ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವರೆ ಕಾಯಿ ಬಿಟ್ಟು ಜೋಳದತ್ತ ಮುಖ ಮಾಡಿದ ಮೈಸೂರು ರೈತರು

|
Google Oneindia Kannada News

ಮೈಸೂರು, ಆಗಸ್ಟ್ 19: ತಂಬಾಕು ಬೆಳೆದ ನಂತರ ಅದೇ ಜಮೀನಿನಲ್ಲಿ ಅವರೆಕಾಯಿ ಬೆಳೆಯುವುದನ್ನು ಹಿಂದಿನಿಂದಲೂ ಇಲ್ಲಿನ ರೈತರು ರೂಢಿಸಿಕೊಂಡು ಬಂದಿದ್ದರು. ಆದರೆ ಈ ಬಾರಿ ಮಾತ್ರ ಅದ್ಯಾವುದೂ ಆಗುತ್ತಿಲ್ಲ. ಕಾರಣ, ಅವರೆಕಾಯಿ ಬೆಳೆಯುವುದಕ್ಕೆ ರೈತರು ಹಿಂದೇಟು ಹಾಕುತ್ತಿದ್ದಾರೆ. ಬದಲಿಗೆ ವಾಣಿಜ್ಯ ಬೆಳೆಯಾದ ಮುಸುಕಿನ ಜೋಳದತ್ತ ಒಲವು ತೋರುತ್ತಿರುವುದು ಕಂಡು ಬಂದಿದೆ.

ಮೈಸೂರು ಜಿಲ್ಲೆಯ ಹುಣಸೂರು, ಕೆ.ಆರ್.ನಗರ, ಪಿರಿಯಾಪಟ್ಟಣ ವ್ಯಾಪ್ತಿಯಲ್ಲಿ ಈ ವೇಳೆಗೆ ಅವರೆಕಾಯಿಯನ್ನು ಬೆಳೆಯುತ್ತಿದ್ದರು. ಅದರಲ್ಲೂ ಹುಣಸೂರು ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅವರೆಕಾಯಿ ಬೆಳೆದು ಅದನ್ನು ನೇರವಾಗಿ ಬೆಂಗಳೂರಿಗೆ ಸಾಗಿಸಲಾಗುತ್ತಿತ್ತು. ಆದರೆ ಈ ಬಾರಿಯ ಚಿತ್ರಣ ಬೇರೆಯಾಗಿದೆ.

 ತಂಬಾಕು ಬೆಳೆಯುವತ್ತ ನಿರಾಸಕ್ತಿ

ತಂಬಾಕು ಬೆಳೆಯುವತ್ತ ನಿರಾಸಕ್ತಿ

ಈ ವ್ಯಾಪ್ತಿಯಲ್ಲಿ ತಂಬಾಕು ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿತ್ತು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ನಿಧಾನವಾಗಿ ತಂಬಾಕು ಬೆಳೆಯತ್ತ ನಿರಾಸಕ್ತಿ ತೋರುತ್ತಿರುವ ರೈತರು ತಂಬಾಕು ಬದಲಿಗೆ ಬೇರೆ ಬೆಳೆಯನ್ನು ಬೆಳೆಯುತ್ತಿದ್ದಾರೆ. ಹಿಂದೆ ಹೆಚ್ಚಿನ ರೈತರು ಮೊದಲಿಗೆ ತಂಬಾಕು ಬೆಳೆದು ಬಳಿಕ ಅದೇ ಜಮೀನಿನಲ್ಲಿ ಮತ್ತೆ ಅವರೆಕಾಯಿಯನ್ನು ಬೆಳೆಯುತ್ತಿದ್ದರು. ಆದರೆ ಈ ಬಾರಿ ಅವರೆಕಾಯಿ ಬದಲಿಗೆ ಜೋಳವನ್ನು ಬೆಳೆಯುವತ್ತ ಆಸಕ್ತಿ ತೋರುತ್ತಿರುವುದು ಕಂಡು ಬರುತ್ತಿದೆ.

ಮೈಸೂರು, ಚಾಮರಾಜನಗರ ರೈತರಿಗೆ ಈ ಬಾರಿ ನಷ್ಟ ಕೊಟ್ಟ ಅವರೆಕಾಯಿಮೈಸೂರು, ಚಾಮರಾಜನಗರ ರೈತರಿಗೆ ಈ ಬಾರಿ ನಷ್ಟ ಕೊಟ್ಟ ಅವರೆಕಾಯಿ

