ರೈತರಿಗೆ ಭಾರಿ ಕೊಡುಗೆ: ಜ.5ರೊಳಗೆ ಕೇಂದ್ರದ ಘೋಷಣೆ?
ನವದೆಹಲಿ, ಡಿಸೆಂಬರ್ 27: ಚುನಾವಣೆಗೆ ಇನ್ನು ಮೂರು ನಾಲ್ಕು ತಿಂಗಳು ಇರುವಂತೆಯೇ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರೈತರಿಗೆ ಬೃಹತ್ ಉಡುಗೊರೆ ನೀಡಲು ಮುಂದಾಗಿದೆ.
ಬುಧವಾರ ಸಂಜೆ ಪ್ರಧಾನಿ ನಿವಾಸದಲ್ಲಿ ಸುಮಾರು ಮೂರು ಗಂಟೆಗಳ ಕಾಲ ನಡೆದ ಸಭೆಯ ಬಳಿಕ ರೈತರಿಗಾಗಿ ಮಹತ್ವದ ಘೋಷಣೆ ಮಾಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.
ಹಣಕಾಸು ಸಚಿವ ಅರುಣ್ ಜೇಟ್ಲಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಚರ್ಚೆ ನಡೆಸಿದರು.
ಭಾರತದಾದ್ಯಂತ ಎಲ್ಲ ರೈತರ ಸಾಲ ಮನ್ನಾ ಯೋಜನೆ ಪ್ರಕಟಿಸುವವರೆಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮ್ಮ ಪಕ್ಷ ಮತ್ತು ಇತರರು ನಿದ್ರಿಸಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು.
ಈಗಿನ ಸವಾಲನ್ನು ಎದುರಿಸಲು ಪ್ರಧಾನಿ ಅವರ ನೂತನ ಸಾಲಮನ್ನಾ ಯೋಜನೆ ಉತ್ತರವಾಗಲಿದೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.
ಹಣಕಾಸು ಸಚಿವಾಲಯದ ಮೂಲಗಳ ಪ್ರಕಾರ, ಸರ್ಕಾರವು ಚಳಿಗಾಲದ ಅಧಿವೇಶ ಮುಗಿಯುವ ಜನವರಿ 5ರ ಒಳಗೆ ರೈತರಿಗಾಗಿ ಹೊಸ ಯೋಜನೆಗಳನ್ನು ಪ್ರಕಟಿಸಲಿದೆ.

ರಾಜ್ಯಗಳ ಸೋಲಿನ ಪರಿಣಾಮ
ಬಿಜೆಪಿಯ ಹೆಚ್ಚು ಪ್ರಬಲವಾಗಿದ್ದ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಡ ರಾಜ್ಯಗಳಲ್ಲಿ ಪಕ್ಷ ತನ್ನ ಅಧಿಕಾರವನ್ನು ಕಳೆದುಕೊಂಡಿದೆ. ಕಾಂಗ್ರೆಸ್ ಈ ರಾಜ್ಯಗಳಲ್ಲಿ ಸರ್ಕಾರ ರಚಿಸಿದೆ. ಸರ್ಕಾರದ ವಿರುದ್ಧದ ರೈತರ ಆಕ್ರೋಶವೇ ಈ ಸೋಲುಗಳಿಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ. ಹೀಗಾಗಿ ಈ ಮಹತ್ವದ ಸಭೆ ನಡೆಸಲಾಗಿದೆ ಎನ್ನಲಾಗಿದೆ.

