ ಬಿಡುವಾಗುತ್ತಿಲ್ಲ. ಎಲ್ಲೆಲ್ಲೂ ಭೀತಿಯ ವಿಷಗಾಳಿ. ಅನಧಿಕೃತ ತುರ್ತುಸ್ಥಿತಿ. ಆದರೆ ಈ ಅಪಾಯ ಈ ಬಾರಿ ವಿಕೇಂದ್ರೀಕರಣಗೊಂಡು ಗಲ್ಲಿ ಗಲ್ಲಿಗಳಲ್ಲಿ ತುರ್ತುಸ್ಥಿತಿ ಹೆಡೆ ಬಿಚ್ಚುತ್ತಿದೆ.

ಇವರು ಮಾತ್ರ ವರ್ಷ ವರ್ಷ ಜೂನ್ 25 ಬಂದ ತಕ್ಷಣ ಇಂದಿರಾ ಕಾಲದ ಎಮರ್ಜೆನ್ಸಿಯ ಜಪ ಮಾಡತೊಡಗುತ್ತಾರೆ. ಅಂತೂ ಮಜವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+