 ಹುಣಸೂರಿನಲ್ಲಿ ಅತಿ ಹೆಚ್ಚು ಅವರೆಕಾಯಿ ಬೆಳೆ

ಹುಣಸೂರಿನಲ್ಲಿ ಅತಿ ಹೆಚ್ಚು ಅವರೆಕಾಯಿ ಬೆಳೆ

ಕೊರೊನಾ ಇರುವ ಕಾರಣ, ಒಂದು ವೇಳೆ ಅವರೆಕಾಯಿ ಬೆಳೆದರೆ ಅದಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ದರ ದೊರೆಯದೆ ನಷ್ಟ ಅನುಭವಿಸಬೇಕಾಗುತ್ತದೆ ಎಂಬ ಭಯದಲ್ಲಿ ಅವರೆಯನ್ನು ಬೆಳೆಯುತ್ತಿಲ್ಲ. ಈ ಹಿಂದೆ ರಾಜ್ಯದಲ್ಲಿಯೇ ಅತಿ ಹೆಚ್ಚು ಅವರೆಕಾಯಿಯನ್ನು ಹುಣಸೂರು ತಾಲೂಕಿನಲ್ಲಿ ಬೆಳೆಯಲಾಗುತ್ತಿತ್ತು. ಸಾವಿರಾರು ಟನ್ ಅವರೆಕಾಯಿ ಉತ್ಪತ್ತಿಯಾಗುತ್ತಿತ್ತು. ದೂರದ ಮಾರಾಟಗಾರರು ಜಮೀನಿಗೆ ಬಂದು ಖರೀದಿ ಮಾಡಿದರೆ ಮತ್ತೆ ಕೆಲವು ರೈತರು ಪಕ್ಕದ ಗ್ರಾಮ, ಪಟ್ಟಣಗಳ ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡುತ್ತಿದ್ದರು. ಒಂದಷ್ಟು ಆದಾಯವೂ ರೈತರಿಗೆ ದೊರೆಯುತ್ತಿತ್ತು. ಜತೆಗೆ ಹುಣಸೂರು ತಾಲೂಕಿನಿಂದ ಬೆಂಗಳೂರಿಗೆ ನೇರವಾಗಿ ಸರಬರಾಜು ಮಾಡಲಾಗುತಿತ್ತು. ಆದರೆ ಕೊರೊನಾದಿಂದಾಗಿ ಬೆಳೆದ ಬೆಳೆಯನ್ನು ತೆಗೆದುಕೊಳ್ಳುತ್ತಾರೊ ಇಲ್ಲವೊ ಎಂಬ ಭಯವೇ ಅವರೆ ಬೆಳೆಯತ್ತ ರೈತರು ನಿರಾಸಕ್ತಿ ತೋರುವಂತೆ ಮಾಡಿದೆ.

 ಮುಸುಕಿನ ಜೋಳದತ್ತ ರೈತರ ಒಲವು

ಮುಸುಕಿನ ಜೋಳದತ್ತ ರೈತರ ಒಲವು

ಈಗಾಗಲೇ ಬೆಂಗಳೂರಿನಿಂದ ಶೇ.30ರಷ್ಟು ಜನರು ಖಾಲಿ ಮಾಡಿ ಸ್ವಂತ ಊರಿನತ್ತ ಮುಖ ಮಾಡಿ ವ್ಯವಸಾಯದ ಕಡೆ ಗಮನ ನೀಡಿದರೆ, ಕೆಲವರು ಕೂಲಿ ಮಾಡಿ ಜೀವನ ಮಾಡುತ್ತಿದ್ದಾರೆ. ಜೊತೆಗೆ ರೈತರು ಅವರೆಕಾಯಿಯನ್ನು ಕೊಯ್ಲು ಮಾಡಿದ ದಿನವೇ ಮಾರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆಗ ರೈತರು ಖರೀದಿದಾರರು ಕೇಳಿದ ಬೆಲೆಗೆ ನೀಡಬೇಕಾದ ಅನಿವಾರ್ಯ ಪರಿಸ್ಥಿತಿವುಂಟಾಗುತ್ತದೆ. ರೈತರ ಈ ಅಸಹಾಯಕತೆಯನ್ನು ಅರಿತ ಮಾರಾಟಗಾರರು ಕಡಿಮೆ ಬೆಲೆಗೆ ಕೇಳುತ್ತಾರೆ. ಇದರಿಂದ ಕೆಲವೊಮ್ಮೆ ಬೇರೆ ದಾರಿ ಕಾಣದೆ ರೈತರು ಕಡಿಮೆ ಬೆಲೆಗೆ ಕೊಡಬೇಕಾಗುತ್ತದೆ. ಹೀಗಾಗಿ ನಷ್ಟ ಅನುಭವಿಸಬೇಕಾಗುತ್ತದೆ. ಹೆಚ್ಚಿನ ರೈತರು ಪ್ರತಿ ವರ್ಷವೂ ಇದೇ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ ರೈತರು ಅವರೆಕಾಯಿ ಬೆಳೆಯುವುದನ್ನು ಕಡಿಮೆ ಮಾಡಿ ಮುಸುಕಿನ ಜೋಳಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ.