ಚುನಾವಣೆಯಲ್ಲಿ ರೈತರೇ ಮುಖ್ಯ
ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶವು 2019ರ ಚುನಾವಣೆಯಲ್ಲಿ ರೈತರ ಸಮಸ್ಯೆಗಳೇ ಪ್ರಧಾನ ವಿಚಾರವಾಗಲಿದೆ ಎಂಬ ಸೂಚನೆ ನೀಡಿದೆ. ಅಲ್ಲದೆ, ಮೂರು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಕಾಂಗ್ರೆಸ್ ರೈತರ ಸಾಲ ಮನ್ನಾದ ಭರವಸೆಯನ್ನು ಈಡೇರಿಸುವುದಾಗಿ ಘೋಷಿಸಿದೆ. ಹೀಗಾಗಿ ಕೇಂದ್ರ ಸರ್ಕಾರಕ್ಕೆ ಸಾಲಮನ್ನಾದ ಸಂಗತಿ ಮಹತ್ವದ್ದೆನಿಸಿದೆ.

ದರ ವ್ಯತ್ಯಾಸ ಮೊತ್ತ
ಕೇಂದ್ರ ಸರ್ಕಾರವು ಸಾಲಮನ್ನಾದಾಚೆಗೂ ರೈತರಿಗಾಗಿ ಕಾರ್ಯಕ್ರಮಗಳನ್ನು ಪ್ರಕಟಿಸಲು ಚಿಂತನೆ ನಡೆಸಿದೆ ಎಂದು ಮೂಲಗಳು ವಿವರಿಸಿವೆ. ಅದರಲ್ಲಿ ರೈತರಿಗೆ ಅವರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಮತ್ತು ಮಾರುಕಟ್ಟೆ ದರದ ನಡುವಿನ ವ್ಯತ್ಯಾಸವನ್ನು ಪಾವತಿ ಮಾಡುವುದು ಸೇರಿದೆ. ಈ ದರ ವ್ಯತ್ಯಾಸದ ಮೊತ್ತವು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಲಿವೆ. ಈ ಯೋಜನೆಯು ಮಧ್ಯಪ್ರದೇಶದಲ್ಲಿದ್ದ ಶಿವರಾಜ್ ಸಿಂಗ್ ಚೌಹಾಣ್ ಅವರ ಬಿಜೆಪಿ ಸರ್ಕಾರದ 'ಭವಂತರ್ ಯೋಜನೆ'ಯಿಂದ (ದರ ವ್ಯತ್ಯಾಸ ಯೋಜನೆ) ಸ್ಫೂರ್ತಿ ಪಡೆದಿದೆ.

ನೇರ ನಿಗದಿತ ಸಬ್ಸಿಡಿ
ಅಲ್ಲದೆ, ಬಿಜೆಪಿ ಆಡಳಿತದ ಜಾರ್ಖಂಡ್‌ನಲ್ಲಿ ಜಾರಿಗೆ ತಂದಿರುವ ರೈತರಿಗೆ ನೇರ ನಿಗದಿತ ಸಬ್ಸಿಡಿಯನ್ನು ನೀಡುವ ಮತ್ತೊಂದು ಯೋಜನೆಯ ಪ್ರಯೋಜನಗಳ ಕುರಿತು ಸಹ ಸಮಾಲೋಚನೆ ನಡೆಸಲಾಗಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಲ್ಲಿನ ಕ್ರೆಡಿಟ್ ಮಿತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿಯೂ ಸರ್ಕಾರ ಚಿಂತನೆ ನಡೆಸಿದೆ.

ಕನಿಷ್ಠ ಬೆಂಬಲ ಬೆಲೆ
ಉತ್ಪಾದನಾ ವೆಚ್ಚದ ಮೇಲೆ ಶೇ 50ರಷ್ಟು ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಲು ಕೆಲವು ತಿಂಗಳ ಹಿಂದೆ ಕೇಂದ್ರ ಸಚಿವ ಸಂಪುಟ ನಿರ್ಧರಿಸಿತ್ತು. ಇದು ರೈತರಿಗಾಗಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತರಲಿರುವ ಎರಡನೆಯ ಅತಿ ದೊಡ್ಡ ಯೋಜನೆಯಾಗಿದೆ.












Click it and Unblock the Notifications