ಅನಾನಸ್ ಬೆಳೆಯುವ ರೈತರು ಗಮನಿಸಲೇಬೇಕಾದ ಅಂಶಗಳು...ಅನಾನಸ್ ಬೆಳೆಯುವ ರೈತರು ಗಮನಿಸಲೇಬೇಕಾದ ಅಂಶಗಳು...

 ಜೋಳ ರೈತರ ಕೈಹಿಡಿಯುತ್ತಾ?

ಜೋಳ ರೈತರ ಕೈಹಿಡಿಯುತ್ತಾ?

ಇದಕ್ಕೆ ಕಾರಣವೂ ಇದೆ. ಸರ್ಕಾರ ಮುಸುಕಿನ ಜೋಳಕ್ಕೆ ಬೆಂಬಲ ಬೆಲೆ ನೀಡುತ್ತಿದೆ. ಆದ್ದರಿಂದ ರೈತರು ಕೃಷಿ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ನಮ್ಮ ಬೆಲೆ ಸಿಗುವುದರ ಜೊತೆಗೆ ನಾವು ಕಟಾವು ಮಾಡಿದ ಮೇಲೆ ಯಾವಾಗ ಬೇಕಾದರೂ ಮಾರಾಟ ಮಾಡಿ ಕೊಳ್ಳಬಹುದು ಮತ್ತು ಮುಸುಕಿನ ಜೋಳದ ಕಡ್ಡಿಯನ್ನು ಶುಂಠಿ ಬೆಳೆಗಾರರಿಗೆ ಮಾರಾಟ ಮಾಡಲೂಬಹುದು. ಇಲ್ಲದಿದ್ದರೆ ಜೋಳ ಬೆಳೆದ ರೈತರು ಮುಂದಿನ ವರ್ಷ ಶುಂಠಿ ಬೆಳೆ ಹಾಕಿದರೆ ಶುಂಠಿ ಪಟ ಮುಚ್ಚಲು ಉಪಯೋಗಕ್ಕೆ ಬರುತ್ತಿದೆ ಎಂಬ ಆಲೋಚನೆಯೂ ರೈತರು ಮುಸುಕಿನ ಜೋಳವನ್ನು ಬೆಳೆಯುವಂತೆ ಪ್ರೇರೇಪಿಸುತ್ತಿದೆ.

 ಅವರೆ ಬೆಳೆದ ರೈತರಿಗೆ ನಷ್ಟ

ಅವರೆ ಬೆಳೆದ ರೈತರಿಗೆ ನಷ್ಟ

ಅವರೆಕಾಯಿ ಕೊಯ್ಲಿಗೆ ಬರುತ್ತಿದ್ದಂತೆಯೇ ಆರಂಭದಲ್ಲಿ ಮಾರುಕಟ್ಟೆಯಲ್ಲಿ 1 ಕೆ.ಜಿ.ಗೆ 20 ರಿಂದ 25 ರೂ. ದೊರೆತರೆ ದಿನ ಕಳೆದಂತೆ 10 ರಿಂದ 8 ರೂ.ಗೆ ಇಳಿಯುತ್ತದೆ. ಇದು ರೈತರಿಗೆ ನುಂಗಲಾಗದ ತುತ್ತಾಗಿ ಪರಿಣಮಿಸುತ್ತಿದೆ. ಈಗಾಗಲೇ ತರಕಾರಿ ಬೆಲೆ ಕುಸಿತದಿಂದ ರೈತರು ಕೈಸುಟ್ಟುಕೊಂಡಿದ್ದಾರೆ. ಈ ವರ್ಷ ತಾಲೂಕಿನಾದ್ಯಂತ ತಂಬಾಕು ಬೆಳೆ ಕಡಿಮೆ ಮಾಡಿ ಶುಂಠಿ ಬೆಳೆಯುವುದನ್ನು ಹೆಚ್ಚು ಮಾಡಿದ್ದಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ, ಈಗಿನ ಪರಿಸ್ಥಿತಿಯಲ್ಲಿ ರೈತರು ಹೆಚ್ಚಿನ ಬಂಡವಾಳ ಹಾಕಿ ಬೆಳೆ ಬೆಳೆಯಲು ಸಾಧ್ಯವಾಗದ ಕಾರಣ ಬೇರೆ ಬೇರೆ ಬೆಳೆಯನ್ನು ಬೆಳೆಯುವ ಚಿಂತನೆ ಮಾಡುತ್ತಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

English summary
Mysuru farmers are showing interest to grow commercial crop this time due to coronavirus effect
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X